ETV Bharat / state

ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ವಿನಯ್​ ಕುಲಕರ್ಣಿ

author img

By ETV Bharat Karnataka Team

Published : Aug 24, 2023, 10:17 PM IST

ಧಾರವಾಡ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಕೋರಿ ಕಾಂಗ್ರೆಸ್‌ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

ವಿನಯ್​ ಕುಲಕರ್ಣಿ
ವಿನಯ್​ ಕುಲಕರ್ಣಿ

ಬೆಂಗಳೂರು : ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯರಾಗಿದ್ದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಆರೋಪಿಯಾಗಿದ್ದು, ಧಾರವಾಡ ಜಿಲ್ಲೆ ಪ್ರವೇಶಿಸಲು ಅನುಮತಿ ನೀಡುವಂತೆ ಕೋರಿ ಹೈಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಧಾರವಾಡ ಪೀಠ, ಗುರುವಾರ ಸಿಬಿಐಗೆ ನೊಟೀಸ್​ ಜಾರಿ ಮಾಡಿ ವಿಚಾರಣೆಯನ್ನು ಸೆ.7ಕ್ಕೆ ಮುಂದೂಡಿದೆ.

ಕಳೆದ ಜುಲೈ ತಿಂಗಳಲ್ಲಿ ಕೂಡ ವಿನಯ ಕುಲಕರ್ಣಿ, ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಆಯ್ಕೆಯಾಗಿದ್ದು, ಜನರ ಸಮಸ್ಯೆಗಳನ್ನು ಆಲಿಸುವುದು ಮತ್ತು ಕ್ಷೆತ್ರದ ಅಭಿವೃದ್ಧಿ ಕಾರ್ಯಗಳ ಕುರಿತಂತೆ ಗಮನ ಹರಿಸಲು ಧಾರವಾಡ ಪ್ರವೇಶಕ್ಕೆ ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿ ನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ. ಜಯಂತ್ ಕುಮಾರ್ ಮನವಿಯನ್ನು ತಿರಸ್ಕರಿಸಿದ್ದು, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದರು.

ವಿನಯ ಕುಲಕರ್ಣಿ ಅವರಿಗೆ ಧಾರವಾಡ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಮೂರನೇ ಷರತ್ತನ್ನು ಪ್ರಾಸಿಕ್ಯೂಷನ್ ಅದರಲ್ಲೂ ಸಾಕ್ಷಿಗಳ ಹಿತಾಸಕ್ತಿ ಕಾಯಲು ಹಾಗೂ ಸಾಕ್ಷಿಗಳ ಹೇಳಿಕೆಯನ್ನು ಈ ನ್ಯಾಯಾಲಯವು ದಾಖಲಿಸಿಕೊಳ್ಳುವವರೆಗೆ ಹಾಗೆ ಮಾಡಲಾಗಿದೆ. ಸಾಕ್ಷಿಗಳು ಧಾರವಾಡದಲ್ಲೇ ನೆಲೆಸಿದ್ದು, ಮೂರನೇ ಷರತ್ತನ್ನು ಸಡಿಲಿಸಿದರೆ ಧಾರವಾಡದಲ್ಲಿ ಕುಲಕರ್ಣಿ ಅವರ ಓಡಾಟವನ್ನು ನಿಯಂತ್ರಿಸಲು ಬೇರೆ ಯಾವುದೇ ಷರತ್ತು ಇರುವುದಿಲ್ಲ.

ಅರ್ಜಿದಾರರು ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣವು ಧಾರವಾಡದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಸಾಕ್ಷಿಯ ಭಾಗವಾಗಿ ಸಂಗ್ರಹಿಸಿರುವ ವಸ್ತುಗಳು ಮತ್ತು ಸಾಕ್ಷಿಗಳು ಸಾಕ್ಷಿ ಪೆಟ್ಟಿಗೆಯಲ್ಲಿ ಬಂದು ನಿಂತಿಲ್ಲ. ಹೀಗಾಗಿ, ಈ ಹಂತದಲ್ಲಿ ಧಾರವಾಡ ಪ್ರವೇಶಕ್ಕೆ ವಿಧಿಸಿರುವ ನಿರ್ಬಂಧ ಸಡಲಿಕೆ ಮಾಡುವಂತೆ ಕೋರಿ ಕುಲಕರ್ಣಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಿದೇ ಬೇರೆ ದಾರಿಯಿಲ್ಲ ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿತ್ತು.

ಪ್ರಕರಣದ ಹಿನ್ನೆಲೆ : 2016ರ ಜೂನ್ 15ರಂದು ನಡೆದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದ ತನಿಖೆಯನ್ನು ಸರ್ಕಾರ ಸಿಬಿಐಗೆ ವರ್ಗಾಯಿಸಿತ್ತು. ಸಿಬಿಐ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿತ್ತು. ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮತ್ತು ಹೈಕೋರ್ಟ್ ಜಾಮೀನು ನಿರಾಕರಿಸಿತ್ತು.

ಆದರೆ, ಸುಪ್ರೀಂ ಕೋರ್ಟ್ 2021ರ ಆಗಸ್ಟ್‌ನಲ್ಲಿ ಜಾಮೀನು ಮಂಜೂರು ಮಾಡಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ನ್ಯಾಯಾಲಯದ ಅನುಮತಿ ಪಡೆಯದೆ ಧಾರವಾಡ ಜಿಲ್ಲೆ ಪ್ರವೇಶಿಸುವಂತಿಲ್ಲ ಎಂಬುದೂ ಸೇರಿದಂತೆ ನಾಲ್ಕು ಷರತ್ತುಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿತ್ತು. ಈ ಷರತ್ತು ಸಡಿಲಿಸುವಂತೆ ಕೋರಿ ವಿನಯ ಕುಲಕರ್ಣಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಧಾರವಾಡ ಭೇಟಿಗೆ ಅವಕಾಶ ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.