ಕರ್ನಾಟಕ

karnataka

ಗ್ರಾಮೀಣ ಭಾಗದಲ್ಲಿ ಆಮೆಗತಿಯಲ್ಲಿ ಸಾಗುತ್ತಿರುವ ಲಸಿಕಾಕರಣ: ಲಸಿಕಾ ಕಾರ್ಯಕ್ರಮದ ಸ್ಥಿತಿಗತಿ ನೋಡಿ!

By

Published : Aug 5, 2021, 7:08 PM IST

ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಒಟ್ಟು ಜನ‌ಸಂಖ್ಯೆ 3,04,21,227. ಅಂದರೆ ಗ್ರಾಮ ಪಂಚಾಯಿತಿಯಲ್ಲಿನ ಒಟ್ಟು ಜನಸಂಖ್ಯೆಯ ಕೇವಲ ಶೇ 7-8 ಜನಸಂಖ್ಯೆ ಮಾತ್ರ ಮೊದಲ ಡೋಸ್ ಲಸಿಕೆ ಪಡೆದರೆ, ಎರಡನೇ ಡೋಸ್ ಪಡೆದವರ ಸಂಖ್ಯೆ ಬಹುತೇಕ ನಗಣ್ಯವಾಗಿದೆ. ಅಂದರೆ ಕೇವಲ ಸುಮಾರು ಶೇ 2ರಷ್ಟು ಮಂದಿ ಮಾತ್ರ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.

vaccination decreasing in rural areas of karnataka
ಗ್ರಾಮೀಣ ಭಾಗದಲ್ಲಿ ಚುರುಕು ಪಡೆಯದ ಲಸಿಕಾಕರಣ

ಬೆಂಗಳೂರು:ಕೊರೊನಾ ಎರಡನೇ ಅಲೆಯ ಅಬ್ಬರ ಕಡಿಮೆಯಾಗುತ್ತಿದ್ದ ಹಾಗೇ ಇದೀಗ ಮೂರನೇ ಅಲೆಯ ಭೀತಿ ಎದುರಾಗುತ್ತಿದೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಮತ್ತೆ ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಾಣುತ್ತಿದೆ. ಈ ಮಧ್ಯೆ ರಾಜ್ಯಾದ್ಯಂತ ಲಸಿಕಾಕರಣ ಪ್ರಗತಿಯಲ್ಲಿದೆ. ಮೊನ್ನೆಯಷ್ಟೇ ರಾಜ್ಯದಲ್ಲಿ ಕೋವಿಡ್ ಲಸಿಕಾಕರಣ ಮೂರು ಕೋಟಿಯ ಗಡಿ ದಾಟಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಲಸಿಕಾಕರಣ ಆಮೆ ವೇಗದಲ್ಲಿಯೇ ಇದೆ.

ಗ್ರಾಮೀಣ ಭಾಗದಲ್ಲಿ ಚುರುಕು ಪಡೆಯದ ಲಸಿಕಾಕರಣ

ಎರಡನೇ ಅಲೆಗೆ ಅಕ್ಷರಶಃ ಮಂಡಿಯೂರಿದ್ದ ಕರುನಾಡು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇದೀಗ ಮೂರನೇ ಅಲೆಯ ಭೀತಿ ಎದುರಾಗಿದೆ. ಪಕ್ಕದ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದು ಮೂರನೇ ಅಲೆಯ ಮುನ್ಸೂಚನೆ ನೀಡುತ್ತಿದೆ. ವೈರಾಣುಗಳು ಅಗಾಗ ಅಲೆಗಳ ಮೂಲಕ ವಕ್ಕರಿಸುವುದು ಸಹಜ ಪ್ರಕ್ರಿಯೆ. ಸದ್ಯಕ್ಕಿರುವ ಎಲ್ಲ ರೂಪಾಂತರಿ ಕೊರೊನಾ ವೈರಸ್​ಗೆ ರಾಮಬಾಣ ಲಸಿಕೆ.

ಕೋವಿಡ್ ಎರಡನೇ ಅಲೆ ಅಬ್ಬರ ಹೆಚ್ಚಾಗುತ್ತಿದ್ದ ಹಾಗೇ ರಾಜ್ಯದ ಜನರು ಲಸಿಕಾ ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.‌ ಲಸಿಕೆ ಕೊರತೆಯ ಮಧ್ಯೆ ರಾಜ್ಯದಲ್ಲಿ ಲಸಿಕಾಕರಣ ನಡೆಯುತ್ತಿದೆ.‌ ದಕ್ಷಿಣ ಭಾರತ ರಾಜ್ಯಗಳಲ್ಲಿ ಲಸಿಕೆ ಹಾಕಿಸುವುದರಲ್ಲಿ ನಮ್ಮ ಕರ್ನಾಟಕ ಮೊದಲಿದೆ. ಮೊನ್ನೆಯಷ್ಟೇ 3 ಕೋಟಿ ಜನರು ಲಸಿಕೆ ಹಾಕಿಸಿದ ಮೈಲಿಗಲ್ಲು ದಾಟಿತ್ತು.

ನಗರ ಪ್ರದೇಶಗಳಲ್ಲಿ ಲಸಿಕೆ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದ್ದು, ಇತ್ತ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿದ್ದ ಆರಂಭಿಕ ಲಸಿಕಾಕರಣದ ಗತಿ ಕಳೆದುಕೊಳ್ಳುತ್ತಿದೆ. ಲಸಿಕೆ ಕೊರತೆ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕಾಕರಣ ಅಭಿಯಾನಕ್ಕೆ ದೊಡ್ಡ ಅಡ್ಡಗಾಲಾಗಿ ಪರಿಣಮಿಸಿದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ವ್ಯಾಕ್ಸಿನ್​ ಪಡೆಯಲು ಕ್ಯೂ ನಿಂತಿರುವುದು

ಗ್ರಾಮ ಪಂಚಾಯಿತಿಗಳಲ್ಲಿ ಲಸಿಕಾಕರಣ ಪ್ರಗತಿ ಕುಂಠಿತ:

ಕೋವಿಡ್ ಲಸಿಕಾಕರಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ನಗರ ಹಾಗೂ ಗ್ರಾಮೀಣ‌ ಪ್ರದೇಶಗಳಲ್ಲಿ ಎರಡರಲ್ಲೂ ಲಸಿಕಾಕರಣ ವೇಗದಲ್ಲಿ ನಡೆಯುವ ಅನಿವಾರ್ಯತೆ ಇದೆ. ಮೂರನೇ ಅಲೆ ಅಬ್ಬರಿಸುವ ಲಕ್ಷಣ ಗೋಚರವಾಗುವ ಹಿನ್ನೆಲೆ ಸರ್ಕಾರ ಲಸಿಕಾಕರಣಕ್ಕೆ ಹೆಚ್ಚಿನ ಒತ್ತು ನೀಡುವ ಅನಿವಾರ್ಯತೆ ಇದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಲಸಿಕಾಕರಣ ನಡೆಯುತ್ತಿಲ್ಲ. ಆರಂಭದಲ್ಲಿ ಕಂಡ ವೇಗ ಈಗ ಮರೆಯಾದಂತೆ ಕಂಡು ಬರುತ್ತಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ನೀಡಿರುವ ಅಂಕಿ- ಅಂಶದಲ್ಲಿ ರಾಜ್ಯದ ಗ್ರಾಮ‌ ಪಂಚಾಯಿತಿಗಳಲ್ಲಿ ಕೋವಿಡ್ ಲಸಿಕೆ ಇನ್ನೂ ನಿಧಾನಗತಿಯಲ್ಲಿ ನಡೆಯುತ್ತಿರುವುದು ಸ್ಪಷ್ಟವಾಗುತ್ತಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜುಲೈ ಅಂತ್ಯದವರೆಗೆ ಸುಮಾರು 22,86,094 ಜನ ಮೊದಲ ಡೋಸ್ ಲಸಿಕೆ ಪಡೆದರೆ, ಸುಮಾರು 4,72,422 ಜನ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಒಟ್ಟು ಜನ‌ಸಂಖ್ಯೆ 3,04,21,227. ಅಂದರೆ ಗ್ರಾಮ ಪಂಚಾಯಿತಿಯಲ್ಲಿನ ಒಟ್ಟು ಜನಸಂಖ್ಯೆಯ ಕೇವಲ 7-8% ಜನಸಂಖ್ಯೆ ಮಾತ್ರ ಮೊದಲ ಡೋಸ್ ಲಸಿಕೆ ಪಡೆದರೆ, ಎರಡನೇ ಡೋಸ್ ಪಡೆದವರ ಸಂಖ್ಯೆ ಬಹುತೇಕ ನಗಣ್ಯವಾಗಿದೆ. ಅಂದರೆ ಕೇವಲ ಸುಮಾರು 2% ಮಂದಿ ಮಾತ್ರ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.

ಎರಡೂ ಡೋಸ್ ಪಡೆದವರ ಪ್ರಮಾಣ ಕೇವಲ ಶೇ 6:

ಗ್ರಾಮೀಣ ಪ್ರದೇಶಗಳಲ್ಲಿ 60 ವರ್ಷ ಮೇಲ್ಪಟ್ಟವರ ಜನಸಂಖ್ಯೆ ಸುಮಾರು 38,92,359 ಇದೆ ಎಂದು ಇಲಾಖೆ ಅಂಕಿ- ಅಂಶ ನೀಡಿದೆ. ಪಂಚಾಯತ್ ರಾಜ್ ಇಲಾಖೆ ನೀಡಿರುವ ಅಂಕಿ-ಅಂಶದಂತೆ 4,415 ಗ್ರಾಮ ಪಂಚಾಯಿತಿಗಳಲ್ಲಿ 60 ವರ್ಷ ಮೇಲ್ಪಟ್ಟ ಜನಸಂಖ್ಯೆಯಲ್ಲಿ 12,51,205 ಮಂದಿ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಇನ್ನು 2,36,792 ಮಂದಿ ಎರಡನೇ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಅಂದರೆ, ಕೇವಲ ಒಟ್ಟು 60 ವರ್ಷ ಮೇಲ್ಪಟ್ಟವರಲ್ಲಿ ಶೇ32ರಷ್ಟು ಮಂದಿ ಮೊದಲ ಡೋಸ್ ಪಡೆದಿದ್ದಾರೆ. ಅದೇ ಎರಡೂ ಡೋಸ್ ಪಡೆದವರ ಪ್ರಮಾಣ ಕೇವಲ 6.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 45 ವರ್ಷ ಮೇಲ್ಪಟ್ಟ (comorbid) ಹೊಂದಿರುವ ಜನಸಂಖ್ಯೆ ಒಟ್ಟು 40,30,997 ಗುರುತಿಸಲಾಗಿದೆ. ಈ ಪೈಕಿ ಸುಮಾರು 9,15,147 ಮಂದಿ ಮೊದಲ ಡೋಸ್ ಲಸಿಕೆ ಪಡೆದರೆ, 1,76,713 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಅಂದರೆ ಸುಮಾರು ಶೇ22ರಷ್ಟು ಮಂದಿ ಮೊದಲ ಡೋಸ್ ಪಡೆದಿದ್ದಾರೆ. ಇನ್ನು ಕೇವಲ ಶೇ 4.38 ಮಂದಿ ಮಾತ್ರ ಎರಡನೇ ಡೋಸ್ ಪಡೆದಿದ್ದಾರೆ.

ಇಲಾಖೆ ನೀಡಿರುವ ಮಾಹಿತಿ ಪ್ರಕಾರ 18 ವರ್ಷ ಮೇಲ್ಪಟ್ಟವರಿಗೆ ಜುಲೈ ಅಂತ್ಯದವರೆಗೆ ಕೇವಲ ಸುಮಾರು 1,01,250 ಮಂದಿಗೆ ಮಾತ್ರ ಮೊದಲ ಡೋಸ್ ಲಸಿಕೆ ಕೊಡಲಾಗಿದೆ. ಸುಮಾರು 34,446 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.

ಎಲ್ಲಾ ವಯೋಮಾನಗಳ ಪೈಕಿ ಎರಡನೇ ಡೋಸ್ ಲಸಿಕೆ ನೀಡುವಲ್ಲಿನ‌ ಪ್ರಗತಿ ತೀವ್ರ ಕುಸಿತ ಕಂಡಿದೆ. ಲಸಿಕೆಯ ಕೊರತೆಯೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಆದರೆ ಮೂರನೇ ಅಲೆ ಭೀತಿ ಮಧ್ಯೆ ಗ್ರಾಮೀಣ ಪ್ರದೇಶಗಳಲ್ಲಿ ಆಮೆಗತಿಯ ಲಸಿಕಾಕರಣ ನಡೆಯುತ್ತಿರುವುದು ನಿಜಕ್ಕೂ ಆತಂಕಕಾರಿ ವಿಚಾರವಾಗಿದೆ.

ABOUT THE AUTHOR

...view details