ಒಮಿಕ್ರಾನ್ ವಿರುದ್ಧ ಬೂಸ್ಟರ್ ಡೋಸ್ ಶೇ.85ರಷ್ಟು ಪರಿಣಾಮಕಾರಿ : ಗಗನದೀಪ್ ಕಾಂಗ್

author img

By

Published : Jan 14, 2022, 4:25 PM IST

BOOSTER 85 PERCENT EFFECTIVE AGAINST OMICRON

ಒಮಿಕ್ರಾನ್​ನಿಂದ ರಕ್ಷಿಸಿಕೊಳ್ಳಲು ಕೋವಿಡ್ ಲಸಿಕೆ ಹಾಕಲು ಸರ್ಕಾರವು ಆದ್ಯತೆ ನೀಡಬೇಕು ಮತ್ತು ಆರೋಗ್ಯ ವ್ಯವಸ್ಥೆಗಳ ಸ್ಥಿತಿಯನ್ನು ಸುಧಾರಿಸಬೇಕು. ವ್ಯಾಕ್ಸಿನೇಷನ್ ಪ್ರಮಾಣವನ್ನು ಹೆಚ್ಚಿಸುವ ಮೂಲಕ, ಸೋಂಕಿತರು ಆಸ್ಪತ್ರೆಗೆ ಸೇರುವ ಪ್ರಮಾಣ ಕಡಿಮೆಯಾಗುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ..

ಭಾರತದಲ್ಲಿ ಕೋವಿಡ್ ಸೋಂಕಿನ ಮೂರನೇ ಅಲೆ ಆರಂಭವಾಗಿದೆ. ಜನವರಿ ಅಂತ್ಯದ ವೇಳೆಗೆ ಅಥವಾ ಫೆಬ್ರವರಿ ಆರಂಭದಲ್ಲಿ ಒಮಿಕ್ರಾನ್ ಸೋಂಕು ಹೆಚ್ಚು ಮಂದಿಗೆ ಹರಡಬಹುದು. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್​​ ಮೈಕ್ರೋಬಯಾಲಜಿಸ್ಟ್ ಮತ್ತು ವೈರಾಲಜಿಸ್ಟ್ ಹಾಗೂ ಪ್ರೊಫೆಸರ್ ಆಗಿರುವ ಗಗನದೀಪ್ ಕಾಂಗ್ ಒಮಿಕ್ರಾನ್ ಕುರಿತು ಕೆಲ ಮಾಹಿತಿ ನೀಡಿದ್ದಾರೆ.

ಈಗ ನೀಡುತ್ತಿರುವ ಬೂಸ್ಟರ್ ಡೋಸ್​ ಒಮಿಕ್ರಾನ್ ವಿರುದ್ಧ ಶೇ.85 ರಕ್ಷಣೆ ನೀಡುತ್ತದೆ ಎಂದು ಗಗನ್​ದೀಪ್ ಕಾಂಗ್ ಹೇಳಿದ್ದಾರೆ. ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು ಕೆಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಇದನ್ನು ಪ್ರಶ್ನೋತ್ತರ ಮಾದರಿಯಲ್ಲಿ ವಿವರಿಸಲಾಗಿದೆ.

  • ಕೊರೊನಾ ವಿಚಾರದಲ್ಲಿ ನಾವು ಯಾವ ಯಾವ ಸವಾಲುಗಳನ್ನು ಎದುರಿಸಬೇಕಾಗುತ್ತದೆ?

ಈ ವರ್ಷ ಏನಾಗುತ್ತದೆ ಎಂದು ಅಂದಾಜು ಮಾಡುವುದು ಕಷ್ಟ. ನಾವು ಈಗಾಗಲೇ ಕೊರೊನಾದ ಮೂರನೇ ಅಲೆಯಲ್ಲಿದ್ದೇವೆ. ಹಿಂದಿನ ಕೊರೊನಾ ಸೋಂಕಿತರ ಸಂಖ್ಯೆಗೆ ಹೋಲಿಸಿದರೆ, ಈ ಬಾರಿ ಹೆಚ್ಚಾಗಿದೆ. ಜನಸಂಖ್ಯೆ ಮತ್ತು ವ್ಯಾಕ್ಸಿನೇಷನ್ ಪ್ರಮಾಣವೂ ಕೊರೊನಾದ ಮೇಲೆ ಪರಿಣಾಮ ಬೀರುತ್ತವೆ. ಇನ್ನು ಎರಡರಿಂದ ನಾಲ್ಕು ವಾರಗಳಲ್ಲಿ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಮತ್ತು ಸಾವಿನ ಸಂಖ್ಯೆ ಹೆಚ್ಚಾಗಬಹುದು. ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಜನವರಿ ಅಂತ್ಯ ಅಥವಾ ಫೆಬ್ರವರಿ ಆರಂಭದ ವೇಳೆಗೆ ಹೆಚ್ಚಾಗಬಹುದು ಎಂದು ಅಂದಾಜಿಸಬಹುದು.

  • ಒಮಿಕ್ರಾನ್ ರೂಪಾಂತರ ಮೂಲದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಒಮಿಕ್ರಾನ್ ಮೂಲದ ಬಗ್ಗೆ ಹಲವಾರು ಸಿದ್ಧಾಂತಗಳಿವೆ. ಕೊರೊನಾ ವೈರಸ್​ನ ಹೊಸ ರೂಪಾಂತರ ಎಂದು ಹೇಳಲಾಗುತ್ತಿದೆಯಾದರೂ, ಒಂದೊಂದು ಸಿದ್ಧಾಂತಗಳು ಒಂದೊಂದು ರೀತಿಯಾಗಿ ಹೇಳುತ್ತವೆ. ಕೊರೊನಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡಿ, ನಂತರ ಅದು ಮನುಷ್ಯರಿಗೆ ಹರಡಿದ ಕಾರಣದಿಂದ ಇದರಲ್ಲಿ ಮಾರ್ಪಾಟಾಗಿದೆ ಎಂದು ಹೇಳುವವರೂ ಇದ್ದಾರೆ. (ಇದನ್ನು ರಿವರ್ಸ್ ಝೂನೋಸಿಸ್ ಎಂದು ಕರೆಯಲಾಗುತ್ತದೆ). ಮತ್ತೊಂದು ಸಿದ್ಧಾಂತದ ಪ್ರಕಾರ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಲ್ಲಿ ಇದು ಕಾಣಿಸಿಕೊಂಡು, ಹಂತ ಹಂತವಾಗಿ ಪ್ರಬಲವಾಗಿ ಒಮಿಕ್ರಾನ್ ಆಗಿ ರೂಪುಗೊಂಡಿದೆ ಎಂದು ಹೇಳಲಾಗುತ್ತಿದೆ. ಏನೇ ಆದರೂ, ಒಮಿಕ್ರಾನ್ ಹರಡುವುದನ್ನು ತಡೆಯಲು ನಾವು ಅದೇ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು.

  • ಒಮಿಕ್ರಾನ್ ರೂಪಾಂತರ ಅಪಾಯಕಾರಿಯೇ?

ಇದನ್ನು ಈಗಲೇ ಹೇಳುವುದು ಸಾಧ್ಯವಿಲ್ಲ. ಆದರೆ, ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು. ವ್ಯಾಕ್ಸಿನೇಷನ್ ಪ್ರಮಾಣ ಹೆಚ್ಚಿಸಬೇಕು. ಒಮಿಕ್ರಾನ್ ಮಾಹಿತಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೆಲಸ ಮಾಡಬೇಕು. ಮಾಹಿತಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬೇಕು. ಔಷಧಗಳು ಮತ್ತು ಲಸಿಕೆಗಳು ಜನರ ಕೈಗೆ ಎಟುಕುವಂತಿರಬೇಕು. ಮಾಸ್ಕ್​ ಧರಿಸಬೇಕು. ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಿಂದ ದೂರವಿರಬೇಕು. ಬಟ್ಟೆಯ ಮಾಸ್ಕ್ ಬದಲಿಗೆ ಸರ್ಜಿಕಲ್ ಮಾಸ್ಕ್ ಧರಿಸುವುದು ಉತ್ತಮ. N95 ಮಾಸ್ಕ್ ಧರಿಸುವುದು ಅತ್ಯುತ್ತಮ. ಇದರಿಂದ ಒಂದು ವೇಳೆ ಒಮಿಕ್ರಾನ್ ಅಪಾಯಕಾರಿ ಎಂದು ಗೊತ್ತಾದರೆ, ಸಮರ್ಥವಾಗಿ ಎದುರಿಸಬಹುದು.

  • ಒಮಿಕ್ರಾನ್ ರೋಗ ಲಕ್ಷಣಗಳು ಸೌಮ್ಯವಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಒಮಿಕ್ರಾನ್ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದ್ದು, ಸೋಂಕಿತರು ಹೆಚ್ಚಾಗುವ ಜೊತೆಗೆ, ಆಸ್ಪತ್ರೆಗೆ ದಾಖಲಾಗುವ ಪ್ರಮಾಣವೂ ಹೆಚ್ಚಾಗುತ್ತದೆ ಎಂಬುದನ್ನು ನಾವು ಗಮನಿಸಬೇಕು. ಉದಾಹರಣೆಗೆ, ಒಬ್ಬ ಕೊರೊನಾ ಸೋಂಕಿತನಿಂದ ದಿನಕ್ಕೆ 1,000 ಜನರಿಗೆ ಸೋಂಕು ತಗುಲಿದರೆ, ಅವರಲ್ಲಿ ಶೇ. 10ರಷ್ಟು ಮಂದಿ ಅಥವಾ ಕನಿಷ್ಠ 100 ಮಂದಿ ಆಸ್ಪತ್ರೆಗೆ ದಾಖಲಾಗುವ ಅನಿವಾರ್ಯತೆ ಇರುತ್ತದೆ. ಆದರೆ, ಒಮಿಕ್ರಾನ್ ರೂಪಾಂತರವು ಹರಡುವ ವೇಗ ಹೆಚ್ಚಿದ್ದು, ಶೇಕಡಾವಾರು ಕಡಿಮೆ ಸೋಂಕಿತರು ಆಸ್ಪತ್ರೆಗೆ ದಾಖಲಾದರೂ, ಅವರ ಸಂಖ್ಯೆ ಹೆಚ್ಚಿಗೆ ಇರುತ್ತದೆ ಎಂಬುದನ್ನು ಮರೆಯಬಾರದು.

  • ಬೂಸ್ಟರ್ ಡೋಸ್ ಒಮಿಕ್ರಾನ್​ನಿಂದ ನಮಗೆ ರಕ್ಷಣೆ ನೀಡುತ್ತದೆಯೇ?

ಹಿಂದಿನ ಎರಡು ಡೋಸ್​ಗಳಂತೆ ಮೂರನೇ ಡೋಸ್ ಅಥವಾ ಬೂಸ್ಟರ್ ಡೋಸ್ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಯಾವ ಲಸಿಕೆಗಳನ್ನು ಮೊದಲು ತೆಗೆದುಕೊಳ್ಳಲಾಗಿತ್ತೋ ಅದೇ ಡೋಸ್ ಅನ್ನು ನೀಡಲಾಗುತ್ತದೆ. ಕೆಲವು ಅಂತಾರಾಷ್ಟ್ರೀಯ ಅಧ್ಯಯನಗಳು ಲಸಿಕೆಗಳ ಮಿಶ್ರಣವು ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತಿವೆ. ಬೂಸ್ಟರ್ ಡೋಸ್ ಅತ್ಯಂತ ಪರಿಣಾಮಕಾರಿ ಎಂದು ಕೆಲವು ಅಧ್ಯಯನಗಳು ಹೇಳಿದ್ದು, ನನಗೂ ಭರವಸೆಯಿದೆ.

  • ವ್ಯಾಕ್ಸಿನ್ ಹಾಕಿಸಿಕೊಂಡವರು ಅಥವಾ ಈ ಮೊದಲು ಕೊರೊನಾ ಸೋಂಕಿಗೆ ಒಳಗಾದವರು ಒಮಿಕ್ರಾನ್​ನಿಂದ ಸುರಕ್ಷಿತವೇ?

ಭಾರತದಲ್ಲಿ ಉತ್ಪಾದನೆಯಾದ ಲಸಿಕೆಗಳು ಯಾವ ರೀತಿ ಪರಿಣಾಮ ಬೀರುತ್ತವೆ ಎಂಬ ಬಗ್ಗೆ ನಮ್ಮ ಬಳಿ ಮಾಹಿತಿ ಇಲ್ಲ. ಆದರೆ, ಯುಕೆಯಲ್ಲಿ ನಡೆಸಿದ ಅಧ್ಯಯನಗಳು ಎರಡು ಬಾರಿ ಲಸಿಕೆ ಹಾಕಿದ ಜನರು 6 ತಿಂಗಳವರೆಗೆ ಸೋಂಕಿನಿಂದ ಶೇ.70ರಷ್ಟು ರಕ್ಷಣೆಯನ್ನು ಪಡೆದಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ. ಬೂಸ್ಟರ್ ಡೋಸ್ ಪಡೆದವರಿಗೆ ಒಮಿಕ್ರಾನ್​ನಿಂದ ಶೇ.85ರಷ್ಟು ರಕ್ಷಣೆ ನೀಡುತ್ತದೆ ಎಂದು ವರದಿಗಳಲ್ಲಿ ಬಂದಿವೆ.

  • ಸರ್ಕಾರ ಮತ್ತು ಜನರು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು?

ಲಸಿಕೆ ಹಾಕಲು ಸರ್ಕಾರವು ಆದ್ಯತೆ ನೀಡಬೇಕು ಮತ್ತು ಆರೋಗ್ಯ ವ್ಯವಸ್ಥೆಗಳ ಸ್ಥಿತಿಯನ್ನು ಸುಧಾರಿಸಬೇಕು. ವ್ಯಾಕ್ಸಿನೇಷನ್ ಪ್ರಮಾಣವನ್ನು ಹೆಚ್ಚಿಸುವ ಮೂಲಕ, ಸೋಂಕಿತರು ಆಸ್ಪತ್ರೆಗೆ ಸೇರುವ ಪ್ರಮಾಣ ಕಡಿಮೆಯಾಗುತ್ತದೆ. ಜನರು ಮಾಸ್ಕ್ ಧರಿಸಬೇಕು ಮತ್ತು ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಬೇಕು.

  • ಮುಂದಿನ ದಿನಗಳಲ್ಲಿ ಅತಿಹೆಚ್ಚು ಅಪಾಯಕಾರಿ ರೂಪಾಂತರಗಳು ಬರಲಿವೆಯೇ?

ಹೌದು, ಹೊಸ ರೂಪಾಂತರಗಳು ಬರುವ ಸಾಧ್ಯತೆ ಇದೆ. ಈ ರೂಪಾಂತರಗಳ ವಿರುದ್ಧ ರಕ್ಷಿಸಲು ಉತ್ತಮ ಮಾರ್ಗವೆಂದರೆ ಲಸಿಕೆಯನ್ನು ಪಡೆಯುವುದು. ಆಗಾಗ ಕಾಣಿಸಿಕೊಳ್ಳುವ ಹೊಸ ರೂಪಾಂತರಗಳ ಮೇಲೆ ನಿಗಾ ಇಡಬೇಕು.

  • ವಯಸ್ಕರಿಗಿಂತ ಮಕ್ಕಳ ಮೇಲೆ ಒಮಿಕ್ರಾನ್ ಪರಿಣಾಮ ಬೀರುತ್ತದೆಯೇ?

ಒಮಿಕ್ರಾನ್​​ನಿಂದಾಗಿ ಆಸ್ಪತ್ರೆಗೆ ದಾಖಲಾಗಬೇಕಾದ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವಂತೆ ಕಾಣುತ್ತಿದೆ. ಮೊದಲು ದಕ್ಷಿಣ ಆಫ್ರಿಕಾದಲ್ಲಿ ಮತ್ತು ಯುಕೆಯಲ್ಲಿ ಮಕ್ಕಳ ಮೇಲೆ ಒಮಿಕ್ರಾನ್ ಹೆಚ್ಚು ಪ್ರಭಾವ ಬೀರಿದೆ. ಮಕ್ಕಳ ಮೇಲಿನ ಒಮಿಕ್ರಾನ್ ಪರಿಣಾಮದ ಬಗ್ಗೆ ಇನ್ನೂ ಅಧ್ಯಯನ ಮಾಡಬೇಕಿದೆ. ಒಮಿಕ್ರಾನ್ ಶ್ವಾಸಕೋಶಕ್ಕೆ ಹಾನಿ ಮಾಡಬಹುದು. ಮಕ್ಕಳಲ್ಲಿ ಉಸಿರಾಟದ ತೊಂದರೆಗೆ ಕಾರಣವಾಗಬಹುದು.

ಇದನ್ನೂ ಓದಿ: ಲಸಿಕೆ ಹಾಕಿಸಿಕೊಂಡ ತಾಯಂದಿರಿಂದ ಶಿಶುಗಳಿಗೆ COVID-19 antibodies ರವಾನೆ: ಸಂಶೋಧನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.