ಕರ್ನಾಟಕ

karnataka

ಕಡಿಮೆ ಸೀಟ್ ಬಂದರೂ ಗುದ್ದಾಡಿ ಬಿಜೆಪಿ ಸರ್ಕಾರ ಮಾಡ್ತೀವಿ: ಜನರಿಗೆ ಮಾತುಕೊಟ್ಟ ರಮೇಶ್ ಜಾರಕಿಹೊಳಿ

By

Published : Jan 24, 2023, 4:44 PM IST

Ramesh Jarkiholi React On Upcoming Assembly Elections

ರಮೇಶ್ ಜಾರಕಿಹೊಳಿ ಬಿಜೆಪಿ ಬಿಡುತ್ತಾರೆ ಅಂತಾ ಮಾಧ್ಯಮಗಳಲ್ಲಿ ವಿನಾ ಕಾರಣ ಸೃಷ್ಟಿ ಮಾಡಲಾಗುತ್ತಿದೆ - ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಡುವುದಿಲ್ಲ - ಗೋಕಾಕ್‌ ಶಾಸಕ ರಮೇಶ್ ಜಾರಕಿಹೊಳಿ ಸ್ಪಷ್ಟನೆ

ಶಾಸಕ ರಮೇಶ್ ಜಾರಕಿಹೊಳಿ

ಬೆಳಗಾವಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನಗಳು ಬಂದರೂ ಗುದ್ದಾಟ ನಡೆಸಿಯಾದರೂ ಬಿಜೆಪಿ ಸರ್ಕಾರ ರಚನೆ ಮಾಡುತ್ತೇವೆ. ಹಾಗಾಗಿ ಯಾರೂ ಹೆದರಬೇಕಾದ ಅವಶ್ಯಕತೆ ಇಲ್ಲ ಎಂದು ಗೋಕಾಕ್‌ ಶಾಸಕ ರಮೇಶ್ ಜಾರಕಿಹೊಳಿ ಭವಿಷ್ಯ ನುಡಿದರು. ಗೋಕಾಕ್‌ನಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಬಳಿಕ ಕಾರ್ಯಕ್ರಮದಲ್ಲಿ ಸೇರಿದ್ದ ತಾಲೂಕಿನ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ.

ಸುಮ್ಮನೇ ಕಾಂಗ್ರೆಸ್​ನವರು ಹವಾ ಮಾಡುತ್ತಿದ್ದಾರೆ. ಮತ್ತೆ ಅಧಿಕಾರಕ್ಕೆ ಬರುವುದು ಬಿಜೆಪಿ ಸರ್ಕಾರವೇ. ಅದರಲ್ಲಿ ಎರಡು ಮಾತಿಲ್ಲ. ಮ್ಯಾಜಿಕ್​ ನಂಬರ್​ ಬರದಿದ್ದರೂ ಹೇಗಾದರೂ ಮಾಡಿ ನಾವು ಬಿಜೆಪಿ ಸರ್ಕಾರ ಮಾಡದೇ ಬಿಡುವುದಿಲ್ಲ ಎಂದರು.

ಎಲ್ಲ ಶಕ್ತಿ ಕೂಡಿಸಿ ಬಿಜೆಪಿ ಸರ್ಕಾರ ಮಾಡುವುದು ಪಕ್ಕಾ. ಒಂದಿಷ್ಟು ಕಡಿಮೆ ಸೀಟುಗಳು ಬಂದರೂ ಹೇಗಾದರೂ ಮಾಡಿ ಬಿಜೆಪಿ ಸರ್ಕಾರ ಮಾಡುತ್ತೇವೆ. ಈ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಡಿ ಎಂದು ಅಲ್ಲಿ ಸೇರಿದ್ದ ಜನರಿಗೆ ಅಭಯ ನೀಡಿದರು. ರಮೇಶ್ ಜಾರಕಿಹೊಳಿ ಬಿಜೆಪಿ ಬಿಡುತ್ತಾರೆ ಅಂತಾ ಮಾಧ್ಯಮಗಳಲ್ಲಿ ವಿನಾ ಕಾರಣ ಸೃಷ್ಟಿ ಮಾಡಲಾಗುತ್ತಿದೆ. ಇದು ಶುದ್ಧ ಸುಳ್ಳು. ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಡುವುದಿಲ್ಲ. ಬಿಜೆಪಿಯಲ್ಲೇ ಇರುತ್ತೇನೆ.

ಇದೇ ನನ್ನ ಕೊನೆಯ ಪಕ್ಷ. ಇಲ್ಲಿ ಒಂದು ಇತಿಹಾಸ ಮಾಡಿಯೇ ಹೋಗುವೆ. ಮುಂದೆ 2023ಕ್ಕೆ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ಬಸವರಾಜ ಬೊಮ್ಮಾಯಿ ಅವರೇ ನಮ್ಮ ಮುಂದಿನ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ನಮ್ಮದು ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಕುಟುಂಬ:ನಮ್ಮದು ಎಲ್ಲ ಧರ್ಮ ಮತ್ತು ಜಾತಿಯನ್ನು ಒಗ್ಗೂಡಿಸಿಕೊಂಡು ಹೋಗುವ ಕುಟುಂಬ. ಮೊದಲಿಂದಲೂ ಜಗಳ-ತಂಟೆ ತಕಾರಾರು ಬಂದಾಗ ತಾವೇ ಮುಂದೆ ನಿಂತು ಅವುಗಳನ್ನು ಬಗೆಹರಿಸುತ್ತಾ ಬಂದ ಉದಾಹರಣೆಗಳಿವೆ. ಈ ಹಿಂದೆ ಇಂತಹ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. ಮುಂದೆಯೂ ಸಹ ಅಂತಹ ಸಮಸ್ಯೆಗಳೆನಾದರೂ ಕಂಡು ಬಂದರೆ ನಾವೇ ಮುಂದು ಬಂದು ಅವುಗಳನ್ನು ಬಗೆಹರಿಸುತ್ತೇವೆ. ಅದಕ್ಕೂ ಮುನ್ನ ಸಮಾಜ ಒಡೆಯುವ ಜನಪ್ರತಿನಿಧಿಗಳ ಕೈಯಲ್ಲಿ ಅಧಿಕಾರ ಕೊಡಬೇಡಿ ಅಂದು ಅವರು ಮನವಿ ಮಾಡಿಕೊಂಡರು.

ನಮಗೆ ಎಲ್ಲ ಸಮುದಾಯಗಳೂ ವೋಟ್​ ಹಾಕಿವೆ: ಅರಬಾವಿಯಲ್ಲಿ ಎಲ್ಲ ಸಮುದಾಯದವರು ವೋಟ್​ ಹಾಕಿ ಬಾಲಚಂದ್ರ ಜಾರಕಿಹೊಳಿಯನ್ನು ಗೆಲ್ಲಿಸಿದ್ದೀರಿ. ಚುನಾವಣೆ ಬರುತ್ತಿರುವುದರಿಂದ ಕೆಲ ಕುತಂತ್ರಿಗಳು ಇಲ್ಲ - ಸಲ್ಲದ ಸಮಸ್ಯೆಗಳನ್ನು ತಂದು ರಾಜಕೀಯ ಮಾಡುತ್ತಿರುತ್ತಾರೆ. ಇದರಲ್ಲಿ ಕಾಂಗ್ರೆಸ್​ನವರು​ ಮುಂದು. ನಾನು ಐದು ಸಲ ಕಾಂಗ್ರೆಸ್​ ಪಕ್ಷದ ಶಾಸಕ ಆಗಿರುವೆ. ಆ ಪಕ್ಷದಲ್ಲಿ ನಡೆಯುತ್ತಿರುವ ವದ್ಯಮಾನಗಳು ಗೊತ್ತು. ಅವರು ಮುಸ್ಲೀಮರ ದ್ರೋಹಿಗಳಷ್ಟೇ ಮಾತ್ರ ಅಲ್ಲ. ದಲಿತರ ಸಮುದಾಯದ ದ್ರೋಹಿಗಳು ಕೂಡ ಹೌದು.

ವೋಟ್​ ಪಡೆಯಲು ಕಾಂಗ್ರೆಸ್​ನವರು ತಮಗೆ ಬೇಕಾದ ಸಮುದಾಯವನ್ನು ಬಳಸಿಕೊಳ್ಳುತ್ತಾರೆ. ಆದರೆ, ಬಿಜೆಪಿ ಪಕ್ಷ ವೈಯಕ್ತಿಕವಾಗಿ ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡಿಲ್ಲ. ದೇಶದ್ರೋಹ ಅಂತಾ ಬಂದಾಗ ಪೊಲೀಸರು ಶಸ್ತ್ರ ಹಿಡಿದೇ ಹಿಡಿಯುತ್ತಾರೆ. ಚುನಾವಣೆ ಬರುತ್ತಿರುವುದರಿಂದ ಸಮಾಜ ಸಮಾಜದ ನಡುವೆ ಸಮಸ್ಯೆ ತಂದಿಡುವ ಕೆಲಸಗಳು ನಡೆಯುತ್ತಿರುತ್ತವೆ. ಹಾಗಾಗಿ ಚುನಾವಣೆಯನ್ನು ನ್ಯಾಯಯುತವಾಗಿ ಮಾಡುವಂತೆ ಅವರು ಸಲಹೆ ನೀಡಿದರು.

ಇದನ್ನೂ ಓದಿ:ನ್ಯಾಯಾಂಗದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಅಪಾಯಕಾರಿ : ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ

ABOUT THE AUTHOR

...view details