ಕರ್ನಾಟಕ

karnataka

ಕೋವಿಡ್ ಸೋಂಕಿತರಿಗೆ 7 ದಿನ ಹೋಂ ಐಸೊಲೇಷನ್ ಕಡ್ಡಾಯ; ಹೊಸ ವರ್ಷಕ್ಕೆ ಯಾವುದೇ ನಿರ್ಬಂಧವಿಲ್ಲ

By ETV Bharat Karnataka Team

Published : Dec 26, 2023, 8:00 PM IST

ರಾಜ್ಯ ಸಚಿವ ಸಂಪುಟ ಉಪಸಮಿತಿ ಇಂದು ನಡೆಸಿದ ಮಹತ್ವದ ಸಭೆಯಲ್ಲಿ ಕೋವಿಡ್ ಸ್ಥಿತಿಗತಿ, ಸಿದ್ಧತೆಗಳು ಹಾಗು ನೆರೆ ರಾಜ್ಯದಿಂದ ಆಗಮಿಸುವ ಜನರ ಮೇಲೆ ನಿಗಾ ಇರಿಸುವುದೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ.

ಸಂಪುಟ ಉಪಸಮಿತಿಯ ಸಭೆ
ಸಂಪುಟ ಉಪಸಮಿತಿಯ ಸಭೆ

ಕೋವಿಡ್ ಕುರಿತು ಸಂಪುಟ ಉಪ ಸಮಿತಿ ಸಭೆಯ ನಿರ್ಧಾರಗಳು

ಬೆಂಗಳೂರು: ಕೋವಿಡ್ ಪಾಸಿಟಿವ್ ಬಂದವರಿಗೆ 7 ದಿನ ಹೋಮ್ ಐಸೊಲೇಷನ್ ಕಡ್ಡಾಯ ಮಾಡಬೇಕು. ಸೋಂಕು ತಗುಲಿ ಹೋಂ ಐಸೋಲೇಷನ್​ಗೆ ಒಳಗಾಗಿರುವವರನ್ನು ಟ್ರ್ಯಾಕ್ ಮಾಡಿ ಅವರ ಆರೋಗ್ಯ ಸ್ಥಿತಿಗತಿಯನ್ನು ಅವಲೋಕಿಸಬೇಕು ಎನ್ನುವ ನಿರ್ಧಾರವನ್ನು ಕೋವಿಡ್ ನಿರ್ವಹಣೆಗಾಗಿ ರಚಿಸಲಾಗಿರುವ ಸಚಿವ ಸಂಪುಟ ಉಪಸಮಿತಿ ಮೊದಲ ಸಭೆಯಲ್ಲಿ ಕೈಗೊಂಡಿದೆ. ಇದರ ಜೊತೆಗೆ ಹೊಸ ವರ್ಷಾಚರಣೆಗೂ ಯಾವುದೇ ನಿರ್ಬಂಧ ವಿಧಿಸದಿರುವ ನಿರ್ಧಾರ ಪ್ರಕಟಿಸಿದೆ.

ವಿಧಾನಸೌಧದಲ್ಲಿ ಇಂದು ಸಂಪುಟ ಉಪ ಸಮಿತಿ ಸಭೆ ನಡೆಯಿತು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಡಾ. ಶರಣ ಪ್ರಕಾಶ್ ಪಾಟೀಲ್, ಡಾ.ಎಂ.ಸಿ.ಸುಧಾಕರ್, ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ತಾಂತ್ರಿಕ ಸಲಹಾ ಸಮಿತಿಯವರು ಪಾಲ್ಗೊಂಡಿದ್ದರು.

ಹೊಸ ವರ್ಷಾಚರಣೆಗೆ ಸದ್ಯಕ್ಕೆ ನಿರ್ಬಂಧ ಹೇರುವುದು ಬೇಡ ಎಂಬ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಆದರೆ, ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಜನರು ಮಾಸ್ಕ್ ಹಾಕಿಕೊಳ್ಳುವಂತೆ ಸಲಹೆ ನೀಡಲು ನಿರ್ಧರಿಸಲಾಯಿತು.‌ ಕಾಯಿಲೆ ಹೊಂದಿದವರು ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಕ್ಸಿನ್ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸದ್ಯಕ್ಕೆ 30 ಸಾವಿರ ವ್ಯಾಕ್ಸಿನ್‌ಗಳನ್ನು ಕೇಂದ್ರ ಸರ್ಕಾರದಿಂದ ಪಡೆದು ರಾಜ್ಯದ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಿಗೆ ವಿತರಿಸಲು ತೀರ್ಮಾನಿಸಲಾಗಿದೆ.

ಆರೋಗ್ಯ ಸಚಿವರ ಹೇಳಿಕೆ:ಸಭೆಯ ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೋವಿಡ್ ಸಂಬಂಧ ರಾಜ್ಯದಲ್ಲಿ ಕೈಗೊಳ್ಳಬೇಕಾಗಿರುವ ಮುಂದಿನ ಕ್ರಮಗಳ ಕುರಿತು ಎಲ್ಲಾ ವಿಷಯಗಳನ್ನು ಅವಲೋಕಿಸಲಾಯಿತು. ಈ ಬಾರಿ ಕಾಣಿಸಿಕೊಳ್ಳುತ್ತಿರುವ ಕೋವಿಡ್ ಹೊಸ ಉಪತಳಿ ಜೆಎನ್.1 ಆಗುವ ಸಾಧ್ಯತೆ ಹೆಚ್ಚಿದೆ. ಜಿನೋಮ್ ಸಿಕ್ವೆನ್ಸಿಂಗ್ ಮಾಡಿಸಲು ಕೆಲ ಮಾದರಿ ಕಳಿಸಿದ್ದೆವು, 60 ರಲ್ಲಿ 34 ಜೆಎನ್.1 ಪಾಸಿಟಿವ್ ಬಂದಿದೆ. ಇದೇನು ಆಶ್ಚರ್ಯಪಡುವ ವಿಷಯವೂ ಅಲ್ಲ, ಭಯಪಡುವ ಅಗತ್ಯವೂ ಇಲ್ಲ. ಈ ಉಪತಳಿ ನಿರೀಕ್ಷಿತವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಇದು ಭಯಪಡುವ ಉಪತಳಿ ಅಲ್ಲ ಎಂದಿತ್ತು. ಕೇಂದ್ರ ಸರ್ಕಾರವೂ ಇದನ್ನೇ ಹೇಳಿದೆ. ಇದು ನಮಗೆ ಸಮಾಧಾನಕರ ವಿಷಯವಾಗಿದೆ. ಆದರೂ ನಾವು ಎಡವಬಾರದು ಸಂಪೂರ್ಣ ಜಾಗರೂಕವಾಗಿ ಎಚ್ವರಿಕೆಯಿಂದ ಇರಬೇಕು ಎಂದು ನಿರ್ಧರಿಸಿದ್ದೇವೆ ಎಂದರು.

ಈ ಹಿಂದೆ ಆದ ತಪ್ಪು ಮರುಕಳಿಸದಂತೆ ಕಾರ್ಯೋನ್ಮುಖವಾಗಿದ್ದೇವೆ. ಪ್ರತಿದಿನ 5 ಸಾವಿರ ಟೆಸ್ಟ್ ಆಗಬೇಕಿತ್ತು. ಆದರೆ ಅದು ಆಗಿಲ್ಲ. ನಿನ್ನೆ 3 ಸಾವಿರ ಟೆಸ್ಟ್ ಮಾತ್ರ ಆಗಿತ್ತು. ಆದರೆ ಇಂದು 5 ಸಾವಿರ ಗುರಿ ತಲುಪಲಿದೆ. ಇಂದಿನಿಂದ ಹೆಚ್ಚಿನ ಟೆಸ್ಟ್ ಆಗಲಿದೆ. ಜಿನೋಮ್ ಸೀಕ್ವೆನ್ಸ್ ಕೂಡ ಮುಂದುವರೆಸಲಾಗುತ್ತದೆ. ಇಡೀ ದೇಶದಲ್ಲಿ 4110 ಸಕ್ರೀಯ ಪ್ರಕರಣ ಇದ್ದರೆ ಅದರಲ್ಲಿ 3096 ಕೇರಳ, ಕರ್ನಾಟಕ 436 ಇನ್ನು ಉಳಿದಿರುವ ರಾಜ್ಯಗಳಲ್ಲಿ ಬಹಳ ಕಡಿಮೆ ಇದೆ. ಬೇರೆ ರಾಜ್ಯ ಟೆಸ್ಟಿಂಗ್ ಮಾಡುತ್ತಿಲ್ಲ, ನಮ್ಮಲ್ಲಿ ಟೆಸ್ಟ್ ಹೆಚ್ಚು ಮಾಡುತ್ತಿದ್ದೇವೆ. ಹಾಗಾಗಿ ನಮ್ಮಲ್ಲಿ ಹೆಚ್ಚು ಬರುತ್ತಿದೆ. 436 ಪಾಸಿಟಿವ್​ಗಳಲ್ಲಿ 400 ಜನ ಹೋ ಐಸೊಲೇಷನ್ ಇದ್ದರೆ 36 ಆಸ್ಪತ್ರೆಯಲ್ಲಿದ್ದಾರೆ. 29 ಜನರಲ್ ಬೆಡ್, 7 ಐಸಿಯುನಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.

ಐಸಿಯುಗಳನ್ನು ಸನ್ನದ್ದವಾಗಿರಿಸಿಕೊಳ್ಳಲಾಗುತ್ತದೆ. ವಿಶೇಷವಾಗಿ ಆಕ್ಸಿಜನ್ ಪೂರೈಕೆ ಸರಿಯಾಗಿರಬೇಕು, ಆಕ್ಸಿಜನ್ ಜನರೇಟ್ ಪ್ಲಾಂಟ್ ಸಜ್ಜುಗೊಳಿಸಲು ಸೂಚಿಸಿದ್ದೇವೆ. ಕೆಲ ಕಡೆ ಪರವಾನಗಿ ಪಡೆಯಲು ಸೂಚಿಸಲಾಗಿದೆ. ದುರಸ್ತಿಗೆ ಬಂದಿದ್ದರೆ ಅದನ್ನೂ ಮಾಡಲು ಸೂಚಿಸಿದ್ದೇವೆ. ಆಮ್ಲಜನಕದ ಕೊರತೆ ಎಲ್ಲಿಯೂ ಆಗಬಾರದು ಅದಕ್ಕಾಗಿ 4 ಮೊಬೈಲ್ ಆಕ್ಸಿಜನ್ ಕಂಟೈನರ್ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಬೇಕೆಂದ ಕಡೆ ಕಳುಹಿಸಲು ಅನುಕೂಲವಾಗಲಿದೆ. ಜಿನೋಮ್ ಸೀಕ್ವೆನ್ಸಿಂಗ್ ಅನ್ನು ಪೂನ ಮತ್ತು ಎನ್​ಸಿಬಿಎಸ್ ಗೆ ಕಳಿಸಲಾಗುತ್ತಿದೆ. ಬಿಎಂಸಿಯಲ್ಲಿಯೂ ಸಿದ್ದಪಡಿಸಲಾಗುತ್ತಿದೆ. ಹಾಗಾಗಿ ಎಷ್ಟೇ ಮಾದರಿ ಬಂದರು ಟೆಸ್ಟ್ ಮಾಡಲು ಯಾವುದೇ ಸಮಸ್ಯೆ ಇಲ್ಲ. ಒಟ್ಟಿನಲ್ಲಿ ಕೋವಿಡ್ ನಿರ್ವಹಣೆಗೆ ನಮ್ಮ ಸರ್ಕಾರ ಸರ್ವ ಸನ್ನದ್ದವಾಗಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

ಸಂಪುಟ ಉಪಸಮಿತಿ ಸಭೆಯ ಹೈಲೆಟ್ಸ್:

  • ಮಕ್ಕಳಲ್ಲಿ ವೇಗವಾಗಿ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಜ್ವರ, ನೆಗಡಿ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಇರುವ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಬಾರದು. ಮನೆಯಲ್ಲೇ ಸೂಕ್ತ ಆರೈಕೆಗೆ ಮಾರ್ಗಸೂಚಿ ಹೊರಡಿಸಲು ನಿರ್ಧಾರ.
  • ಕೋವಿಡ್ ಪಾಸಿಟಿವ್ ಆದವರು ಕಡ್ಡಾಯವಾಗಿ 7 ದಿನ ಹೋಮ್ ಐಸೊಲೇಷನ್‌ನಲ್ಲಿ ಇರಬೇಕು. ಹೋಮ್ ಐಸೊಲೇಷನ್‌ನಲ್ಲಿ ಇರುವ, ಸರ್ಕಾರಿ ಅಥವಾ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ 7 ದಿನಗಳ ರಜೆ ಕೊಡಬೇಕು. ಐಸಿಯು ಅಥವಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಬಾಧಿತರಿಗೆ ಸಂಪೂರ್ಣ ಗುಣಮುಖರಾಗುವರೆಗೆ ರಜೆ ಕೊಡಿಸುವ ಕುರಿತು ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲು ನಿರ್ಧಾರ.
  • ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್ ರಚನೆಗೆ ನಿರ್ಧಾರ. ಬೆಂಗಳೂರಿನ ವಿಕ್ಟೋರಿಯಾ ಮತ್ತು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್.‌ ಐಸಿಯು ಬೆಡ್ ಹಾಗೂ ಐಸೊಲೇಷನ್ ಬೆಡ್ ವ್ಯವಸ್ಥೆ.
  • ರಾಜ್ಯದಲ್ಲಿ ಕೋವಿಡ್ 436 ಸಕ್ರಿಯ ಪ್ರಕರಣಗಳಿವೆ. ಹೋಮ್ ಐಸೊಲೇಷನ್‌ನಲ್ಲಿರುವ 400 ಕೋವಿಡ್ ಸೋಂಕಿತರ ಮನೆಗಳಿಗೆ ವೈದ್ಯರು ಭೇಟಿ ನೀಡಿ ನಿಗಾ ವಹಿಸಲು ಸೂಚನೆ. ಸೋಂಕಿತರ ಪ್ರಾಥಮಿಕ ಸಂಪರ್ಕಿತರಲ್ಲಿ ಕೋವಿಡ್ ರೋಗಲಕ್ಷಣಗಳಿದ್ದರೆ ಕಡ್ಡಾಯವಾಗಿ ಟೆಸ್ಟಿಂಗ್ ನಡೆಸಬೇಕು. ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು.‌
  • ಇತರೆ ಕಾಯಿಲೆ ಹೊಂದಿದವರಿಗೆ ಆದ್ಯತೆಯ ಮೇರೆಗೆ ವ್ಯಾಕ್ಸಿನ್ ನೀಡಲು ನಿರ್ಧಾರ. ಕೇಂದ್ರ ಸರ್ಕಾರದಿಂದ 30 ಸಾವಿರ ಲಸಿಕೆ ಪಡೆಯಲು ಸಂಪುಟ ಉಪ ಸಮಿತಿ ನಿರ್ಧಾರ. ಆರೋಗ್ಯ ಸಿಬ್ಬಂದಿಗಳಿಗೆ ಸುರಕ್ಷತೆಯ ದೃಷ್ಟಿಯಿಂದ ಫ್ಲೂ ವ್ಯಾಕ್ಸಿನ್ ನೀಡಲು ನಿರ್ಧರಿಸಲಾಗಿದೆ.
  • ಹೊಸ ವರ್ಷಾಚರಣೆಗೆ ಸೇರಿದಂತೆ ಯಾವುದೇ ಕಾರ್ಯಕ್ರಮ ಅಥವಾ ಜನರ ಓಡಾಟಕ್ಕೆ ಸದ್ಯ ಯಾವುದೇ ನಿರ್ಬಂಧ ಹೇರುವುದಿಲ್ಲ. ಆದರೆ ಜನನಿಬಿಡ ಪ್ರದೇಶದಲ್ಲಿ ಮಾಸ್ಕ್ ಧರಿಸಿ ಕೋವಿಡ್ ನಿಯಮಾವಳಿ ಪಾಲನೆ ಮಾಡಲು ಸಾರ್ವಜನಿಕರಲ್ಲಿ ಮನವಿ.
  • ಕೋವಿಡ್ ಶಂಕೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡುವ ಎಲ್ಲರನ್ನು ಸಿ.ಟಿ ಸ್ಕ್ಯಾನಿಂಗ್‌ಗೆ ಒಳಪಡಿಸುವುದು ನಿಷೇಧ. ಕೋವಿಡ್ ಪಾಸಿಟಿವ್ ಬಂದವರನ್ನ ಮಾತ್ರ ಸಿ.ಟಿ ಸ್ಕ್ಯಾನಿಂಗ್‌ಗೆ ಒಳಪಡಿಸಬಹುದು.
  • ಇಂದಿನಿಂದ ಪ್ರತಿನಿತ್ಯ 5 ಸಾವಿರ ಕೋವಿಡ್ ಟೆಸ್ಟಿಂಗ್. ವೆಂಟಿಲೇಟರ್, ಆಕ್ಸಿಜನ್ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ. ನಾಲ್ಕು ಮೊಬೈಲ್ ಆಕ್ಸಿಜನ್ ಕಂಟೆಂಡರ್‌ಗಳ ಖರೀದಿಗೆ ಸಭೆಯಲ್ಲಿ ತೀರ್ಮಾನ.

ಇದನ್ನೂ ಓದಿ:ಕೊರೊನಾ​​ ರೂಪಾಂತರಿ JN.1 ವೈರಸ್​ಗೆ ಹಾಸನದಲ್ಲಿ ಮೊದಲ ಬಲಿ

ABOUT THE AUTHOR

...view details