ಕರ್ನಾಟಕ

karnataka

'ಕೈ' ಕಲಿಗಳ ಮೊದಲ ಪಟ್ಟಿ ಹೈಕಮಾಂಡ್ ಅಂಗಳಕ್ಕೆ, ಸಂಕ್ರಾಂತಿ ಬಳಿಕ ಬಿಡುಗಡೆ

By

Published : Jan 6, 2023, 2:13 PM IST

ರಾಜ್ಯ ಕಾಂಗ್ರೆಸ್​ ಪಕ್ಷ ವಿಧಾನಸಭಾ ಚುನಾವಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು ಶೀಘ್ರದಲ್ಲೇ ಹುರಿಯಾಳುಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಿದೆ. ಟಿಕೆಟ್ ಹಂಚಿಕೆಯಲ್ಲಿ ಹೊಸ ಪ್ರಯತ್ನ ಮಾಡಿರುವ ಪಕ್ಷದ ನಿರ್ಧಾರದಿಂದ ಕೆಲವು ಆಕಾಂಕ್ಷಿಗಳಲ್ಲಿ ಈಗಾಗಲೇ ಎಡೆಬಡಿತ ಶುರುವಾಗಿದೆ.

Congress candidates list announce soon
ಕಾಂಗ್ರೆಸ್​ ಮುಖಂಡರು

ಬೆಂಗಳೂರು:ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರದೇಶ ಕಾಂಗ್ರೆಸ್ ಸಮಿತಿಯು ಬಹುತೇಕ ಸಿದ್ಧಪಡಿಸಿದೆ. ಹೈಕಮಾಂಡ್ ಒಪ್ಪಿಗೆ ಪಡೆದು ಸಂಕ್ರಾಂತಿ ಬಳಿಕ ಅಥವಾ ಈ ತಿಂಗಳ ಅಂತ್ಯದೊಳಗೆ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಮೊದಲ ಕಂತಿನ ಪಟ್ಟಿ ಬಿಡುಗಡೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸದ್ಯದಲ್ಲಿಯೇ ದೆಹಲಿಗೆ ತೆರಳುತ್ತಿದ್ದು ವರಿಷ್ಠರ ಅನುಮೋದನೆ ದೊರೆತ ನಂತರ ಪಟ್ಟಿ ಪ್ರಕಟವಾಗುವ ನಿರೀಕ್ಷೆಗಳಿವೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳ ಪೈಕಿ ಮೊದಲ ಕಂತಿನ ಪಟ್ಟಿಯಲ್ಲಿ ಸುಮಾರು 125 ರಿಂದ 150 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲು ಪ್ರಯತ್ನ ನಡೆದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಈಟಿವಿ ಭಾರತಕ್ಕೆ ಖಚಿತಪಡಿಸಿದ್ದಾರೆ. ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕಸರತ್ತು ನಿರಂತರವಾಗಿ ನಡೆದಿದ್ದು ಸಭೆಗಳ ಮೇಲೆ ಸಭೆ ನಡೆಸಲಾಗುತ್ತಿದೆ. ಸಾಮಾಜಿಕ ನ್ಯಾಯ ಸೇರಿದಂತೆ ಎಲ್ಲಾ ಅಂಶಗಳನ್ನು ಗಮನಲ್ಲಿಟ್ಟುಕೊಂಡು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಮೊದಲ ಪಟ್ಟಿಯಲ್ಲಿ ಯಾರಿಗೆ ಟಿಕೆಟ್?:ಪ್ರಥಮ ಪಟ್ಟಿಯಲ್ಲಿ ಬಹುತೇಕ ಕಾಂಗ್ರೆಸ್​ನ ಹಾಲಿ ಶಾಸಕರಿಗೆ ಟಿಕೆಟ್ ಘೋಷಣೆ ಮಾಡುವ ಸಂಭವವಿದೆ. ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಆರ್.ಧೃುವನಾರಾಯಣ, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ ಅವರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಗುವ ಸಾಧ್ಯತೆ ಇದೆ. ಪಕ್ಷದ ಹಿರಿಯ ಮುಖಂಡರು ಮತ್ತು ಮಾಜಿ ಸಚಿವರುಗಳಾದ ಆರ್ ವಿ ದೇಶಪಾಂಡೆ, ಕೆ ಜೆ ಜಾರ್ಜ್, ರಮೇಶ್ ಕುಮಾರ್, ದಿನೇಶ್ ಗುಂಡೂರಾವ್, ಎಂ ಬಿ ಪಾಟೀಲ್, ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್, ಹೆಚ್ ಕೆ ಪಾಟೀಲ್, ಅಮರೇಗೌಡ ಬಯ್ಯಾಪುರ, ಶರಣಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ್, ರಾಜಶೇಖರ ಪಾಟೀಲ್, ಎಂ ಕೃಷ್ಣಪ್ಪ, ಕೃಷ್ಣ ಭೈರೇಗೌಡ, ತನ್ವೀರ್ ಸೇಠ್, ಪಿ ಟಿ ಪರಮೇಶ್ವರ ನಾಯಕ್, ವೆಂಕಟ ರಮಣಪ್ಪ ಅವರಿಗೆ ಪ್ರಥಮ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗುವ ಸಾದ್ಯತೆಯಿದೆ ಎಂದು ಹೇಳಲಾಗುತ್ತದೆ.

ಹಾಲಿ ಶಾಸಕರಾದ ಡಾ. ಅಜಯ್ ಸಿಂಗ್, ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ರಾಘವೇಂದ್ರ ಹಿಟ್ನಾಳ್, ರೂಪಾ ಶಶಿಧರ್, ಭೈರತಿ ಸುರೇಶ್, ಬಿ ಕೆ ಸಂಗಮೇಶ್, ರಿಜ್ವಾನ್ ಅರ್ಷದ್, ಎನ್ ಎ ಹ್ಯಾರೀಸ್, ಎಸ್ ರಾಮಪ್ಪ, ಭೀಮಾನಾಯಕ್, ಸೌಮ್ಯ ರಾಮಲಿಂಗಾರೆಡ್ಡಿ, ಬಿ ಶಿವಣ್ಣ, ಪ್ರಸಾದ್ ಅಬ್ಬಯ್ಯ, ಆರ್ ನರೇಂದ್ರ, ಡಾ. ಯತೀಂದ್ರ ಸಿದ್ದರಾಮಯ್ಯ, ಹೆಚ್ ಪಿ ಮಂಜುನಾಥ್ , ಸಿ ಅನಿಲ್ ಕುಮಾರ್, ಎ ನಾರಾಯಣ ಸ್ವಾಮಿ, ಗಣೇಶ ಹುಕ್ಕೇರಿ, ಆನಂದ ಸಿದ್ದು ನ್ಯಾಮಗೌಡ, ನಂಜೇಗೌಡ , ಎಸ್ ಎನ್ ಸುಬ್ಬಾರೆಡ್ಡಿ, ಡಾ. ಹೆಚ್ ಡಿ ರಂಗನಾಥ್, ರಾಜೇಗೌಡ, ಟಿ ರಘುಮೂರ್ತಿ ಸೇರಿದಂತೆ ಹಲವಾರು ಶಾಸಕರಿಗೆ ಟಿಕೆಟ್ ಪ್ರಕಟಿಸುವ ಸಂಭವವಿದೆ ಎಂದು ಕಾಂಗ್ರೆಸ್​​ನ ಉನ್ನತ ಮೂಲಗಳು ತಿಳಿಸಿವೆ.

ಕಳೆದ ಮತ್ತು ಹಿಂದಿನ ವಿಧಾನಸಭೆ ಚುನಾವಣೆಗಳಲ್ಲಿ ಉತ್ತಮ ಸ್ಪರ್ಧೆ ನೀಡಿ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡ ಹಾಗೂ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಗಳಿರುವ ಮಾಜಿ ಸಚಿವರು ಮತ್ತು ಮಾಜಿ ಶಾಸಕರುಗಳಿಗೂ ಮೊದಲ ಪಟ್ಟಿಯಲ್ಲೇ ಟಿಕೆಟ್ ಘೋಷಣೆ ಮಾಡುವ ಬಗ್ಗೆ ಯೋಚಿಸಲಾಗುತ್ತಿದೆ. ಮಾಜಿ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪ, ಬಸವರಾಜ ರಾಯರೆಡ್ಡಿ, ಹೆಚ್ ಆಂಜನೇಯ, ಎಸ್ ಎಸ್ ಮಲ್ಲಿಕಾರ್ಜುನ, ಟಿ ಬಿ ಜಯಚಂದ್ರ, ಮಾಜಿ ಶಾಸಕ ಮಧು ಬಂಗಾರಪ್ಪ ಸೇರಿದಂತೆ ಹಲವರಿಗೆ ಟಿಕೆಟ್ ನೀಡುವ ಬಗ್ಗೆ ಕಾಂಗ್ರೆಸ್ ಪಕ್ಷ ಗಂಭೀರವಾಗಿ ಸಮಾಲೋಚನೆ ನಡೆಸತೊಡಗಿದೆ ಎಂದು ಗೊತ್ತಾಗಿದೆ.

ಕಾಂಗ್ರೆಸ್​ ಮುಖಂಡರು

ಕಾಂಗ್ರೆಸ್ ಪಕ್ಷದ ಹಾಲಿ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಮಾಜಿ ಸಂಸದರುಗಳ ಜೊತೆಗೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯತೆಗಳಿರುವ ಹೊಸ ಅಭ್ಯರ್ಥಿಗಳಿಗೆ ಮೊದಲ ಪಟ್ಟಿಯಲ್ಲಿಯೇ ಟಿಕೆಟ್ ನಿಡುವ ಬಗ್ಗೆಯೂ ಕೆಪಿಸಿಸಿ ಗಂಭೀರ ಚಿಂತನೆ ನಡೆಸತೊಡಗಿದೆ ಎಂದು ತಿಳಿದುಬಂದಿದೆ. ಸಾಮಾಜಿಕ ನ್ಯಾಯ, ಜಾತಿ ಸಮೀಕರಣ, ಸಮೀಕ್ಷಾ ವರದಿ, ಜನ ಬೆಂಬಲ, ಆರ್ಥಿಕ ಶಕ್ತಿ, ಆಕಾಂಕ್ಷಿಗಳ ಜನಪ್ರಿಯತೆ, ಸೇವಾ ಮನೋಭಾವ. ಪಕ್ಷ ನಿಷ್ಠೆ ಸೇರದಂತೆ ಹತ್ತು ಹಲವು ಅಂಶಗಳನ್ನು ಅಭ್ಯರ್ಥಿಗಳನ್ನು ಕಾಂಗ್ರೆಸ್ ಆಯ್ಕೆ ಮಾಡುತ್ತಿದೆ ಎಂದು ಹೇಳಲಾಗಿದೆ.

ಅರ್ಜಿ ಹಾಕಿದ ಆಕಾಂಕ್ಷಿತರು:ಕಾಂಗ್ರೆಸ್ ಅಭ್ಯರ್ಥಿಗಳಾಗಲು ಆಸಕ್ತಿ ವ್ಯಕ್ತಪಡಿಸಿ ಈಗಾಗಲೇ ಸುಮಾರು 2300ಕ್ಕೂ ಹೆಚ್ಚು ಜನ ಆಕಾಂಕ್ಷಿತರುಗಳು ಕೆಪಿಸಿಸಿಗೆ ಅರ್ಜಿ ಹಾಕಿದ್ದಾರೆ. ಪ್ರತಿ ವಿಧಾನಸಭೆ ಕ್ಷೇತ್ರಗಳಿಂದ ಕನಿಷ್ಠ ಒಂದರಿಂದ 25 ಜನ ಆಕಾಂಕ್ಷಿಗಳು ಟಿಕೆಟ್ ಬಯಸಿದ್ದು ಅಭ್ಯರ್ಥಿ ಪಟ್ಟಿ ಘೋಷಣೆಯನ್ನ ಕಾಯತೊಡಗಿದ್ದಾರೆ.

ಇದನ್ನೂ ಓದಿ:ರಾಜ್ಯದ ವಿವಿಧ ಮಠಗಳಿಗೆ ಬಿಜೆಪಿ ಅಧ್ಯಕ್ಷ ನಡ್ಡಾ ಭೇಟಿ, ಶ್ರೀಗಳೊಂದಿಗೆ ಗೌಪ್ಯ ಸಭೆ

ABOUT THE AUTHOR

...view details