ಕರ್ನಾಟಕ

karnataka

ಯೋಗೀಶ್​ಗೌಡ​ ಕೊಲೆ ಪ್ರಕರಣ: ವಿನಯ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮುಂದೂಡಿಕೆ

By ETV Bharat Karnataka Team

Published : Nov 25, 2023, 7:28 AM IST

Yogish Gowda murder case: ಬಿಜೆಪಿ ಮುಖಂಡ ಯೋಗೀಶ್​ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್​ನಲ್ಲಿ ಶಾಸಕ ವಿನಯ ಕುಲಕರ್ಣಿ ಪರ ವಕೀಲರು, ತನ್ನ ಕಕ್ಷಿದಾರ ವಿರುದ್ಧ ಒಂದೇ ಆರೋಪದಡಿ 2 ದೂರು ದಾಖಲಿಸಿರುವುದನ್ನು ರದ್ದು ಪಡಿಸಬೇಕೆಂದು ಕೋರಿದ್ದು, ಪ್ರಕರಣದ ವಿಚಾರಣೆ ಡಿ.1ಕ್ಕೆ ಮುಂದೂಡಲಾಗಿದೆ.

Yogish Gowda murder case
ಯೋಗೀಶ್​ಗೌಡ​ ಕೊಲೆ ಪ್ರಕರಣ

ಬೆಂಗಳೂರು:ಧಾರವಾಡ ಬಿಜೆಪಿ ಮುಖಂಡ ಯೋಗೀಶ್​ಗೌಡ​ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನಾಶದ ಆರೋಪದಡಿ ದಾಖಲಾಗಿಸಲಾಗಿರುವ ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿರುವುದು ನಿಯಮ ಬಾಹಿರವಾಗಿದೆ ಎಂದು ಶಾಸಕ ವಿನಯ ಕುಲಕರ್ಣಿ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದರು.

ಸುಳ್ಳು ಸಾಕ್ಷ್ಯ ನೀಡುವಂತೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪದಡಿ ಸಿಬಿಐ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿರುವ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ವಿನಯ್ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ನಡೆಸಿತು.

ವಿಚಾರಣೆ ವೇಳೆ ವಿನಯ ಕುಲಕರ್ಣಿ ಪರ ವಕೀಲರು, 'ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಒಂದೇ ಆರೋಪದಡಿ ಎರಡು ದೂರುಗಳನ್ನು ದಾಖಲಿಸಲಾಗಿದೆ. ಇದು ಸಂವಿಧಾನದ 20 ನೇ ವಿಧಿಗೆ ವಿರುದ್ಧವಾಗಿದ್ದು, ಇದನ್ನು ರದ್ದುಪಡಿಸಬೇಕು' ಎಂದು ಕೋರಿದರು. ಇದಕ್ಕೆ ಪ್ರತಿಯಾಗಿ ಸಿಬಿಐ ಪರ ವಕೀಲರು, ಸಮಯಾವಕಾಶ ಕೋರಿದ ಕಾರಣ ವಿಚಾರಣೆಯನ್ನು ಡಿಸೆಂಬರ್ 1ಕ್ಕೆ ಮುಂದೂಡಲಾಗಿದೆ.

ಪ್ರಕರಣದ ಹಿನ್ನೆಲೆ:ಯೋಗೀಶ್ ಗೌಡ ಕೊಲೆ 2016ರ ಜೂನ್‌ನಲ್ಲಿ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ನವೆಂಬರ್‌ನಲ್ಲಿ ವಿನಯ ಕುಲಕರ್ಣಿ ಅವರನ್ನು ಬಂಧಿಸಿ, ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಒಂಬತ್ತು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.

ಈ ನಡುವೆ ಸಿಬಿಐ ಸಲ್ಲಿಸಿರುವ ಖಾಸಗಿ ದೂರು ಮತ್ತು ಯೋಗಿಶ್‌ಗೌಡರ ಸಹೋದರ ಗುರುನಾಥ ಗೌಡ ಸಲ್ಲಿಸಿರುವ ಪ್ರತ್ಯೇಕ ದೂರುಗಳು ಒಂದೇ ಆರೋಪಕ್ಕೆ ಸಂಬಂಧಿಸಿವೆ. ಇವುಗಳಲ್ಲಿ ಯೋಗಿಶ್ ಗೌಡರ ಸಹೋದರ ನೀಡಿದ್ದ ದೂರಿನನ್ವಯ ತನಿಖೆ ನಡೆಸಿದ್ದ ಧಾರವಾಡ ಪೊಲೀಸರು ಸಲ್ಲಿಸಿದ್ದ ‘ಬಿ' ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿ ಮುಂದಿನ ತನಿಖೆಗೆ ಆದೇಶಿಸಿತ್ತು. ಇದರಲ್ಲಿ ಸಿಬಿಐ ದೂರನ್ನು ರದ್ದುಗೊಳಿಸಬೇಕು ಎಂಬುದು ವಿನಯ ಕುಲಕರ್ಣಿ ಅವರು ಕೋರಿದ್ದರು.

ಇದನ್ನೂ ಓದಿ:ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ವಿನಯ್​ ಕುಲಕರ್ಣಿ

ABOUT THE AUTHOR

...view details