ಕರ್ನಾಟಕ

karnataka

ಬಾಗಲಕೋಟೆ: ರಾಜಕೀಯ ಗುರುಗಳನ್ನು ನೆನದು ಕಣ್ಣೀರಿಟ್ಟ ಸಚಿವ ಗೋವಿಂದ ಕಾರಜೋಳ

By

Published : Apr 15, 2023, 6:46 PM IST

ಇದು ನನ್ನ ಕೊನೆಯ ಚುನಾವಣೆ ಮುಂದೆ ಯುವಕರಿಗೆ ಅವಕಾಶ ನೀಡುತ್ತೇನೆ ಎಂದು ಸಚಿವ ಗೋವಿಂದ ಕಾರಜೋಳ ಅವರು ತಿಳಿಸಿದರು.

minister-govinda-karajola-who-remembered-political-gurus-in-tears
ಬಾಗಲಕೋಟೆ: ರಾಜಕೀಯ ಗುರುಗಳನ್ನು ನೆನದು ಕಣ್ಣೀರಿಟ್ಟ ಸಚಿವ ಗೋವಿಂದ ಕಾರಜೋಳ

ಬಾಗಲಕೋಟೆ: ಸಚಿವ ಗೋವಿಂದ ಕಾರಜೋಳ ಅವರು ತಮ್ಮ ರಾಜಕೀಯ ಗುರುಗಳಾದ ಜನತಾದಳದ ಮುಧೋಳ ಅಧ್ಯಕ್ಷ ಎಸ್ಎಸ್ ಮಲಘಾಣ ಹಾಗೂ ರಾಮಕೃಷ್ಣ ಹೆಗಡೆ ಅವರನ್ನು ನೆನೆದು ಭಾವುಕರಾಗಿ ಕಣ್ಣೀರು ಹಾಕಿದರು. ಮುಧೋಳ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ಅವರು ಭಾವುಕರಾದರು.

ನಂತರ ಮಾತನಾಡಿ, ಇದು ನನ್ನ ಕೊನೆಯ ಚುನಾವಣೆ ಮುಂದೆ ಯುವಕರಿಗೆ ಅವಕಾಶ ನೀಡುತ್ತೇನೆ. ಈ ಬಾರಿ ನನ್ನನ್ನು ಬಿಟ್ಟು ಬಿಡಿ ಎಂದು ಹೈಕಮಾಂಡ್ ತಿಳಿಸಿದ್ದೇ ಆದರೆ ಇದೊಂದು ಬಾರಿ ಸ್ಪರ್ಧೆ ಮಾಡಿ ಎಂದು ತಿಳಿಸಿದ್ದಾರೆ. ಮುಧೋಳ ಕ್ಷೇತ್ರದ ಜನ ತಮ್ಮ ಮನೆ ಮಗನಂತೆ ನನ್ನನ್ನು ಕಂಡಿದ್ದಾರೆ. ತಮ್ಮ‌ ಮಗನೇ ಚುನಾವಣೆಗೆ ನಿಂತಿದ್ದಾನೆ ಎಂದು ಕೆಲಸ‌ ಮಾಡಿದ್ದಾರೆ. ಈ‌ ದೇಶದ‌ ಪ್ರಧಾನಿ ಕಳೆದ ಒಂಭತ್ತು ವರ್ಷಗಳಿಂದ ಮಾಡಿರುವ ಅಭಿವೃದ್ಧಿ ಜೊತೆಗೆ ದೇಶದ ಘನತೆಯನ್ನು ವಿಶ್ವದಲ್ಲಿ ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು.

ಮಾಜಿ ಸಿಎಂ ಯಡಿಯೂರಪ್ಪನವರ ನೇತೃತ್ವದಲ್ಲಿ, ಅನೇಕ ಪ್ರವಾಹ, ಕೋವಿಡ್ ಸಂದರ್ಭದಲ್ಲೂ ಉತ್ತಮ ಆಡಳಿತ ಕೊಟ್ಟಿದ್ದೇವೆ. ಮೇ 15ರ ಒಳಗಾಗಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್​​ನವರು ಯಾವಾಗಲೂ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಾ ಬಂದಿದ್ದಾರೆ. ಜನ ಅವರ ಮಾತನ್ನು ನಂಬುವುದಿಲ್ಲ. ದೇಶದ ಪ್ರಧಾನಿಯನ್ನು 'ಚೌಕಿದಾರ ಚೊರ್ ಹೈ' ಎಂದು ಹೇಳಿದ್ದರು. ಮುಖ್ಯಮಂತ್ರಿ ಬಗ್ಗೆಯೂ ಏಕವಚನದಲ್ಲಿ ಮಾತನಾಡಿದ್ದರು. ಕಾಂಗ್ರೆಸ್ ಪಕ್ಷದವರಿಗೆ ಹೇಗೆ ಮಾತನಾಡಬೇಕು ಎಂಬ ಕನಿಷ್ಠ ಜ್ಞಾನವಿಲ್ಲ ಎಂದು ಕಾಂಗ್ರೆಸ್​ ಪಕ್ಷದ ವಿರುದ್ಧ ಹರಿಹಾಯ್ದರು.

ನಮ್ಮ ಬಿಜೆಪಿ ಸರ್ಕಾರ ಒಳ ಮೀಸಲಾತಿ ಮೂಲಕ ಎಲ್ಲರಿಗೂ ನ್ಯಾಯ ಒದಗಿಸಿದೆ. ಕಾಂಗ್ರೆಸ್​​ನವರು ಎಷ್ಟೇ ದಾರಿ ತಪ್ಪಿಸುವ ಕೆಲಸ ಮಾಡಿದರು ಜನರು ಅವರ ಮಾತನ್ನು ನಂಬುವುದಿಲ್ಲ. ಬಾಗಲಕೋಟೆ ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ವಿಜಯಪತಾಕೆ ಹಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಬಂಡಾಯವೋ, ಮತ್ತ್ಯಾವುದೋ ನಾವು ತಲೆ‌ಕೆಡಿಸಿಕೊಳ್ಳುವುದಿಲ್ಲ, ನಾನು ಜನರ ಮನೆಯ ಮಗನಾಗಿ ಕೆಲಸ‌ ಮಾಡಿದ್ದೇನೆ. ಜನರು‌ ಮತ್ತೆ ನಮ್ಮನ್ನು ಗೆಲ್ಲಿಸುತ್ತಾರೆ, ಬಾಗಲಕೋಟೆ ಮತ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ವೀರಣ್ಣ ಚರಂತಿಮಠ ಅವರು 30 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷದ ನಿರ್ನಾಮವಾಗಲಿದೆ- ಕಾರಜೋಳ:ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎಂದು ಕಿತ್ತಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಡಿ ಕೆ ಶಿವಕುಆಮಾರ್​ ಅವರು ದಲಿತರಿಗೆ ಸಿಎಂ ಸ್ಥಾನ ನೀಡಿದರೆ ನನ್ನ ಸಹಮತ ಇದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಇದರಿಂದ ಮುಂದೆ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷದ ನಿರ್ನಾಮವಾಗಲಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಕಾರಜೋಳ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಸೋಮಣ್ಣ ಮತಬೇಟೆ ಶುರು; ವಸತಿ ಸಚಿವರಿಗೆ ಬೆನ್ನೆಲುಬಾಗಿ ನಿಂತ ರಾಜ್ಯ ನಾಯಕರು

ABOUT THE AUTHOR

...view details