ಕರ್ನಾಟಕ

karnataka

'ಯಾವುದೇ ಕ್ರಮಾಂಕದಲ್ಲಿ ಆಡುವ ಸಾಮರ್ಥ್ಯವೇ ಆತನ ಆಯ್ಕೆಗೆ ಕಾರಣ': ಇಶಾನ್ ಕಿಶನ್‌ ಪೋಷಕರ ಮಾತು

By ETV Bharat Karnataka Team

Published : Oct 4, 2023, 4:56 PM IST

ಏಕದಿನ ಕ್ರಿಕೆಟ್ ವಿಶ್ವಕಪ್ ಪ್ರಾರಂಭಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ಬಿಹಾರದಿಂದ ಬಂದು ದೇಶವನ್ನು ಪ್ರತಿನಿಧಿಸುತ್ತಿರುವ ಯುವ ಪ್ರತಿಭೆ ಇಶಾನ್​ ಕಿಶನ್​ ಕುರಿತು ಪೋಷಕರು ಮಾತನಾಡಿದ್ದಾರೆ.

Ishan Kishan
Ishan Kishan

ಪಾಟ್ನಾ (ಬಿಹಾರ): ಭಾರತ ಕ್ರಿಕೆಟ್​ ತಂಡದಲ್ಲಿ ಆಡುವುದೆಂದರೆ ಅದು ಹೆಮ್ಮೆಯ ಭಾವ. ಅದರಲ್ಲೂ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ವಿಶ್ವಕಪ್​ ತಂಡ ಪ್ರತಿನಿಧಿಸುವ ಅವಕಾಶ ಸಿಕ್ಕರಂತೂ ಆಟಗಾರರ ಸಂತೋಷಕ್ಕೆ ಪಾರವೇ ಇರಲಾರದು. ಆಟಗಾರನಾಗಿ ಎಷ್ಟು ಸಂತೋಷ ಇರುತ್ತದೋ ಅದಕ್ಕಿಂತ ದುಪ್ಪಟ್ಟು ಸಂತಸ ಕುಟುಂಬದಲ್ಲಿ ಮನೆ ಮಾಡಿರುತ್ತದೆ. ಇದಕ್ಕೊಂದು ಉದಾಹರಣೆ ಇಶಾನ್ ಕಿಶನ್. ಭಾರತ ತಂಡದ ಯುವ ಆಟಗಾರ ಇಶಾನ್​ ಕಿಶನ್​ ಕುಟುಂಬ ಸದಸ್ಯರು ತಮ್ಮ ಸಂತಸವನ್ನು ಈಟಿವಿ ಭಾರತದ ಜೊತೆಗೆ ಹಂಚಿಕೊಂಡಿದ್ದಾರೆ.

ಇಶಾನ್​ ಕಿಶನ್​ ಅವಿಭಕ್ತ ಕುಟುಂಬದಲ್ಲಿ ಬೆಳೆದ ಕುಡಿ. ತಂದೆ, ತಾಯಿ, ಅಣ್ಣ, ಅತ್ತಿಗೆಯ ಅಗಾಧ ಪ್ರೀತಿ ಮತ್ತು ವಿಶ್ವಾಸ ಇವರಿಗೆ ದೊರೆತಿದೆ. ತಂದೆ ಪ್ರಣವ್ ಪಾಂಡೆ ಮಗ ತಂಡದ ಯಾವ ಸ್ಥಾನದಲ್ಲಿ ಬೇಕಾದರೂ ಬ್ಯಾಟಿಂಗ್​ ಮಾಡುವ ಸಾಮರ್ಥ್ಯ ಹೊಂದಿದ್ದಾನೆ ಎನ್ನುತ್ತಾರೆ.

"ಪಾಕಿಸ್ತಾನದ ವಿರುದ್ಧ ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್.ರಾಹುಲ್​ ಜೊತೆ ಉತ್ತಮ ಪಾಲುದಾರಿಕೆ ಮಾಡಿದ್ದಾನೆ. ಆರಂಭಿಕನಾಗಿ ಮತ್ತು ಮಧ್ಯಮ ಕ್ರಮಾಂಕದಲ್ಲಿ ಟೀಂ​ ಇಂಡಿಯಾ ಮತ್ತು ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಉತ್ತಮ ಪ್ರದರ್ಶನ ನೀಡಿ ತಾನು ಏನೆಂದು ಸಾಬೀತು ಮಾಡಿದ್ದಾನೆ. ತಂಡದ ಮ್ಯಾನೇಜ್​ಮೆಂಟ್​ಗೆ ಕೊಟ್ಟ ಈ ಭರವಸೆಯೇ ತಂಡದಲ್ಲಿ ಸ್ಥಾನ ಸಿಗಲು​ ಕಾರಣ" ಎಂದರು.

ಕಿಶನ್​ ಬ್ಯಾಟ್‌ನಿಂದ ಮತ್ತೊಂದು ದ್ವಿಶತಕ ಯಾವಾಗ ದಾಖಲಾಗುತ್ತದೆ ಎಂಬ ಪ್ರಶ್ನೆಗೆ ಪ್ರಣವ್ ಪಾಂಡೆ, "ಅದು ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದಾಗ ಅವನು ಬಂದ ಪರಿಸ್ಥಿತಿ, ಎಷ್ಟು ಓವರ್​​ಗಳು ಸಿಗುತ್ತವೆ ಹೀಗೆ.. ಇವೆಲ್ಲವನ್ನೂ ನೋಡಬೇಕಾಗುತ್ತದೆ. ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟಿಂಗ್​ ಮಾಡುವುದು ಅಗತ್ಯ" ಎಂದು ತಿಳಿಸಿದರು.

ಪರಿಸ್ಥಿತಿಗೆ ಅನುಗುಣವಾಗಿ ಆಡುತ್ತಾನೆ:ಪ್ಲೇಯಿಂಗ್​ ಇಲೆವನ್​ನಲ್ಲಿ ಕಿಶನ್​ ಸ್ಥಾನ ಮತ್ತು ರಾಹುಲ್​ ಜೊತೆಗಿನ ಹೋಲಿಕೆಯ ಬಗ್ಗೆ ಮಾತನಾಡುತ್ತಾ, "ತಂಡದ ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಮತ್ತು ಫಾರ್ಮ್‌ನಲ್ಲಿದ್ದಾರೆ. ಈಗಲೇ ಏನನ್ನೂ ಹೇಳಲಾಗದು. ಯಾರು ಅವಕಾಶ ಪಡೆದರೂ ಉತ್ತಮ ಪ್ರದರ್ಶನ ನೀಡಲೇಬೇಕು. ಹೋಲಿಕೆಯ ವಿಷಯಕ್ಕೆ ಬಂದರೆ ಕೆಲವೊಮ್ಮೆ ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಅವರನ್ನು ಹೋಲಿಸಲಾಗುತ್ತದೆ. ಕೆಲವೊಮ್ಮೆ ಇಶಾನ್ ಕಿಶನ್ ಮತ್ತು ಕೆ.ಎಲ್.ರಾಹುಲ್ ಅವರನ್ನು ಹೋಲಿಸಲಾಗುತ್ತದೆ. ಇದೆಲ್ಲವೂ ಎಲ್ಲಾ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಈಗಲೇ ಏನನ್ನೂ ಹೇಳಲಾಗುವುದಿಲ್ಲ. ಇಬ್ಬರೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಶಾನ್ ಅಥವಾ ಕೆ.ಎಲ್.ರಾಹುಲ್ ತಂಡದ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವುದು ಪರಿಸ್ಥಿತಿಗೆ ಅನುಗುಣವಾಗಿರುತ್ತದೆ" ಎಂದಿದ್ದಾರೆ. ಇದೇ ವೇಳೆ, ಭಾರತ ತಂಡ ವಿಶ್ವಕಪ್ ಗೆಲ್ಲುತ್ತದೆ ಎಂದು ಇಶಾನ್ ತಂದೆ ಭರವಸೆ ವ್ಯಕ್ತಪಡಿಸಿದ್ದಾರೆ.

ಇಶಾನ್ ಕಿಶನ್ ತುಂಬಾ ಕಾಳಜಿಯುಳ್ಳವನು. ಆತ ತಮ್ಮ ಕುಟುಂಬದ ಬಗ್ಗೆ ಯೋಚಿಸುತ್ತಾನೆ ಎಂದು ಪ್ರಣವ್ ಪಾಂಡೆ ಹೇಳಿದರು. "ಇಶಾನ್ ಕಿಶನ್ ಇಷ್ಟು ದೊಡ್ಡ ಕ್ರಿಕೆಟಿಗನಾಗುತ್ತಾನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ" ಎಂದರು.

ಕಿಶನ್​ ಆರೋಗ್ಯದ ಚಿಂತೆ:ಕಿಶನ್​ ತಾಯಿ ಸುಚಿತ್ರಾ ಸಿಂಗ್​ ಮಗನ ಆರೋಗ್ಯದ ಬಗ್ಗೆ ಹೆಚ್ಚು ಚಿಂತಿತರಾಗಿರುವುದಾಗಿ ಹೇಳಿದ್ದಾರೆ. ಇನ್ನೊಂದು ದ್ವಿಶತಕ ಶೀಘ್ರದಲ್ಲೇ ಬರಲಿದೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ. "ನಾನು ಅವನ ಬಳಿ ಕ್ರಿಕೆಟ್​ ಹೊರತಾಗಿ ಎಲ್ಲವನ್ನೂ ಮಾತನಾಡುತ್ತೇನೆ. ಹೆಚ್ಚಾಗಿ ಆವರ ಆರೋಗ್ಯವನ್ನು ವಿಚಾರಿಸುತ್ತೇನೆ. ಕಿಶನ್​ ಮುಂಬೈನಲ್ಲಿ ಇರುವಾಗ ನಮ್ಮನ್ನು ಅಲ್ಲಿಗೆ ಕರೆಸಿಕೊಳ್ಳುತ್ತಾನೆ" ಎಂದು ಹೇಳಿದರು.

ಮದುವೆಗೆ ಆತುರವಿಲ್ಲ:ಇಶಾನ್ ಮದುವೆಯ ಯೋಜನೆಗಳ ಬಗ್ಗೆ ಅವರ ತಾಯಿ ಕೇಳಿದಾಗ, ಇಶಾನ್ ಕಿಶನ್ ಪ್ರಸ್ತುತ ಅವರ ಕ್ರಿಕೆಟ್ ಮೇಲೆ ಗಮನ ಹರಿಸಬೇಕಾಗಿದೆ ಎಂದು ಹೇಳಿದರು. "ಮದುವೆ ವಿಚಾರದಲ್ಲಿ ಸದ್ಯಕ್ಕೆ ಆತುರವಿಲ್ಲ. ಅವರ ಗುರಿ ಏನಿದ್ದರೂ ಕ್ರಿಕೆಟ್​ನತ್ತ ಗಮನ ಹರಿಸಬೇಕು. ಮದುವೆ ಯಾವಾಗ ನಡೆಯಬೇಕೋ ಆಗ ನಡೆಯಲಿದೆ. ನನ್ನ ಬಳಿ ಎಂತಹ ಹುಡುಗಿ ಬೇಕು ಎಂದು ಜನ ಕೇಳುತ್ತಾರೆ, ಆದರೆ ನಾವು ಇನ್ನೂ ನಿರ್ಧರಿಸಿಲ್ಲ ಮತ್ತು ದೇವರ ಮೇಲೆ ನಂಬಿಕೆ ಇಟ್ಟಿದ್ದೇವೆ, ನನ್ನ ಸೊಸೆಯಾಗಿ ಯಾರು ಬರಬೇಕು, ಅವರು ಒಳ್ಳೆಯವರಾಗಿರಬೇಕು, ವಿದ್ಯಾವಂತರಾಗಿರಬೇಕು ಮತ್ತು ಇಶಾನನ್ನು ಅರ್ಥಮಾಡಿಕೊಳ್ಳಬೇಕು. ನಮಗೆ ಅಂತಹ ಹುಡುಗಿ ಬೇಕು" ಎಂದರು.

ಇದನ್ನೂ ಓದಿ:Cricket World Cup 2023: ಅದ್ಧೂರಿ ಉದ್ಘಾಟನಾ ಸಮಾರಂಭಕ್ಕಿಲ್ಲ ಪ್ಲಾನ್: ಇಂದು ಎಲ್ಲಾ ತಂಡಗಳ ನಾಯಕರ ಫೋಟೋ ಸೆಷನ್

ABOUT THE AUTHOR

...view details