ಕರ್ನಾಟಕ

karnataka

ಚಾಲನಾ ಪರವಾನಿಗೆ ನಕಲಿ ಎಂದು ಸಾಬೀತುಪಡಿಸುವುದು ವಿಮಾ ಕಂಪೆನಿ ಜವಾಬ್ದಾರಿ: ಹೈಕೋರ್ಟ್‌

By

Published : Dec 5, 2022, 9:56 PM IST

ಅಪಘಾತಕ್ಕೆ ಕಾರಣವಾದ ವಾಹನದ ಚಾಲಕ ಹೊಂದಿದ್ದ ಚಾಲನಾ ಪರವಾನಗಿ ನಕಲಿ ಎಂಬುದನ್ನು ಸಾಬೀತುಪಡಿಸುವ ಜವಾಬ್ದಾರಿ ವಿಮಾ ಕಂಪನಿಯ ಮೇಲಿರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

karnataka high court
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಅಪಘಾತಕ್ಕೆ ಕಾರಣವಾದ ವಾಹನದ ಚಾಲಕ ಹೊಂದಿದ್ದ ಚಾಲನಾ ಪರವಾನಗಿ ನಕಲಿ ಎಂಬುದನ್ನು ಸಾಬೀತುಪಡಿಸುವ ಜವಾಬ್ದಾರಿ ವಿಮಾ ಕಂಪನಿಯ ಮೇಲಿರುತ್ತದೆ. ಲೈಸೆನ್ಸ್ ನಕಲಿ ಎನ್ನುವುದು ಸಾಬೀತಾಗುವವರೆಗೆ ಪರಿಹಾರ ನೀಡುವ ಹೊಣೆಗಾರಿಕೆಯನ್ನು ವಾಹನದ ಮಾಲೀಕನ ಮೇಲೆ ಹೊರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

12 ವರ್ಷಗಳ ಹಿಂದೆ ನಡೆದಿದ್ದ ಅಪಘಾತ ಪ್ರಕರಣವೊಂದರಲ್ಲಿ ಗಾಯಗೊಂಡಿದ್ದ ತರುಣ್ ಗೌಡ (ಘಟನೆ ನಡೆದಾಗ 8 ವರ್ಷ) ಎಂಬಾತನಿಗೆ ಪರಿಹಾರ ಪಾವತಿಸುವ ಹೊಣೆಗಾರಿಕೆಯನ್ನು ವಿಮಾ ಕಂಪನಿಗೆ ವಹಿಸಿದ್ದ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣದ (ಎಂಎಸಿಟಿ) ಕ್ರಮ ಪ್ರಶ್ನಿಸಿ ಯುನೈಟೆಡ್ ಇನ್ಶೂರೆನ್ಸ್ ಇಂಡಿಯಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಲ್ಲದೆ, ಅಪಘಾತಕ್ಕೆ ಕಾರಣವಾದ ಚಾಲಕನ ಲೈಸೆನ್ಸ್ ನಕಲಿ ಎನ್ನುವುದು ವಿಮಾ ಕಂಪನಿಯ ವಾದವಾಗಿದೆ. ಆದರೆ, ಆ ದಾಖಲೆಯನ್ನು ವಿತರಿಸಿದ ಅಧಿಕಾರಿಯನ್ನು ಸಂಸ್ಥೆ ವಿಚಾರಣೆಗೊಳಪಡಿಸಿಲ್ಲ. ವಿಚಾರಣೆಗೆ ಒಳಪಡಿಸಿರುವುದಕ್ಕೆ ಯಾವುದೇ ದಾಖಲೆಯನ್ನೂ ಒದಗಿಸಿಲ್ಲ. ಲೈಸೆನ್ಸ್ ನಕಲಿಯೋ ಅಥವಾ ಅಸಲಿಯೋ ಎಂಬುದನ್ನು ಸಾಬೀತುಪಡಿಸುವ ಜವಾಬ್ದಾರಿ ವಿಮಾ ಕಂಪನಿಯ ಮೇಲೆಯೇ ಇರುತ್ತದೆ.

ಈ ಪ್ರಕರಣದಲ್ಲಿ ಒದಗಿಸಲಾಗಿರುವ ದಾಖಲೆ ನಕಲಿ ಎನ್ನುವುದನ್ನು ವಿಮಾ ಸಂಸ್ಥೆ ಸಾಬೀತುಪಡಿಸದ ಹೊರತು ಪರಿಹಾರ ಪಾವತಿಸುವ ಹೊಣೆಗಾರಿಕೆಯನ್ನು ವಾಹನದ ಮಾಲೀಕನಿಗೆ ವರ್ಗಾಯಿಸುವ ಸನ್ನಿವೇಶವೇ ಉದ್ಭವಿಸುದಿಲ್ಲ. ಆದ್ದರಿಂದ, ನ್ಯಾಯಾಧಿಕರಣದ ಆದೇಶದಲ್ಲಿ ಮಧ್ಯಪ್ರವೇಶಿಸುವ ಅವಶ್ಯಕತೆ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ:2010ರ ಡಿ.26 ರಂದು ಮಂಡ್ಯದ ಅಬಲವಾಡಿಯ ತನ್ನ ಮನೆಯ ಮುಂದೆ ನಿಂತಿದ್ದ ತರುಣ್‌ಗೆ ವೇಗವಾಗಿ ಬಂದ ಟಾಟಾ ಏಸ್ ಗಾಡಿ ಡಿಕ್ಕಿ ಹೊಡೆದಿತ್ತು. ಬಳಿಕ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಪರಿಹಾರ ಕೋರಿ ತರುಣ್ ಪರವಾಗಿ ಆತನ ತಂದೆ ಸಲ್ಲಿಸಿದ್ದ ಅರ್ಜಿಯನ್ನು 2014ರಲ್ಲಿ ಮಾನ್ಯ ಮಾಡಿದ್ದ ನ್ಯಾಯಾಧಿಕರಣ, ಪರಿಹಾರ ಪಾವತಿಸುವ ಹೊಣೆಗಾರಿಕೆಯನ್ನು ವಿಮಾ ಕಂಪನಿಗೆ ಹೊರಿಸಿತ್ತು.

ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ವಿಮಾ ಸಂಸ್ಥೆ, ಚಾಲಕನ ಹೆಸರು ಎ. ನಟರಾಜನ್. ಆದರೆ, ನ್ಯಾಯಾಧಿಕರಣಕ್ಕೆ ದಾಖಲೆಯ ರೂಪದಲ್ಲಿ ಒದಗಿಸಿದ್ದ ಲೈಸೆನ್ಸ್‌ನಲ್ಲಿ ಎ.ಎಸ್. ನಟರಾಜನ್ ಎಂದಿದೆ. ಆದ್ದರಿಂದ, ಅಪಘಾತಕ್ಕೆ ಕಾರಣವಾದ ವಾಹನದ ಚಾಲಕನ ಲೈಸೆನ್ಸ್ ನಕಲಿಯಾಗಿದೆ. ಅದನ್ನು ಅಸಲಿ ಎಂದು ಸಾಬೀತುಪಡಿಸುವ ಪ್ರಯತ್ನವನ್ನೂ ವಾಹನದ ಮಾಲೀಕರು ಮಾಡಿಲ್ಲ. ಹೀಗಿದ್ದರೂ, ಪರಿಹಾರ ಪಾವತಿಸುವ ಹೊಣೆಗಾರಿಕೆಯನ್ನು ನ್ಯಾಯಾಧಿಕರಣ ವಿಮಾ ಕಂಪನಿಗೆ ವಹಿಸಿದೆ. ಆದ್ದರಿಂದ, ಎಂಎಸಿಟಿ ಆದೇಶ ರದ್ದುಪಡಿಸಬೇಕೆಂದು ಕೋರಿತ್ತು.

ಇದನ್ನೂ ಓದಿ:ಲಂಚಕ್ಕೆ ಬೇಡಿಕೆಯಿಟ್ಟು, ಸ್ವೀಕರಿಸದಿದ್ದರೆ ಅದು ಭ್ರಷ್ಟಾಚಾರವಲ್ಲ: ಹೈಕೋರ್ಟ್

ABOUT THE AUTHOR

...view details