ಕರ್ನಾಟಕ

karnataka

ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಉಳಿದ ಪೃಥ್ವಿ ಶಾ, ಶಾರ್ದೂಲ್ ಕೈಬಿಟ್ಟ ಕೆಕೆಆರ್, ರೂಟ್ ಐಪಿಎಲ್‌ನಿಂದ ಹೊರಕ್ಕೆ

By PTI

Published : Nov 26, 2023, 8:15 AM IST

IPL 2024-Players trade: ಮುಂದಿನ ವರ್ಷದ ಐಪಿಎಲ್‌ಗೂ ಮೊದಲು ಆಟಗಾರರ ಬದಲಿಗೆ ಫ್ರಾಂಚೈಸಿಗಳಿಗೆ ಅವಕಾಶ ನೀಡಲಾಗಿದೆ.

ಐಪಿಎಲ್‌
ಐಪಿಎಲ್‌

ನವದೆಹಲಿ:ಮುಂದಿನ ವರ್ಷದ ಮಾರ್ಚ್​ನಲ್ಲಿ ನಡೆಯಲಿರುವ ಇಂಡಿಯನ್​ ಪ್ರೀಮಿಯರ್​ ಲೀಗ್‌ಗೂ​ (ಐಪಿಎಲ್​) ಮುನ್ನ ಆಟಗಾರರ ಅದಲು-ಬದಲಿಗೆ ಫ್ರಾಂಚೈಸಿಗಳಿಗೆ ಅವಕಾಶ ನೀಡಲಾಗಿದ್ದು, ಇಂದು ಕೊನೆಯ ದಿನ. ಡೆಲ್ಲಿ ಕ್ಯಾಪಿಟಲ್ಸ್​ ತನ್ನ ಸ್ಫೋಟಕ ಆರಂಭಿಕ ಬ್ಯಾಟರ್​ ಪೃಥ್ವಿ ಶಾ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ. ಕೋಲ್ಕತ್ತಾ ನೈಟ್​ ರೈಡರ್ಸ್​ ಆಲ್​ರೌಂಡರ್​ ಶಾರ್ದೂಲ್​ ಠಾಕೂರ್​ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ.

ಕೌಂಟಿ ಕ್ರಿಕೆಟ್‌ ಅವಧಿಯಲ್ಲಿ ಮೊಣಕಾಲು ಗಾಯಕ್ಕೀಡಾಗಿ ಚೇತರಿಸಿಕೊಳ್ಳುತ್ತಿರುವ ಪೃಥ್ವಿ ಶಾ ಅವರನ್ನು ಉಳಿಸಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್ ತೀರ್ಮಾನಿಸಿದೆ. ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮತ್ತು ತಂಡದ ನಿರ್ದೇಶಕ ಸೌರವ್ ಗಂಗೂಲಿ ಯುವ ಆಟಗಾರನ ಸಾಮರ್ಥ್ಯದ ಮೇಲೆ ಸಾಕಷ್ಟು ನಂಬಿಕೆ ಹೊಂದಿದ್ದಾರೆ. ಮುಂದಿನ ಸೀಸನ್​ನಲ್ಲಿ ಬ್ಯಾಟರ್ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬ ನಿರೀಕ್ಷೆ ಹೊಂದಿದ್ದಾರೆ. ಹೀಗಾಗಿ ಅವರನ್ನು ತಂಡದಲ್ಲೇ ಮುಂದುವರಿಸಲು ಒಪ್ಪಿಗೆ ಸೂಚಿಸಿದ್ದಾರೆ.

ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಆಟಗಾರ ಮುಂದಿನ ವರ್ಷ ಮಾರ್ಚ್ ಅಂತ್ಯದಲ್ಲಿ ಐಪಿಎಲ್ ಪ್ರಾರಂಭವಾಗುವ ಹೊತ್ತಿಗಾಗಲೇ ಫಿಟ್ ಆಗಲಿದ್ದಾರೆ ಎಂದು ತಂಡ ನಂಬಿಕೆ ಹೊಂದಿದೆ. ಬಿಗ್​ ಟೂರ್ನಿಗೂ ಮೊದಲೇ ಸರ್ಫರಾಜ್ ಖಾನ್ ಮತ್ತು ಮನೀಶ್ ಪಾಂಡೆ ಅವರನ್ನು ತಂಡ ಬಿಡುಗಡೆ ಮಾಡಿದೆ. ಇವರ ಜಾಗಕ್ಕೆ ಯಾವುದೇ ಆಟಗಾರರನ್ನು ಆಯ್ಕೆ ಮಾಡಿಲ್ಲ.

ಶಾರ್ದೂಲ್​ ಕೈಬಿಟ್ಟ ಕೆಕೆಆರ್​:ಮಹತ್ವದ ಬೆಳವಣಿಗೆಯಲ್ಲಿ, ನಟ ಶಾರೂಖ್​ ಖಾನ್​ ಒಡೆತನದ ಕೋಲ್ಕತ್ತಾ ನೈಟ್​ ರೈಡರ್ಸ್​ (ಕೆಕೆಆರ್​) ಆಲ್​ರೌಂಡರ್​ ಶಾರ್ದೂಲ್​ ಠಾಕೂರ್​ ಅವರನ್ನು ತಂಡದಿಂದ ಕೈಬಿಟ್ಟಿದೆ. ಕಳೆದ ಸಲದ ಹರಾಜಿನಲ್ಲಿ ತಂಡ 10.75 ಕೋಟಿ ರೂಪಾಯಿ ನೀಡಿ ಶಾರ್ದೂಲ್​ರನ್ನು ಖರೀದಿಸಲಾಗಿತ್ತು. ಆಲ್​ರೌಂಡರ್​ ವಿಭಾಗದಲ್ಲಿ ಹೆಚ್ಚು ಪರಿಣಾಮಕಾರಿ ಆಗಲಿದ್ದಾರೆ ಎಂದು ತಂಡ ನಿರೀಕ್ಷಿಸಿತ್ತು. ಆದರೆ, ಕಳೆದ ಆವೃತ್ತಿಯ ಪ್ರದರ್ಶನ ಉತ್ತಮವಾಗಿರದ ಕಾರಣ ಅವರನ್ನು ಮುಂದಿನ ಆವೃತ್ತಿಯಿಂದ ಬಿಡುಗಡೆ ಮಾಡಿದೆ.

ಇಂಪ್ಯಾಕ್ಟ್​ ಪ್ಲೇಯರ್​ ನಿಯಮ ಅಸ್ತಿತ್ವಕ್ಕೆ ಬಂದ ಕಾರಣ, ಶಾರ್ದೂಲ್​ ಆಯ್ಕೆಯು ತಂಡಕ್ಕೆ ಅನಿವಾರ್ಯ ಇಲ್ಲವಾಗಿದೆ. ಆಟದ ಗತಿ ನೋಡಿ ಬದಲಿ ಪ್ಲೇಯರ್ ಇಳಿಸುವ ಅವಕಾಶದಿಂದಾಗಿ ಶಾರ್ದೂಲ್​ ಸ್ಥಾನ ಕಳೆದುಕೊಳ್ಳುವಂತಾಗಿದೆ. ಕೆಕೆಆರ್ ತಂಡಕ್ಕೆ ಈಗ 10.75 ಕೋಟಿ ರೂಪಾಯಿ ಉಳಿತಾಯವಾದಂತಾಗಿದೆ. 5 ಕೋಟಿ ರೂ. ನೀಡಿ ಹೊಸ ಪ್ರತಿಭೆಗಳನ್ನು ಖರೀದಿಗೆ ಸಾಕಷ್ಟು ಹಣ ಸಿಕ್ಕಂತಾಗಿದೆ.

ಐಪಿಎಲ್​ನಿಂದ ಜೋ ರೂಟ್​ ಹೊರಗೆ:ಈ ಮಧ್ಯೆ ಆರ್​ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಆಲ್‌ರೌಂಡರ್‌ಗಳಾದ ಶಹಬಾಜ್ ಅಹ್ಮದ್ ಮತ್ತು ಮಯಾಂಕ್ ದಾಗರ್ ಅವರನ್ನು ಬದಲಿಸಿಕೊಂಡಿವೆ. ಕಳೆದ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಒಂದೇ ಒಂದು ಐಪಿಎಲ್ ಪಂದ್ಯವನ್ನು ಆಡಿದ್ದ ಜೋ ರೂಟ್, ಟೆಸ್ಟ್​ನತ್ತ ಹೆಚ್ಚು ಗಮನಬ ಹರಿಸುವ ಸಲುವಾಗಿ ಮುಂದಿನ ಐಪಿಎಲ್‌ ಸೀಸನ್​ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ:ಗುಜರಾತ್​ ಕ್ಯಾಪ್ಟನ್ಸಿ ಬಿಟ್ಟು ಮತ್ತೆ ಮುಂಬೈ ಪಾಲಾಗ್ತಾರಾ ಹಾರ್ದಿಕ್ ಪಾಂಡ್ಯ​?

ABOUT THE AUTHOR

...view details