ಕರ್ನಾಟಕ

karnataka

ಬಿಟ್ ಕಾಯಿನ್ ಹಗರಣ: ಆರೋಪಿಗಳಿಗೆ ಮುಂದಿನ ವಿಚಾರಣೆವರೆಗೂ ಖುದ್ದು ಹಾಜರಾತಿಯಿಂದ ವಿನಾಯ್ತಿ ನೀಡಿದ ಹೈಕೋರ್ಟ್

By ETV Bharat Karnataka Team

Published : Sep 12, 2023, 4:07 PM IST

ಬಿಟ್‌ ಕಾಯಿನ್‌ ಪ್ರಕರಣ ಸಂಬಂಧ ದಾಖಲಾಗಿರುವ ಎಫ್​ಐಆರ್ ಮತ್ತು ಕಾನೂನು ಪ್ರಕ್ರಿಯೆ ವಜಾ ಮಾಡುವಂತೆ ಕೋರಿ ಆರೋಪಿಗಳಾದ ಶ್ರೀಕಿ, ಸುನೀಶ್ ಹೆಗ್ಡೆ, ಪ್ರಸಿಧ್ ಶೆಟ್ಟಿ ಮತ್ತು ಹೇಮಂತ್ ಮುದ್ದಪ್ಪ ಪ್ರತ್ಯೇಕವಾಗಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಬಿಟ್ ಕಾಯಿನ್ ಹಗರಣ bit coin scam high court
ಬಿಟ್ ಕಾಯಿನ್ ಹಗರಣ

ಬೆಂಗಳೂರು: ಬಿಟ್‌ ಕಾಯಿನ್‌ ಹಗರಣದ ಆರೋಪಿಗಳಾದ ಶ್ರೀಕಿ ಅಲಿಯಾಸ್ ಶ್ರೀ ಕೃಷ್ಣ, ಸುನೀಶ್ ಹೆಗ್ಡೆ ಮತ್ತು ಹೇಮಂತ್ ಮುದ್ದಪ್ಪ ಅವರಿಗೆ ಅರ್ಜಿಯ ಕುರಿತ ಮುಂದಿನ ದಿನಾಂಕದ ವರೆಗೂ ಖುದ್ದು ವಿಚಾರಣೆಗೆ ಹಾಜರಾಗುವುದಕ್ಕೆ ವಿನಾಯ್ತಿ ನೀಡಿ ಹೈಕೋರ್ಟ್ ಆದೇಶಿಸಿದೆ.

ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಹಾಗೂ ಕಾನೂನು ಪ್ರಕ್ರಿಯೆ ವಜಾ ಮಾಡುವಂತೆ ಕೋರಿ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ, ಸಹ ಆರೋಪಿಗಳಾದ ಸುನೀಶ್ ಹೆಗ್ಡೆ ಮತ್ತು ಪ್ರಸಿಧ್ ಶೆಟ್ಟಿ ಹಾಗೂ ಹೇಮಂತ್ ಮುದ್ದಪ್ಪ ಅವರು ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣ ರದ್ದು ಮಾಡುವಂತೆ ಕೋರಿದರು. ಇದಕ್ಕೆ ಸರ್ಕಾರದ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ವಾದ ಆಲಿಸಿದ ಪೀಠ, ಆರೋಪಿಗಳು ಮುಂದಿನ ಅರ್ಜಿ ವಿಚಾರಣೆ ದಿನಾಂಕದ ವರೆಗೂ ಖುದ್ದು ಹಾಜರಿಗೆ ವಿನಾಯಿತಿ ನೀಡಿ ಆದೇಶಿಸಿತು. ವಾದ ಮುಂದುವರೆಸಿದ ಸರ್ಕಾರದ ಪರ ವಕೀಲರು, ಹಿಂದಿನ ತನಿಖೆಯಲ್ಲಿ ಲೋಪ ಕಂಡು ಬಂದಿರುವುದರಿಂದ ಮರು ತನಿಖೆ ನಡೆಸಲಾಗುತ್ತಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ಆಧರಿಸಿ ಹೊಸದಾಗಿ ಎಫ್ಐಆರ್ ದಾಖಲಿಸಿ ತನಿಖೆ ನಡೆಯುತ್ತಿದೆ. ಅಷ್ಟೇ ಅಲ್ಲದೆ, ಪ್ರಕರಣದಲ್ಲಿ ಅಧಿಕಾರಿಗಳು ಭಾಗಿಯಾಗಿರುವ ಕುರಿತು ಮಾಹಿತಿ ಇದ್ದು, ಈ ಸಂಬಂಧ ತನಿಖೆ ನಡೆಯುತ್ತಿದೆ. ಹೀಗಾಗಿ ತನೆಖೆಗೆ ತಡೆ ನೀಡಬಾರದು ಎಂದು ಮನವಿ ಮಾಡಿದರು. ವಾದ ಆಲಿಸಿದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 3 ಕ್ಕೆ ಮುಂದೂಡಿತು.

ಇದೇ ಆರೋಪ ಸಂಬಂಧ ಹಿಂದೆ ನಡೆದಿದ್ದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ವಿರುದ್ಧ ವಿವಿಧೆಡೆ ಪ್ರತ್ಯೇಕ ಎಫ್ಐಆರ್‌ಗಳು ದಾಖಲಾಗಿದ್ದರೂ ಮತ್ತೆ ಸಾಮಾನ್ಯ (ಕಾಮನ್) ಎಫ್‌ಐಆರ್‌ ದಾಖಲಿಸಲಾಗಿದೆ. ಇದು ವಜಾಗೊಂಡರೆ ಹೆಚ್ಚಿನ ತನಿಖೆಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ವಾದ ಮಂಡಿಸಿದ್ದರು. ಇದಕ್ಕೆ ಸರ್ಕಾರದ ಪರ ವಕೀಲರು, ಬಿಟ್‌ ಕಾಯಿನ್‌ ಹಗರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಲಾಗಿದೆ. ಮುಂದಿನ ವಿಚಾರಣೆ ವೇಳೆಗೆ ತನಿಖೆಯ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಹೀಗಾಗಿ, ಅರ್ಜಿಗಳನ್ನು ಮುಂದೂಡಬೇಕು ಎಂದು ಕೋರಿದ್ದರು.

ಬಿಟ್ ಕಾಯಿನ್ ಹಗರಣ : ತನಿಖೆಗೆ ತಡೆ ಕೋರಿ ಡಿವೈಎಸ್ಪಿ ಶ್ರೀಧರ್ ಹೈಕೋರ್ಟ್​ಗೆ ಅರ್ಜಿ:ಬಿಟ್ ಕಾಯಿನ್ ಹಗರಣದ ಪ್ರಕರಣದಲ್ಲಿ ಆರೋಪಿಯಾಗಿರುವ ಡಿವೈಎಸ್ಪಿ ಶ್ರೀಧರ್ ಕೆ. ಪೂಜಾರ್ ಅವರ ವಿರುದ್ಧ ಸಾಕ್ಷ್ಯಾಧಾರವಿಲ್ಲದೆ ಕ್ರಮಕ್ಕೆ ಮುಂದಾಗಬಾರದು ಎಂದು ಹೈಕೋರ್ಟ್ ತಿಳಿಸಿದೆ. ತಮ್ಮ ವಿರುದ್ಧ ಸಿಐಡಿ ನಡೆಸುತ್ತಿರುವ ತನಿಖೆ ರದ್ದುಪಡಿಸುವಂತೆವ ಕೋರಿ ಪೂಜಾರ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿ ವಿಚಾರಣೆ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಎಫ್ಐಆರ್​​ನಲ್ಲಿ ಅರ್ಜಿದಾರರ ಹೆಸರು ನಮೂದಿಸಿಲ್ಲ. ಆದರೆ, ಆರೋಪಿಗಳನ್ನು ವಶಪಡಿಸಿಕೊಂಡಿದ್ದ ಸಂದರ್ಭದಲ್ಲಿ ಅವರ ಲ್ಯಾಪ್‌ಟಾಪ್ ಪರಿಶೀಲಿಸಲಾಗಿದೆ. ಈ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಕೃತ್ಯದ ಕರಿತಂತೆ ತನಿಖೆ ನಡೆಯುತ್ತಿದ್ದು, ತನಿಖೆಗೆ ತಡೆ ನೀಡಬೇಕು ಎಂದು ಕೋರಿದರು. ಇದಕ್ಕೆ ಸರ್ಕಾರದ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ತನಿಖೆಗೆ ತಡೆ ನೀಡಬಾರದು ಎಂದು ಕೋರಿದರು.

ಇದನ್ನೂ ಓದಿ: ಬಿಟ್ ಕಾಯಿನ್ ಅಕ್ರಮದ ಬಗ್ಗೆ ಸಂಪೂರ್ಣ ತನಿಖೆ ಮಾಡುತ್ತೇವೆ: ಡಾ. ಜಿ.ಪರಮೇಶ್ವರ್

ABOUT THE AUTHOR

...view details