ಕರ್ನಾಟಕ

karnataka

ಭಿಕ್ಷಾಟನೆ ನಿರ್ಮೂಲನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವ ಕೋಟ ಸೂಚನೆ

By

Published : Jul 15, 2022, 7:19 AM IST

ಜನಸಂದಣಿ ಪ್ರದೇಶಗಳಲ್ಲಿ ಭಿಕ್ಷಾಟನೆಯಿಂದ ಜನರಿಗೆ ಸಮಸ್ಯೆ ಆಗುತ್ತಿದೆ. ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿರುವುದು ಕಂಡುಬಂದರೆ ಕೂಡಲೇ ರಕ್ಷಣೆ ಮಾಡಿ ,ಬಲವಂತ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವರು ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

begging-prevention
ಭಿಕ್ಷಾಟನೆ ನಿರ್ಮೂಲನೆಗೆ ಕ್ರಮ : ಸಚಿವ ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು: ರಾಜ್ಯದಲ್ಲಿ ಭಿಕ್ಷಾಟನೆ ನಿರ್ಮೂಲನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ನಗರ ಮತ್ತು ಅರೆ ನಗರ ಪ್ರದೇಶಗಳಲ್ಲಿ ಮಕ್ಕಳನ್ನು ಎತ್ತಿಕೊಂಡು ಮಹಿಳೆಯರು, ದೌರ್ಜನ್ಯಕ್ಕೊಳಗಾದ ಬೀದಿ ಮಕ್ಕಳು, ವಲಸೆ ಬಂದ ಅನಾಥ ಮಕ್ಕಳು ಸೇರಿದಂತೆ ಅನೇಕರು ಇಂಥ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಜನಸಂದಣಿಯಿರುವ ಪ್ರದೇಶಗಳಲ್ಲಿ ತೃತೀಯಲಿಂಗಿಗಳು ಸೇರಿದಂತೆ ವಯಸ್ಕರು ಮತ್ತು ವೃದ್ಧರು ಭಿಕ್ಷಾಟನೆ ಮಾಡುತ್ತಿರುವುದು ಸಾರ್ವಜನಿಕರಿಗೆ ನಿರಂತರ ಸಮಸ್ಯೆ ಉಂಟುಮಾಡುತ್ತಿದೆ. ಇದನ್ನು ತಡೆಗಟ್ಟುವ ಕುರಿತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್‌ ಇಲಾಖೆ, ಕಾರ್ಮಿಕ ಇಲಾಖೆ, ಮಹಾನಗರ ಪಾಲಿಕೆ ಅಧಿಕಾರಿಗಳು ಜೊತೆಗೂಡಿ ಕೆಲಸ ಮಾಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಭಿಕ್ಷಾಟನೆಯಲ್ಲಿ ತಾಯಿ ಮತ್ತು ಮಗು ಅಥವಾ ಮಗುವಿನೊಂದಿಗೆ ಮಹಿಳೆ ಇದ್ದಲ್ಲಿ ಮಕ್ಕಳ ಕಲ್ಯಾಣ ಇಲಾಖೆ ಕ್ರಮ ಜರುಗಿಸಬೇಕು. ಹಾಗೂ ಕೂಡಲೇ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಪುನರ್ವಸತಿ ಕಲ್ಪಿಸಬೇಕು. ಮಕ್ಕಳನ್ನು ಇಂಥ ಕೃತ್ಯಕ್ಕೆ ತಳ್ಳುವ ಜನರ ಮೇಲೆ ಕಠಿಣ ಕ್ರಮ ಜರುಗಿಸಬೇಕು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮಕ್ಕಳ ರಕ್ಷಣಾ ಸಮಿತಿ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಬೆಂಗಳೂರು ನಗರದಲ್ಲಿರುವ ಮೇಲ್ಸೇತುವೆ, ವಿವಿಧ ಸಿಗ್ನಲ್‌ಗ‌ಳು, ಪ್ರಮುಖ ದೇವಾಲಯಗಳ ಮುಂಭಾಗ, ಎಲೆಕ್ಟ್ರಾನಿಕ್‌ ಸಿಟಿ ಸಹಿತ ವಿವಿಧ ಟೋಲ್‌ ಗೇಟ್‌ಗಳು, ಮಾರ್ಕೆಟ್‌ ಮುಂತಾದವುಗಳನ್ನು ಗುರುತಿಸಿ ಮಕ್ಕಳ ರಕ್ಷಣೆ ಕಾರ್ಯಾಚರಣೆಗೆ ಇಳಿಯುವಂತೆ ಸಚಿವ ಕೋಟ ಅಧಿಕಾರಿಗಳಿಗೆ ತಿಳಿಸಿದರು.

ಇದನ್ನೂ ಓದಿ:ಬ್ರಿಟನ್​ ಪ್ರಧಾನಿ ಹುದ್ದೆಗೆ ಮತ್ತಷ್ಟು ಸನಿಹ.. ಎರಡನೇ ಸುತ್ತಿನಲ್ಲೂ ಸುನಕ್​ ಭಾರೀ ಮುನ್ನಡೆ

ABOUT THE AUTHOR

...view details