ಕರ್ನಾಟಕ

karnataka

ಮಂಗಳೂರು: ಕೊಲೆ ಯತ್ನ ಪ್ರಕರಣ, ಆರೋಪಿಗಳು ಖುಲಾಸೆ

By ETV Bharat Karnataka Team

Published : Nov 3, 2023, 11:25 AM IST

ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕೊಲೆ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿತು.

ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ

ಮಂಗಳೂರು(ದಕ್ಷಿಣ ಕನ್ನಡ):2018ರಲ್ಲಿ ನಗರದ ಬಂಗ್ರ ಕೂಳೂರು ಗ್ರಾಮದ ಪಡೋಡಿ ಎಂಬಲ್ಲಿ ನಡೆದ ಕೊಲೆ ಯತ್ನ ಪ್ರಕರಣದ ಆರೋಪಿಗಳನ್ನು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪ್ರೀತಿ ಕೆ.ಪಿ. ಖುಲಾಸೆಗೊಳಿಸಿದ್ದಾರೆ. ಮೆಕ್ರಿ ಡಿ'ಸೋಜಾ ಮತ್ತು ಲ್ಯಾನ್ಸಿ ಡಿ'ಸೋಜಾ ಖುಲಾಸೆಗೊಂಡವರು.

ಪ್ರಕರಣವೇನು?: 2018ರ ನ.5ರಂದು ಪಡೋಡಿ ಕಡೆಗೆ ಹೋಗುವ ರಸ್ತೆಯಲ್ಲಿ ಅತಿ ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿಯನ್ನು ಪ್ರವೀಣ್ ಡಿ'ಸೋಜಾ ಎಂಬವರು ನಿಲ್ಲಿಸಿ, ಚಾಲಕನಿಗೆ ನಿಧಾನವಾಗಿ ಹೋಗುವಂತೆ ತಿಳಿಸಿದ್ದರು. ಈ ವಿಷಯವನ್ನು ಚಾಲಕ ಲಾರಿ ಮಾಲೀಕರಾದ ಎಡ್ವರ್ಡ್ ಮೆಕ್ರಿ ಡಿ'ಸೋಜಾ ಮತ್ತು ಲ್ಯಾನ್ಸಿ ಡಿ'ಸೋಜಾ ಅವರಿಗೆ ತಿಳಿಸಿದ್ದರು. ಇದರಿಂದ ಕೋಪಗೊಂಡ ಇಬ್ಬರು ಕೂಡ ರಾತ್ರಿ 11.30ಕ್ಕೆ ಸ್ಕೂಟರ್‌ನಲ್ಲಿ ಬಂದು ಪ್ರವೀಣ್ ಡಿ'ಸೋಜಾ ಅವರಿಗೆ ಬೈದು ಸ್ಕೂಟರ್‌ನಲ್ಲಿದ್ದ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿದ್ದರು. ಕೊಲೆ ಉದ್ದೇಶದಿಂದ ಮಾರಣಾಂತಿಕ ಗಾಯವನ್ನುಂಟು ಮಾಡಿ ಯತ್ನಿಸಿದ್ದರೆಂದು ಆರೋಪಿಸಲಾಗಿತ್ತು. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳ ಮೇಲಿನ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂಬುದನ್ನು ಮನಗಂಡು ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ. ಆರೋಪಿಗಳ ಪರವಾಗಿ ವಕೀಲರಾದ ವೇಣು ಕುಮಾರ್ ಮತ್ತು ಯುವರಾಜ್ ಕೆ. ಅಮೀನ್ ವಾದಿಸಿದ್ದರು.

ಸರಗಳ್ಳತನ ಪ್ರಕರಣ-ಆರೋಪಿಗಳು ಖುಲಾಸೆ:ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಕಪ್ಪು ಬಣ್ಣದ ಪಲ್ಸರ್ ಬೈಕ್‌ನಲ್ಲಿ ಬಂದು ಚಾಕು ತೋರಿಸಿ ಚಿನ್ನದ ಸರ ಕದ್ದ ಆರೋಪ ಪ್ರಕರಣ ಸಂಬಂಧ ಸಾಕ್ಷ್ಯಾಧಾರಗಳ ಕೊರತೆಯಿಂದ ಉತ್ತರ ಪ್ರದೇಶದ ವೆಂಕಿ ಸಿಂಗ್ ಮತ್ತು ವಿಶಾಲ್ ಸಿಂಗ್ ಎಂಬಿಬ್ಬರು ಆರೋಪಿಗಳನ್ನು ಹೈಕೋರ್ಟ್ ಖುಲಾಸೆಗೊಳಿಸಿತ್ತು. ಮೂವರನ್ನು ದೋಷಮುಕ್ತರನ್ನಾಗಿ ಆದೇಶಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಚ್.ಬಿ.ಪ್ರಭಾಕರ ಶಾಸ್ತ್ರಿ ಮತ್ತು ನ್ಯಾಯಮೂರ್ತಿ ಅನಿಲ್ ಬಿ.ಕಟ್ಟಿ ಅವರಿದ್ದ ನ್ಯಾಯಪೀಠ ಆದೇಶಿಸಿತ್ತು.

2013 ಮಾರ್ಚ್ 1ರಂದು ನಾಗರಭಾವಿ 2ನೇ ಹಂತದಲ್ಲಿ ವಾಯುವಿಹಾರ ನಡೆಸುತ್ತಿದ್ದ ಸುಬ್ಬಲಕ್ಷ್ಮಿ ಎಂಬವರಿಂದ ದ್ವಿಚಕ್ರವಾಹನದಲ್ಲಿ ಬಂದಿದ್ದ ಇಬ್ಬರು ಆರೋಪಿಗಳು ಚಾಕು ತೋರಿಸಿ ಚಿನ್ನದ ಮಾಂಗಲ್ಯ ಸರ ಕದ್ದ ಆರೋಪದಲ್ಲಿ ದೂರು ದಾಖಲಿಸಿದ್ದರು. 2013ರ ಫೆಬ್ರವರಿ 2ರಂದು ನಾಗರಭಾವಿಯ 2ನೇ ಹಂತದಲ್ಲಿ ಸುಂದರಾಂಭಾ ಎಂಬವರಿಗೆ ಚಾಕು ತೋರಿಸಿ ಚಿನ್ನದ ಸರ ಕದ್ದಿದ್ದರು. 2013ರ ಮೇ 22ರಂದು ಅನ್ನಪೂರ್ಣೇಶ್ವರಿ ನಗರದ ಐದನೇ ಅಡ್ಡರಸ್ತೆಯಲ್ಲಿ ವಾಯುವಿಹಾರ ನಡೆಸುತ್ತಿದ್ದ ಭಾಗ್ಯಮ್ಮ ಎಂಬುವರಿಂದ ಚಾಕು ತೋರಿಸಿ ಚಿನ್ನದ ಮಾಂಗಲ್ಯದ ಸರ ಕದ್ದಿದ್ದರು.

ಮೂರು ಪ್ರಕರಣದಲ್ಲಿ ದಾಖಲಾಗಿದ್ದ ದೂರಿನ ಸಂಬಂಧ ಜ್ಞಾನಭಾರತಿ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಮೂರು ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳಾಗಿದ್ದು, ಅವರ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ವಶಪಡಿಸಿಕೊಳ್ಳುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ತಿಳಿಸಿದ್ದ ವಿಚಾರಣಾ ನ್ಯಾಯಾಲಯ ಆರೋಪ ಮುಕ್ತರನ್ನಾಗಿಸಿತ್ತು. ಇದನ್ನು ಪ್ರಶ್ನಿಸಿ ಪ್ರಾಸಿಕ್ಯೂಷನ್ ಹೈಕೋರ್ಟ್ ಮೆಟ್ಟಿಲೇರಿತ್ತು.

ಇದನ್ನೂ ಓದಿ:ಸಾಕ್ಷಿಗಳ ಹೇಳಿಕೆಗಳಲ್ಲಿ ಸಂಶಯ: ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಗಳನ್ನು ಖುಲಾಸೆಗೊಳಿಸಿದ ಹೈಕೋರ್ಟ್

ABOUT THE AUTHOR

...view details