ETV Bharat / state

ಪಕ್ಷದ ನಾಯಕರ ವಿರುದ್ಧವೇ ಬಹಿರಂಗವಾಗಿ ಮಾತನಾಡುವಂತಿಲ್ಲ: ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಬಿಜೆಪಿ

author img

By

Published : Jun 30, 2023, 4:28 PM IST

ತಮ್ಮ ಪಕ್ಷದ ನಾಯಕರ ವಿರುದ್ಧ ಯಾರೂ ಬಹಿರಂಗವಾಗಿ ಮಾತನಾಡುವಂತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ರಾಜ್ಯ ಬಿಜೆಪಿ ನಾಯಕರು ನಡೆಸಿದ ಮಹತ್ವದ ಸಭೆಯಲ್ಲಿ ನಾಲಿಗೆ ಹರಿಬಿಟ್ಟ ಮುಖಂಡರ ಬಾಯಿಗೆ ಬೀಗ ಹಾಕಲಾಯಿತು.

Important meeting of state BJP leaders
ರಾಜ್ಯ ಬಿಜೆಪಿ ನಾಯಕರು ಮಹತ್ವದ ಸಭೆ ನಡೆಯಿತು

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ನಂತರ ರಾಜ್ಯ ನಾಯಕತ್ವ ಹಾಗು ಇತರೆ ನಾಯಕರ ವಿರುದ್ಧ ಗುಟುರು ಹಾಕಿದ್ದ ಕೆಲವು ಮುಖಂಡರಿಗೆ ಮೂಗುದಾರ ಹಾಕುವ ಕೆಲಸವನ್ನು ಬಿಜೆಪಿ ಮಾಡಿದೆ. ಇನ್ಮುಂದೆ ಯಾವುದೇ ಅಸಮಾಧಾನ, ಬೇಸರ ಇತ್ಯಾದಿ ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿಯೇ ಮಾತನಾಡಬೇಕು, ಬಹಿರಂಗವಾಗಿ ಯಾರೂ ಯಾವುದೇ ನಾಯಕರ ವಿರುದ್ಧವೂ ಹೇಳಿಕೆ ನೀಡಬಾರದು. ಒಂದು ವೇಳೆ ಮಾತನಾಡಿದರೆ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಶುಕ್ರವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ರಾಜ್ಯ ಬಿಜೆಪಿ ನಾಯಕರು ಮಹತ್ವದ ಸಭೆ ನಡೆಸಿದರು. ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯದ ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಪಕ್ಷದಲ್ಲಿ ಇತ್ತೀಚೆಗೆ ನಾಯಕರ ವಿರುದ್ಧ ಹೇಳಿಕೆ ನೀಡಿ ಪಕ್ಷವನ್ನು ಮುಜುಗರಕ್ಕೆ ಸಿಲುಕುವಂತೆ ಮಾಡುತ್ತಿರುವ ಮುಖಂಡರನ್ನು ಕರೆಸಿಕೊಂಡು ಒಬ್ಬೊಬ್ಬರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ ವಿವರಣೆ ಪಡೆದುಕೊಳ್ಳಲಾಯಿತು.

ಮೊದಲಿಗೆ ಬ್ಯಾಟರಾಯನಪುರ ಬಿಜೆಪಿ ಪರಾಜಿತ ಅಭ್ಯರ್ಥಿ ತಮ್ಮೇಶ್ ಗೌಡ ಜೊತೆ ಚರ್ಚೆ ನಡೆಸಲಾಯಿತು. ಬ್ಯಾಟರಾಯನಪುರ ಬಿಜೆಪಿಯ ಮುಖಂಡ ಮುನೇಂದ್ರ ಕುಮಾರ್ ವಿರುದ್ಧ ಮಾಡಿದ್ದ ಆರೋಪದ ಬಗ್ಗೆ ತಮ್ಮೇಶ್ ಗೌಡರಿಂದ ಸ್ಪಷ್ಟೀಕರಣ ಪಡೆದುಕೊಂಡು ಇನ್ಮುಂದೆ ಬಹಿರಂಗವಾಗಿ ಮಾತಾಡದಂತೆ ತಮ್ಮೇಶ್ ಗೌಡಗೆ ಎಚ್ಚರಿಕೆ ನೀಡಿ ಕಳುಹಿಸಲಾಯಿತು.

ಸಮಜಾಯಿಷಿ ನೀಡಿದ ಯತ್ನಾಳ್: ತಮ್ಮೇಶ್ ಗೌಡ ನಂತರ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜೊತೆ ಕಟೀಲ್ ನೇತೃತ್ವದ ನಾಯಕರ ತಂಡ ಚರ್ಚೆ ನಡೆಸಿತು. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ದವೇ ಹೊಂದಾಣಿಕೆ ಮಾತಾಡಿದ್ದ ಯತ್ನಾಳ್ ಪಕ್ಷಕ್ಕೆ ಮುಜುಗರವಾಗುವಂತೆ ಮಾಡಿದ್ದರು. ಈ ಆರೋಪದ ಬಗ್ಗೆ ಸ್ಪಷ್ಟೀಕರಣ ಪಡೆದುಕೊಂಡರು. ಈ ವೇಳೆ ವಿಜಯಪುರ, ಬಾಗಲಕೋಟೆ ಬಿಜೆಪಿ ನಾಯಕರ ಆರೋಪಕ್ಕೆ ಸಮಜಾಯಿಷಿ ಕೊಟ್ಟ ಯತ್ನಾಳ್ ನನ್ನ ಭಾಷಣದಲ್ಲಿ ಆಡಿರುವ ಮಾತು ಯಾವುದಾದರೂ ಪಕ್ಷದ ವಿರುದ್ಧ ಇದೆಯಾ‌? ರೆಕಾರ್ಡ್​ಗಳನ್ನು ತರಿಸಿಕೊಂಡು ನೋಡಿ ನಾನು ಯಾರನ್ನು ಸೋಲಿಸಲು ಕೆಲಸ ಮಾಡಿಲ್ಲ. ಇನ್ನು ನನ್ನನ್ನೇ ಸೋಲಿಸಲು ಪ್ರಯತ್ನ ಪಟ್ಟಿದ್ದಾರೆ. ಈಗ ನನ್ನ ವಿರುದ್ಧ ಆರೋಪ ಮಾಡಿರುವವರೇ ನನ್ನನ್ನು ಸೋಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ. ನಾನು ಸ್ಥಳೀಯವಾಗಿ ಪಕ್ಷದ ಅಭ್ಯರ್ಥಿಗಳ ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನಾನು ಅಂದರೆ ಬಿಜೆಪಿ, ಬಿಜೆಪಿ ಅಂದರೆ ನಾನು. ನಾನು ಒಬ್ಬ ಬಿಜೆಪಿಯ ಶಿಸ್ತಿನ ಸಿಪಾಯಿ, ನಾನು ಯಾರ ವಿರುದ್ದವೇ ಆಗಲಿ, ಪಕ್ಷದ ವಿರುದ್ದವೇ ಆಗಲಿ ಮಾತಾಡಿಲ್ಲ ಎಂದು ಸಮಜಾಯಿಷಿ ನೀಡಿದರು. ನಿರಾಣಿ ಮತ್ತು ನಡಹಳ್ಳಿ ಮಾಡಿದ್ದ ಆರೋಪಗಳಿಗೂ ವಿವರಣೆ ನೀಡಿದ ಅವರು, ಸುಮಾರು 25 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ಕಟೀಲ್ ಕಟ್ಟುನಿಟ್ಟಿನ ಸೂಚನೆ: ಸಮಜಾಯಿಷಿ ನೀಡಿದ ಯತ್ನಾಳ್​ಗೆ ಇನ್ಮುಂದೆ ಬಹಿರಂಗವಾಗಿ ಮಾತಾಡದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹೈಕಮಾಂಡ್ ನಾಯಕರ ಆದೇಶ ಇದೆ. ಏನೇ ಇದ್ದರೂ ಬಹಿರಂಗವಾಗಿ ಮಾತಾಡಬೇಡಿ. ಅದನ್ನು ಪಕ್ಷದ ವೇದಿಕೆಯಲ್ಲಿ ಮಾತನಾಡಿ ಎಂದು ಸೂಚನೆ ನೀಡಿದರು. ನಿಮ್ಮ ವಿರುದ್ಧ ಆರೋಪ ಮಾಡಿದವರನ್ನು ಕರೆದಿದ್ದೇವೆ. ಅವರ ಜೊತೆಗೂ ನಾವು ಮಾತನಾಡುತ್ತೇವೆ. ನೀವು ಇನ್ಮುಂದೆ ಬಹಿರಂಗವಾಗಿ ಯಾವುದೇ ಆರೋಪಗಳ ಬಗ್ಗೆ ಮಾತನಾಡಬೇಡಿ. ಏನೇ ತಪ್ಪು ಆದರೂ ಪಕ್ಷ ಎಲ್ಲವನ್ನೂ ಗಮನಿಸುತ್ತಿದೆ. ಯಾರಿಗೆ ಏನು ಕ್ರಮ ಆಗಬೇಕೋ ಅದು ಪಕ್ಷದಿಂದ ಆಗುತ್ತದೆ. ಆದರೆ, ನೀವು ಬಹಿರಂಗವಾಗಿ ಮಾತನಾಡಬೇಡಿ ಎಂದು ಸೂಚಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ಗೆ ಸ್ಪಷ್ಟೀಕರಣ ಕೊಟ್ಟು ಹೊರಗೆ ಬಂದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಹೊರಗೆ ಇದ್ದ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ಕೊಡದೇ ಹೊರಟರು. ವಿವರಣೆ ಪಡೆಯುವ ವೇಳೆಯಲ್ಲಿಯೂ ಮಾಧ್ಯಮಗಳ ಮುಂದೆ ಮಾತನಾಡದಂತೆ ಸೂಚನೆ ನೀಡಿದ್ದ ಹಿನ್ನಲೆಯಲ್ಲಿ ಮೌನವಾಗಿಯೇ ಯತ್ನಾಳ್ ಹೊರನಡೆದರು.

ಎ.ಎಸ್. ಪಾಟೀಲ್ ನಡಹಳ್ಳಿಗೆ ಖಡಕ್ ಸೂಚನೆ: ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಆರೋಪ ಮಾಡಿದ್ದ ಎ.ಎಸ್. ಪಾಟೀಲ್ ನಡಹಳ್ಳಿ ಕೂಡ ಇಂದಿನ ಸಭೆಗೆ ಹಾಜರಾಗಿ ಸ್ಪಷ್ಟೀಕರಣ ನೀಡಿದರು. ವಿಜಯಪುರದಲ್ಲಿ ಹೊಂದಾಣಿಕೆ ರಾಜಕಾರಣ ಎಲ್ಲರಿಗೂ ಗೊತ್ತಿರುವ ಸತ್ಯ. ಯತ್ನಾಳ್ ಹೊಂದಾಣಿಕೆ ಎಷ್ಟಿದೆ ಅನ್ನೋದನ್ನ ಜಿಲ್ಲೆಗೆ ಬಂದು ಅಭಿಪ್ರಾಯಗಳನ್ನು ಕೇಳಿ ಗೊತ್ತಾಗುತ್ತದೆ. ಯತ್ನಾಳ್ ಸೇರಿ ಹಲವರು ಬಹಿರಂಗವಾಗಿ ಮಾತನಾಡುತ್ತಿದ್ದರು. ನಾವು ಅದಕ್ಕೆ ಪ್ರತಿಯಾಗಿ ಮಾತಾಡಿದ್ದೇವೆ. ಅದರಲ್ಲಿ ತಪ್ಪೇನಿದೆ? ಈಗ ನೀವು ಮಾತಾಡಬೇಡಿ ಅಂದಿದ್ದೀರಿ. ಮಾತಾಡಲ್ಲ. ಆದರೆ ಲೋಕಸಭೆ ಚುನಾವಣೆಗೆ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಮರುಕಳುಹಿಸದಂತೆ ಎಚ್ಚರವಹಿಸಿ ಎಂದಿದ್ದಾರೆ. ನಡಹಳ್ಳಿ ಸಲಹೆ ಸ್ವೀಕರಿಸಿದ ಕಟೀಲ್ ಪಕ್ಷ ಅದೆಲ್ಲ ನೋಡಿಕೊಳ್ಳಲಿದೆ. ಇನ್ಮುಂದೆ ನೀವು ಬಹಿರಂಗವಾಗಿ ಪಕ್ಷದ ನಾಯಕರ ವಿರುದ್ಧ ಮಾತನಾಡಬೇಡಿ ಎಂದು ಸೂಚಿಸಿದ್ದಾರೆ.

ಪ್ರತಾಪ್ ಸಿಂಹಗೆ ಪಕ್ಷದ ಎಚ್ಚರಿಕೆ: ಬೊಮ್ಮಾಯಿ ವಿರುದ್ಧ ಹೊಂದಾಣಿಕೆ ಆರೋಪ ಮಾಡಿ ಪಕ್ಷದಲ್ಲೇ ಬಿರುಗಾಳಿ ಎಬ್ಬಿಸಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ ಕೂಡ ಬಿಜೆಪಿ ಕಚೇರಿಗೆ ಆಗಮಿಸಿದರು. ಆರೋಪದ ಬಗ್ಗೆ ನಾಯಕರಿಗೆ ವಿವರಣೆ ನೀಡಿದರು. ಪ್ರತಾಪ್ ಸಿಂಹಗೂ ಬಹಿರಂಗವಾಗಿ ಯಾವುದೇ ಆರೋಪ ಮಾಡದಂತೆ ಖಡಕ್ ಸೂಚನೆ ನೀಡಲಾಯಿತು.

ಬಿ.ಎಸ್. ಯಡಿಯೂರಪ್ಪ ಹೇಳಿದ್ದೇನು?: ಪಕ್ಷದ ನಾಯಕರ ಮಹತ್ವದ ಸಭೆ ಮುಕ್ತಾಯದ ನಂತರ ಸಭೆಯಿಂದ ನಿರ್ಗಮಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅಧ್ಯಕ್ಷರೇ ಎಲ್ಲ ಮಾತನಾಡುತ್ತಾರೆ. ಬೇರೆಯವರು ಮಾತನಾಡಬಾರದು ಎಂದು ನಿರ್ಧಾರವಾಗಿದೆ ಎನ್ನುತ್ತಾ ನಿರ್ಗಮಿಸಿದರು. ಸಭೆ ಮುಗಿಸಿದ ನಂತರ ಮಾತನಾಡಿದ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಪಕ್ಷಕ್ಕೆ ಆಗುವ ಮುಜಗರವಾಗುವ ಹೇಳಿಕೆಯನ್ನು ಯಾರೂ ಕೊಡಬಾರದು ಇನ್ಮುಂದೆ ಇದು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಪಕ್ಷ ನಿಮ್ಮ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಗುತ್ತದೆಂದು ತಿಳಿಸಿದ್ದೇವೆ ಎಂದು ತಿಳಿಸಿದರು.

ಈಗಾಗಲೇ 11 ನಾಯಕರಿಗೆ ನೋಟಿಸ್: ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತಾನಾಡಿ, ಚುನಾವಣೆ ಪೂರ್ವ, ಚುನಾವಣಾ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ತೀರ್ಮಾನ ಆಗಿದೆ. ಯಾರು ಮಾತನಾಡುತ್ತಿದ್ದಾರೋ ಅವರನ್ನು ಕರೆಸಿ ವಿವರಣೆ ಪಡೆದುಕೊಳ್ಳಲಾಗಿದ್ದು, ಇನ್ಮುಂದೆ ಪಕ್ಷದ ಯಾವುದೇ ನಾಯಕರ ವಿರುದ್ಧ ಮಾತಾಡದಂತೆ ಎಚ್ಚರಿಕೆ ನೀಡಲಾಗಿದೆ. 11 ಜನರಿಗೆ ಈಗಾಗಲೇ ನೋಟಿಸ್ ಕೊಡಲಾಗಿದೆ ಎಂದರು.

ಇದನ್ನೂ ಓದಿ: ನನ್ನ ಕಿಂಡಲ್ ಮಾಡಿದ್ರೆ ಅದರ ಕಥೆಯೇ ಬೇರೆ ಆಗುತ್ತದೆ: ಯತ್ನಾಳ್‌ಗೆ ನಿರಾಣಿ ಪರೋಕ್ಷ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.