ಕರ್ನಾಟಕ

karnataka

ಚುನಾವಣೆ ಗೆಲ್ಲಲು ಚಾಣಕ್ಯ ತಂತ್ರದಂತೆ ಎಲ್ಲ ಬ್ರಹ್ಮಾಸ್ತ್ರ ಬಳಕೆ: ಬಿ ವೈ ವಿಜಯೇಂದ್ರ

By

Published : Feb 14, 2023, 12:47 PM IST

Updated : Feb 14, 2023, 1:12 PM IST

ವಿಧಾನಸಭೆ ಚುನಾವಣೆ -2023.. ಚುನಾವಣೆ ಗೆಲ್ಲಲು ಚಾಣಕ್ಯ ತಂತ್ರ- ಎಲ್ಲಾ ಜಿಲ್ಲೆಯಲ್ಲಿಯೂ ಒಂದೇ ರೀತಿಯ ಮೋರ್ಚಾಗಳ ಸಮಾವೇಶಕ್ಕೆ ತಯಾರಿ- ಬಿ ವೈ ವಿಜಯೇಂದ್ರ ಮಾಹಿತಿ

State BJP Vice President B Y Vijayendra
ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ

ಬಿಎಸ್​ವೈ ಸಿಎಂ ಆಗಿದ್ದಾಗ ನಾನು ಆಕ್ಟೀವ್, ಈಗ ಡಬಲ್ ಆಕ್ಟೀವ್ ಎಂದ ಬಿ ವೈ ವಿಜಯೇಂದ್ರ.

ಬೆಂಗಳೂರು :ಚುನಾವಣೆ ಗೆಲ್ಲಲು ಎಲ್ಲ ಬ್ರಹ್ಮಾಸ್ತ್ರಗಳನ್ನೂ ಬಳಕೆ ಮಾಡಿಕೊಳ್ಳಬೇಕು ಅದೇ ಚಾಣಕ್ಯ ತಂತ್ರ. ಯಾವ ಭಾಗದಲ್ಲಿ ಯಾವ ಅಸ್ತ್ರ ಉಪಯೋಗಿಸಿಕೊಳ್ಳಬೇಕು ಅಂತ ನಮ್ಮ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಮೋರ್ಚಾ ಸಮಾವೇಶಗಳ ಆಯೋಜನೆಗೆ ಸಿದ್ಧತೆ ನಡೆದಿದೆ. ಎಲ್ಲ ಜಿಲ್ಲೆಗಳ ಎಲ್ಲ ಕ್ಷೇತ್ರಗಳಲ್ಲೂ ಸಮಾವೇಶ ನಡೆಸಲಾಗುತ್ತದೆ ಎಂದು ತಿಳಿಸಿದರು.

ಉದಾಹರಣೆಗಳೊಂದಿಗೆ ವಿವರಿಸಿದ ಅವರು, ತುಮಕೂರು ಕ್ಷೇತ್ರದಲ್ಲಿ ಯುವ ಸಮಾವೇಶ ನಡೆಸಿದರೆ, ಇಡೀ‌ ಜಿಲ್ಲೆಯಿಂದ ಜನ ಸೇರಿಸುವ ಉದ್ದೇಶ ಇದೆ. ಮಹಿಳಾ ಸಮಾವೇಶವನ್ನು ಗುಬ್ಬಿ ಕ್ಷೇತ್ರದಲ್ಲಿ, ತುರುವೇಕೆರೆಯಲ್ಲಿ ರೈತ ಸಮಾವೇಶ ನಡೆಸುತ್ತೇವೆ. ಪ್ರತೀ ಕ್ಷೇತ್ರಗಳ ಸಮಾವೇಶಗಳಿಗೆ ಆ ಜಿಲ್ಲೆಯ ಜನ, ಕಾರ್ಯಕರ್ತರು ಭಾಗವಹಿಸುವಂತೆ ವ್ಯವಸ್ಥೆ ಮಾಡಲಿದ್ದೇವೆ. ಎಲ್ಲ ಮೋರ್ಚಾಗಳ ಸಮಾವೇಶಗಳನ್ನು ಯಶಸ್ವಿಗೊಳಿಸುತ್ತೇವೆ. ಹಾಗೂ ಎಲ್ಲಾ ಜಿಲ್ಲೆಯಲ್ಲಿಯೂ ಇದೇ ರೀತಿ ಸಮಾವೇಶಗಳನ್ನು ಆಯೋಜನೆ ಮಾಡಲಾಗುತ್ತದೆ ಎಂದರು.

ಬಿಜೆಪಿ ಮೋರ್ಚಾಗಳ‌ ಸಮಾವೇಶ :ಬಹುತೇಕ ಚುನಾವಣೆ ಹೊಸ್ತಿಲಿನಲ್ಲಿ ರಾಜ್ಯ ಇದೆ. ವಿರೋಧ ಪಕ್ಷಗಳು ಪೊಳ್ಳು ಭರವಸೆ ಕೊಡುತ್ತಿವೆ. ಆ ಮೂಲಕ ಮತದಾರರನ್ನು ಗೆಲ್ಲುವ ಪ್ರಯತ್ನದಲ್ಲಿದಾರೆ. ಬಿಜೆಪಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಮತ್ತು ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರಗಳ ಕಾರ್ಯಕ್ರಮಗಳನ್ನು ಜನರಿಗೆ, ಮನೆ ಮನೆಗೆ, ಮನಮನಕ್ಕೆ ಮುಟ್ಟಿಸಲು‌ ನಿರ್ಧಾರ ಮಾಡಿದ್ದು, ಈ ಕೆಲಸದಲ್ಲಿ ನಾವು ಯಶಸ್ವಿಯಾಗುವ ಉದ್ದೇಶದಿಂದ ಎಲ್ಲ ಮೋರ್ಚಾಗಳ ಸಮಾವೇಶ ಹಮ್ಮಿಕೊಂಡಿದ್ದೇವೆ. 224 ಕ್ಷೇತ್ರಗಳಲ್ಲೂ ವಿವಿಧ ಮೋರ್ಚಾಗಳ‌ ಸಮಾವೇಶಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಫೆ.20 ರಂದು ಮಂಡ್ಯ ನಗರದಲ್ಲಿ ಮೋರ್ಚಾದ ಮೊದಲ ಸಮಾವೇಶ ನಡೆಯಲಿದೆ. ಮಂಡ್ಯ ನಗರದಲ್ಲಿ ಯುವ ಮೋರ್ಚಾ ಸಮಾವೇಶ ಆಯೋಜನೆ ಮೂಲಕ‌ ಹಳೇ ಮೈಸೂರು ಭಾಗಕ್ಕೆ ಸ್ಪಷ್ಟ ಸಂದೇಶ ಕೊಡುತ್ತೇವೆ. ಇದರಲ್ಲಿ ವರಿಷ್ಠರೂ‌ ಭಾಗವಹಿಸುತ್ತಾರೆ. ಫೆ.20 ರಿಂದ ಮಾರ್ಚ್ 15 ರೊಳಗೆ ಎಲ್ಲ ಮೋರ್ಚಾಗಳ‌ ಸಮಾವೇಶಗಳನ್ನು ನಡೆಸಲು‌ ನಿರ್ಧರಿಸಿದ್ದೇವೆ. ಮೋರ್ಚಾಗಳ‌ ಸಮಾವೇಶದ ಮೂಲಕ 2 ಕೋಟಿ‌ ಮತದಾರರನ್ನು ತಲುಪುವ ಉದ್ದೇಶ ಹೊಂದಿದ್ದೇವೆ ಎಂದು ವಿಜಯೇಂದ್ರ ತಿಳಿಸಿದರು.

ಮಂಡ್ಯದ ಕೆ ಆರ್ ಪೇಟೆಯಲ್ಲಿ ನಮಗೆ ಐತಿಹಾಸಿಕ ಗೆಲುವು ಸಿಕ್ಕಿದೆ. ಹೀಗಾಗಿ ಮಂಡ್ಯದಿಂದ‌ ಮೋರ್ಚಾ ಸಮಾವೇಶಗಳ‌ ಆರಂಭಿಸಲಾಗುತ್ತದೆ. 140+ ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡು ಹೊರಟಿದ್ದೇವೆ, ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಒತ್ತು ನೀಡಲಿದ್ದು ಯಾವ ಕ್ಷೇತ್ರವನ್ನು ‌ಕಡೆಗಣಿಸಲ್ಲ. ಅಶೋಕ್ ವಿರುದ್ಧ ಮಂಡ್ಯ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಸುದ್ದಿ ಇದೆ. ಮಂಡ್ಯದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೆಲ್ಲುತ್ತೇವೆ ಎಂದರು‌.

ಬಿಎಸ್​ವೈ ಸಿಎಂ ಆಗಿದ್ದಾಗ ನಾನು ಆಕ್ಟೀವ್, ಈಗ ಡಬಲ್ ಆಕ್ಟೀವ್ :ಯಡಿಯೂರಪ್ಪ ಸಿಎಂ ಆಗಿದ್ದಾಗ ನಾನು ಆಕ್ಟಿವ್ ಆಗಿದ್ದೆ ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದ ಮೇಲೆ ಡಬಲ್ ಆಕ್ಟಿವ್ ಆಗಿದೀನಿ ಎಂದು ವಿಜಯೇಂದ್ರ ಹೇಳಿದರು. ನನಗೆ ಈಗ ಒಂದು ಮಹತ್ವದ ಜವಾಬ್ದಾರಿ ಕೊಟ್ಟಿದ್ದಾರೆ ಯಾವುದೇ ನಿರೀಕ್ಷೆ ಇಲ್ಲದೇ ನನ್ನ ಕರ್ತವ್ಯ ನಿರ್ವಹಿಸುತ್ತೇನೆ. ನಮ್ಮ ನಾಯಕರು ಹಳೇ ಮೈಸೂರು ಭಾಗದ ಮೇಲೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಆ ಮೂಲಕ ಹೆಚ್ಚು ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡಿದ್ದೇವೆ, ಇಡೀ ರಾಜ್ಯದಲ್ಲಿ ಸಂಘಟನೆ ಶಕ್ತಿ, ಪೇಜ್ ಪ್ರಮುಖ್ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ನೂರಕ್ಕೆ ನೂರರಷ್ಟು ಫಲಾನುಭವಿ ಗುರುತಿಸುವ ಕಾರ್ಯ ನಡೆಯುತ್ತಿದೆ. ಹಿಂದೆ ಬಿಜೆಪಿ ನಗರಕ್ಕೆ ಮಾತ್ರ ಸೀಮಿತ ಎಂದು ತಿಳಿದಿದರೂ, ಆದರೆ ಇಂದು ರಾಜ್ಯದ ಗ್ರಾಮೀಣ ಭಾಗಕ್ಕೂ ವಿಸ್ತರಿಸಿದೆ. ಕನಿಷ್ಠ 140-150 ಕ್ಷೇತ್ರ ಗೆಲ್ಲಬೇಕು ಎಂಬ ಗುರಿಯಿದೆ ಎಂದರು.

ಮಂಡ್ಯ ಸಮಾವೇಶಕ್ಕೆ ವರಿಷ್ಠರು ಯಾರೆಲ್ಲ ಬರ್ತಾರೆ ? : ಈಗಾಗಲೇ ಈ ಕುರಿತು ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ನಿರ್ಧಾರ ಆಗುತ್ತೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಸ್ನೃತಿ ಇರಾನಿ, ಅನುರಾಗ್ ಠಾಕೂರ್, ಧರ್ಮೇಂದ್ರ ಪ್ರಧಾನ್ ಅವರನ್ನು ಮೋರ್ಚಾಗಳ ಸಮಾವೇಶದಲ್ಲಿ ತೊಡಗಿಸಿಕೊಳ್ಳಲು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಏನೂ ನಿರೀಕ್ಷೆ ಇಲ್ಲದೇ ಪಕ್ಷ ಸಂಘಟನೆ :ಈ ವೇಳೆ ವಿಜಯೇಂದ್ರಗೆ ಸ್ಥಾನ ಕೊಡದೇ ಪಕ್ಷ ಬಳಸಿಕೊಳ್ಳುತ್ತಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಲಕ್ಷಾಂತರ ಕಾರ್ಯಕರ್ತರು ಯಾವುದೇ ಸ್ಥಾನಮಾನದ ನಿರೀಕ್ಷೆ ಇಲ್ಲದೇ ಪಕ್ಷ ಬಲಪಡಿಸುತ್ತಿದ್ದಾರೆ. ಇದರಲ್ಲಿ ವಿಜಯೇಂದ್ರ ಸಹ ಒಬ್ಬ, ವಿಜಯೇಂದ್ರ ಏನೂ ಹೊರತಲ್ಲ. ಹಿಂದೆ ನಾನು ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಆಗಿದ್ದೆ, ಈಗ ಪಕ್ಷದ ಉಪಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಈಗ ಚುನಾವಣೆ ವೇಳೆ ಮೋರ್ಚಾ ಸಮಾವೇಶಗಳ ಸಂಚಾಲಕ ಸ್ಥಾನ ಕೊಟ್ಟಿದ್ದಾರೆ. ಏನೂ ನಿರೀಕ್ಷೆ ಇಲ್ಲದೇ ಪಕ್ಷ ಸಂಘಟನೆಗೆ ಬಲ ತುಂಬುವ ಕೆಲಸ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದರು.

ಯಾವುದೇ ಚುನಾವಣೆ ಕೂಡ ಎಲ್ಲ ಪಕ್ಷಗಳಿಗೂ ಸವಾಲು, ಆಡಳಿತ ಪಕ್ಷಕ್ಕೆ ಹೆಚ್ಚಿನ ಸವಾಲು ಇರುತ್ತದೆ. ಸವಾಲುಗಳನ್ನು ಮೆಟ್ಟಿ ನಿಲ್ಲುವ ನೈಪುಣ್ಯತೆ ನಮ್ಮ ಪಕ್ಷಕ್ಕೆ ಇದೆ. ಯಡಿಯೂರಪ್ಪ ಬಗ್ಗೆ ಎಚ್ಡಿಕೆ, ಸಿದ್ದರಾಮಯ್ಯ ಅನುಕಂಪಾಸ್ತ್ರ ಪ್ರಯೋಗ ವಿಚಾರಕ್ಕೆ ವಿಜಯೇಂದ್ರ ತಿರುಗೇಟು ನೀಡಿದರು. ವಿಪಕ್ಷ ನಾಯಕರು ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡ್ತಿದ್ದಾರೆ. ಆ ಮೂಲಕ ಮತದಾರರನ್ನು ತಪ್ಪು ದಾರಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ನಮ್ಮ ನಾಯಕ ಯಡಿಯೂರಪ್ಪ ಅವರು ಸೂಕ್ತ ಸಂದರ್ಭದಲ್ಲಿ ಸರಿಯಾದ ಉತ್ತರ ಕೊಡುತ್ತಾರೆ ಎಂದರು. ಕೊನೆಯಲ್ಲಿ ಚುನಾವಣೆಯಲ್ಲಿ ಎಲ್ಲಿ ಸ್ಪರ್ಧೆ ಮಾಡ್ತೀರ ಎಂಬ ಪ್ರಶ್ನೆಗೆ ಉತ್ತರ ಕೊಡದ ವಿಜಯೇಂದ್ರ, ಇದಕ್ಕಾಗಿ ಮತ್ತೊಂದು ಮಾಧ್ಯಮಗೋಷ್ಟಿ ಕರೆಯುತ್ತೇನೆ ಎಂದು ಹಾರಿಕೆಯ ಉತ್ತರ ನೀಡಿದರು.

ಇದನ್ನೂ ಓದಿ :ಬಿಜೆಪಿ ರಥಯಾತ್ರೆಗೆ ಸಂಚಾಲಕರ ನೇಮಕ: ವಿಜಯೇಂದ್ರಗೆ ಮೋರ್ಚಾಗಳ ಹೊಣೆ

Last Updated :Feb 14, 2023, 1:12 PM IST

ABOUT THE AUTHOR

...view details