ಕರ್ನಾಟಕ

karnataka

₹21 ಕೋಟಿ ಮೌಲ್ಯದ 3,400 ಕೆಜಿ ಹೈಟೆಕ್ ಗಾಂಜಾ ಜಪ್ತಿ: ಎನ್​ಸಿಬಿ ಇತಿಹಾಸದಲ್ಲೇ ದೊಡ್ಡ ಕಾರ್ಯಾಚರಣೆ

By

Published : Aug 29, 2021, 4:36 PM IST

Updated : Aug 29, 2021, 5:34 PM IST

Bangalore NCB seized 4000 kg of marijuana
ಎನ್​ಸಿಬಿ ಬೆಂಗಳೂರು

ಅತಿ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬೆಂಗಳೂರು ವಿಭಾಗದ ಅಧಿಕಾರಿಗಳು ಬರೋಬ್ಬರಿ 3,400 ಕೆ.ಜಿ ಗಾಂಜಾ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಜೂನ್​ನಲ್ಲಿ ಎನ್​​ಸಿಬಿ ಕಾರ್ಯಾಚರಣೆ ನಡೆಸಿ 15 ಕೋಟಿ ರೂ ಮೌಲ್ಯದ 2 ಸಾವಿರ ಕೆ.ಜಿ.ತೂಕದ ಗಾಂಜಾ ಜಪ್ತಿ ಮಾಡಿಕೊಂಡಿದ್ದರು.

ಬೆಂಗಳೂರು: ತೆಲಂಗಾಣದ ಹೈದರಾಬಾದ್ ಮೂಲಕ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಗೆ ಲಾರಿಯಲ್ಲಿ ಕೋಟ್ಯಂತರ ರೂ. ಮೌಲ್ಯದ ಹೈಟೆಕ್ ಗಾಂಜಾ ಸಾಗಿಸುತ್ತಿದ್ದ ಮೂವರು ಅಂತಾರಾಜ್ಯ ಖದೀಮರನ್ನು ಮಾದಕವಸ್ತು ನಿಯಂತ್ರಣ ದಳ (ಎನ್​ಸಿಬಿ) ಬೆಂಗಳೂರು ವಲಯದ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಹೈದರಾಬಾದ್ ಹೊರವರ್ತುಲದಲ್ಲಿ ಲಾರಿಯಲ್ಲಿ ಗಾಂಜಾ ಸಾಗಿಸುವಾಗ ಮಹಾರಾಷ್ಟ್ರದ ಲಾತೂರ್ ಮೂಲದ ಆರೋಪಿಗಳಾದ ಶಿಂಧೆ, ಕಾಂಬ್ಲೇ ಹಾಗೂ ಜೋಗ್ದಂದ್ ಎಂಬುವರನ್ನು ಬಂಧಿಸಿ, ಸುಮಾರು 21 ಕೋಟಿ ರೂ. ಮೌಲ್ಯದ 3,400 ಕೆಜಿ ಹೈಟೆಕ್ ಗಾಂಜಾ ಹಾಗೂ ಲಾರಿ ವಶಕ್ಕೆ ಪಡೆದುಕೊಂಡಿದ್ದಾರೆ.

₹21 ಕೋಟಿ ಮೌಲ್ಯದ 3,400 ಕೆಜಿ ಹೈಟೆಕ್ ಗಾಂಜಾ ಜಪ್ತಿ

ಎನ್​ಸಿಬಿ ಇತಿಹಾಸದಲ್ಲಿ ದೊಡ್ಡ ಕಾರ್ಯಾಚರಣೆ

ಕಳೆದ ಜೂನ್​ನಲ್ಲಿ ಎನ್​​ಸಿಬಿ ಕಾರ್ಯಾಚರಣೆ ನಡೆಸಿ 15 ಕೋಟಿ ರೂ ಮೌಲ್ಯದ 2 ಸಾವಿರ ಕೆ.ಜಿ.ತೂಕದ ಗಾಂಜಾ ಜಪ್ತಿ ಮಾಡಿಕೊಂಡು ಮಹಾರಾಷ್ಟ್ರ ಮೂಲದ ನಾಲ್ವರನ್ನು ಬಂಧಿಸಿತ್ತು‌‌. ಇದೀಗ 21 ಕೋಟಿ ರೂ ಮೌಲ್ಯದ 3,400 ಕೆ.ಜಿ ಮೌಲ್ಯದ ಗಾಂಜಾ ಜಪ್ತಿ ಮಾಡಿರುವುದು ಎನ್​ಸಿಬಿ ಇತಿಹಾಸದಲ್ಲಿ ಅತಿ ದೊಡ್ಡ ಮಟ್ಟದ ಕಾರ್ಯಾಚರಣೆ ಎಂದು ಹೇಳಲಾಗುತ್ತಿದೆ.

ಡ್ರಗ್ಸ್​ ಕೇಸ್​ ಬಂಧಿತ ಆರೋಪಿಗಳಿಂದ ಸುಳಿವು

ತೆಲಂಗಾಣ, ಆಂಧ್ರಪ್ರದೇಶಗಳಲ್ಲಿ ಗಾಂಜಾ ಮಾರಾಟ ಚಟುವಟಿಕೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಿದ್ದ ಅಧಿಕಾರಿಗಳು ಈ ಹಿಂದೆ ಡ್ರಗ್ಸ್ ಕೇಸ್​ನಲ್ಲಿ ಬಂಧಿತ ಆರೋಪಿಗಳು ನೀಡಿದ ಸುಳಿವಿನ‌ ಮೇರೆಗೆ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದ ಲಾರಿ ತಡೆದು ಪರಿಶೀಲಿಸಿದಾಗ ಮಾದಕವಸ್ತು ಸಾಗಾಟ ಅವ್ಯವಹಾರ ಬಯಲಿಗೆ ಬಂದಿದೆ.

ಸಸಿಗಳ ರಾಶಿಯಲ್ಲಿ ಅಡಗಿತ್ತು ಕೋಟಿ ಮೌಲ್ಯದ ಗಾಂಜಾ

ಯಾರಿಗೂ ಅನುಮಾನ ಬಾರದಿರಲು ದಂಧೆಕೋರರು ಗಿಡದ ಬುಡದಲ್ಲಿನ ಮಣ್ಣಿನ ಜೊತೆ ಪ್ಲಾಸ್ಟಿಕ್‌ನಿಂದ ಗಾಂಜಾ ಸುತ್ತಿ ಮಣ್ಣು ಮುಚ್ಚಿದ್ದರು. ಅಲ್ಲದೆ 141 ಗೋಣಿಚೀಲದಲ್ಲಿ ಗಾಂಜಾ ಪ್ಯಾಕೆಟ್‌ಗಳನ್ನು ಇಟ್ಟು ಅದರೊಳಗೆ ಮಣ್ಣು ತುಂಬಿದ್ದರು. ಹೀಗೆ, ವಶಪಡಿಸಿಕೊಂಡಿರುವ ಲಾರಿಯು ಮಹಾರಾಷ್ಟ್ರದಲ್ಲಿ ನೋಂದಣಿಯಾಗಿದೆ. ಪುಣೆ, ಥಾಣೆ, ಮುಂಬೈ ಸೇರಿದಂತೆ ವಿವಿಧ ಕಡೆಗಳಲ್ಲಿ ಆರೋಪಿಗಳು ಗಾಂಜಾ ಸಾಗಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ವಿವಿಧ ರಾಜ್ಯಗಳಲ್ಲಿ ಮಾರಾಟ:ದಂಧೆಕೋರರು ಮಹಾರಾಷ್ಟ್ರ ಮಾತ್ರವಲ್ಲದೆ‌, ಓಡಿಶಾ, ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ತಾನ ಸೇರಿದಂತೆ ಶ್ರೀಲಂಕಾಕ್ಕೂ ಗಾಂಜಾ ಸರಬರಾಜು ಮಾರಾಟ ಮಾಡುತ್ತಿದ್ದರು. ವಿವಿಧ ರಾಜ್ಯಗಳಲ್ಲಿ ನಡೆಯುವ ಪಾರ್ಟಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿರುವುದು ಗೊತ್ತಾಗಿದೆ.

ಆಗಸ್ಟ್​ ಅಂತ್ಯಕ್ಕೆ ಬರೋಬ್ಬರಿ 7,500 ಕೆ.ಜಿ ಗಾಂಜಾ ವಶ

2020 ರಲ್ಲಿ ಎನ್ ಸಿಬಿಯು 1971 ಕೆ.ಜಿ. ಗಾಂಜಾ ಜಪ್ತಿ ಮಾಡಿಕೊಂಡು 8 ಮಂದಿ‌ ಆರೋಪಿಗಳನ್ನು ಬಂಧಿಸಿದರೆ 2021 ಆಗಸ್ಟ್ ಅಂತ್ಯಕ್ಕೆ 7500 ಕೆ.ಜಿ.ಗಾಂಜಾ ವಶಕ್ಕೆ‌‌ ಪಡೆದುಕೊಂಡು 25 ಮಂದಿ ಆರೋಪಿಗಳನ್ನು ಸೆರೆಹಿಡಿಯಲಾಗಿದೆ ಎಂದು ಎನ್​ಸಿಬಿ ಬೆಂಗಳೂರು ವಲಯ ನಿರ್ದೇಶಕ ಅಮಿತ್ ಗವಾಟೆ ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಒಡಿಶಾ ರಾಜ್ಯಗಳಲ್ಲಿ ದಂಧೆಕೋರರು ಅಕ್ರಮವಾಗಿ ಗಾಂಜಾ ಬೆಳೆದು ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಅವ್ಯಾಹತವಾಗಿ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕಂಡು ಬಂದಿದೆ.

Last Updated :Aug 29, 2021, 5:34 PM IST

ABOUT THE AUTHOR

...view details