ಕರ್ನಾಟಕ

karnataka

ಬಳ್ಳಾರಿ: ಜಲಾವೃತವಾದ ರಸ್ತೆ, ತೆಪ್ಪದಲ್ಲಿ ಶವ ಸಾಗಿಸಿದ ಗ್ರಾಮಸ್ಥರು

By

Published : Jul 22, 2022, 7:15 AM IST

ತುಂಗಭದ್ರಾ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿರುವುದರಿಂದ ರಸ್ತೆ ಜಲಾವೃತಗೊಂಡಿದೆ. ಹೀಗಾಗಿ ಕಂಪ್ಲಿ ಕೋಟೆಯ ನದಿಪಾತ್ರದ ಸಮೀಪದಲ್ಲಿ ಜನರು ಅಂತ್ಯಕ್ರಿಯೆಗೆ ಶವವನ್ನು ತೆಪ್ಪದಲ್ಲಿ ಸಾಗಿಸಿದರು.

Villagers Who Carried The Body On The Raft
ತೆಪ್ಪದ ಮೂಲಕ ಮೃತದೇಹ ಸಾಗಿಸಿದ ಗ್ರಾಮಸ್ಥರು

ಬಳ್ಳಾರಿ: ತಾಲೂಕಿನ ಕಂಪ್ಲಿ ಕೋಟೆಯ ಸಮೀಪದ ಗುರುವಾರ ಮಹಿಳೆಯೊಬ್ಬರ ಶವವನ್ನು ಜನರು ತೆಪ್ಪದ ಮೂಲಕ ಸಾಗಿಸಿದ್ದಾರೆ. ಗ್ರಾಮದ ದಮ್ಮೂರು ಪಕ್ಕೀರಮ್ಮ(72) ಎಂಬುವವರು ನಿಧನರಾಗಿದ್ದರು. ಕಂಪ್ಲಿ ಕೋಟೆಯ ನದಿ ಪಾತ್ರದ ಬಳಿಯ ಸ್ಮಶಾನಕ್ಕೆ ತೆರಳುವ ರಸ್ತೆ ಜಲಾವೃತವಾಗಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು.


ಪಾರ್ಥಿವ ಶರೀರವನ್ನು ತೆಪ್ಪದಲ್ಲಿಟ್ಟುಕೊಂಡು ಸಂಬಂಧಿಗಳು ಹಾಗೂ ಪುರೋಹಿತರು ಸ್ಮಶಾನಕ್ಕೆ ತೆರಳಿದ್ದಾರೆ. ಪ್ರತಿ ಬಾರಿ ತುಂಗಭದ್ರಾ ನದಿಗೆ ನೀರು ಬಂದಾಗಲೆಲ್ಲ ಸ್ಮಶಾನಕ್ಕೆ ಹೋಗುವ ರಸ್ತೆ ನೀರಿನಲ್ಲಿ ಮುಳುಗುತ್ತದೆ. ಇಲ್ಲಿನ ಆರ್ಯವೈಶ್ಯ ಸಮಾಜ, ಬ್ರಾಹ್ಮಣ, ತೊಗಟವೀರ ಕ್ಷತ್ರಿಯ, ಜೈನ ಮತ್ತು ಗಂಗಾಮತ ಸಮಾಜ ಸೇರಿದಂತೆ ಇತರೆ ಸಮಾಜದವರು ಶವಸಂಸ್ಕಾರಕ್ಕೆ ತೆಪ್ಪದಲ್ಲಿಯೇ ತೆರಳುತ್ತಾರೆ.

ನೀರಿನ ಪ್ರಮಾಣ ಹೆಚ್ಚಿದರೆ ಸ್ಮಶಾನಕ್ಕೂ ನೀರು ನುಗ್ಗುತ್ತದೆ. ಹೀಗಾಗಿ ಸ್ಮಶಾನದ ರಸ್ತೆಯನ್ನು ಎತ್ತರಿಸಬೇಕು. ಸುತ್ತಲೂ ತಡೆಗೋಡೆ ನಿರ್ಮಿಸಿ ಸ್ಮಶಾನದ ಒಳಗೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳಬೇಕು. ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಆ್ಯಂಬುಲೆನ್ಸ್ ಅಪಘಾತ: ಈ ಬಗ್ಗೆ ಚಾಲಕ ರೋಶನ್ ಹೇಳುವುದೇನು ?

ABOUT THE AUTHOR

...view details