ಕರ್ನಾಟಕ

karnataka

ಕಾಂಗ್ರೆಸ್​ ಗ್ಯಾರಂಟಿಗಳ ಅನುಷ್ಠಾನಕ್ಕೆ ಆಗ್ರಹಿಸಿ ಜು.4ರಂದು ಸದನದ ಒಳಗೆ, ಹೊರಗೆ ಹೋರಾಟ: ಬಿ.ಎಸ್.ಯಡಿಯೂರಪ್ಪ

By

Published : Jun 30, 2023, 4:44 PM IST

ಸರ್ಕಾರ ಬೆಲೆ ಏರಿಕೆಗೆ ತಕ್ಕಂತೆ ಅನ್ನಭಾಗ್ಯ ಯೋಜನೆಯ 10 ಕೆಜಿ ಅಕ್ಕಿಗೆ 500 ರೂ. ಕೊಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಗ್ರಹಿಸಿದ್ದಾರೆ.

bs-yediyurappa-calls-protest-on-july-4-for-congress-guarantee-implementation
ಕಾಂಗ್ರೆಸ್​ ಗ್ಯಾರಂಟಿಗಳ ಅನುಷ್ಠಾನಕ್ಕೆ ಆಗ್ರಹಿಸಿ ಜು.4ರಂದು ಸದನದ ಒಳಗೆ, ಹೊರಗೆ ಹೋರಾಟ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಈಗಾಗಲೇ ನಾವು ನಿರ್ಧಾರ ಮಾಡಿರುವಂತೆ ಕಾಂಗ್ರೆಸ್ ಪಕ್ಷ ನೀಡಿದ್ದ ಗ್ಯಾರಂಟಿಗಳ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ, ವಿಧಾನಸೌಧದ ಮುಂದಿರುವ ಗಾಂಧಿ ಪ್ರತಿಮೆ ಬಳಿಯಲ್ಲಿ ಜುಲೈ 4ರಂದು ನಮ್ಮ ನೂರಾರು ಕಾರ್ಯಕರ್ತರು ಬೆಳಿಗ್ಗೆಯಿಂದ ಸಂಜೆವರೆಗೆ ಒಂದು ದಿನ ಧರಣಿ ಸತ್ಯಾಗ್ರಹ ಮಾಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿಂದು ಮಾತನಾಡಿದ ಅವರು, ಅಂದು ಬಿಜೆಪಿ ಚುನಾಯಿತ ಪ್ರತಿನಿಧಿಗಳು ಉಭಯ ಸದನದ ಒಳಗೂ ಹೋರಾಟ ಮಾಡಲಿದ್ದಾರೆ. ಕಾಂಗ್ರೆಸ್ ಪಕ್ಷವು ಮನೆ ಮನೆಗೆ ಹೋಗಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರು ಸಹಿ ಮಾಡಿ ಕೊಟ್ಟ ಗ್ಯಾರಂಟಿ ಕಾರ್ಡನ್ನು ವಿತರಿಸಿತ್ತು. ಆದರೆ ಈಗ ಷರತ್ತುಗಳನ್ನು ಪ್ರಸ್ತಾಪಿಸಿದೆ. ಕಾಂಗ್ರೆಸ್​ನ ಈ ಧೋರಣೆ ಖಂಡಿಸಿ ನಾವು ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.

ಈಗ ಗ್ಯಾರಂಟಿಗಳ ಅಂಶಗಳನ್ನು ಚಾಚೂತಪ್ಪದೆ ಕಾಂಗ್ರೆಸ್ ಅನುಷ್ಠಾನಕ್ಕೆ ತರಬೇಕು, ಅವರು ಭರವಸೆ ಕೊಟ್ಟಂತೆ 10 ಕೆಜಿ ಅಕ್ಕಿ ಕೊಡಬೇಕು, ಎಲ್ಲ ಪದವೀಧರ ನಿರುದ್ಯೋಗಿಗಳಿಗೆ 3 ಸಾವಿರ ಭತ್ಯೆ, ಡಿಪ್ಲೊಮಾ ಮಾಡಿ ನಿರುದ್ಯೋಗಿ ಆಗಿರುವವರಿಗೆ 1500 ರೂ. ಕೊಡಬೇಕು, 200 ಯೂನಿಟ್ ಕರೆಂಟ್ ಕೊಡಲೇಬೇಕು, 80 ಯೂನಿಟ್ ಎಂಬ ಕಂಡಿಷನ್ ರದ್ದು ಮಾಡಬೇಕು. ಎಲ್ಲ ಮಹಿಳೆಯರಿಗೆ 2 ಸಾವಿರ ರೂ. ಕೊಡಬೇಕು. ಕರೆಂಟ್ ಬಿಲ್ ತೀವ್ರವಾಗಿ ಹೆಚ್ಚಾಗಿದ್ದು, ದರ ಏರಿಕೆಯನ್ನು ವಾಪಸ್ ಪಡೆಯಬೇಕು ಎಂದು ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದರು.

ನಂತರ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಕೆಲವು ವಿಷಯಗಳನ್ನು ಎಲ್ಲಿ ಮಾತಾಡಬೇಕು ಎಂಬ ಪರಿಜ್ಞಾನ ಬೇಕಾಗಿರುತ್ತದೆ. ಹೊರಗಿನ ವಿಷಯಗಳು ಬಂದಾಗ ಹೊರಗೆ ಮಾತಾಡಬೇಕು, ಒಳಗಿನ ವಿಷಯಗಳು ಬಂದಾಗ ಪಕ್ಷದ ಒಳಗೆ ಮಾತಾಡಬೇಕು. ತನಿಖೆಯ ಆರೋಪ ಪ್ರತ್ಯಾರೋಪ ವಿಚಾರ ನಮಗೆ ಇದ್ದ ಅವಕಾಶ ಹೋಗಿದೆ. ಈಗ ಕಾಂಗ್ರೆಸ್​ನವರು ಪ್ರಮಾಣೀಕರು ಅಲ್ವಾ? ಅವರು ಈಗ ಪ್ರಾಮಾಣಿಕತೆಯನ್ನು ಸಾಬೀತು ಪಡಿಸಿಕೊಳ್ಳಬೇಕು ಇಲ್ಲವಾದಲ್ಲಿ ಅವರು ಪರಮ ಭ್ರಷ್ಟರು ಎಂದು ಸಾಬೀತು ಆಗುತ್ತದೆ. ಒಂದು ತಿಂಗಳಲ್ಲಿ ಅರ್ಕಾವತಿ ಹಗರಣದ ಆರೋಪಿಗಳನ್ನು ಜೈಲಿಗೆ ಕಳುಹಿಸಲಿ. 8 ಸಾವಿರ ಕೋಟಿ ಹಣವನ್ನು ಅವರು ಬೊಕ್ಕಸಕ್ಕೆ ತುಂಬಿಸಿಕೊಳ್ಳಲಿ ಈಗ ಅವರು ಅವರ ಸಾಮರ್ಥ್ಯವನ್ನು ತೋರಿಸಲಿ ಎಂದು ಸವಾಲು ಹಾಕಿದರು.

5 ಕೆಜಿ ಅಕ್ಕಿಗೆ ಹಣ ನೀಡುವ ಸರ್ಕಾರದ ನಿರ್ಣಯ ವಿಚಾರ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ನವರಿಗೆ ಲೆಕ್ಕ ಹೇಳಿಕೊಡಬೇಕಾ?. 10 ಕೆಜಿಗೆ 35 ರೂ. ನಂತೆ ಎಷ್ಟು ರೂಪಾಯಿ ಆಗುತ್ತದೆ ಎಂದು ಗೊತ್ತಿಲ್ಲವಾ?. ಸದನದಲ್ಲಿ ಲೆಕ್ಕದ ಬಗ್ಗೆ ಪಾಠ ಮಾಡೋರಿಗೆ ಲೆಕ್ಕ ಗೊತ್ತಿಲ್ವೇ?. ಈಗಾಗಲೇ ಹೆಚ್ಚು ಮಾಡಬೇಕಾದ್ದನ್ನಲ್ಲಾ ಮಾಡಿಬಿಟ್ಟಿದ್ದಾರೆ ಹೀಗಾಗಿ ಬೆಲೆ ಏರಿಕೆಗೆ ತಕ್ಕಂತೆ 10 ಕೆಜಿ ಅಕ್ಕಿಗೆ 500ರೂಪಾಯಿ ಕೊಡಬೇಕು. ಅವರದ್ದು ಎರಡು ನಾಲಿಗೆ ಅಲ್ಲ ಅಂತಾ ತೋರಿಸಬೇಕು, ವಿದ್ಯುತ್ ದರ ಇಳಿಸುವ ಜವಾಬ್ದಾರಿ ಇವರದ್ದೇ ಅದನ್ನು ಮಾಡಲಿ. ಸಿದ್ದರಾಮಯ್ಯ ಏನು ಚಪ್ರಾಸಿ ಅಲ್ವಲ್ಲಾ?. ಅವ್ರು ಮೋಸ್ಟ್ ಎಕ್ಸಿಪಿರಿಯನ್ಸ್ ಚೀಫ್ ಮಿನಿಸ್ಟರ್ ತಾನೇ, ಎಲ್ಲ ದರವನ್ನು ಇಳಿಸುವ ತಾಕತ್ತು ಅವರಿಗೆ ಇದೆ ಅಲ್ವಾ?. ಇವರು ಒಂದು ಮಾದರಿ ಆಗಬೇಕು ಅಂದರೆ ಎಲ್ಲ ದರವನ್ನು ಇಳಿಕೆ ಮಾಡಬೇಕು ಎಂದರು.

ಪಂಚೆಯೊಳಗೆ ಬಿಜೆಪಿ ಸಿಲುಕಿ ವಿಲವಿಲ ಎಂದು ಒದ್ದಾಡ್ತಿದೆ ಎಂಬ ಕಾಂಗ್ರೆಸ್ ಟ್ವಿಟ್ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸಿಟಿ ರವಿ, ಅದನ್ನು ಸಿದ್ದರಾಮಯ್ಯ ನವರಿಗೆ ಹೇಳಿರಬೇಕು?. ಡಿ.ಕೆ ಶಿವಕುಮಾರ್ ಕಡೆಯವರು ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡಿದ್ದಾರೆ ಅನ್ನಿಸುತ್ತಿದೆ. ಅದಕ್ಕೆ ಸಿದ್ದರಾಮಯ್ಯಗೆ ಸ್ವಲ್ಪ ಹುಷಾರಾಗಿ ಇರೋಕೆ ಹೇಳಿ, ಅವರಲ್ಲೇ ಒಳ ಬೇಗುದಿ ಜಾಸ್ತಿಯಾಗಿದೆ ಅದಕ್ಕೆ ಅವರ ಬಗ್ಗೆ ಹೇಳಿಕೊಂಡಿರಬೇಕು ಎಂದು ಲೇವಡಿ ಮಾಡಿದರು.

ಇದನ್ನೂ ಓದಿ:ಪಕ್ಷದ ನಾಯಕರ ವಿರುದ್ಧವೇ ಬಹಿರಂಗವಾಗಿ ಮಾತನಾಡುವಂತಿಲ್ಲ: ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಬಿಜೆಪಿ

ABOUT THE AUTHOR

...view details