ಕರ್ನಾಟಕ

karnataka

ಸೋಲೇ ಗೆಲುವಿನ ಮೆಟ್ಟಿಲು: ಯಪಿಎಸ್​​ಸಿ ಪರೀಕ್ಷೆ ಪಾಸ್ ಮಾಡಿದ ಬಸ್​ ಡ್ರೈವರ್ ಮಗಳು

By

Published : May 31, 2022, 4:29 PM IST

ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶ ನಿನ್ನೆ ಪ್ರಕಟಗೊಂಡಿದ್ದು, ಇದರಲ್ಲಿ ಹರಿಯಾಣದ ಬಸ್​ ಡ್ರೈವರ್​ ಮಗಳೊಬ್ಬರು ಪಾಸ್​ ಆಗಿದ್ದಾರೆ.

Haryana Nidhi Gehlot passed UPSC exam
Haryana Nidhi Gehlot passed UPSC exam

ಪಲ್ವಾಲ್​​(ಹರಿಯಾಣ):ಸೋಲೇ ಗೆಲುವಿನ ಮೆಟ್ಟಿಲು, ಸೋಲು ಸ್ವೀಕರಿಸಿದಾಗ ಮಾತ್ರ ಯಶಸ್ಸು ನಮ್ಮನ್ನ ಹುಡುಕಿಕೊಂಡು ಬರುತ್ತೆ ಎಂಬ ಗಾದೆ ಮಾತಿದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಹರಿಯಾಣದ ಖಾಸಗಿ ಬಸ್​ ಡ್ರೈವರ್ ಮಗಳು ನಿಧಿ. ಯುಪಿಎಸ್​​ಸಿಯ ಮೊದಲ ಪ್ರಯತ್ನದಲ್ಲೇ ವೈಫಲ್ಯ ಅನುಭವಿಸಿ,ನಿರಾಶೆ ಅನುಭವಿಸಿದ್ದ ಇವರು, ಎರಡನೇ ಪ್ರಯತ್ನದಲ್ಲಿ ಪಾಸ್​ ಆಗಿದ್ದಾರೆ.

ನಿನ್ನೆ ಪ್ರಕಟಗೊಂಡಿರುವ ಕೇಂದ್ರ ಲೋಕಸೇವಾ ಆಯೋಗದ ಫೈನಲ್ ಪರೀಕ್ಷೆಯ ಫಲಿತಾಂಶದಲ್ಲಿ ಹರಿಯಾಣದ ಪಲ್ವಾಲ್​ ಜಿಲ್ಲೆಯ ಕೃಷ್ಣಾ ಕಾಲೋನಿಯ ನಿಧಿ ಗೆಹ್ಲೋಟ್​​​ ಪಾಸ್​ ಆಗಿದ್ದು, 524ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಇವರ ತಂದೆ ಸತ್ಯ ಪ್ರಕಾಶ್ ಖಾಸಗಿ ಕಂಪನಿಯ ಬಸ್ ಚಾಲಕನಾಗಿ ದುಡಿಯುತ್ತಿದ್ದಾರೆ.​​

ಯಪಿಎಸ್​​ಸಿ ಪರೀಕ್ಷೆ ಪಾಸ್ ಮಾಡಿದ ಬಸ್​ ಡ್ರೈವರ್ ಮಗಳು..

2009ರಲ್ಲಿ 10ನೇ ತರಗತಿ ಪರೀಕ್ಷೆ ಪಾಸ್ ಮಾಡಿದ್ದ ನಿಧಿ ನಂತರ ಪಾಲಿಟೆಕ್ನಿಕ್​ ಕಾಲೇಜಿನಲ್ಲಿ ಸಿವಿಲ್ ಡಿಪ್ಲೋಮಾ ಮಾಡಿದ್ದರು. ಇದಾದ ಬಳಿಕ ಬಿ.ಟೆಕ್​ ಸಿವಿಲ್​ ಹಾಗೂ 2020ರಲ್ಲಿ ಸಿವಿಲ್​ ಎಂಟೆಕ್​​ ಪಡೆದಿದ್ದರು. ಮೊದಲಿನಿಂದಲೂ ಕೇಂದ್ರ ಆಡಳಿತ ಸೇವೆಗೆ ಹೋಗಬೇಕು ಎಂಬ ಆಸೆ ಕಾಣುತ್ತಿದ್ದ ನಿಧಿ 2020ರಿಂದಲೂ ತಯಾರಿ ನಡೆಸಿದ್ದರು. ಮನೆಯಲ್ಲಿದ್ದುಕೊಂಡು ಅಧ್ಯಯನ ಆರಂಭಿಸಿದ್ದರು.

ಮೊದಲ ಪ್ರಯತ್ನದಲ್ಲಿ ವಿಫಲ :2020ರಲ್ಲಿ ಯುಪಿಎಸ್​​ಸಿ ಪರೀಕ್ಷೆಯಲ್ಲಿ ನಿಧಿ ವಿಫಲವಾಗಿದ್ದರು. ಇದಾದ ಬಳಿಕ ಧೈರ್ಯ ಕಳೆದುಕೊಳ್ಳದೇ ನಿರಂತರ ಪರಿಶ್ರಮ, ಅಧ್ಯಯನದಿಂದ ಎರಡನೇ ಪ್ರಯತ್ನದಲ್ಲಿ ಪಾಸ್​ ಆಗಿದ್ದಾರೆ. ನಿತ್ಯ ಸುಮಾರು 10 ಗಂಟೆಗಳ ಕಾಲ ಅಧ್ಯಯನ ಮಾಡ್ತಿದ್ದ ನಿಧಿ, ಈ ವರ್ಷ ಯಶಸ್ಸು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಅತ್ತೆಯ ಕಿರುಕುಳವೇ ಸ್ಫೂರ್ತಿ; UPSC ಪಾಸ್ ಮಾಡಿದ 7 ವರ್ಷದ ಮಗುವಿನ ತಾಯಿ

ಮನನೊಂದಿದ್ದ ನಿಧಿ :ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಲು ಸಾಧ್ಯವಾಗದ ಕಾರಣ ನಿಧಿ ಮನನೊಂದಿದ್ದಳು. ಆದರೆ, ಸುಮ್ಮನೆ ಕುಳಿತುಕೊಳ್ಳದೇ ಎರಡನೇ ಪ್ರಯತ್ನದಲ್ಲಿ ಪಾಸ್ ಆಗಿದ್ದಾರೆ. ಯಶಸ್ಸಿನ ಹಾದಿಯಲ್ಲಿ ಸೋಲು ಕಂಡರೆ ನಮ್ಮ ಪ್ರಯತ್ನ ಬಿಡಬಾರದು. ಯಶಸ್ಸು ಒಂದಲ್ಲ ಒಂದು ದಿನ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ನನ್ನ ಯಶಸ್ಸಿನ ಹಿಂದೆ ಪೋಷಕರ ಬೆಂಬಲ ಇದೆ ಎಂದು ನಿಧಿ ಹೇಳಿಕೊಂಡಿದ್ದಾರೆ. ಮಗಳ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ತಂದೆ, ಈ ಯಶಸ್ಸಿನಿಂದ ತುಂಬಾ ಸಂತೋಷವಾಗಿದೆ. ಪ್ರತಿದಿನ 12-14 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದಳು. ಅವಳ ಶ್ರಮಕ್ಕೆ ಕೊನೆಗೂ ಫಲ ಸಿಕ್ಕಿದೆ ಎಂದು ಸತ್ಯ ಪ್ರಕಾಶ್ ಹೇಳಿದ್ದಾರೆ.

2011ರ ನಾಗರಿಕ ಸೇವಾ ಪರೀಕ್ಷೆಗಳ ಲಿಖಿತ ಪರೀಕ್ಷೆ ಕಳೆದ ಜನವರಿ ತಿಂಗಳಲ್ಲಿ ನಡೆಸಲಾಗಿತ್ತು. ಸಂದರ್ಶನ ಏಪ್ರಿಲ್- ಮೇ ತಿಂಗಳಲ್ಲಿ ನಡೆಸಲಾಗಿತ್ತು. ಈ ಮಹತ್ವದ ಪರೀಕ್ಷೆಯಲ್ಲಿ ಪಾಸ್​ ಆಗಿರುವ ಒಟ್ಟು 685 ಅಭ್ಯರ್ಥಿಗಳು ಇದೀಗ ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಕೇಂದ್ರದ ವಿವಿಧ ಸೇವೆ, ಗ್ರೂಪ್ ಎ ಮತ್ತು ಗ್ರೂಪ್‌ ಬಿ ಸ್ಥಾನಕ್ಕಾಗಿ ನೇಮಕ ಆಗಲಿದ್ದಾರೆ.

ಅಂತಿಮ ಪರೀಕ್ಷೆಯಲ್ಲಿ ಪಾಸ್​ ಆಗಿರುವ 685 ಅಭ್ಯರ್ಥಿಗಳ ಪೈಕಿ 244 ಸಾಮಾನ್ಯ ವರ್ಗ, 73 ಆರ್ಥಿಕವಾಗಿ ದುರ್ಬಲವಾಗಿರುವ ವರ್ಗ, 203 ಇತರ ಹಿಂದುಳಿದ ವರ್ಗ, 105 ಪರಿಶಿಷ್ಟ ಜಾತಿ ಮತ್ತು 60 ಪರಿಶಿಷ್ಟ ಪಂಗಡದಿಂದ ಆಯ್ಕೆಯಾಗಿದ್ದಾರೆಂದು ಆಯೋಗ ತಿಳಿಸಿದೆ. ಅಭ್ಯರ್ಥಿಗಳಿಗೆ ಯಾವುದಾದರೂ ವಿಷಯದ ಬಗ್ಗೆ ಮಾಹಿತಿ ಪಡೆದುಕೊಳ್ಳಲು 23385271/23381125 /23098543 ನಂಬರ್​ಗೆ ಕರೆ ಮಾಡುವಂತೆ ತಿಳಿಸಿದೆ.

ABOUT THE AUTHOR

...view details