ಕರ್ನಾಟಕ

karnataka

ವ್ಯಕ್ತಿಯ ಮೇಲೆ ಹಲ್ಲೆ.. ನೈತಿಕ ಪೊಲೀಸ್​ಗಿರಿ ಆರೋಪ: ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲು

By

Published : Aug 13, 2023, 12:19 PM IST

Moral policing: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿದ್ದು, ನೈತಿಕ ಪೊಲೀಸ್‌ಗಿರಿ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

Sullia
ಸುಳ್ಯ

ಸುಳ್ಯ(ದಕ್ಷಿಣ ಕನ್ನಡ):ಜಿಲ್ಲೆಯಲ್ಲಿ ನೈತಿಕ ಪೊಲೀಸ್‌ಗಿರಿ ಆರೋಪ ಕೇಳಿ ಬಂದಿದೆ. ಕೇರಳದ ಮಲಪ್ಪುರಂ ನಿವಾಸಿ ಮೊಹಮ್ಮದ್ ಜಲೀಲ್ (39) ಎಂಬವರ ಮೇಲೆ ಹಲ್ಲೆ ನಡೆದಿದ್ದು, ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಲೀಲ್ ಅವರು ಕಳೆದ 3 ತಿಂಗಳ ಹಿಂದೆ ಸುಳ್ಯ ತಾಲೂಕಿನ ಅರಂತೋಡಿನಲ್ಲಿ ರಬ್ಬರ್ ತೋಟವನ್ನು ಗುತ್ತಿಗೆ ಪಡೆದು ಸದ್ಯ ಅಲ್ಲಿಯೇ ವಾಸವಾಗಿದ್ದಾರೆ. ಇವರ ಪರಿಚಯದ ಯುವತಿಯೋರ್ವಳು ತಾನು ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದು ತನಗೆ ವಿಶ್ರಾಂತಿ ಪಡೆಯಲು ರೂಂ ಬೇಕೆಂದು ಕೇಳಿಕೊಂಡ ಮೇರೆಗೆ ಜಲೀಲ್ ಅವರು ಸುಳ್ಯದಲ್ಲಿ ರೂಂ ವ್ಯವಸ್ಥೆ ಮಾಡಿದ್ದರು. ಬಳಿಕ ವೈಯಕ್ತಿಕ ಕೆಲಸ ನಿಮಿತ್ತ ಸುಳ್ಯ ತಾಲೂಕಿನ ತೋಡಿಕಾನಕ್ಕೆ ತೆರಳಿದ್ದಾಗ 5 ಜನರ ತಂಡವೊಂದು ಕಾರು ಮತ್ತು ಸ್ಕೂಟರ್​ನಲ್ಲಿ ಬಂದು ಜಲೀಲ್ ಅವರ ಕಾರನ್ನು ತಡೆದು ಅವಾಚ್ಯ ಪದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ತೆರಳಿದ್ದಾರೆ ಎಂದು ಆರೋಪಿಸಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ನೈತಿಕ ಪೊಲೀಸ್ ಗಿರಿ: ಪ್ರಕರಣ ದಾಖಲಾಗುತ್ತಿದ್ದಂತೆ ಇಬ್ಬರನ್ನ ಬಂಧಿಸಿದ ದಾವಣಗೆರೆ ಪೊಲೀಸರು.. "ತನಿಖೆ ನಡೆಸಿ ಕ್ರಮಕೈಗೊಳ್ಳುತ್ತೇವೆ" ಎಂದ ಎಸ್​ಪಿ

ಇವರ ಪೈಕಿ ಮೂವರ ಹೆಸರನ್ನು ಲತೀಶ್ ಗುಂಡ್ಯ, ವರ್ಷಿತ್ ಹಾಗೂ ಪುನೀತ್ ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದರಿ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 87/2023 ಕಲಂ 143, 147, 341, 323, 504, 506, 153(A) ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಪೈಕಿ ಸುಳ್ಯ ಸೊಣಂಗೇರಿ ನಿವಾಸಿ ಪುನೀತ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ನೈತಿಕ ಪೊಲೀಸ್​ಗಿರಿ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ: ನೈತಿಕ ಪೊಲೀಸ್​ಗಿರಿ ಯಾರೇ ಮಾಡಿದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಇತ್ತೀಚೆಗೆ ನೀಡಿದ್ದರು. ಆ.1ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ದ ಅವರು, ಯಾರೂ ಕಾನೂನು ಕೈಗೆ ತೆಗೆದುಕೊಳ್ಳಲು ಅವಕಾಶವಿಲ್ಲ. ಯಾರೇ ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಇದೀಗ ಆರಂಭಿಕ ಸಮಸ್ಯೆಯಲ್ಲಿದೆ. ಕಾನೂನು ಕೈಗೆತ್ತಿಕೊಳ್ಳುವ ಯಾರಿಗೂ ಪೊಲೀಸರು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು.

ನೈತಿಕ ಪೊಲೀಸ್​ಗಿರಿ ನಡೆಸಿದವರು ಗಡಿಪಾರು- ಸಚಿವ ದಿನೇಶ್ ಗುಂಡೂರಾವ್: ನೈತಿಕ ಪೊಲೀಸ್​ಗಿರಿ ಮೂಲಕ ಕಾನೂನು ಕೈಗೆತ್ತಿಕೊಳ್ಳುವಂತಹವರನ್ನು ಗಡಿಪಾರು ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದರು. ಇತ್ತೀಚೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ದ ಅವರು, ಭೀತಿ ಸೃಷ್ಟಿ ಮಾಡುವವರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತಾರೆ. ಈ ವಿಚಾರದಲ್ಲಿ ಸಹನೆ ಇಲ್ಲ, ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಖಡಕ್​ ಸಂದೇಶ ನೀಡಿದ್ದರು.

ಇದನ್ನೂ ಓದಿ:ನೈತಿಕ ಪೊಲೀಸ್​ಗಿರಿ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details