ಕರ್ನಾಟಕ

karnataka

ಬೆಳಗಾವಿಯಲ್ಲೂ ಅಗ್ನಿಪಥ ವಿರುದ್ಧ ಭುಗಿಲೆದ್ದ ಯುವಕರ ಆಕ್ರೋಶ

By

Published : Jun 18, 2022, 1:35 PM IST

Updated : Jun 18, 2022, 2:49 PM IST

ಬೆಳಗಾವಿ ಜಿಲ್ಲೆಯ ಗೋಕಾಕ್​ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಗೋಕಾಕ್​ ನಗರ, ಸುತ್ತಮುತ್ತಲಿನ ಸೇನಾ ಆಕಾಂಕ್ಷಿ ಯುವಕರು ಅಗ್ನಿಪಥ ಯೋಜನೆ ಯುವ ಸಮೂಹದ ಆತ್ಮಹತ್ಯೆಗೆ ಕಾರಣವಾಗಿದೆ‌. ಕೋಟ್ಯಂತರ ಯುವಕರ ಭವಿಷ್ಯದ ಜೊತೆಗೆ ಕೇಂದ್ರ ಸರ್ಕಾರ ಚೆಲ್ಲಾಟ ಆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

youths protest against agnipath project in belgavi
ಬೆಳಗಾವಿಯಲ್ಲೂ ಅಗ್ನಿಪಥ ವಿರುದ್ಧ ಯುವಕರ ಸಿಟ್ಟು!

ಬೆಳಗಾವಿ: ಸೇನಾ ನೇಮಕಾತಿಯ ಹೊಸ ನಿಯಮ ಅಗ್ನಿಪಥ ಯೋಜನೆ ಜಾರಿಗೆ ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ. ಅಗ್ನಿಪಥ ಯೋಜನೆ ಹಿಂಪಡೆಯುವಂತೆ ಸೇನಾ ಆಕಾಂಕ್ಷಿ ಯುವಕರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ, ಕೇಂದ್ರ ಸರ್ಕಾರದ ವಿರುದ್ಧ ಯುವಕರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ಜಿಲ್ಲೆಯ ಗೋಕಾಕ್​ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಗೋಕಾಕ್​ ನಗರ, ಸುತ್ತಮುತ್ತಲಿನ ಸೇನಾ ಆಕಾಂಕ್ಷಿ ಯುವಕರು ಅಗ್ನಿಪಥ ಯೋಜನೆ ಯುವ ಸಮೂಹಕ್ಕೆ ಮಾರಕವಾಗಿದೆ. ಕೋಟ್ಯಂತರ ಯುವಕರ ಭವಿಷ್ಯದ ಜೊತೆಗೆ ಕೇಂದ್ರ ಸರ್ಕಾರ ಚೆಲ್ಲಾಟ ಆಡುತ್ತಿದೆ. ಇದರಿಂದ ದೇಶದಲ್ಲಿ ಮತ್ತಷ್ಟು ನಿರುದ್ಯೋಗ ಸಮಸ್ಯೆಗಳು ತಲೆದೋರುತ್ತವೆ ಎಂದು ಕಿಡಿಕಾರಿದರು.

ಸೇನಾ ನೇಮಕಾತಿಯ ಹೊಸ ನಿಯಮ ಅಗ್ನಿಪಥ ಯೋಜನೆ ಜಾರಿಗೆ ಬೆಳಗಾವಿ ಜಿಲ್ಲಾದ್ಯಂತ ಭಾರಿ ವಿರೋಧ

ಹೀಗಾಗಿ ಯಾವುದೇ ಕಾರಣಕ್ಕೂ ಅಗ್ನಿಪಥ ಯೋಜನೆ ಜಾರಿಗೆ ತರಬಾರದು ಎಂದು ಸೇನಾ ಆಸಕ್ತ ಯುವಕರು ಒತ್ತಾಯಿಸಿದರು. ಒಂದು ವೇಳೆ, ಅಗ್ನಿಪಥ ಯೋಜನೆ ರದ್ದು ಮಾಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆಯನ್ನು ಯುವಕರು ನೀಡಿದರು.

ಖಾನಾಪುರದಲ್ಲೂ ಶಾಸಕಿ‌‌ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಪ್ರತಿಭಟನೆ:ಅಗ್ನಿಪಥ ಯೋಜನೆ ಜಾರಿ ವಿರೋಧಿಸಿ ಸೇನಾ ಆಕಾಂಕ್ಷಿ ಯುವಕರು ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣ ಮಲಪ್ರಭಾ ಮೈದಾನದಲ್ಲಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ, ಖಾನಾಪುರ ಪಟ್ಟಣದ ‌ಮಲಪ್ರಭಾ ತಾಲೂಕು ಮೈದಾನದಲ್ಲಿ ಸಾವಿರಾರು ಯುವಕರು ಜಮಾವಣೆಗೊಂಡಿದ್ದು, ಯುವಕರಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಸಾಥ್ ನೀಡಿದರು.

ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಮಲಪ್ರಭಾ ಕ್ರೀಡಾಂಗಣದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸೇನಾ ನೇಮಕಾತಿ ಹೊಸ ನಿಯಮ ಅಗ್ನಿಪಥ ಕೈಬಿಡುವಂತೆ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಚಿಕ್ಕೋಡಿಯಲ್ಲೂ ಅಗ್ನಿಪಥ್​​​ಗೆ ಸಿಟ್ಟು..!:ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ಖಂಡಿಸಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಯುವಕರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರ ತಕ್ಷಣವೇ ಅಗ್ನಿಪಥ ಯೋಜನೆ ಹಿಂಪಡೆಯಬೇಕು ಎಂದು ಭಾರತೀಯ ಸೇನೆ ಸೇರುವ ಆಕಾಂಕ್ಷಿ ಯುವಕರು ಆಗ್ರಹಿಸಿದರು. ಇತ್ತ ಜಿಲ್ಲೆಯ ಅಗ್ನಿಪಥ ವಿರುದ್ಧ ಹೋರಾಟ ಹಿನ್ನೆಲೆ ಬೆಳಗಾವಿ ಜಿಲ್ಲೆ ಮತ್ತು ನಗರ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಯುವ ಸ್ಥಳಗಳಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದಾರೆ.

ಇದನ್ನೂ ಓದಿ :ಅಗ್ನಿಪಥ ಯೋಜನೆ ವಿರೋಧಿಸಿ ಧಾರವಾಡದಲ್ಲಿ ಪ್ರತಿಭಟನೆ: ಪೊಲೀಸರಿಂದ ಲಘು ಲಾಠಿ ಪ್ರಹಾರ

Last Updated :Jun 18, 2022, 2:49 PM IST

ABOUT THE AUTHOR

...view details