ETV Bharat / state

ಪಕೋಡಾ ತೋರಿಸಿ ಸಮಾವೇಶಕ್ಕೆ ಪ್ರಕಾಶ್​ ರೈ ಚಾಲನೆ: ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ - Actor Prakash Rai

author img

By ETV Bharat Karnataka Team

Published : Apr 29, 2024, 11:13 AM IST

NARENDRA MODI  KOPPAL  RAICHUR  FEDERATION OF STUDENT ORGANIZATIONS
ಪಕೋಡಾ ತೋರಿಸಿ ಸಮಾವೇಶಕ್ಕೆ ಪ್ರಕಾಶ್​ ರೈ ಚಾಲನೆ: ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ

ಪಕೋಡಾ ತೋರಿಸುವ ಮೂಲಕ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ವಿದ್ಯಾರ್ಥಿ ಯುವಜನ ಸ್ವಾಭಿಮಾನಿ ಸಮಾವೇಶಕ್ಕೆ ನಟ ಪ್ರಕಾಶ್​ ರೈ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಪಕೋಡಾ ತೋರಿಸಿ ಸಮಾವೇಶಕ್ಕೆ ಪ್ರಕಾಶ್​ ರೈ ಚಾಲನೆ

ಗಂಗಾವತಿ/ರಾಯಚೂರು: ''ಪ್ರಧಾನಿ ನರೇಂದ್ರ ಮೋದಿಗೆ ಜನಕಲ್ಯಾಣ ಬೇಕಿಲ್ಲ. ಈ ಮಹಾಪ್ರಭುವಿಗೆ ಬೇಕಿರುವುದು ಕೇವಲ ಕಾವಿ ಕಲ್ಯಾಣ. ಈ ದೇಶದ ಯುವಜನ, ರೈತರ ಸಮಸ್ಯೆಗಳ ಬಗ್ಗೆ ಆತನಿಗೆ ಅರಿವಿಲ್ಲ'' ಎಂದು ನಟ ಪ್ರಕಾಶ್ ರೈ ಹೇಳಿದರು.

ಗಂಗಾವತಿಯ ಸರ್ಕಾರಿ ಜೂನಿಯರ್​ ಕಾಲೇಜು ಮೈದಾನದಲ್ಲಿ ಭಾನುವಾರ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ವಿದ್ಯಾರ್ಥಿ ಯುವಜನ ಸ್ವಾಭಿಮಾನಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸುವ ಉದ್ದೇಶಕ್ಕೆ ಪಕೋಡಾ ಪ್ರದರ್ಶನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿ, ''ಯುವಜನರು ಉದ್ಯೋಗ ಕೇಳಿದರೆ, ಪಕೋಡಾ ಮಾರುವ ಮೂಲಕ ಜೀವನ ನಡೆಸಿ ಎಂದು ಈ ಮಹಾಪ್ರಭು ಸುಲಭವಾಗಿ ಹೇಳುತ್ತಾನೆ. ಆತನಿಗೆ ನಮ್ಮ ಸಮಸ್ಯೆಗಳ ಆರ್ತನಾದ ಕೇಳಿಸದು'' ಎಂದು ತಮ್ಮ ಭಾಷಣ ಉದ್ದಕ್ಕೂ ಪ್ರಧಾನಿಯ ಹೆಸರು ಸೂಚಿಸಿದೇ ಏಕವಚನದಲ್ಲಿ ಪ್ರಕಾಶ್ ರೈ ವಾಗ್ದಾಳಿ ನಡೆಸಿದರು.

''ಮೆಕಾನಿಕಲ್, ಪಕೋಡಾ ಎಂಜಿನಿಯರಿಂಗ್ ಮಾಡುವಂತೆ ಈ ಮೂರ್ಖ ಮಹಾಪ್ರಭು ಯುವ ಜನರ ದಾರಿತಪ್ಪಿಸುತ್ತಿದ್ದಾನೆ. ಈಗ ರಾಜ್ಯದ ಬೆಳಗಾವಿ, ಹೊಸಪೇಟೆಯಲ್ಲಿ ತಿರುಗುತ್ತಿದ್ದಾನೆ. ನಮಗೆ ಬೇಕಿರುವುದು ಕಾಯಕದ ಕಲ್ಯಾಣ, ಅವನು ಮಾಡಲು ಹೊರಟಿರುವುದು ಕಾವಿ ಕಲ್ಯಾಣ. ನಮಗೆ ಉದ್ಯೋಗ ಕೊಟ್ಟಿಲ್ಲ'' ಎಂದ ಅವರು, ''2015ರಲ್ಲಿ ದೇಶದಲ್ಲಿ ನೂರು ಸ್ಮಾರ್ಟ್​ ಸಿಟಿ ಕಲ್ಪನೆ ನೀಡಿದ್ದರು. ಆದರೆ ಹತ್ತು ನಗರಗಳೂ ಕೂಡ ಅಭಿವೃದ್ಧಿಯಾಗಿಲ್ಲ'' ಎಂದು ಕಿಡಿಕಾರಿದರು.

''ಭಾರತದ ಗಡಿಯಲ್ಲಿ ಹತ್ತು ಲಕ್ಷ ಚದುರ ಅಡಿಯನ್ನು ಚೀನಾದವರು ಆಕ್ರಮಿಸಿಕೊಂಡಿದ್ದಾರೆ. ಈ ಬಗ್ಗೆ ಅವನು ಮಾತನಾಡಲ್ಲ. ನಮ್ಮ ಯುವಕರು ಅಲ್ಲಿಗೆ ಹೋಗಿ ನೋಡಿದರೆ ನಿಜ ಗೊತ್ತಾಗುತ್ತದೆ ಎಂದು ಪ್ಯಾರಾಮಿಲಿಟರಿ ಇರಿಸಿದ್ದಾನೆ. ಜೊತೆಗೆ ಮೇಕ್ ಇನ್ ಇಂಡಿಯಾ ಎಂದು ಹೇಳುವ ಈ ಮಹಾಪ್ರಭು, ಮೂರು ಸಾವಿರ ಕೋಟಿ ಹಣ ಖರ್ಚು ಮಾಡಿದ ವಲ್ಲಭಬಾಯಿ ಪಟೇಲರ ಮೂರ್ತಿ ನಿರ್ಮಾಣವನ್ನು ಚೀನಾದವರಿಗೆ ನೀಡಿದ್ದ. ದೇಶಿ ಕೈಗಾರಿಕೆಗಳ ಮೇಲೆ ಶೇ.18ರಷ್ಟು ತೆರಿಗೆ ಹಾಗೂ ವಿದೇಶಿ ಯಂತ್ರ ಉತ್ಪಾದಿತ ವಸ್ತುಗಳ ಮೇಲೆ ಶೇ.5ರಷ್ಟು ಜಿಎಸ್ಟಿ ವಿಧಿಸಿ ಗುಡಿ ಕೈಗಾರಿಕೆಯನ್ನು ನಾಶ ಮಾಡುತ್ತಿದ್ದಾನೆ'' ಎಂದು ಪ್ರಕಾಶ್ ರೈ ಗಂಭೀರ ಆರೋಪ ಮಾಡಿದರು.

ದೆಹಲಿಯ ರೈತ ಹೋರಾಟದ ರೂವಾರಿ ಅವತಾರ್ ಸಿಂಗ್ ಮಾತನಾಡಿ, ''ಕೇವಲ ಕೃಷಿ ಮಾತ್ರವಲ್ಲ, ದಾಸ್ತಾನುಗಳನ್ನು ಈ ಮೋದಿ ಸರ್ಕಾರ ಕಾರ್ಪೋರೇಟ್​​ ಸಂಸ್ಥೆಗಳಿಗೆ ನೀಡಲು ಮುಂದಾಗಿದೆ. ಇದರಿಂದ ರೈತರು ಬೀದಿಗೆ ಬರಲಿದ್ದಾರೆ. ರೈತರ ಹೋರಾಟದ ದಾರಿ ತಪ್ಪಿಸುವ ಕೆಲಸ ಮೋದಿ ಸರ್ಕಾರ ಮಾಡುತ್ತಿದೆ. ದೆಹಲಿಯಲ್ಲಿ ನಡೆದ ರೈತರ ಹೋರಾಟದಲ್ಲಿ ದೊಡ್ಡ ಐಷಾರಾಮಿ ವಾಹನಗಳನ್ನು ಬಳಸಲಾಗಿದ್ದು, ಇವು ರೈತರಿಗೆ ಸೇರಿದ್ದಲ್ಲ. ಇದರ ಹಿಂದೆ ಬೇರೆ ಕೈವಾಡವಿದೆ ಎಂದು ಬಿಜೆಪಿ ಹೇಳುತ್ತದೆ. ಹಾಗಾದರೆ ರೈತರು ದೊಡ್ಡ ಮತ್ತು ಐಷಾರಾಮಿ ವಾಹನಗಳನ್ನು ಹೊಂದುವುದು ತಪ್ಪೇ'' ಎಂದು ಪ್ರಶ್ನಿಸಿದರು.

ರಾಯಚೂರಿನ ಸಂಯುಕ್ತ ಕರ್ನಾಟಕ ಹೋರಾಟ ಸಂಘಟನೆಗಳಿಂದ ಜಾಗೃತಿ ಮೂಡಿಸುವ ಸಮಾವೇಶದಲ್ಲಿ ಪ್ರಕಾಶ್​ ರೈ ಮಾತನಾಡಿ, ''ನೇಹಾ ಪ್ರಕರಣದಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸುವ ನೀವು ಈ ಪ್ರಕರಣವನ್ನು ಕೋಮುವಾದಕ್ಕೆ ಬಳಸಿಕೊಳ್ಳುತ್ತಿದ್ದೀರಿ'' ಎಂದು ಕಿಡಿಕಾರಿದರು.

''ನಾವು ಕಾಯಕ ಕಲ್ಯಾಣ ಮಾಡತೀವಿ ತಿಳಿಸಿದ್ರಿ. ಆದರೆ ಬಿಜೆಪಿ ಕಾವಿ ಕಲ್ಯಾಣ ಮಾಡ್ತಿದಾರೆ. ಮಹಾಪ್ರಭುಗಳು ಇಲ್ಲೇ ಪ್ರಚಾರಕ್ಕೆ ಬಂದಿದಾರೆ, ತಾಯಿ, ತಂದೆ, ಮಗನಿಗೆ ಇರುವ ಸಂಬಂಧ ನನಗೆ ರೈತರಿಗೆ ಇದೆ. ರೈತರು ಗೌರವವನ್ನು ಕೇಳ್ತಿದ್ದಾರೆ. ಬೆಳೆದ ಬೆಳೆ ಸರಿಯಾದ ಬೆಲೆ ಸಿಗದ ಕಾರಣಕ್ಕೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದು ಮಹಾಪ್ರಭುಗಳಿಗೆ ಅರ್ಥ ಆಗುತ್ತಾ? ಆದರೆ, ಮಹಾಪ್ರಭುವಿನ ಸರ್ಕಾರದಲ್ಲಿ ಏನೂ‌ ಮಾಡಲು ಆಗುವುದಿಲ್ಲ'' ಎಂದು ಲೇವಡಿ ಮಾಡಿದರು.

ಇದನ್ನೂ ಓದಿ: 'ದೇಶ ಅಭಿವೃದ್ಧಿ ಮಾಡುವಲ್ಲಿ ಮೋದಿ ಸಂಪೂರ್ಣ ವಿಫಲ': ಸಿಎಂ ಸಿದ್ದರಾಮಯ್ಯ - CM Siddaramaiah

ETV Bharat Logo

Copyright © 2024 Ushodaya Enterprises Pvt. Ltd., All Rights Reserved.