ಕರ್ನಾಟಕ

karnataka

ಸಂಕ್ರಾಂತಿ ಹಬ್ಬದಂದು ರಾಜ್ಯ ಸರ್ಕಾರದಿಂದ ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ..

By

Published : Jan 14, 2022, 5:08 PM IST

Updated : Jan 14, 2022, 7:38 PM IST

Good news to guest lecturers on sankranti festival

ಸಂಕ್ರಾತಿ ಹಬ್ಬದಂದು ರಾಜ್ಯ ಸರ್ಕಾರದಿಂದ ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಸಂಬಳದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರು ತಿಳಿಸಿದ್ದಾರೆ..

ಬೆಂಗಳೂರು: ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳ ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಸಂಕ್ರಾಂತಿ ಗಿಫ್ಟ್ ನೀಡಿದೆ. ವೇತನವನ್ನು ದುಪ್ಪಟ್ಟಿಗಿಂತಲೂ ಹೆಚ್ಚು ಏರಿಸಲಾಗಿದೆ.

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿದ್ದು, ಉಪನ್ಯಾಸಕರ ಬೇಡಿಕೆಯ ಶಿಫಾರಸುಗಳಿಗೆ ಸಮ್ಮತಿ ಸೂಚಿಸಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಜೊತೆಗೆ, ಸೆಮಿಸ್ಟರ್​​ವಾರು ನೇಮಕಾತಿ ನಿಲ್ಲಿಸಿ, ಇನ್ನು ಮುಂದೆ ಇಡೀ ಶೈಕ್ಷಣಿಕ ವರ್ಷಕ್ಕೆ ನೇಮಿಸಿಕೊಳ್ಳುವುದಾಗಿ ಸರ್ಕಾರ ಘೋಷಿಸಿದೆ.

ವಿಧಾನಸೌಧದಲ್ಲಿ ಇಂದು ಸಂಜೆ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವರು, ಯುಜಿಸಿ ನಿಗದಿತ ಶೈಕ್ಷಣಿಕ ಅರ್ಹತೆ ಇದ್ದು, 5 ವರ್ಷ ಮತ್ತು ಅದಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರು ಇನ್ನು ಮುಂದೆ ಮಾಸಿಕ 32 ಸಾವಿರ ರೂ., ಇದಕ್ಕಿಂತ ಕಡಿಮೆ ಸೇವೆ ಸಲ್ಲಿಸಿರುವವರು ಮಾಸಿಕ 30 ಸಾವಿರ ರೂ. ಗೌರವಧನ ಪಡೆಯಲಿದ್ದಾರೆ ಎಂದು ಸಚಿವರು ಪ್ರಕಟಿಸಿದರು.

ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಕುರಿತಂತೆ ಸಚಿವ ಅಶ್ವತ್ಥ್ ನಾರಾಯಣ ಅವರು ಮಾಹಿತಿ ನೀಡಿರುವುದು..

ಹಾಗೆಯೇ, ಯುಜಿಸಿ ಬಯಸುವ ಶೈಕ್ಷಣಿಕ ಅರ್ಹತೆ ಹೊಂದದೆ, 5 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರುವವರಿಗೆ ಮಾಸಿಕ 28 ಸಾವಿರ ರೂ. ಮತ್ತು ಇದಕ್ಕಿಂತ ಕಡಿಮೆ ಕಾಲ ಸೇವೆ ಸಲ್ಲಿಸಿರುವವರಿಗೆ ಮಾಸಿಕ 26 ಸಾವಿರ ರೂ. ಗೌರವಧನ ನಿಗದಿಪಡಿಸಲಾಗಿದೆ. ಜೊತೆಗೆ, ಇವರು ನಿಗದಿತ ಶೈಕ್ಷಣಿಕ ಅರ್ಹತೆ ಗಳಿಸಿಕೊಳ್ಳಲು 3 ವರ್ಷಗಳ ಕಾಲಾವಕಾಶ ನೀಡಲಾಗಿದೆ. ಅತಿಥಿ ಉಪನ್ಯಾಸಕರಿಗೆಲ್ಲ ಇನ್ನು ಮುಂದೆ ಪ್ರತಿ ತಿಂಗಳು 10ರೊಳಗೆ ವೇತನ ಪಾವತಿಸಲಾಗುವುದು ಎಂದು ಅವರು ವಿವರಿಸಿದರು.

ನೇಮಕಾತಿಗೆ ಆನ್​ಲೈನ್ ಪೋರ್ಟಲ್​​:

ಇದುವರೆಗೆ, ಯುಜಿಸಿ ನಿಗದಿತ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರು ತಿಂಗಳಿಗೆ 13 ಸಾವಿರ ರೂ. ಮತ್ತು ಮಿಕ್ಕವರು 11 ಸಾವಿರ ರೂ. ಗೌರವಧನ ಪಡೆಯುತ್ತಿದ್ದರು. ಇದಲ್ಲದೆ, ಅತಿಥಿ ಉಪನ್ಯಾಸಕರ ಸುಗಮ ನೇಮಕಾತಿಗೆ ಆನ್​ಲೈನ್ ಪೋರ್ಟಲ್​​ನ್ನು ಸಹ ಅಭಿವೃದ್ಧಿಪಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಇದರಲ್ಲಿ ಜ.17ರಿಂದ ಅರ್ಜಿ ಹಾಕಿಕೊಳ್ಳಬಹುದು. ಇದಕ್ಕೆ ಒಂದು ವಾರ ಕಾಲಾವಕಾಶವಿದ್ದು, ಅಭ್ಯರ್ಥಿಗಳು ತಮ್ಮ ಇಷ್ಟದ 5 ಸರ್ಕಾರಿ ಕಾಲೇಜುಗಳನ್ನು ಸೂಚಿಸಲು ಅವಕಾಶ ಮಾಡಿಕೊಡಲಾಗಿದೆ. ಇದರೊಂದಿಗೆ ಅತಿಥಿ ಉಪನ್ಯಾಸಕರಿಗೆ ಸೂಕ್ತ ಕಾರ್ಯಭಾರ ಇರುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

2002ರಿಂದಲೂ ಇದ್ದ ಸಮಸ್ಯೆ :

ಅತಿಥಿ ಉಪನ್ಯಾಸಕರ ಸಮಸ್ಯೆ/ಬೇಡಿಕೆಗಳ ಪರಿಹಾರಕ್ಕಾಗಿ ಸರ್ಕಾರವು ತಿಂಗಳ ಹಿಂದೆ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿಯನ್ನು ರಚಿಸಿ, ವರದಿ ನೀಡಲು ಸೂಚಿಸಲಾಗಿತ್ತು. ಅತಿಥಿ ಉಪನ್ಯಾಸಕರ ಸಮಸ್ಯೆ 2002ರಿಂದಲೂ ಇತ್ತು. ಆದರೆ ಹಿಂದಿನ ಸರ್ಕಾರಗಳು ಇದನ್ನು ಸರಿಯಾಗಿ ನಿಭಾಯಿಸದೆ ಇದ್ದುದರಿಂದ ಇದೊಂದು ಕಗ್ಗಂಟಾಗಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಸಹಾನುಭೂತಿ ಮತ್ತು ಮಾನವೀಯ ನೆಲೆಯಲ್ಲಿ ಪರಿಗಣಿಸಿ, ಕ್ಷಿಪ್ರ ಗತಿಯಲ್ಲಿ ಸ್ಪಂದಿಸಿದರು. ಇದರಿಂದಾಗಿ ಕೇವಲ ಒಂದು ತಿಂಗಳಲ್ಲಿ ಪರಿಹಾರ ರೂಪಿಸುವುದು ಸಾಧ್ಯವಾಯಿತು ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೊಂದು ಐತಿಹಾಸಿಕ ತೀರ್ಮಾನ, ಇದಕ್ಕೆ ಮಿಂಚಿನ ವೇಗದಲ್ಲಿ ಪರಿಹಾರ ಕೊಟ್ಟ ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ ಅವರನ್ನು ಅಭಿನಂದಿಸುತ್ತೇನೆ. ಬೋಧಕರು ಈ ಸಮಾಜದ ಸಂಪತ್ತು. ಅವರ ನೆಮ್ಮದಿಯೇ ಸಮಾಜದ ನೆಮ್ಮದಿ ಎಂದರು.

ಶುಭಾಶಯ ತಿಳಿಸಿದ ಸಿಎಂ:

ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಬಹುದಿನಗಳ ಬೇಡಿಕೆ ಈಡೇರಿಸಲು ಸರ್ಕಾರ ಒಪ್ಪಿದೆ. ಈ ಸಂಬಂಧ ರಚಿಸಲಾಗಿದ್ದ ಸಮಿತಿಯು ಮಾಡಿದ್ದ ಶಿಫಾರಸುಗಳ ಜಾರಿಗೆ ಹಣಕಾಸಿನ ಅನುಮೋದನೆ ನೀಡಲಾಗಿದೆ. ಇದರೊಂದಿಗೆ ಅತಿಥಿ ಉಪನ್ಯಾಸಕರಿಗೆ ಅನುಕೂಲ ಆಗಲಿದೆ ಎಂದು ಟ್ವೀಟ್​ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅತಿಥಿ ಉಪನ್ಯಾಸಕರಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಇದನ್ನೂ ಓದಿ:ಒಮಿಕ್ರಾನ್ ವಿರುದ್ಧ ಬೂಸ್ಟರ್ ಡೋಸ್ ಶೇ.85ರಷ್ಟು ಪರಿಣಾಮಕಾರಿ : ಗಗನದೀಪ್ ಕಾಂಗ್

Last Updated :Jan 14, 2022, 7:38 PM IST

ABOUT THE AUTHOR

...view details