ಕರ್ನಾಟಕ

karnataka

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 2 ಇಂದಿರಾ ಕ್ಯಾಂಟೀನ್: ಸಚಿವ ಸಂಪುಟ ತೀರ್ಮಾನ

By ETV Bharat Karnataka Team

Published : Dec 23, 2023, 10:55 AM IST

ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2 ಇಂದಿರಾ ಕ್ಯಾಂಟೀನ್​ ಆರಂಭಿಸಲು ಸರ್ಕಾರ ತೀರ್ಮಾನಿಸಿದೆ.

two-indira-canteens-at-bengaluru-airport
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2 ಇಂದಿರಾ ಕ್ಯಾಂಟೀನ್ ಸಚಿವ ಸಂಪುಟ ತೀರ್ಮಾನ

ದೇವನಹಳ್ಳಿ (ಬೆಂಗಳೂರು) : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಮಿಕರು ಮತ್ತು ಟ್ಯಾಕ್ಸಿ ಚಾಲಕರಿಗೆ ಕಡಿಮೆ ಬೆಲೆಯಲ್ಲಿ ಆಹಾರ ನೀಡಲು ಎರಡು ಇಂದಿರಾ ಕ್ಯಾಂಟೀನ್​ಗಳನ್ನು ತೆರೆಯಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನ ನಿಲ್ದಾಣ. ಈ ವಿಮಾನ ನಿಲ್ದಾಣದಲ್ಲಿ ಹೊಟೇಲ್ ಮತ್ತು ರೆಸ್ಟೋರೆಂಟ್​ಗಳಿದ್ದು, ಅಲ್ಲಿನ ದುಬಾರಿ ಬೆಲೆಯ ಆಹಾರವನ್ನು ಬಡ ಕಾರ್ಮಿಕರು ಕೊಳ್ಳಲು ಅಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಆಹಾರ ಒದಗಿಸಲು ರಾಜ್ಯ ಸರ್ಕಾರ 2 ಇಂದಿರಾ ಕ್ಯಾಂಟೀನ್​ಗಳನ್ನು ತೆರೆಯಲು ತೀರ್ಮಾನಿಸಲಾಗಿದೆ.

ಟರ್ಮಿನಲ್ -1ನ ಮುಂಭಾಗದ ಪಾರ್ಕಿಂಗ್ ಏರಿಯಾದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗುತ್ತದೆ. ಇದಕ್ಕೂ ಮುನ್ನ ವಿಮಾನ ನಿಲ್ದಾಣದ ಸಿಬ್ಬಂದಿ, ಚಾಲಕರು ಮತ್ತು ಕಾರ್ಮಿಕರು ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸುವಂತೆ ಮನವಿ ಮಾಡಿದ್ದರು. ಕಾರ್ಮಿಕರ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ಮುಂದಾಗಿದೆ.

ಇಂದಿರಾ ಕ್ಯಾಂಟೀನ್​ಗಳಲ್ಲಿ ನೀಡಲಾಗುತ್ತಿರುವ ಆಹಾರಗಳ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಹೊಸ ಆಹಾರವನ್ನು ಪರಿಚಯಿಸಲು ಸರ್ಕಾರ ತಿರ್ಮಾನ ಮಾಡಿದೆ. ಹೊಸ ಮೆನುವಿನಲ್ಲಿ ರಾಗಿ ಮುದ್ದೆ, ಇಡ್ಲಿ, ಮಂಗಳೂರು ಬನ್ಸ್, ಬಿಸಿ ಬೇಳೆ ಬಾತ್, ಪಲಾವ್, ಖಾರಬಾತ್, ಪೊಂಗಲ್, ಬ್ರೆಡ್ ಜಾಮ್, ಚೌಚೌ ಬಾತ್ ಸೇರಿದಂತೆ ಹಲವು ಖಾದ್ಯಗಳು ನಿಗದಿ ಪಡಿಸಲಾದ ದಿನಗಳಲ್ಲಿ ಲಭ್ಯವಾಗಲಿವೆ.

ವಿಶ್ವದ ಅತಿ ಸುಂದರ ವಿಮಾನ ನಿಲ್ದಾಣ ಪ್ರಶಸ್ತಿ :ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನವು ನಿಲ್ದಾಣಕ್ಕೆ ವಿಶ್ವದ ಅತಿ ಸುಂದರ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಯುನೆಸ್ಕೋದ ಪ್ರಿಕ್ಸ್​ ವರ್ಸೈಲ್ಸ್ 2023 ಪುರಸ್ಕಾರಕ್ಕೆ ಪಾತ್ರವಾಗಿದೆ. ಟರ್ಮಿನಲ್​ 2 (ಟಿ2) 'ವಿಶ್ವದ ಅತಿ ಸುಂದರ ವಿಮಾನ ನಿಲ್ದಾಣ' ಮತ್ತು ಒಳಾಂಗಣ ವಿನ್ಯಾಸಕ್ಕೆ 2023ರ ಈ ವಿಶೇಷ ಪ್ರಶಸ್ತಿ ಲಭ್ಯವಾಗಿದೆ.

ತೀರ್ಪು ಸಮಿತಿಯಲ್ಲಿ ಖ್ಯಾತ ಫ್ಯಾಷನ್​ ಡಿಸೈನರ್​​ ಎಲಿ ಸಬಾ ನೇತೃತ್ವ ವಹಿಸಿದ್ದರು. ಫ್ರಿಕ್ಸ್​​ ವರ್ಸೈಲ್ಸ್ ಸಂಸ್ಥೆಯು ವಿಮಾನ ನಿಲ್ದಾಣದಲ್ಲಿನ​​ ಸಮಕಾಲೀನ ವಾಸ್ತುಶಿಲ್ಪದಲ್ಲಿನ ಅತ್ಯುತ್ತಮ ಸಾಧನೆ ಗುರುತಿಸಿ ಪ್ರಶಸ್ತಿ ಘೋಷಿಸುತ್ತದೆ. ನಿಲ್ದಾಣಗಳಲ್ಲಿರುವ ಸೌಲಭ್ಯ, ಒಳಾಂಗಣ ವಿನ್ಯಾಸ, ಸೌಕರ್ಯ ಮತ್ತು ವಾಸ್ತುಶಿಲ್ಪ ಇದರ ಪ್ರಮುಖ ಮಾನದಂಡವಾಗಿದೆ.

ಇದನ್ನೂ ಓದಿ :ಕೆಂಪೇಗೌಡ ಟರ್ಮಿನಲ್​ 2ಗೆ​​​​ 'ವಿಶ್ವದ ಅತಿ ಸುಂದರ ವಿಮಾನ ನಿಲ್ದಾಣ' ಪ್ರಶಸ್ತಿ

ABOUT THE AUTHOR

...view details