ಕರ್ನಾಟಕ

karnataka

ಸಚಿವ ಅಶ್ವತ್ಥನಾರಾಯಣ ರಾಜೀನಾಮೆಗೆ ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹ

By

Published : Sep 23, 2022, 9:58 AM IST

kumaraswamy-demands-resignation-of-minister-aswatthanarayan

ಬಿಎಂಎಸ್ ಶಿಕ್ಷಣ ಟ್ರಸ್ಟ್ ಬಗ್ಗೆ ಬಿಜೆಪಿ ಸರ್ಕಾರ ಕಾನೂನುರೀತ್ಯ ಕ್ರಮ ವಹಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ. ಕಾನೂನುರೀತ್ಯ ಕ್ರಮ ಎಂದರೆ, ಸಾವಿರಾರು ಕೋಟಿ ರೂ. ಮೌಲ್ಯದ ಸರ್ಕಾರಿ ಸ್ವತ್ತನ್ನು ಸದ್ದಿಲ್ಲದೆ ಖಾಸಗಿ ರಿಯಲ್ ಎಸ್ಟೇಟ್ ಪಟ್ಟಭದ್ರರಿಗೆ ಧಾರೆ ಎರೆದುಕೊಡುವುದಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಬೆಂಗಳೂರು:ಬಿಎಂಎಸ್​ ಶಿಕ್ಷಣ ಸಂಸ್ಥೆಯಲ್ಲಿ ಬೈಲಾ ಉಲ್ಲಂಘಿಸಿ ಟ್ರಸ್ಟಿಗಳ ನೇಮಕ, ಪ್ರವೇಶ ಪ್ರಕ್ರಿಯೆ, ಶುಲ್ಕ ವಸೂಲಿ ಮತ್ತು ಜಮೋನಿನಲ್ಲಿ ಅಕ್ರಮ ನಡೆದಿದ್ದು, ಇದರಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಶಾಮೀಲಾಗಿದ್ದಾರೆಂದು ಹೆಚ್​​ಡಿಕೆ ಆರೋಪಿಸಿದ್ದಾರೆ. ಜೊತೆಗೆ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಬಿಎಂಎಸ್ ಟ್ರಸ್ಟ್‌ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು. ಆರೋಪ ಬಂದಿರುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥನಾರಾಯಣ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಟ್ರಸ್ಟ್‌ ಮತ್ತು ಆ ಟ್ರಸ್ಟ್‌ನ ಎಲ್ಲಾ ಸ್ವತ್ತುಗಳನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ವಿಧಾನಸಭೆಯಲ್ಲೇ ಎಲ್ಲವನ್ನೂ ದಾಖಲೆ ಸಮೇತ ಇಟ್ಟಿದ್ದೇನೆ. ಆ ದಾಖಲೆಗಳೇ ಎಲ್ಲವನ್ನೂ ಮಾತನಾಡುತ್ತಿವೆ. ನಾನು ಹೊಡೆದ ಗುಂಡು ಎಲ್ಲಿ ವಿಫಲವಾಗಿದೆ? ಅದನ್ನು ವಿಫಲಗೊಳಿಸುವ ಇನ್ನೊಂದು ಹುನ್ನಾರ, ಷಡ್ಯಂತ್ರ ಈಗ ನಡೆದಿದೆ ಅಷ್ಟೇ ಎಂದು ಆರೋಪಿಸಿದ್ದಾರೆ.

ಬಿಎಂಎಸ್ ಟ್ರಸ್ಟ್ ಬಗ್ಗೆ ಬಿಜೆಪಿ ಸರ್ಕಾರ ಕಾನೂನುರೀತ್ಯ ಕ್ರಮ ವಹಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ. ಕಾನೂನುರೀತ್ಯ ಕ್ರಮ ಎಂದರೆ, ಸಾವಿರಾರು ಕೋಟಿ ರೂ. ಮೌಲ್ಯದ ಸರ್ಕಾರಿ ಸ್ವತ್ತನ್ನು ಸದ್ದಿಲ್ಲದೆ ಖಾಸಗಿ ರಿಯಲ್ ಎಸ್ಟೇಟ್ ಪಟ್ಟಭದ್ರರಿಗೆ ಧಾರೆ ಎರೆದುಕೊಡುವುದಾ? ಎಂದು ಪ್ರಶ್ನಿಸಿದ್ದಾರೆ.

ಟ್ರಸ್ಟ್​ ಷರತ್ತು ತಿಳಿಯಿರಿ:ಸದನದಲ್ಲಿ ನಾನಿಟ್ಟ ಪ್ರತಿ ದಾಖಲೆ ಅಕ್ರಮಕ್ಕೆ ಕನ್ನಡಿ. ನಿಮ್ಮ ಕಣ್ಣಿಗೆ ಈ ಅಕ್ರಮವೆಲ್ಲ ಸಕ್ರಮವಾಗಿದ್ದರೆ, ಇದಕ್ಕಿಂತ ದುರಂತ ಇನ್ನೊಂದಿಲ್ಲ. ಎಲ್ಲಾ ದಾಖಲೆಗಳನ್ನು ಮತ್ತೊಮ್ಮೆ ನೋಡಿ. ಅಷ್ಟೂ ಆಸ್ತಿಯನ್ನು ಲಪಟಾಯಿಸಲು ಟ್ರಸ್ಟ್​ನಲ್ಲಿ ನಡೆದ ಷಡ್ಯಂತ್ರಕ್ಕೆ ಸಚಿವರಾಗಿ ನೀವು ಹೇಗೆಲ್ಲಾ ಸಹಕಾರ ನೀಡಿದ್ದೀರಿ ಎನ್ನುವುದು ಈಗ ಜಗಜ್ಜಾಹೀರು. ಉನ್ನತ ಶಿಕ್ಷಣ ಸಚಿವರೇ, 1957ರಲ್ಲಿ ರಚನೆಗೊಂಡು ನೋಂದಣಿಯಾದ ಬಿಎಂಎಸ್ ಟ್ರಸ್ಟ್​​ನ ಮೂಲ ಡೀಡನ್ನು ಒಮ್ಮೆ ಓದಿ. ದಾನಿ ಟ್ರಸ್ಟಿ, ಆಜೀವ ಟ್ರಸ್ಟಿ ನೇಮಕದ ಬಗ್ಗೆ ಇರುವ ಷರತ್ತುಗಳನ್ನೂ ತಿಳಿಯಿರಿ. ಆದರೆ, ನೀವು ಜನರಿಗೆ ಮತ್ತು ಸರ್ಕಾರಕ್ಕೆ ಸೇರಿದ ಇಡೀ ಟ್ರಸ್ಟಿನ ಆಸ್ತಿ ಹೊಡೆಯಲು ನಿಂತವರ ಪರ ನಾಚಿಕೆ ಇಲ್ಲದೆ ವಕಾಲತ್ತು ವಹಿಸುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.

ಇದ್ಯಾವ ಶಿಕ್ಷಣ ನೀತಿ?:ಬಿಎಂಎಸ್ ಎಂಜೀಯರಿಂಗ್‌ ಕಾಲೇಜಿನಲ್ಲಿ ಸೀಟ್‌ ಬ್ಲಾಕಿಂಗ್‌, ಪೇಮೆಂಟ್‌ ಸೀಟುಗಳನ್ನು 50:50ರಂತೆ ಟ್ರಸ್ಟಿಗಳಿಬ್ಬರು ಹಂಚಿಕೊಂಡಿದ್ದು ನಿಮ್ಮ ಗಮನಕ್ಕೆ ಬರಲಿಲ್ಲವೇ? ಕಾಮೆಡ್-ಕೆ ಆಕ್ಷೇಪಣಾ ಪತ್ರ, ಸರ್ಕಾರದ ಇಬ್ಬರು ಅಧಿಕಾರಿಗಳು ಟ್ರಸ್ಟಿನ ಅಕ್ರಮಗಳ ಬಗ್ಗೆ ಬರೆದ ಪತ್ರಗಳನ್ನು ನೀವು ಓದಲಿಲ್ಲವೇ ಸಚಿವರೇ? ಓದಲಿಲ್ಲ ಎಂದರೆ, ಅದಕ್ಕೆ ಕಾರಣವೇನು?. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಎಂದರೆ ಸರ್ಕಾರಿ ಸ್ವತ್ತುಗಳನ್ನು ಭೂರಕ್ಕಸರ ಬಾಯಿಗೆ ಹಾಕುವುದಾ? ಮುಜರಾಯಿ ಇಲಾಖೆಯ ದೊಡ್ಡ ಬಸವಣ್ಣ, ಕಾರಂಜಿ ಶ್ರೀ ಆಂಜನೇಯ ಸ್ವಾಮಿ ದೇಗುಲಗಳಿಗೆ ಸೇರಿದ ಕೋಟ್ಯಂತರ ರೂ. ಬೆಲೆಯ ಆಸ್ತಿಯನ್ನು ನುಂಗಲು ಹೊರಟ ನುಂಗಣ್ಣರಿಗೆ ದಾರಿ ಸಲೀಸು ಮಾಡಿಕೊಡುವುದಾ? ಇದ್ಯಾವ ಶಿಕ್ಷಣ ನೀತಿ? ಇದ್ಯಾವ ಧರ್ಮನೀತಿ? ಎಂದು ವಾಗ್ದಾಳಿ ನಡೆಸಿದ್ದಾರೆ.

ನಮ್ಮ ಅವಧಿಯಲ್ಲಿ ಶೈಕ್ಷಣಿಕ ಸುಧಾರಣೆಗಾಗಿ ಬಹಳ ಕ್ರಮ ಕೈಗೊಂಡಿದ್ದೇವೆ ಎನ್ನುತ್ತೀರಿ. ಸುಧಾರಣೆ ಎಂದರೆ, ಸಾರ್ವಜನಿಕ ಟ್ರಸ್ಟ್​​ಗಳನ್ನು ಹೀಗೆ ನುಂಗಿ ನೀರು ಕುಡಿಯಲು ಒಳಗೊಳಗೇ ಸಹಕಾರ ನೀಡುವುದಾ?, ಪ್ರಧಾನಿ ಮೋದಿ ಅವರು ಹೇಳಿಕೊಟ್ಟ ವಿಶ್ವಗುರು ಪರಿಕಲ್ಪನೆ ಇದೇನಾ?, ಶೈಕ್ಷಣಿಕೋದ್ಧಾರ ಮಾಡುವುದು ಎಂದರೆ ಹೀಗೆನಾ? ಎಂದು ಪ್ರಶ್ನಿಸಿದ್ದಾರೆ.

ಅಕ್ರಮ ತಿದ್ದುಪಡಿಗೆ ಶರವೇಗ :2018ರಲ್ಲಿ ನನ್ನ ನೇತೃತ್ವದ ಸರ್ಕಾರವು ದಾನಿ ಟ್ರಸ್ಟಿ, ಅಜೀವ ಟ್ರಸ್ಟಿ ನೇಮಕದ ಬಗ್ಗೆ ಬಿಎಂಎಸ್ ಟ್ರಸ್ಟ್​​ನಲ್ಲಿ ಕೈಗೊಂಡಿದ್ದ ತಿದ್ದುಪಡಿಗಳು ಅಕ್ರಮ ಎಂದು ಸಾರಿ, ಆ ತಿದ್ದುಪಡಿಗಳನ್ನು ಸಾರಾಸಗಟಾಗಿ ತಿರಸ್ಕರಿತ್ತು. ನನ್ನ ಸರ್ಕಾರ ಹೋದ ಮೇಲೆ ಬಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಈ ಅಕ್ರಮ ತಿದ್ದುಪಡಿಗಳನ್ನು ಶರವೇಗದಲ್ಲಿ ಪುರಸ್ಕರಿಸಿದ್ದು ಹೇಗೆ?. ಟ್ರಸ್ಟಿನಲ್ಲಿ ಸರ್ಕಾರದ ಟ್ರಸ್ಟಿಗೇ ಕೊಕ್ ಕೊಟ್ಟು, ಈ ಟ್ರಸ್ಟಿನಲ್ಲಾಗುತ್ತಿದ್ದ ಗೋಲ್​ಮಾಲ್ ಬಗ್ಗೆ ಸರ್ಕಾರಿ ಟ್ರಸ್ಟಿಯಾಗಿದ್ದ ಐಎಎಸ್ ಅಧಿಕಾರಿ ಡಾ.ಮಂಜುಳಾ ಮತ್ತು ಇನ್ನೋರ್ವ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರು ಬರೆದ ಪತ್ರಗಳನ್ನು ಕಸದಬುಟ್ಟಿಗೆ ಹಾಕಿದ್ದು ಏಕೆ? ಇದರ ಹಿಂದಿನ ಹುನ್ನಾರ ಏನು ಉನ್ನತ ಶಿಕ್ಷಣ ಸಚಿವರೇ? ಎಂದು ಟಾಂಗ್ ನೀಡಿದ್ದಾರೆ.

ಟ್ರಸ್ಟಿನಲ್ಲಿ ಕೈಗೊಂಡ ಅಕ್ರಮ ತಿದ್ದುಪಡಿಗಳನ್ನು ಸಕ್ರಮಗೊಳಿಸಲು ತಾವು ತೋರಿದ ಆತುರ, ಕಾಳಜಿ ಎಂಥದ್ದು ಎಂಬುದು ನನಗೆ ಗೊತ್ತು. ಅವುಗಳ ಅನುಮೋದನೆಗಾಗಿ ತಾವೇ ಬರೆದ ಟಿಪ್ಪಣಿಯ ಒಕ್ಕಣಿಯನ್ನು ಒಮ್ಮೆ ಓದಿಕೊಳ್ಳಿ ಅಶ್ವತ್ಥನಾರಾಯಣ ಅವರೇ. ಉನ್ನತ ಶಿಕ್ಷಣ ಸಚಿವರಾದ ನಿಮ್ಮ ಉನ್ನತ ಮಟ್ಟ ಎಷ್ಟು ಕೆಳಮಟ್ಟದಲ್ಲಿದೆ ಎಂಬುದು ಅರ್ಥವಾಗುತ್ತದೆ ಎಂದು ಹೆಚ್​​ಡಿಕೆ ಹೇಳಿದ್ದಾರೆ.

ಇದನ್ನೂ ಓದಿ:ಬಿಎಂಎಸ್ ಶಿಕ್ಷಣ ಟ್ರಸ್ಟ್​ ಬಗ್ಗೆ ಉತ್ತರ ನೀಡದ ಅಶ್ವತ್ಥನಾರಾಯಣ ವಿರುದ್ಧ ಜೆಡಿಎಸ್ ಕೆಂಡ..​ ಸಿಎಂ ಭರವಸೆ ನಂತರ ಧರಣಿ ವಾಪಸ್​

ABOUT THE AUTHOR

...view details