ETV Bharat / state

ಖಂಡಿಗೆ ಶ್ರೀಧರ್ಮ ಅರಸು ಉಳ್ಳಾಯ ದೈವಸ್ಥಾನದ ವಾರ್ಷಿಕ ಜಾತ್ರೆ: ನಂದಿನಿ ನದಿಯಲ್ಲಿ 'ಮತ್ಸ್ಯಬೇಟೆ' - Fishing in the Nandini River

author img

By ETV Bharat Karnataka Team

Published : May 14, 2024, 8:13 PM IST

Updated : May 14, 2024, 8:59 PM IST

ಖಂಡಿಗೆ ವಾರ್ಷಿಕ ಜಾತ್ರೆ ಹಿನ್ನೆಲೆ ನಂದಿನಿ ನದಿಯಲ್ಲಿ ಮತ್ಸ್ಯಬೇಟೆ ನಡೆಯಿತು.

fishing-in-the-nandini-river
ನಂದಿನಿ ನದಿಯಲ್ಲಿ 'ಮತ್ಸ್ಯಬೇಟೆ' (ETV Bharat)

ನಂದಿನಿ ನದಿಯಲ್ಲಿ 'ಮತ್ಸ್ಯಬೇಟೆ' (ETV Bharat)

ಮಂಗಳೂರು : ಹಳೆಯಂಗಡಿ ಸಮೀಪದ ಕಂಡೇವು ಎಂದು ತುಳುವಿನಲ್ಲಿ ಕರೆಯಲ್ಪಡುವ ಖಂಡಿಗೆ ಶ್ರೀಧರ್ಮ ಅರಸು ಉಳ್ಳಾಯ ದೈವಸ್ಥಾನದ ವಾರ್ಷಿಕ ಜಾತ್ರೆ ನಡೆಯುತ್ತಿದೆ. ಇದರ ನಿಮಿತ್ತ ನಂದಿನಿ ನದಿಯಲ್ಲಿ ಇಂದು ಮೀನುಬೇಟೆ ನಡೆಯಿತು.

ಹಳೆಯಂಗಡಿ ಸಮೀಪದ ನಂದಿನಿ ನದಿಗೆ ಏಕಕಾಲದಲ್ಲಿ ನೂರಾರು ಮಂದಿ ಹಾರಿ ಮೀನು ಹಿಡಿಯಲಾರಂಭಿಸುತ್ತಾರೆ. ಈ ಮತ್ಸ್ಯಬೇಟೆ ಹಿಂದೆ ತುಳುನಾಡಿನ ವಿಶಿಷ್ಟ ಆಚರಣೆ ಹಿನ್ನೆಲೆ ಇದೆ.

ತುಳುವಿನ ಪಗ್ಗು ಸಂಕ್ರಮಣ ಅಂದರೆ ಮೇ ತಿಂಗಳ ಮಧ್ಯಭಾಗದಲ್ಲಿ ನಡೆಯುವ ಜಾತ್ರಾಮಹೋತ್ಸವ. ಉಳ್ಳಾಯ ದೈವದ ದೈವಸ್ಥಾನದ ಮುಂಭಾಗದ ನಂದಿನಿ ಹೊಳೆಯನ್ನು ಕಂಡೇವು ಕರಿಯ ಎನ್ನುತ್ತಾರೆ. ಆದ್ದರಿಂದ ಉತ್ಸವದ ನಿಮಿತ್ತ ನಿಗದಿಪಡಿಸಿದ ದಿನದಂದು ಇಲ್ಲಿನ ಗ್ರಾಮದ ಜನರು ಕಂಡೇವು ಕರಿಯದಲ್ಲಿ ಮೀನು ಹಿಡಿಯುತ್ತಾರೆ. ಈ ದಿನದ ಹೊರತು ಬೇರೆ ದಿನಗಳಲ್ಲಿ ಇಲ್ಲಿ ಮೀನು ಹಿಡಿಯುವುದು ನಿಷೇಧವಿದೆ. ಸಂಪ್ರದಾಯ ಮೀರಿ ಮೀನು ಹಿಡಿದರೆ ಬಲೆಗೆ ಹಾವು ಬೀಳುತ್ತದೆ ಎಂಬ ನಂಬಿಕೆಯಿದೆ.

ಬೆಳ್ಳಂಬೆಳಗ್ಗೆ ಕಂಡೇವು ಬೀಡಿನ ಮುಕ್ಕಾಲ್ದಿ ದೈವದ ಪ್ರಸಾದ ತಂದು ಹೊಳೆಗೆ ಹಾಕುತ್ತಾರೆ. ಆ ಬಳಿಕ ನೀರಿಗಿಳಿಯಲು ಸಿಡಿಮದ್ದು ಸಿಡಿಸಿ ಎಲ್ಲರೂ ಹೊಳೆಗೆ ಇಳಿದು ಮೀನು ಹಿಡಿಯಲು ಅನುಮತಿಸಲಾಗುತ್ತದೆ‌. ಆಗ ಬಲೆಗಳೊಂದಿಗೆ ಎಲ್ಲರೂ ಹೊಳೆಗೆ ಹಾರಿ ಮೀನು ಹಿಡಿಯುತ್ತಾರೆ‌. ಹೊಳೆಯ ಎರಡೂ ಬದಿಗಳಲ್ಲಿ ನಿಂತ ನೂರಾರು ಮಂದಿ ಏಕಕಾಲದಲ್ಲಿ ನೀರಿಗೆ ಹಾರುವುದನ್ನು ನೋಡುವುದೇ ಒಂದು ಚಂದ. ಮೀನು ಹಿಡಿದವರು ತಮಗೆ ಬೇಕಾದಷ್ಟು ಉಳಿಸಿ ಉಳಿದವುಗಳನ್ನು ಅಲ್ಲಿಯೇ ಮಾರಾಟ ಮಾಡುತ್ತಾರೆ. ಕೊಂಚ ಹೆಚ್ಚು ಬೆಲೆ ತೆತ್ತಾದರೂ ಗ್ರಾಮಸ್ಥರು ಇಲ್ಲಿ ಮೀನು ಖರೀದಿಸುತ್ತಾರೆ.

ಉಳ್ಳಾಯ ಎಂದರೆ ತುಳುವಿನಲ್ಲಿ ಒಡೆಯ ಎಂದರ್ಥ. ಉಳ್ಳಾಯ ದೈವವೂ ನಿರ್ದಿಷ್ಟ ಕ್ಷೇತ್ರಕ್ಕೆ ಒಡೆಯ. ಆತನ ಅಧೀನಕ್ಕೊಳಪಟ್ಟ ಪ್ರದೇಶದ ಮೀನುಗಳೂ ಆತನದ್ದೇ ಆಗಿರುತ್ತದೆ‌. ಆದ್ದರಿಂದ ಆತನ ಒಪ್ಪಿಗೆ ವಿನಃ ಮೀನುಗಳ ಬೇಟೆ ಸಾಧ್ಯವಿಲ್ಲ. ಆದರೆ ವರ್ಷಕ್ಕೊಮ್ಮೆ ಇಲ್ಲಿನ ಮೀನುಗಳನ್ನು ಹಿಡಿಯಲು ಉಳ್ಳಾಯನೇ ಅನುಮತಿಸುತ್ತಾನೆ. ಈ ದಿನ ಎಲ್ಲರೂ ಜೊತೆಯಾಗಿ ಮೀನು ಹಿಡಿದು ಉಳ್ಳಾಯನ ಪ್ರಸಾದವೇ ಎಂಬಂತೆ ಸ್ವೀಕರಿಸುತ್ತಾರೆ‌‌.

ಇದನ್ನೂ ಓದಿ : ಮೀನುಗಾರರ ಬಲೆಗೆ ಬಿದ್ದ 350 ಕೆಜಿ ತೂಕದ ಮುರು ಮೀನು: ವಿಡಿಯೋ ವೈರಲ್

Last Updated :May 14, 2024, 8:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.