ಕರ್ನಾಟಕ

karnataka

ಬೆಲೆ ಏರಿಕೆ ಖಂಡಿಸಿ ಕೇಂದ್ರದ ವಿರುದ್ಧ ಬಿಜೆಪಿ ನಾಯಕರ ಪ್ರತಿಭಟನೆ ಯಾವಾಗ?: ಕಾಂಗ್ರೆಸ್

By

Published : Jun 28, 2023, 10:49 PM IST

ರಾಜ್ಯ ಕಾಂಗ್ರೆಸ್‌ ಟ್ವೀಟ್​ ಮೂಲಕ ಬಿಜೆಪಿಯನ್ನು ಪ್ರಶ್ನಿಸಿದೆ.

ಕಾಂಗ್ರೆಸ್
ಕಾಂಗ್ರೆಸ್

ಬೆಂಗಳೂರು :ಜನರ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿಯ ಪ್ರತಿಭಟನೆ ಯಾವಾಗ ಎಂದು ಕಾಂಗ್ರೆಸ್ ಪಕ್ಷ ಪ್ರಶ್ನಿಸಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ತೊಗರಿ, ಟೊಮೊಟೊ ಮುಂತಾದವುಗಳ ಬೆಲೆ ದೇಶೀಯ ಮಟ್ಟದಲ್ಲಿ ಏರಿಕೆಯಾಗಿದೆ. ಹಿಂದೆ ತಾವು ಅಧಿಕಾರದಲ್ಲಿದ್ದಾಗ "ಬೆಲೆ ಏರಿಕೆ ಎನ್ನುವವರು ಪಾಕಿಸ್ತಾನಕ್ಕೆ ಹೋಗಿ" ಎಂದಿದ್ದ ರಾಜ್ಯ ನಾಯಕರಿಗೆ ಜನರ ಬಗ್ಗೆ ಕನಿಷ್ಠ ಕಾಳಜಿ ಇದೆಯೇ? ಜನರಿಗೆ ಉದ್ಯೋಗ ನೀಡದೆ ಬೆಲೆ ಏರಿಕೆಯ ಮೂಲಕ ಹಗಲು ದರೋಡೆಗಿಳಿದ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿಗರ ಪ್ರತಿಭಟನೆ ಯಾವಾಗ? ಎಂದು ಕೇಳಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿದೇಶದಲ್ಲಿಯೂ ಭಾರತದ ಮಾನ ಹರಾಜು ಹಾಕಿ ಬಂದಿದ್ದಾರೆ. ಪ್ರಶ್ನೆಗಳನ್ನು ಎದುರಿಸಲು ಹಿಂದೇಟು ಹಾಕುವ ಮೋದಿ ಅವರಿಗೆ ಏಕಾಏಕಿ ಪ್ರಶ್ನೆ ಕೇಳಿದ್ದಕ್ಕೆ ಅಮೆರಿಕಾದ ಪತ್ರಕರ್ತೆಯನ್ನು ಬಿಜೆಪಿಯ ಟ್ರಾಲ್ ಆರ್ಮಿ ಟಾರ್ಗೆಟ್ ಮಾಡಿದ ಪರಿಣಾಮ ದೇಶದ ಮರ್ಯಾದೆ ಮಣ್ಣುಪಾಲಾಗಿದೆ. ಭಾರತದಲ್ಲಿ ಪತ್ರಕರ್ತರನ್ನು ಹತ್ತಿಕ್ಕಿದಂತೆ ಅಮೆರಿಕಾದಲ್ಲೂ ಹತ್ತಿಕ್ಕಲು ಮುಂದಾಗುವ ಬಿಜೆಪಿಯ ಟೂಲ್ ಕಿಟ್ ಆರ್ಮಿಗೆ ದೇಶದ ಘನತೆಯ ಬಗ್ಗೆ ಕಿಂಚಿತ್ ಕಾಳಜಿ ಇಲ್ಲವೇಕೆ ಎಂದು ಕಾಂಗ್ರೆಸ್​ ಪ್ರಶ್ನೆ ಮಾಡಿದೆ.

ಬಿಟ್ ಕಾಯಿನ್ ಹಗರಣ ಬಯಲಿಗೆ ಬಂದಾಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಪ್ರಕರಣ ಮುಚ್ಚಿಹಾಕಲು ಸರ್ವ ಪ್ರಯತ್ನಗಳನ್ನೂ ಮಾಡಿತ್ತು. ಹಗರಣವನ್ನು ಮುಚ್ಚಿಹಾಕಲು ಯಶಸ್ವಿಯೂ ಆಗಿತ್ತು. ಇದೀಗಾ ನಮ್ಮ ಸರ್ಕಾರ ಅಧಿಕಾರದಲ್ಲಿದ್ದು, ಬಿಟ್ ಕಾಯಿನ್ ಹಗರಣದ ಬುಡ, ಬೇರುಗಳನ್ನು ಜಾಲಾಡಲಿದೆ. ಅಂದಹಾಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಕುಳಿತಲ್ಲಿಯೇ ಬೆವರುತ್ತಿದ್ದಾರಂತೆ, ಏಕಿರಬಹುದು ರಾಜ್ಯ ಬಿಜೆಪಿ ಎಂಬ ಪ್ರಶ್ನೆಯನ್ನು ಕಾಂಗ್ರೆಸ್​ ಮುಂದಿಟ್ಟಿದೆ.

ಕೇಂದ್ರ ಸರ್ಕಾರ ಕನ್ನಡಿಗರಿಗೆ ಅಕ್ಕಿ ನೀಡದೆ ಮಹಾ ದ್ರೋಹ ಎಸಗಿರಬಹುದು, ಆದರೆ ನಾವು ನಮ್ಮ ಜನರನ್ನು ವಂಚಿಸುವುದಿಲ್ಲ. ಅನ್ನಭಾಗ್ಯ ಯೋಜನೆಯಲ್ಲಿ 5 ಕೆಜಿ ಅಕ್ಕಿಯೊಂದಿಗೆ ಬಾಕಿ 5 ಕೆಜಿಯ ಮೊತ್ತವನ್ನು ಫಲಾನುಭವಿಗಳಿಗೆ ನೀಡುವ ತೀರ್ಮಾನ ಕೈಗೊಂಡಿದೆ ನಮ್ಮ ಸರ್ಕಾರ. ಪ್ರತಿ ಒಂದು ಕೆಜಿಗೆ 34 ರೂಪಾಯಿಗಳಂತೆ 170 ರೂಪಾಯಿಗಳನ್ನು ನೀಡಲಿದೆ ಸರ್ಕಾರ ಎಂದು ಟ್ವೀಟ್​ ಮಾಡುವ ಮೂಲಕ ಬಿಜೆಪಿ ವಿರುದ್ದ ತಿರುಗಿ ಬಿದ್ದಿದೆ.

ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಕ್ಸಮರ ನಡೆಸಿರುವ ಕಾಂಗ್ರೆಸ್ ಅನ್ನಭಾಗ್ಯ ಯೋಜನೆಗೆ ಕೇಂದ್ರದ ಅಸಹಕಾರ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ರಾಜ್ಯ ಬಿಜೆಪಿ ನಾಯಕರನ್ನು ಲೇವಡಿ ಮಾಡುವ ಕಾರ್ಯ ಮಾಡಿದೆ.

ಬಿಜೆಪಿ ನಾಯಕರ ಆಕ್ರೋಶ : ರಾಜ್ಯ ಸರ್ಕಾರವು ಅಕ್ಕಿ ಕೊರತೆ ಹಿನ್ನೆಲೆಯಲ್ಲಿ ಅಕ್ಕಿಯ ಬದಲು ಫಲಾನುಭವಿಗಳಿಗೆ ಹಣ ನೀಡಲು ತೀರ್ಮಾನಿಸಿರುವುದನ್ನು ರಾಜ್ಯ ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ವಚನ ಭ್ರಷ್ಟ ಸರ್ಕಾರ. ಅಕ್ಕಿ ಕೊಡದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ನೈತಿಕತೆ ಇಲ್ಲದ ಸರ್ಕಾರ ಸಿದ್ದರಾಮಯ್ಯ ಸರ್ಕಾರ. ಸಿದ್ದರಾಮಯ್ಯ ಮಾತು ತಪ್ಪಿದ್ದಾರೆ. ಅಕ್ಕಿಗೆ ದುಡ್ಡು ಕೊಡೊದೆ ಆದರೆ 5 ಕೆಜಿಗೆ ಕೊಡ್ತಾರಾ?. ಇಲ್ಲ 10 ಕೆಜಿ ಅಕ್ಕಿಗೆ ದುಡ್ಡು ಕೊಡ್ತಾರಾ?. ಇವರು ಹೇಳಿದ್ದು 10 ಕೆಜಿ ಅಕ್ಕಿ ಕೊಡ್ತೇವೆ ಎಂದು. ದುಡ್ಡನ್ನು 10 ಕೆಜಿಗೆ ಕೊಡಬೇಕು‌. ಎಂದು ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಹಾಗು ಅಶ್ವಥ್ ನಾರಾಯಣ್​ ಅವರು ಕಿಡಿಕಾರಿದ್ದಾರೆ.

ಇದನ್ನೂ ಓದಿ :Annabhagya: ಅಕ್ಕಿ ಬದಲು ಹಣ ಪಾವತಿಸಲು ತೀರ್ಮಾನಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಟೀಕಾಸಮರ

ABOUT THE AUTHOR

...view details