ಕರ್ನಾಟಕ

karnataka

ಪುನೀತ್ ಪುಣ್ಯಸ್ಮರಣೆ: ಅನ್ನಸಂತರ್ಪಣೆಗೆ ಹರಿದು ಬಂದ 40 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು

By

Published : Nov 9, 2021, 7:48 PM IST

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಇಂದು (ನ.9) ಅರಮನೆ ಮೈದಾನದ ತ್ರಿಪುರವಾಸಿನಿ ಅಂಗಣದಲ್ಲಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆಯನ್ನು ರಾಜ್​ಕುಮಾರ್​ ಕುಟುಂಬ ಏರ್ಪಡಿಸಿತ್ತು. ಈ ವೇಳೆ, ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ರೀತಿಯ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ 40 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಪುನೀತ್​ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಪುನೀತ್ ಪುಣ್ಯಸ್ಮರಣೆ
ಪುನೀತ್ ಪುಣ್ಯಸ್ಮರಣೆ

ಬೆಂಗಳೂರು: ಕನ್ನಡ ಚಿತ್ರರಂಗದ ರಾಜರತ್ನ, ದೊಡ್ಮನೆ ನಂದಾದೀಪ ಆರಿ ಹೋಗಿ ಇಂದಿಗೆ 12ನೇ ದಿನ. ಅಣ್ಣಾವ್ರ ಕಾಲದಿಂದಲೂ ಅಭಿಮಾನಿಗಳನ್ನು ದೇವರು ಎಂದು ಕರೆದ ಕುಟುಂಬ ರಾಜ್​ ಕುಟುಂಬ. ಅಭಿಮಾನಿಗಳೆಂದರೆ ಅಪ್ಪುಗೆ ಎಲ್ಲಿಲ್ಲದ ಪ್ರೀತಿ. ಪುನೀತ್​ ನಿಧನದ ನಂತರ ಅಪಾರ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಮಾಡಲು ದೊಡ್ಮನೆ ಕುಟುಂಬ ವ್ಯವಸ್ಥೆ ಮಾಡಿತ್ತು.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಇಂದು (ನ.9) ಅರಮನೆ ಮೈದಾನದ ತ್ರಿಪುರವಾಸಿನಿ ಅಂಗಣದಲ್ಲಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆಯನ್ನು ರಾಜ್​ಕುಮಾರ್​ ಕುಟುಂಬ ಏರ್ಪಡಿಸಿತ್ತು. ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ, ಸಹೋದರರಾದ ಶಿವರಾಜ್​ಕುಮಾರ್ ಮತ್ತು ರಾಘವೇಂದ್ರ ರಾಜ್​ಕುಮಾರ್ ಅಭಿಮಾನಿಗಳಿಗೆ ಊಟ ಬಡಿಸುವ ಮೂಲಕ ಅನ್ನ ಸಂತರ್ಪಣೆಗೆ ಚಾಲನೆ ನೀಡಿದರು.

ಪುನೀತ್ ಪುಣ್ಯಸ್ಮರಣೆ

ವೆಜ್ ಮತ್ತು ನಾನ್ ವೆಜ್ ಊಟ:

ಪುನೀತ್ ಪುಣ್ಯಸ್ಮರಣೆಯ ನಿಮಿತ್ತ ಸುಮಾರು 25 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಸಂಖ್ಯೆ ಹೆಚ್ಚಾದರೆ ಬೇಕಾದ ತಯಾರಿಗಳನ್ನು ಮಾಡಿಕೊಳ್ಳಲಾಗಿತ್ತು. ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ರೀತಿಯ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇಂದು 40 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಪುನೀತ್​ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಸಾವಿರ ಬಾಣಸಿದರಿಂದ ಅಡುಗೆ ತಯಾರಿ:

ಸುಮಾರು 1 ಸಾವಿರ ಬಾಣಸಿಗರು ಅಡುಗೆ ರೆಡಿ ಮಾಡಿದ್ದರು. 1 ಸಾವಿರ ಕೆಜಿ ಸೋನಾ ಮಸೂರಿ ಅಕ್ಕಿ, 750 ಲೀ ಅಡುಗೆ ಎಣ್ಣೆ, ಕೆಜಿಗಟ್ಟಲೆ ಈರುಳ್ಳಿ, ಬೆಳ್ಳುಳ್ಳಿ, ಟೊಮೆಟೊ, ಪುದೀನಾ, ಕೊತ್ತಂಬರಿ ಸೊಪ್ಪು, 3 ಸಾವಿರ ಕೆಜಿ ಚಿಕನ್, 8,500 ಕೋಳಿ ಮೊಟ್ಟೆ ಬಳಸಿ ಅಡುಗೆ ತಯಾರಿಸಲಾಗಿತ್ತು.

ನಾನ್ ವೆಜ್ ಪ್ರಿಯರಿಗೆ ಕೋಳಿ ಮೊಟ್ಟೆ, ಚಿಕನ್ ಕಬಾಬ್, ಚಿಕನ್ ಚಾಪ್ಸ್, ಘೀ ರೈಸ್, ಅನ್ನ-ರಸಂ ಮತ್ತು ಸಸ್ಯಾಹಾರಿ ಅಡುಗೆಯಲ್ಲಿ ಆಲೂ ಕಬಾಬ್, ಬೇಬಿ ಕಾರ್ನ್, ಘೀ ರೈಸ್-ಕುರ್ಮ, ಅನ್ನ-ರಸಂ, ಅಕ್ಕಿ ಪಾಯಸ, ಮಸಾಲೆ ವಡೆ ಮಾಡಲಾಗಿತ್ತು.

ಬೆಳಗ್ಗೆ 11 ಗಂಟೆಯ ಬಳಿಕ ಅರಮನೆ ಮೈದಾನಕ್ಕೆ ಬಂದ ಅಭಿಮಾನಿಗಳು, ಗಣ್ಯರಿಗೆ ಊಟದ ವ್ಯವಸ್ಥೆ ಇತ್ತು. ಒಂದು ಬಾರಿಗೆ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಊಟ ಮಾಡುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಹಾಗೊಂದು ವೇಳೆ, ಜನ ಜಾಸ್ತಿಯಾದರೆ ಬೋಫೆ ವ್ಯವಸ್ಥೆ ಸಹ ಮಾಡಲಾಗಿತ್ತು.

ಇದನ್ನೂ ಓದಿ:'ಇವತ್ತು ನಮ್ಮ ಬಳಿ ಆ ಪಾಸಿಟಿವ್​ ಎನರ್ಜಿ ಇಲ್ಲ': ಶ್ರೀಮುರಳಿ ಭಾವುಕ

ಬಿಗಿ ಪೊಲೀಸ್ ಬಂದೋಬಸ್ತ್​:

ಅಪಾರ ಸಂಖ್ಯೆಯಲ್ಲಿ ಅಪ್ಪು ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದ್ದ ಹಿನ್ನೆಲೆ ಭದ್ರತೆಗಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. 1,123 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. 5 ಎಸಿಪಿ, 30 ಇನ್ಸ್‌ಪೆಕ್ಟರ್, 90 ಪಿಎಸ್‌ಐ ಹಾಗೂ 850 ಕಾನ್​ಸ್ಟೇಬಲ್​ಳನ್ನು ನಿಯೋಜಿಸಿದ್ದರು. ಅರಮನೆ ಮೈದಾನದ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಅಭಿಮಾನಿಗಳು ಬರುವ ಮಾರ್ಗ ಗುರುತು ಮಾಡಿ ಬ್ಯಾರಿಕೇಡ್​ಗಳನ್ನ ಹಾಕಿ, ವ್ಯವಸ್ಥಿತವಾಗಿ ರೂಟ್ ಮ್ಯಾಪ್ ಅನ್ನ ರೆಡಿ ಮಾಡಿದ್ದರು. ಅದರಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲಾಯ್ತು.

ರಕ್ತದಾನ ಮತ್ತು ನೇತ್ರದಾನ ಶಿಬಿರ:

ಇದೇ ವೇಳೆ ರಕ್ತದಾನ ಶಿಬಿರ ಮತ್ತು ನೇತ್ರದಾನ ಶಿಬಿರವನ್ನು ಸಹ ಆಯೋಜಿಸಲಾಗಿತ್ತು. ಮೊದಲಿಗೆ ಶಿವರಾಜ್​ಕುಮಾರ್ ರಕ್ತ ನೀಡಿ ಶಿಬಿರಕ್ಕೆ ಚಾಲನೆ ನೀಡಿದರು. ಬಳಿಕ ರಾಘವೇಂದ್ರ ರಾಜ್​ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್​ಕುಮಾರ್ ರಕ್ತದಾನ ಮಾಡಿದರು. ಬಳಿಕ ಅಪಾರ ಅಭಿಮಾನಿಗಳು ರಕ್ತದಾನ ಮಾಡಿ, ನೇತ್ರದಾನಕ್ಕೆ ಸಹಿ ಹಾಕಿದರು.

ಇದನ್ನೂ ಓದಿ:ಅಭಿಮಾನಿ ದೇವರುಗಳಿಗೆ ಊಟ ಬಡಿಸಿದ ಶಿವಣ್ಣ, ಅಶ್ವಿನಿ ಪುನೀತ್ ರಾಜ್​​ಕುಮಾರ್

ABOUT THE AUTHOR

...view details