ಕರ್ನಾಟಕ

karnataka

ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆ.. ಅಂದಿನಿಂದ ಇಂದಿನವರೆಗೆ ಏನೆಲ್ಲಾ ಬೆಳವಣಿಗೆ..!

By

Published : Jan 13, 2022, 5:43 PM IST

Updated : Jan 13, 2022, 6:53 PM IST

ಮೇಕೆದಾಟುವಿಗೆ ಕಾಂಗ್ರೆಸ್​ ಪಾದಯಾತ್ರೆ
ಮೇಕೆದಾಟುವಿಗೆ ಕಾಂಗ್ರೆಸ್​ ಪಾದಯಾತ್ರೆ

Congress Mekedatu Padyatra and political developments: 11 ದಿನಗಳ ಮೇಕೆದಾಟು ಪಾದಯಾತ್ರೆಯನ್ನು ಕೊನೆಗೂ ಕಾಂಗ್ರೆಸ್​ ಮೊಟಕುಗೊಳಿಸಿದೆ. ಈ ಪಾದಯಾತ್ರೆಯನ್ನು ಕೊರೊನಾ ಕ್ಷೀಣಿಸಿದ ನಂತರ ಮತ್ತೆ ಆರಂಭಿಸುವುದಾಗಿ ಡಿಕೆಶಿ ಹೇಳಿದ್ದಾರೆ.

ಬೆಂಗಳೂರು: ನಾಡಿನಲ್ಲಿ ಕೊರೊನಾದ ಆರ್ಭಟ ಜೋರಾಗಿಯೇ ಇದೆ. ಈ ನಡುವೆ ರಾಜಕೀಯ ನಾಯಕರ ಚದುರಂಗದಾಟ ಯಶಸ್ವಿಯಾಗಿ ನಡೆಯುತ್ತಿದೆ. ನಾವು ಪಾದಯಾತ್ರೆಗೆ ಯಾವುದೇ ಅಡ್ಡಿ ಮಾಡುವುದಿಲ್ಲ ಎಂಬ ಬಿಜೆಪಿಯ ಸಲುಗೆಯ ಹೇಳಿಕೆಯಿಂದ ಕಾಂಗ್ರೆಸ್ ಈ ತಿಂಗಳ 9 ರಂದು ಪಾದಯಾತ್ರೆ ಆರಂಭಿಸಿಯೇ ಬಿಟ್ಟಿತು. ಆದರೂ ರಾಜ್ಯ ಸರ್ಕಾರ ಕಾಂಗ್ರೆಸ್​ ನಾಯಕರ ಬಗ್ಗೆ ಟೀಕೆ ಮಾಡಲು ಮುಂದಾಯಿತೇ ಹೊರತು, ಪಾದಯಾತ್ರೆ ನಿಲ್ಲಿಸಿ ಎಂದು ಕಠಿಣವಾಗಿ ಹೇಳಲಿಲ್ಲ.

ಆದರೆ, ಬುಧವಾರ ಈ ಸಂಬಂಧ ದಾಖಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೈಗೆತ್ತಿಕೊಂಡ ಉಚ್ಚ ನ್ಯಾಯಾಲವು, ಸರ್ಕಾರ ಮತ್ತು ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಪರಿಣಾಮ ಆಡಳಿತ ಪಕ್ಷ ದಿಢೀರ್​ ಎಚ್ಚೆತ್ತುಕೊಂಡಿತು. ತಕ್ಷಣದಿಂದಲೇ ಪಾದಯಾತ್ರೆ ನಿಲ್ಲಿಸಬೇಕು, ಇಲ್ಲದಿದ್ದರೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಸರ್ಕಾರ ಎಚ್ಚರಿಸಿತು. ಅಂತೆಯೇ ಈ ಪಾದಯಾತ್ರೆ ಮೊಟಕುಗೊಳಿಸಲು ಮುಂದಾಗಿರುವ ಕಾಂಗ್ರೆಸ್​ ಸಹ ತನ್ನ ರಾಜಕೀಯ ಲಾಭಕ್ಕೋ ಅಥವಾ ಇನ್ಯಾವುದೋ ಕಾರಣಕ್ಕೋ ಏನೇ ಆದರೂ ಈ ಪಾದಯಾತ್ರೆ ನಿಲ್ಲಿಸುವುದಿಲ್ಲ ಎಂದೇಳಿತ್ತು. ಆದರೆ ರಾಜಕೀಯ ಬೆಳವಣಿಗೆ ನಡುವೆ ಪಾದಯಾತ್ರೆ ಮೊಟಕುಗೊಂಡಿದೆ. ಈ ನಾಟಕೀಯ ಬೆಳವಣಿಗೆಯ ವರದಿ ಇಲ್ಲಿದೆ.

ಡಿಕೆಶಿಗೆ ಅದ್ಧೂರಿ ಸ್ವಾಗತ

ಪಾದಯಾತ್ರೆ ಹಿಂಪಡೆಯಲು ನಿರ್ಧಾರ :

ಕಾಂಗ್ರೆಸ್ ನಾಯಕರು ಕೊರೊನಾ ನಿಯಮಗಳನ್ನ ಉಲ್ಲಂಘಿಸಿ 11 ದಿನಗಳ ಕಾಲ ಮೇಕೆದಾಟು ಯೋಜನೆ ಆಗ್ರಹಿಸಿ 'ನಮ್ಮ ನೀರು, ನಮ್ಮ ಹಕ್ಕು' ಘೋಷಣೆಯೊಂದಿಗೆ ಪಾದಯಾತ್ರೆ ಕೈಗೊಂಡಿದ್ದರು. ಇಂದು ಐದನೇ ದಿನದ ಪಾದಯಾತ್ರೆ ನಡೆಯಬೇಕಿತ್ತು. ಆದರೆ, ನಿನ್ನೆ ಹೈಕೋರ್ಟ್ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ಕೈಗೊಂಡಿಲ್ಲ ಅಂತ​ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಆದರೂ ಸಹ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪಾದಯಾತ್ರೆ ಮುಂದುವರಿಸುತ್ತೇವೆ ಎಂಬ ಹಠಕ್ಕೆ ಬಿದ್ದಿದ್ದರು. ಈ ಕುರಿತು ರಾಮನಗರ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿದ್ದರು. ಸಭೆ ಬಳಿಕ ಹೈಕಮಾಂಡ್ ಸೂಚನೆಯಂತೆ ಐದನೇ ದಿನಕ್ಕೆ ಪಾದಯಾತ್ರೆ ನಿಲ್ಲಿಸಲು ನಿರ್ಧಾರ ಮಾಡಿದ್ದಾರೆ.

ಮೊಟಕುಗೊಳಿಸಲು ಪ್ರಮುಖ ಕಾರಣ ಏನು?

ಕಾಂಗ್ರೆಸ್ ಹಿರಿಯ ನಾಯಕರಿಗೆ ಕೋವಿಡ್ ಕಾಣಿಸಿಕೊಳ್ಳುತ್ತಿದೆ. ಮುಂದೆ ಕೋವಿಡ್ ತೀವ್ರವಾಗಿ ಹರಡಿದರೆ ಕಾಂಗ್ರೆಸ್ ಹೊಣೆ ಹೊರಬೇಕಾಗುತ್ತದೆ. – ಕಾಂಗ್ರೆಸ್ ನ ಹಠಮಾರಿತನದಿಂದ ಕೋವಿಡ್ ಹೆಚ್ಚಾಯ್ತು ಎಂಬ ಆರೋಪ ಎದುರಿಸಬೇಕಾಗಬಹುದು. ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಹಾಗೂ ಕೈಕೋರ್ಟ್​ ನ ಚಾಟಿಗೆ ಹೆದರಿ ಕಾಂಗ್ರೆಸ್​ ತನ್ನ ನಡೆಗೆ ಬ್ರೇಕ್​ ಹಾಕಿದೆ.

ಪಾದಯಾತ್ರೆಯ ಆರಂಭದ ದಿನ..

ಈ ಪಾದಯಾತ್ರೆಯನ್ನು ಮೇಕೆದಾಟುವಿನಿಂದ ಸಾಂಪ್ರದಾಯಿಕವಾಗಿ ಪೂಜೆ ಪುನಸ್ಕಾರದ ಮೂಲಕ ಈ ತಿಂಗಳ 9 ನೇ ತಾರೀಖಿನಂದು ಆರಂಭಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಬರೋಬ್ಬರಿ 60 ಕಿಲೋ ಪೂರ್ಣಗೊಂಡಿತ್ತು. ಈ ಪಾದಯಾತ್ರೆಯಲ್ಲಿ ಈವರೆಗೆ ಸುಮಾರು 25 ಸಾವಿರಕ್ಕೂ ಹೆಚ್ಚಿನ ಜನ ಭಾಗಿಯಾಗಿದ್ದರು ಎನ್ನಲಾಗ್ತಿದೆ. ಈ ವೇಳೆ ಇವರ ಅನುಕೂಲಕ್ಕೆ ಅಲ್ಲಲ್ಲಿ ಭೋಜನ ವ್ಯವಸ್ಥೆ ಕೂಡ ಮಾಡಲಾಗಿತ್ತು ಮತ್ತು ರಾತ್ರಿ ವೇಳೆ ಉಳಿದುಕೊಳ್ಳಲು ದೊಡ್ಡ ವ್ಯಕ್ತಿಗಳಿಗೆ ಲಾಡ್ಜ್​ ವ್ಯವಸ್ಥೆ ಮಾಡಿದರೆ, ಕಾರ್ಯಕರ್ತರಿಗೆ ಪೆಂಡಾಲ್​ ಹಾಕಿ ಅಲ್ಲೇ ಮಲಗಲು ವ್ಯವಸ್ಥೆ ಆಗಿತ್ತು.

ಪಾದಯಾತ್ರೆಯಲ್ಲಿ ಮಹಿಳಾ ಕಾರ್ಯಕರ್ತರೂ ಭಾಗಿ

ಪಾದಯಾತ್ರೆಯ ದಾರಿಯುದ್ದಕ್ಕೂ ಸಾರ್ವಜನಿಕರು ಕಾರ್ಯಕರ್ತರಿಗೆ ಮೊಸರು-ಮಜ್ಜಿಗೆಯನ್ನು ನೀಡುತ್ತಿದ್ದುದು ಕಂಡುಬಂತು. ಅಷ್ಟೇ ಅಲ್ಲ, ಪ್ರಮುಖ ನಾಯಕರಿಗೆ ಆರತಿ ಬೆಳಗುವ ಮೂಲಕ ಪಾದಯಾತ್ರೆಗೆ ಜೈಕಾರ ಹಾಕಿ ಸ್ಥಳೀಯರು ಮುಂದೆ ಕಳುಹಿಸಿಕೊಡುತ್ತಿದ್ದರು. ಜಾನಪದ ಕಲಾತಂಡಗಳು ಈ ಪಾದಯಾತ್ರೆಯಲ್ಲಿ ಪ್ರಮುಖ ಆಕರ್ಷಣೆಯಾಗಿದ್ದವು. ಅವರ ಕಲೆ ಪಾದಯಾತ್ರೆಯಲ್ಲಿರುವವರಿಗೆ ಇನ್ನಷ್ಟು ನಡೆಯಲು ಇಂಬು ನೀಡುತ್ತಿತ್ತು. ಪ್ರಮುಖ ವಿಷಯ ಎಂದರೆ ಆರೋಗ್ಯ ಸಮಸ್ಯೆ ಹಿನ್ನೆಲೆ ಸಿದ್ದರಾಮಯ್ಯ ಈ ಪಾದಯಾತ್ರೆಯಿಂದ ಹೊರಗುಳಿದಿದ್ದರು ಆಗ ಮುಂದಿನ ಸಿಎಂ ಡಿಕೆಶಿ ಎಂಬ ಘೋಷ ವಾಕ್ಯಗಳು ಸಹ ಕೇಳಿಬಂದವು.

ರಾಮನಗರದಲ್ಲಿ ಹೆಚ್ಚಾದ ಕೊರೊನಾ..ಪಾದಯಾತ್ರೆ ಆರಂಭಕ್ಕೂ ಮುನ್ನ ನಗರದಲ್ಲಿ ಬೆರಳೆಣಿಕೆಯ ಕೊರೊನಾ ಪ್ರಕರಣಗಳು ವರದಿಯಾಗುತ್ತಿದ್ದವರು. ಆದರೆ, ಪಾದಯಾತ್ರೆ ಆರಂಭಿಸಿದ ನಂತರ ದಿನ ದಿನವೂ 100ಕ್ಕೂ ಹೆಚ್ಚು ಕೊರೊನಾ ಪ್ರಕರಣ ವರದಿಯಾಗಿವೆ. ಈ ಸಂಬಂಧ ಅಧಿಕೃತ ಮಾಹಿತಿ ಹೊರಬರಬೇಕಿದೆ.

ಪಾದಯಾತ್ರೆಗೆ ಬಿಜೆಪಿ ಆಕ್ರೋಶ:

ಈ ಯಾತ್ರೆಗೆ ಬಿಜೆಪಿ ಆರಂಭದಲ್ಲಿ ಸುಮ್ಮನಿದ್ದರೂ ದಿನಕಳೆದಂತೆ ವಿರೋಧಿಸಲು ಮುಂದಾಯಿತು. ಅದರಲ್ಲೂ ರಾಜ್ಯದಲ್ಲಿ ಏನಾದರೂ ಕೊರೊನಾ ಹೆಚ್ಚಾದರೆ ಅದಕ್ಕೆ ಕಾಂಗ್ರೆಸ್​ ಪ್ರಮುಖ ಕಾರಣವಾಗುತ್ತದೆ ಎಂದೂ ಸಹ ಹೇಳಿತು. ಅಷ್ಟೇ ಅಲ್ಲ, ಅಲ್ಲಲ್ಲಿ ಬಿಜೆಪಿ ಶಾಸಕರು ಒಟ್ಟಾಗಿ ಸೇರಿ ಮಾಧ್ಯಮಗೋಷ್ಟಿ ನಡೆಸಿ ಪಾದಯಾತ್ರೆ ನಿಲ್ಲಿಸಿ ಎಂದು ಆಗ್ರಹಿಸಿದ್ದರು. ಕಾಂಗ್ರೆಸ್ ಪಾದಯಾತ್ರೆ ರಾಜಕೀಯ ನಾಟಕ ಎಂದು ಸಾಹಿತಿ ದೊಡ್ಡರಂಗೇಗೌಡ ಹಾಗೂ ನಟಿ ಶೃತಿ ವ್ಯಂಗ್ಯವಾಡಿದ್ದರು. ಒಂದು ಕಡೆ ಕೊರೊನಾ, ಮತ್ತೊಂದೆಡೆ ಒಮಿಕ್ರಾನ್ ಇದೆ. ಇದು ಹೆಚ್ಚೆಚ್ಚು ಹರಡಿ ಜನರ ಜೀವಕ್ಕೆ ಹಾನಿಯಾಗೋ ಸಾಧ್ಯತೆ ಇದೆ. ಈ ಸಮಯದಲ್ಲಿ ಕಾಂಗ್ರೆಸ್ ನಾಯಕರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಅವರ ಜೊತೆ ಬರುವ ಹಿಂಬಾಲಕರಲ್ಲಿ ಸ್ಯಾನಿಟೈಸ್, ಸಾಮಾಜಿಕ ಅಂತರ, ಗ್ಲೌಸ್, ಮಾಸ್ಕ್ ಇರೋದಿಲ್ಲ. ಇದರಿಂದ ಇನ್ನಷ್ಟು ಸೋಂಕು ಹರಡುತ್ತದೆ. ಅಂಕಿ-ಅಂಶ ಗಮನಿಸಿದರೆ, ಸೋಂಕು ಉಲ್ಬಣಗೊಳ್ಳಲು ಇವರೇ ಕಾರಣ ಆಗುತ್ತಿದ್ದಾರೆ ಎಂದು ಆರೋಪಿಸಿದ್ದರು.

​ ಮೇಕೆದಾಟು ಪಾದಯಾತ್ರೆ ಬಗ್ಗೆ ಸಚಿವರ ಮಾತು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮೇಕೆದಾಟು ಯೋಜನೆಯನ್ನು ಕಾರ್ಯಗತಗೊಳಸಲು ಒಪ್ಪಿಗೆ ಸೂಚಿಸಿರುವುದರಿಂದ ಹಾಗೂ ನಾಡಿನ ಜನರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ನಿಮ್ಮ ಪಾದಯಾತ್ರೆಯನ್ನು ಮೊಟಕುಗೂಳಿಸಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ಗೆ ಬಿಜೆಪಿ ಹಿರಿಯ ನಾಯಕ ಎಸ್.ಎಂ ಕೃಷ್ಣ ಪತ್ರ ಬರೆದಿದ್ದರು.

ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ ಎಂದು ಕಾಂಗ್ರೆಸ್ ಅಧ್ಯಕ್ಷರು ಪಾದಯಾತ್ರೆಯಲ್ಲಿ ಬೊಬ್ಬೆ ಹಾಕಿದ್ದನ್ನು ನೋಡಿದೆ. ಕಾಂಗ್ರೆಸ್‌ನವರು ದೇಶದ ಜನರನ್ನು ‌ಸಂಕಷ್ಟಕ್ಕೆ ದೂಡಿದ್ದು ಅನ್ನೋದು ನಿಜವಾದ ಇತಿಹಾಸ. ಅದನ್ನು ಮತ್ತೊಮ್ಮೆ ಸಾಬೀತು ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದರು.

ಕೊರೊನಾ ಅಪಾಯಕಾರಿ ರೀತಿಯಲ್ಲಿ ಹರಡುತ್ತಿದ್ದು ಜನತೆ ಆತಂಕದಲ್ಲಿದ್ದಾರೆ. ಕೂಡಲೇ ಪಾದಯಾತ್ರೆ ನಿಲ್ಲಿಸಿ, ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಆಗ್ರಹಿಸಿದ್ದರು.

ಮೇಕೆದಾಟು ಮೊಟಕುಗೊಳಿಸಿದ ಬಗ್ಗೆ ಸ್ಪಷ್ಟನೆ

ಪಾದಯಾತ್ರೆ ಮೂಲಕ ಬೆಂಗಳೂರಿಗೆ ಕೊರೊನಾ ಹಬ್ಬಿಸಿ ಲಾಕ್​​​ಡೌನ್ ಮಾಡುವಂತಹ ಪರಿಸ್ಥಿತಿ ನಿರ್ಮಿಸಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನಿಸುತ್ತಿದೆ. ಅವರು ಯೋಜನೆ ಜಾರಿಗಿಂತ ಕೊರೊನಾ ಹಬ್ಬಿಸಿ ಕರ್ನಾಟಕವನ್ನು ಕೋವಿಡ್ ಹಬ್ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದರು.

ಕಾಂಗ್ರೆಸ್ ಪಕ್ಷದವರ ಪಾಪಗಳು ತುಂಬಿ ತುಳುಕುತ್ತಿವೆ. ಹಾಗಾಗಿ, ಅವರು ಪಾದಯಾತ್ರೆ ಮಾಡುತ್ತಿದ್ದಾರೆ. ಅವರದ್ದು ಪಾಪದ ಯಾತ್ರೆ ಎಂದು ಬಿಜೆಪಿ ಪರಿಷತ್‌ ಸದಸ್ಯ ರವಿಕುಮಾರ್ ತೀವ್ರವಾಗಿ ಕುಟುಕಿದ್ದರು. ಹೀಗೇ ನಾನಾ ರಾಜಕಾರಣಿಗಳು ಈ ಪಾದಯಾತ್ರೆ ಸಂಬಂಧ ಹರಿಹಾಯ್ದಿದ್ದರು.

ಸರ್ಕಾರ ಹಾಗೂ ಕಾಂಗ್ರೆಸ್​ಗೆ ಹೈಕೋರ್ಟ್ ಚಾಟಿ..

ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆ ನಡುವೆಯೂ ಮೇಕೆದಾಟು ಯೋಜನೆಗೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿರುವ ಕ್ರಮಕ್ಕೆ ಹೈಕೋರ್ಟ್ ನಿನ್ನೆ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಈ ಕುರಿತು ಸಲ್ಲಿಕೆಯಾಗಿರುವ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ, ಕೋವಿಡ್ ಹೆಚ್ಚುತ್ತಿರುವ ವೇಳೆ ರ್‍ಯಾಲಿ ನಡೆಸಲು ಅನುಮತಿ ನೀಡಿದ್ದು ಯಾರು? ಎಂದು ಸರ್ಕಾರಕ್ಕೆ ಕಟುವಾಗಿ ಪ್ರಶ್ನಿಸಿರುವ ಪೀಠ, ಅನುಮತಿ ಕೊಟ್ಟಿಲ್ಲ ಎಂದಾದರೆ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿರುವುದೇಕೆ? ಕ್ರಮ ಕೈಗೊಳ್ಳಲು ನ್ಯಾಯಾಲಯವೇ ಹೇಳಬೇಕೇ? ಎಂದು ಪ್ರಶ್ನಿಸಿತ್ತು. ಈ ಎಲ್ಲಾ ಬೆಳವಣಿಗೆ ನಡುವೆ ಹೈಕೋರ್ಟ್​ ನ ಈ ಚಾಟಿಗೆ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷ ಪಾದಯಾತ್ರೆ ಸಂಬಂಧ ಪ್ರಮುಖ ತೀರ್ಮಾನ ಕೈಗೊಂಡಿವೆ.

ಕಾಂಗ್ರೆಸ್​ ಮೇಕೆದಾಟು ಪಾದಯಾತ್ರ ಬಗ್ಗೆ ಆರೋಗ್ಯ ಸಚಿವರ ಪ್ರತಿಕ್ರಿಯೆ

ಪಾದಯಾತ್ರೆ ಹಿಂಪಡೆಯಲು ಸಿಎಂ ಮನವಿ..

ಪಾದಯಾತ್ರೆಯನ್ನು ಕೈಬಿಡಲು ಕೋರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಪತ್ರ ಬರೆದರು. ಕೊರೊನಾ ಮೂರನೇ ಅಲೆ ರಾಜ್ಯಕ್ಕೆ ಅಪ್ಪಳಿಸುತ್ತಿದೆ. ಈ ವೇಳೆ ಸಾವಿರಾರು ಜನರನ್ನು ಸೇರಿಸಿ ಪಾದಯಾತ್ರೆ ನಡೆಸುವುದು ಸೂಕ್ತವಲ್ಲ. ಇದು ಸಾಮಾಜಿಕ ಜನ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಈಗಾಗಲೇ ಹೈಕೋರ್ಟ್​ ಕೂಡ ಪಾದಯಾತ್ರೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಹೀಗಾಗಿ ಪಾದಯಾತ್ರೆ ನಿಲ್ಲಿಸಿ ಎಂದು ಪತ್ರದಲ್ಲಿ ಸಿಎಂ ಬೊಮ್ಮಾಯಿ ಕೋರಿದ್ದರು.

ಪಾದಯಾತ್ರೆ ನಿರತರ ಮೇಲೆ ಎಫ್​ಐಆರ್​..

ಈ ಯಾತ್ರೆ ಸಂಬಂಧ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಡಿ.ಕೆ.ಸುರೇಶ್ ಸೇರಿದಂತೆ 29ಕ್ಕೂ ಹೆಚ್ಚು ಮಂದಿಯ ವಿರುದ್ಧ ರಾಮನಗರ ತಹಶೀಲ್ದಾರ್ ವಿಜಯಕುಮಾರ್ ನೀಡಿರುವ ದೂರಿನ ಮೇಲೆ ರಾಮನಗರ ಗ್ರಾಮಾಂತರ ವೃತ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಲ್ಕನೇ ಎಫ್​ಐಆರ್​ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದ ಡಿ.ಕೆ. ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್​, ಶಾಸಕ ಪ್ರಿಯಾಂಕ್​ ಖರ್ಗೆ, ಮಾಜಿ ಸಚಿವ ಟಿಬಿ ಜಯಚಂದ್ರ ಸೇರಿದಂತೆ ಇನ್ನೂ ಇತರರ ಹೆಸರಿದೆ. ಪಾದಯಾತ್ರೆಗೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್​ ವಿರುದ್ಧ ದಾಖಲಾದ ನಾಲ್ಕನೇ ಎಫ್ ಐಆರ್ ಇದಾಗಿದ್ದು, ಸಿದ್ದರಾಮಯ್ಯ ವಿರುದ್ಧ ಮೂರು ಕೇಸ್​ ದಾಖಲಾಗಿವೆ. ಸೋಮವಾರ ಸಹ ರಾಮನಗರದ ಸಾತನೂರು ಪೊಲೀಸರು 64 ಮಂದಿಯ ವಿರುದ್ಧ ಎಫ್​ಐಆರ್​​ ದಾಖಲಿಸಿದ್ದರು.

ಕೋವಿಡ್​ ನಿಯಮ ಉಲ್ಲಂಘನೆ ಹಿನ್ನೆಲೆ, ರಾಜ್ಯ ಕಾಂಗ್ರೆಸ್ ನಾಯಕರ ಬಳಿಕ ಸ್ಥಳೀಯ ಮುಖಂಡರ ವಿರುದ್ಧ ಚಾಮರಾಜನಗರದಲ್ಲಿ ಎಫ್ಐಆರ್ ದಾಖಲಾಗಿದ್ದವು. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಬಸ್​, ಕಾರುಗಳಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಪಕ್ಷದ ಕಾರ್ಯಕರ್ತರನ್ನು ಕರೆದೊಯ್ದಿದ್ದಾರೆಂದು ತೋಟೇಶ್, ರವಿ, ಅಕ್ಮಲ್ ಪಾಷಾ, ರಂಗಸ್ವಾಮಿ ಸೇರಿದಂತೆ 13 ಮಂದಿ ವಿರುದ್ಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾದಯಾತ್ರೆಯಿಂದ ಸಿದ್ದರಾಮಯ್ಯ ಹೊರಕ್ಕೆ..

ಭಾನುವಾರ ಆರಂಭವಾದ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಮೊದಲ ದಿನವೇ ಮಧ್ಯಾಹ್ನದ ಹೊತ್ತಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಬೆಂಗಳೂರಿಗೆ ವಾಪಸಾಗಿದ್ದರು. ಮಂಗಳವಾರ (ಮೂರನೇ ದಿನ)ದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಬುಧವಾರ ಮಧ್ಯಾಹ್ನದವರೆಗೂ ತಮ್ಮ ಪಕ್ಷದ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್​ ಅವರೊಂದಿಗೆ ಹೆಜ್ಜೆ ಹಾಕಿದ್ದರು. ಆದರೆ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆ ಮಧ್ಯಾಹ್ನದ ನಂತರ ಆರಂಭವಾದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳದೇ ನಗರಕ್ಕೆ ವಾಪಸಾಗಿದ್ದರು.

ನಾವು ಜವಾಬ್ದಾರಿಯುತ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ..

ಪರಿಸ್ಥಿತಿ ತಹಬದಿಗೆ ಬಂದ ನಂತರ ರಾಮನಗರದಿಂದಲೇ ನಮ್ಮ ಯಾತ್ರೆಯನ್ನು ಮುಂದುವರಿಸಲು ತೀರ್ಮಾನಿಸಿದ್ದೇವೆ. ಯಾವ ಕೇಸ್‌ ಅಥವಾ ನೋಟಿಸ್‌ಗಳಿಗೆ ಹೆದರಿ ನಾವು ಈ ನಿರ್ಧಾರ ತೆಗೆದುಕೊಂಡಿಲ್ಲ. ಬದಲಾಗಿ ನ್ಯಾಯಾಲಯದ ಘನತೆಗೆ ಗೌರವ ಕೊಡುತ್ತಿದ್ದೇವೆ ಅಷ್ಟೇ. ನಾವು ಈ ಹೋರಾಟ ಆರಂಭಿಸಿದ್ದು ಕನ್ನಡಿಗರಿಗಾಗಿಯೇ ಹೊರತು ಸರ್ಕಾರದ ವಿರುದ್ಧ ಅಲ್ಲ. ಪಾದಯಾತ್ರೆಯ 4 ದಿನಗಳು ಆಡಳಿತ ಸರ್ಕಾರಕ್ಕೆ ಒಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ತಿಳುವಳಿಕೆಗಿಂತ ನಡವಳಿಕೆ ಶ್ರೇಷ್ಠ. ತಿಳುವಳಿಕೆ ಸೋತರೂ, ಉತ್ತಮ ನಡವಳಿಕೆ ಎಂದಿಗೂ ಗೆಲ್ಲುತ್ತದೆ. ರಾಜ್ಯದ ಜನರ ಹಿತದೃಷ್ಟಿಯಿಂದ ನಾವು ಜವಾಬ್ದಾರಿಯುತ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ. ಹೋರಾಟಕ್ಕೆ ಕೈ ಜೋಡಿಸಿದವರಿಗೆ ಹೃದಯಪೂರ್ವಕ ನಮನಗಳು ಎಂದಿರುವ ಡಿಕೆಶಿ, ಕೊನೆ ಘಳಿಗೆಯಲ್ಲಿ ನಾನು ಹಾಗೂ ಸಿದ್ದರಾಮಯ್ಯ ಇಬ್ಬರೇ ಪಾದಯಾತ್ರೆ ಮಾಡಬೇಕೆಂಬ ನಿರ್ಧಾರಕ್ಕೆ ಬಂದಿದ್ದೆವು. ಆದರೆ, ನಾಡು-ನುಡಿಯ ಹೋರಾಟಕ್ಕೆ ಧ್ವನಿಗೂಡಿಸಲೇಬೇಕೆನ್ನುವ ಕನ್ನಡಿಗರು ನಮ್ಮೊಂದಿಗೆ ಬರಲೇಬೇಕೆಂದು ಹಂಬಲಿಸಿದ್ರು. ಈ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಏನಿದು ಮೇಕೆದಾಟು ಯೋಜನೆ?

ಬೆಂಗಳೂರಿನಿಂದ 90 ಕಿ.ಮೀ ದೂರದ ರಾಮನಗರ ಜಿಲ್ಲೆಯಲ್ಲಿರುವ ಸ್ಥಳವೇ ಮೇಕೆದಾಟು. ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮ ಸ್ಥಳದಿಂದ 4 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಕಾವೇರಿ ನದಿ ಮೇಕೆ ಹಾರಿ ದಾಟುವಷ್ಟು ಕಿರು ಜಾಗದಲ್ಲಿ ಹರಿದು ಆಳವಾದ ಕಂದಕಕ್ಕೆ ಧುಮುಕುತ್ತದೆ.

ಮೇಕೆದಾಟು ಬಳಿ ಕುಡಿಯುವ ನೀರಿನ ಯೋಜನೆಗಾಗಿ ಕಾವೇರಿ ನದಿಗೆ ಅಡ್ಡಲಾಗಿ ಕಿರು ಅಣೆಕಟ್ಟು ಕಟ್ಟಲು ಕರ್ನಾಟಕ ಸರ್ಕಾರ ಮುಂದಾಗಿದೆ. ಕಾವೇರಿ ನದಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿ ಬಾರಿಯೂ ಕ್ಯಾತೆ ತೆಗೆಯುವ ತಮಿಳುನಾಡು ಅಣೆಕಟ್ಟು ನಿರ್ಮಾಣ ಮಾಡುವುದನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದೆ. ಅಷ್ಟೇ ಅಲ್ಲದೇ ಸುಪ್ರೀಂ ಕೋರ್ಟ್‍ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿ ಈ ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದೆ.

ಬೆಂಗಳೂರು ನಗರಕ್ಕೆ ನೀರು ಬರುವುದು ಕೆಆರ್​ಎಸ್ ಡ್ಯಾಂನಿಂದ. ಮಳೆಗಾಲದಲ್ಲಿ ಡ್ಯಾಂ ಭರ್ತಿಯಾದರೆ ಬೆಂಗಳೂರು ಜನತೆಗೆ ನೀರು ಭಾಗ್ಯ. ಬೆಂಗಳೂರು ನಗರಕ್ಕೆ ಪ್ರತಿದಿನ 1400 ದಶಲಕ್ಷ ಲೀಟರ್​ನ ಅಗತ್ಯವಿದೆ. ಬೇಸಿಗೆ ಸಮಯದಲ್ಲಿ ನೀರಿನ ಬೇಡಿಕೆ ಶೇ.15ರಷ್ಟು ಹೆಚ್ಚಾಗುತ್ತದೆ. ತಿಪ್ಪಗೊಂಡನಹಳ್ಳಿ ಜಲಾಶಯದಿಂದ 2012ರಲ್ಲಿ ನೀರು ಪಂಪಿಂಗ್ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಬೆಂಗಳೂರಿನ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಇಲ್ಲಿ ಸಂಗ್ರಹವಾದ ಡ್ಯಾಂ ನೀರನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗೆ ಬಳಸುವ ಉದ್ದೇಶ ರಾಜ್ಯ ಸರ್ಕಾರದ್ದಾಗಿದೆ.

ಇಷ್ಟೆಲ್ಲಾ ಬೆಳವಣಿಗೆ ನಡುವೆ ಕೊನೆಗೂ ಪಾದಯಾತ್ರೆ ನಿಂತಿದೆ. ರಾಜ್ಯದಲ್ಲಿ ಕೊರೊನಾ ಹೆಚ್ಚಳವನ್ನು ತಗ್ಗಿಸುವ ಕಡೆ ಆಡಳಿತ ಸರ್ಕಾರ ಮುಂದಾಗಬೇಕಿದೆ.

Last Updated :Jan 13, 2022, 6:53 PM IST

TAGGED:

ABOUT THE AUTHOR

...view details