ಕರ್ನಾಟಕ

karnataka

ಟೆಂಡರ್​ ಮೂಲಕ ಎಲೆಕ್ಷನ್​ಗೆ ಕಲೆಕ್ಷನ್​ ಮಾಡುತ್ತಿರುವ ಬಿಜೆಪಿ: ಆರು ತಿಂಗಳ ಟೆಂಡರ್ ರದ್ದು ಮಾಡಿ.. ಪ್ರಿಯಾಂಕ್ ಖರ್ಗೆ

By

Published : Mar 3, 2023, 3:23 PM IST

ನಿನ್ನೆ ಬಿಜೆಪಿ ಶಾಸಕ ವಿರೂಪಾಕ್ಷ ಮಾಡಾಳ್​ ಪುತ್ರ ಪ್ರಶಾಂತ್​ ಮಾಡಾಳ್​ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಕೈಗೆ ಸಿಕ್ಕಿ ಬಿದ್ದಿರುವ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್​ ಶಾಸಕ ಪ್ರಿಯಾಂಕ್​ ಖರ್ಗೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Congress MLA Priyank Kharge
ಕಾಂಗ್ರೆಸ್​ ಶಾಸಕ ಪ್ರಿಯಾಂಕ್​ ಖರ್ಗೆ

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಟೆಂಡರ್​ಗಳನ್ನು ಕರೆಯುತ್ತಿರುವ ಬಿಜೆಪಿ ಸರ್ಕಾರ, ಈ ಟೆಂಡರ್​ಗಳ ಮೂಲಕ ಕೋಟಿ ಕೋಟಿ ಹಣ ಕಲೆಕ್ಷನ್​ ಮಾಡುತ್ತಿದೆ. ಆದ್ದರಿಂದ ಕಳೆದ ಆರು ತಿಂಗಳಲ್ಲಿ ಮಾಡಿರುವ ಎಲ್ಲ ಟೆಂಡರ್​ಗಳನ್ನು ರದ್ದುಗೊಳಿಸಬೇಕು ಎಂದು ಕಾಂಗ್ರೆಸ್​ ಶಾಸಕ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಪ್ ಆ್ಯಂಡ್​ ಡಿಟರ್ಜೆಂಟ್ ಕಾರ್ಪೊರೇಷನ್ ಅಧ್ಯಕ್ಷರ ಬಳಿ ಇಷ್ಟು ಅಕ್ರಮ ಹಣವಿದ್ದರೆ, ಸರ್ಕಾರದಲ್ಲಿರುವವರ ಬಳಿ ಎಷ್ಟಿರಬಹುದು? ಈ ಅಕ್ರಮ ಹಣದ ಧೈರ್ಯದಿಂದ ಪ್ರತಿ ಮತಕ್ಕೆ 6 ಸಾವಿರ ನೀಡುವುದಾಗಿ ಹೇಳುತ್ತಿದ್ದಾರೆ. ಸರ್ಕಾರವನ್ನು ವಿಸರ್ಜನೆ ಮಾಡಿ ಚುನಾವಣೆಗೆ ಬನ್ನಿ ನಿಮ್ಮ ಪ್ರಾಮಾಣಿಕತೆಯನ್ನು ಜನ ತೀರ್ಮಾನಿಸುತ್ತಾರೆ. ಬಿಜೆಪಿ ಸರ್ಕಾರದಲ್ಲಿ ವಿಧಾನಸೌಧ ವ್ಯಾಪಾರ ಸೌಧವಾಗಿದೆ ಎಂದು ನಾವು ಹೇಳುತ್ತಲೇ ಇದ್ದೆವು. ಈ ಬಗ್ಗೆ ಸಾಕ್ಷಿ ಏನಿದೆ ಎಂದು ಸರ್ಕಾರ ನಮ್ಮ ಆರೋಪ ತಿರಸ್ಕರಿಸುತ್ತಾ ಬಂದಿತ್ತು. ಇದು 40% ಸರ್ಕಾರ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಎಂದು ಹೇಳಲಾಗುತ್ತಿದ್ದು, ಇದು ನಿನ್ನೆ ಸಾಬೀತಾಗಿದೆ ಎಂದರು.

ಅಮಿತ್ ಶಾ ಅವರು ಸಂಡೂರಿನಲ್ಲಿ ಮಾತನಾಡುತ್ತಾ ಮೋದಿ ಮುಖ ನೋಡಿ ಮತ ನೀಡಿ ನಾವು ಭ್ರಷ್ಟಾಚಾರ ಮುಕ್ತ ಕರ್ನಾಟಕ ಮಾಡುವ ಆಡಳಿತ ನೀಡುತ್ತೇವೆ ಎಂದರು. ಆಡಳಿತ ಪಕ್ಷಕ್ಕೆ ಸಂಬಂಧಿಸಿದ ಕೇಂದ್ರ ಸಚಿವರೇ ಈ ರೀತಿ ಯಾಕೆ ಮಾತನಾಡುತ್ತಿದ್ದಾರೆ ಎಂದು ಪ್ರಶ್ನೆ ಮೂಡಿತ್ತು. ಕಾರಣ ಈಗ ತಿಳಿದಿದೆ. ರಾಜ್ಯದಲ್ಲಿರುವ ಬಿಜೆಪಿ ಶಾಸಕರು ಹಾಗೂ ಸರ್ಕಾರದ ಮಂತ್ರಿಗಳು ಭ್ರಷ್ಟಾಚಾರದ ಬಕಾಸುರರು ಇವರು ಎಷ್ಟು ತಿಂದರೂ ಸಾಲುತ್ತಿಲ್ಲ ಎಂದು ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅವರಿಗೆ ಅರಿವಾಗಿದೆ. ಹೀಗಾಗಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಭರವಸೆ ನೀಡುತ್ತಿದ್ದಾರೆ‌. ಬೊಮ್ಮಾಯಿ ಹಾಗೂ ಕಟೀಲ್ ಅವರೇ ಎಲ್ಲಿದ್ದೀರಿ? ಈಗ ನಿಮ್ಮ ಬಾಯಿಗೆ ಹೊಲಿಗೆ ಬಿದ್ದಿದೆಯಾ? ಎಂದು ಕಿಡಿ ಕಾರಿದ್ದಾರೆ.

ದಾಖಲೆ ಕೇಳಿದ್ದೀರಾ?:ಕಾನೂನು ಸಚಿವರಿಗೆ ಕರೆ ಮಾಡಿ ಡಿಸಿಸಿ ಬ್ಯಾಂಕ್​ಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದಾಗ ನಾವು ಸರ್ಕಾರವನ್ನು ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಬಗ್ಗೆ ಅವರು ಪ್ರಶ್ನೆ ಮಾಡಿದ್ದಾರಾ? ತೋಟಗಾರಿಕಾ ಸಚಿವರು ಶೇ 8ರಷ್ಟು ಕಮಿಷನ್ ಕೇಳುತ್ತಾರೆ ಎಂದು ಅಧಿಕಾರಿ ಚೀಟಿ ಬರೆದಾಗ ಅದರ ಬಗ್ಗೆ ಏನಾದರೂ ಪ್ರಶ್ನೆ ಮಾಡಿದ್ದಾರಾ? ರೇಣುಕಾಚಾರ್ಯ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳು ಈ ಸರ್ಕಾರದಲ್ಲಿ ಭ್ರಷ್ಟಾಚಾರ ಹೊರತಾಗಿ ಯಾವುದೇ ಕೆಲಸ ಆಗುತ್ತಿಲ್ಲ ಎಂದು ಹೇಳಿದಾಗ ದಾಖಲೆ ಕೇಳಿದ್ರಾ? ಇತ್ತೀಚೆಗೆ ಶಾಸಕ ಗೂಳಿಹಟ್ಟಿ ಶೇಖರ್ ಅವರು ಬಹಿರಂಗ ಪತ್ರ ಬರೆದು ನೀರಾವರಿ ಟೆಂಡರ್​ನಲ್ಲಿ 22 ಸಾವಿರ ಕೋಟಿ ಅಕ್ರಮ ನಡೆದಿದೆ ಎಂದರು. ಈ ಬಗ್ಗೆ ದಾಖಲೆ ಕೇಳಿದ್ದಾರಾ? ಎಂದು ಪ್ರಶ್ನಿಸಿದರು.

ಯತ್ನಾಳ್ ಅವರು 2,500 ಕೋಟಿ ಕೊಟ್ಟು ಸಿಎಂ ಕುರ್ಚಿ ಖರೀದಿ ಮಾಡಲಾಗಿದೆ ಎಂದು ಆರೋಪ ಮಾಡಿದರು. ಇದಕ್ಕೆ ದಾಖಲೆ ಕೇಳಿದ್ರಾ? ಈಗ ಯಡಿಯೂರಪ್ಪ ಅವರ ಮೇಲೆ ಬಹಳ ಪ್ರೀತಿ ತೋರುತ್ತಿರುವ ಬಿಜೆಪಿಗರು ಯಡಿಯೂರಪ್ಪ ಅವರಿಲ್ಲದೇ ಚುನಾವಣೆ ನಡೆಯುವುದಿಲ್ಲ ಎಂದು ಬಿಂಬಿಸುತ್ತಿದ್ದಾರೆ. ಆದರೆ ಯತ್ನಾಳ್ ಅವರು ಯಡಿಯೂರಪ್ಪ ಅವರು ಭ್ರಷ್ಟರು, ಅವರ ಪುತ್ರ ವಿಜಯೇಂದ್ರ ಪಿಎಸ್ಐ ಹಗರಣದಲ್ಲಿದ್ದಾರೆ ಎಂದು ಬಹಿರಂಗ ಹೇಳಿಕೆ ನೀಡಿದ್ದರು.

ಈ ಬಗ್ಗೆ ಸರ್ಕಾರ ದಾಖಲೆ ಕೇಳಿತಾ? ಕನಕಗಿರಿ ಶಾಸಕರು ಶಾಸಕರ ಭವನದಲ್ಲಿ ಡೀಲ್ ಮಾಡಿರುವ ಬಗ್ಗೆ ಹೇಳಿದಾಗ ಆ ಆಡಿಯೋ ಪರೀಕ್ಷೆ ಮಾಡಿಸಿದ್ರಾ? ಇನ್ನು ನೆಹರೂ ಓಲೇಕರ್ ಅವರು ಅಪರಾಧಿಯಾದರು. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಶಾಸಕರು ಭ್ರಷ್ಟಾಚಾರದಲ್ಲಿ ಅಪರಾಧಿ ಎಂದು ನ್ಯಾಯಾಲಯದಲ್ಲಿ ತೀರ್ಮಾನವಾಗಿದೆ. ಅವರ ರಾಜೀನಾಮೆ ಏನಾದರೂ ಕೇಳಿದ್ರಾ? ಇಷ್ಟೆಲ್ಲಾ ಆದರೂ ಮುಖ್ಯಮಂತ್ರಿಗಳು ಕೇವಲ ಕಾಂಗ್ರೆಸ್​ನವರ ಬಳಿ ದಾಖಲೆ ಕೇಳುತ್ತಾರೆ ಎಂದು ಟೀಕಿಸಿದರು.

ಇದನ್ನೂ ಓದಿ:ಪ್ರಶಾಂತ್‌ ಮಾಡಾಳ್ ನಿವಾಸದಲ್ಲಿ 6 ಕೋಟಿ ರೂಪಾಯಿ ಹಣ ಪತ್ತೆ!

ಕಟೀಲ್ ಅವರು ಈಗ ಎಲ್ಲಿ ಅವಿತು ಕುಳಿತಿದ್ದಾರೆ? ಪರೇಶ್ ಮೆಸ್ತಾ ಸತ್ತಾಗ ರಾಜಾರೋಷವಾಗಿ ಬಂದಿದ್ದೀರಿ. ಅಮಾಯಕರ ಬಲಿ ತೆಗೆದುಕೊಂಡು ಚುನಾವಣೆಗೆ ಹೋಗುತ್ತೀರಿ. ಸಿ.ಟಿ ರವಿ, ರವಿ ಕುಮಾರ್ ಅವರು ಎಲ್ಲಿ ಅವಿತು ಕುಳಿತಿದ್ದಾರೆ? ಅಮಿತ್ ಶಾ, ನಡ್ಡಾ ಅವರು ರಾಜ್ಯಕ್ಕೆ ವಿಜಯ ಸಂಕಲ್ಪ ಯಾತ್ರೆ ಮಾಡಲು ಬರುತ್ತಿಲ್ಲ. 40-50% ಕಮಿಷನ್ ಹೆಚ್ಚಳಕ್ಕೆ ಲಂಚ ಸಂಕಲ್ಪ ಯಾತ್ರೆ, ಭ್ರಷ್ಟೋತ್ಸವಕ್ಕಾಗಿ ಬರುತ್ತಿದ್ದಾರೆ. ಕನ್ನಡಿಗರಿಗೆ ಒಳ್ಳೆಯದು ಮಾಡಲು ಬರುತ್ತಿಲ್ಲ. ಬಿಜೆಪಿ ಶಾಸಕರ ಕಚೇರಿಯಲ್ಲಿ ಅವರ ಪುತ್ರನ ಬಳಿ 1.72 ಕೋಟಿ ಹಣ ಸಿಕ್ಕಿದೆ. ಇದು ಎಲ್ಲಿಂದ ಬಂದಿದೆ.

ಇವರು ನೋಟು ರದ್ದು ಮಾಡುವಾಗ ಕಪ್ಪು ಹಣ ನಿರ್ಮೂಲನೆ ಮಾಡುತ್ತೇವೆ ಎಂದರು. ಆದರೆ ಇವರಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತಿದೆ? ಮುಂದುವರಿದ ದಾಳಿಯಲ್ಲಿ 6 ಕೋಟಿ ಹೆಚ್ಚುವರಿಯಾಗಿ ಸಿಕ್ಕಿದೆ. ಇವರ ಬಳಿಯೇ ಇಷ್ಟು ಸಿಗಬೇಕಾದರೆ, ಇವರಿಗಿಂತ ಉನ್ನತ ಮಟ್ಟದಲ್ಲಿರುವವರ ಬಳಿ ಎಷ್ಟಿರಬೇಡ. ನಾವು ಪೇಸಿಎಂ ಅಭಿಯಾನ ನಡೆಸಿದ್ದು ತಪ್ಪಾ? ಎಂದು ಪ್ರಶ್ನಿಸಿದರು.

ಮಾರುಕಟ್ಟೆ ದರಕ್ಕಿಂತ ಹೆಚ್ಚಿಗೆ ದರದಲ್ಲಿ ಖರೀದಿ:ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ವರದಿ ಬಂದಿದೆ. ಸರಬರಾಜುದಾರರಿಗೆ 131 ಕೋಟಿ ಅಕ್ರಮ ಲಾಭವಾಗಿದೆ. ಇದರಲ್ಲಿ 800 ಕೋಟಿಗೂ ಹೆಚ್ಚು ಸಾಮಗ್ರಿಗಳನ್ನು ಮಾರುಕಟ್ಟೆ ದರಕ್ಕಿಂದ ಮೂರ್ನಾಲ್ಕು ಪಟ್ಟು ಹೆಚ್ಚಾಗಿ ಖರೀದಿ ಮಾಡುವ ಮೂಲಕ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ದೂರು ದಾಖಲಾಗಿದೆ. ಸ್ಯಾಂಡ್ರನೋಲ್ ಕಚ್ಚಾ ಪದಾರ್ಥ 1 ಕೆ.ಜಿಗೆ ಮಾರುಕಟ್ಟೆಯಲ್ಲಿ 1,550 ರೂ. ಇದ್ದು, ಇವರು 92,300 ಕೆ.ಜಿಗೆ 14 ಕೋಟಿ ಅಂದಾಜು ವೆಚ್ಚ ತಗುಲಲಿದೆ. ಆದರೆ ಇವರು ಪ್ರತಿ ಕೆ.ಜಿಗೆ 2,625 ರೂ.ನಂತೆ, 92,300 ಕೆ.ಜಿಗೆ 24.2 ಕೋಟಿ ವೆಚ್ಚ ಮಾಡಿದ್ದಾರೆ. ಹೀಗೆ ಪ್ರತಿಯೊಂದು ಕಚ್ಚಾಪದಾರ್ಥಗಳನ್ನು ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ದರಕ್ಕೆ ಖರೀದಿ ಮಾಡಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ನಾಯಕರ ರಕ್ಷಣೆ ಏಕೆ:ಲೋಕಾಯುಕ್ತ ಸಂಸ್ಥೆ ಮುಚ್ಚಿಹಾಕಿದ್ದು ಕಾಂಗ್ರೆಸ್ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಅಧಿಕಾರಿಗಳಿಂದ ಮುಖ್ಯಮಂತ್ರಿಗಳಿಗೆ ಸರಿಯಾಗಿ ಮಾಹಿತಿ ಸಿಗುತ್ತಿಲ್ಲ ಅಥವಾ ಅವರು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಅಡ್ವಕೇಟ್ ಜನರಲ್ ಎಸಿಬಿ ಪರವಾಗಿ ವಾದ ಮಾಡಿದ್ದು ಮರೆತಿದ್ದಾರಾ? ಅವರು ತಮ್ಮ ವಾದದಲ್ಲಿ ಎಸಿಬಿ ಉತ್ತಮ ಸಂಸ್ಥೆ ಇದರ ಆರಂಭದಿಂದ ಲೋಕಾಯುಕ್ತ ಸಂಸ್ಥೆಗೆ ತೊಂದರೆ ಆಗಿಲ್ಲ. ಬಹಳ ರಾಜ್ಯಗಳಲ್ಲಿ ಈ ಎರಡು ಸಂಸ್ಥೆಗಳು ಒಟ್ಟಿಗೆ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ವಿರೋಧ ಪಕ್ಷದ ನಾಯಕರು ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಆದರೂ ಈ ರೀತಿ ಎರಡು ನಾಲಿಗೆ ಯಾಕೆ? ಎಂದು ಪ್ರಶ್ನಿಸಿದರು.

ಯಾವುದೇ ಏಜೆನ್ಸಿ ದಾಳಿ ಮಾಡಿದರೂ ಸಿಕ್ಕಿಬೀಳುತ್ತಿರುವುದು ಕೇವಲ ಬಿಜೆಪಿಗರು ಮಾತ್ರವೇ? ಕಾಂಗ್ರೆಸ್ ನಾಯಕರು ಸಿಕ್ಕಿಬೀಳುತ್ತಾರೆ ಎನ್ನುವುದಾದರೆ ಎಲ್ಲ ಪ್ರಕರಣ ನ್ಯಾಯಾಂಗ ತನಿಖೆ ನೀಡಿ. ಕಾಂಗ್ರೆಸ್ ನಾಯಕರ ರಕ್ಷಣೆ ಯಾಕೆ ಮಾಡುತ್ತಿದ್ದಾರೆ? ನಾವು ವಿರೋಧ ಪಕ್ಷವಾಗಿ ನಮ್ಮ ಗಮನಕ್ಕೆ ಬಂದ ವಿಚಾರ ಪ್ರಸ್ತಾಪಿಸಿದ್ದೇವೆ. ಇವರು ವಿರೋಧ ಪಕ್ಷದಲ್ಲಿದ್ದಾಗ ಏನು ಮಾಡುತ್ತಿದ್ದರೂ. ಇವರು ಹೇಳಿದ ಪ್ರಕರಣವನ್ನು ಸಿಬಿಐಗೆ ನೀಡಿದ್ದೇವೆ. ನಾವು ಅನೇಕ ಪ್ರಕರಣಗಳಲ್ಲಿ ಕ್ಲೀನ್ ಚಿಟ್ ಪಡೆದಿದ್ದೇವೆ ಎಂದರು.

ಇದನ್ನೂ ಓದಿ:'ಲೀಗಲ್ ಕೆಲಸಕ್ಕೆ ಇಲ್ಲೀಗಲ್ ಹಾದಿ ಹಿಡಿಯಬೇಕಿಲ್ಲ, ಕಾನೂನಿನ ಮುಂದೆ ಎಲ್ಲರೂ ಒಂದೇ': ಲೋಕಾಯುಕ್ತ ನ್ಯಾಯಮೂರ್ತಿ

ABOUT THE AUTHOR

...view details