ETV Bharat / state

Annabhagya: ಅಕ್ಕಿ ಬದಲು ಹಣ ಪಾವತಿಸಲು ತೀರ್ಮಾನಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಟೀಕಾಸಮರ

author img

By

Published : Jun 28, 2023, 6:40 PM IST

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ಅಕ್ಕಿ ಲಭ್ಯವಾಗುವವರೆಗೆ ಬದಲು ಹಣ ನೀಡಲು ತೀರ್ಮಾನಿಸಲಾಗಿದೆ. ಇದನ್ನು ಬಿಜೆಪಿ ಟೀಕಿಸಿದೆ.

ಬಿಜೆಪಿ
ಬಿಜೆಪಿ

ಬೆಂಗಳೂರು : ರಾಜ್ಯ ಸರ್ಕಾರವು ಅಕ್ಕಿ ಕೊರತೆ ಹಿನ್ನೆಲೆಯಲ್ಲಿ 5 ಕೆಜಿ ಹೆಚ್ಚುವರಿ ಅಕ್ಕಿಯ ಬದಲು ಒಂದು ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಫಲಾನುಭವಿಗಳಿಗೆ ತಿಂಗಳಿಗೆ 170 ರೂ. ನೀಡಲು ತೀರ್ಮಾನಿಸಿದೆ. ಕಾಂಗ್ರೆಸ್​ ಸರ್ಕಾರದ ನಿರ್ಣಯವನ್ನು ಬಿಜೆಪಿ ಖಂಡಿಸಿದೆ.‌

'ಹೋರಾಟ ಮಾಡುತ್ತೇವೆ': ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಕ್ರೋಶ ಹೊರಹಾಕಿದ್ದು, ಸಿದ್ದರಾಮಯ್ಯ ಸರ್ಕಾರ ವಚನ ಭ್ರಷ್ಟ ಸರ್ಕಾರ. ಅಕ್ಕಿ ಕೊಡದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಚುನಾವಣೆ ಪೂರ್ವದಲ್ಲಿ ಹತ್ತು ಕೆಜಿ ಅಕ್ಕಿ ಅಂದಿದ್ರು. ನಮ್ದೂ ಸೇರಿ ಒಟ್ಟು 15 ಕೆಜಿ ಅಕ್ಕಿ ಕೊಡಬೇಕಿತ್ತು. ಇವಾಗ ಅಕ್ಕಿಗೆ ಹಣ ಹಾಕೋಕೆ ಹೊರಟಿದ್ದಾರೆ. ಹಣ ಏನು ತಿನ್ನೋಕೆ ಆಗುತ್ತಾ ಅಂತಾ ಸಿದ್ದರಾಮಯ್ಯ ಹೇಳಿದ್ದರು. ನಿಮಗೆ ಶಕ್ತಿ ಇದ್ರೆ 10 ಕೆಜಿ ಅಕ್ಕಿ ಕೊಡಬೇಕು. ಹಣ ಹಾಕುವ ಡೋಂಘಿ ರಾಜಕಾರಣ ಸರಿಯಲ್ಲ. ಇದನ್ನು‌ ನಾವು ಖಂಡಿಸುತ್ತೇವೆ. ಕಾಂಗ್ರೆಸ್ ಸರ್ಕಾರ ನುಡಿದಂತೆ‌ ನಡೆಯಬೇಕು. ಇಲ್ಲವಾದಲ್ಲಿ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

'ಸಿದ್ದರಾಮಯ್ಯ ಮಾತು ತಪ್ಪಿದ್ದಾರೆ': ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಮಾತನಾಡಿ, ನೈತಿಕತೆ ಇಲ್ಲದ ಸರ್ಕಾರ ಸಿದ್ದರಾಮಯ್ಯ ಸರ್ಕಾರ. ಸಿದ್ದರಾಮಯ್ಯ ಮಾತು ತಪ್ಪಿದ್ದಾರೆ. ತಲಾ 10 ಕೆಜಿ ಅಕ್ಕಿ ಕೊಡ್ತೇವೆ ಎಂದಿದ್ದೀರಿ. ನೀವು ಈಗ ಜನಕ್ಕೆ ಮೋಸ ಮಾಡಿದ್ದೀರಿ ಎಂದು ಟೀಕಿಸಿದ್ದಾರೆ. ಹಣ ತಿನ್ನೋಕೆ ಆಗಲ್ಲ ಅಕ್ಕಿ ಕೊಡುತ್ತೇವೆ ಎಂದು ಚುನಾವಣೆ ಪೂರ್ವದಲ್ಲಿ ಹೇಳಿದ್ರಿ. ಈಗ ಕೊಡಪ್ಪ ಅಕ್ಕಿನಾ. ನಾವು ಈ ವಿಚಾರವಾಗಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಅಕ್ಕಿ ಅಭಿಯಾನ ಕೂಡ ಮಾಡುತ್ತೇವೆ. ಮಾಜಿ ಸಿಎಂ ಯಡಿಯೂರಪ್ಪರಿಗೆ‌ ನೈತಿಕತೆ ಪ್ರಶ್ನೆ ಮಾಡುತ್ತಿರಾ?. ಈವಾಗ‌ ನಿಮಗೆ ಯಾವ ನೈತಿಕತೆ ಇದೆ. ನಾವು ಈ ನೈತಿಕತೆ ಇಟ್ಟುಕೊಂಡೇ ಹೋರಾಟ ಮಾಡ್ತೇವೆ ಎಂದು ಗರಂ ಆಗಿದ್ದಾರೆ.

'ಜನರಿಗೆ ಟೋಪಿ': ಬಿಜೆಪಿ ಪ್ರಧಾನಿ ಕಾರ್ಯದರ್ಶಿ ಅಶ್ವಥ್ ನಾರಾಯಣ ಮಾತನಾಡಿ, ಅಕ್ಕಿಗೆ ದುಡ್ಡು ಕೊಡೊದೆ ಆದರೆ 5 ಕೆಜಿಗೆ ಕೊಡ್ತಾರಾ?. ಇಲ್ಲ 10 ಕೆಜಿ ಅಕ್ಕಿಗೆ ದುಡ್ಡು ಕೊಡ್ತಾರಾ?. ಇವರು ಹೇಳಿದ್ದು 10 ಕೆಜಿ ಅಕ್ಕಿ ಕೊಡ್ತೇವೆ ಎಂದು. ದುಡ್ಡನ್ನು 10 ಕೆಜಿಗೆ ಕೊಡಬೇಕು‌. ಇವರು ದೋಖಾ ಮಾಡಿದ್ದಾರೆ. ಜನರಿಗೆ ಟೊಪ್ಪಿ ಹಾಕಿದ್ದಾರೆ. ಎಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್ ಅವರಿಗೆ ಏನು ಮಾಡ್ತೀರಿ.? ಕೇಂದ್ರ ಅಂತ್ಯೋದಯ ಕಾರ್ಡ್ ದಾರರಿಗೆ 35 kg ಕೊಡ್ತಾ ಇದೆ. 5 ಕೆಜಿ ಕೂಡ ಕೇಂದ್ರ ಕೊಡ್ತಾ ಇದೆ. ಒಂದು ತಗೊಂಡ್ರೆ ಒಂದು ಫ್ರೀ ಎನ್ನುತ್ತಾರೆ. ಆದರೆ ಎರಡೂ ಬೆಲೆಯನ್ನು ಒಂದಕ್ಕೆ ಸೇರಿಸಿ ತಗೋತಾರೆ. ಕಾಂಗ್ರೆಸ್ ಸರ್ಕಾರ ಕೂಡ ಅದೇ ರೀತಿ ಮಾಡುತ್ತಿದೆ‌ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನು ಓದಿ : Annabhagya: ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊರತೆ: ಅಕ್ಕಿ ಬದಲು ಹಣ ಪಾವತಿಸಲು ಸರ್ಕಾರ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.