ಕರ್ನಾಟಕ

karnataka

ತೃಣಮೂಲ ಕಾಂಗ್ರೆಸ್ ನಾಯಕನನ್ನು ಗುಂಡಿಕ್ಕಿ ಹತ್ಯೆ: ಇಬ್ಬರು ಆರೋಪಿಗಳ ಬಂಧನ..

By ETV Bharat Karnataka Team

Published : Nov 13, 2023, 5:27 PM IST

Trinamool Congress leader shot dead: ಗ್ರಾಮದ ವಾತಾವರಣ ಹಿಂಸಾಚಾರಕ್ಕೆ ತಿರುಗಿದ್ದು, ಹಲವು ಮನೆಗಳಿಗೆ, ಹೊಲಗಳಿಗೆ ಬೆಂಕಿ ಹಚ್ಚಲಾಗಿದೆ.

Saifuddin Laskar
ಸೈಫುದ್ದೀನ್​ ಲಸ್ಕರ್​

ಜಯನಗರ (ಕೋಲ್ಕತ್ತಾ): ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದ ಜಿಲ್ಲೆಯ ಜಯನಗರ ಪೊಲೀಸ್​ ಠಾಣಾ ವ್ಯಾಪ್ತಿಯ ಬಮಂಗಚಿ ಗ್ರಾಮದಲ್ಲಿ ಸೋಮವಾರ ಹಾಡಹಗಲೇ ತೃಣಮೂಲ ಕಾಂಗ್ರೆಸ್​ ಮುಖಂಡನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಸೈಫುದ್ದೀನ್​ ಲಸ್ಕರ್​ (43) ಹತ್ಯೆಯಾದ ನಾಯಕ. ಸೈಫುದ್ದೀನ್​ ಲಸ್ಕರ್​ ಬಮಂಗಚಿ ಗ್ರಾಮ ಪಂಚಾಯಿತಿಯ ತೃಣಮೂಲ ಕಾಂಗ್ರೆಸ್​ ಸದಸ್ಯ ಹಾಗೂ ಪಕ್ಷದ ವಲಯ ಅಧ್ಯಕ್ಷರಾಗಿದ್ದರು. ಸೈಫುದ್ದೀನ್​ ಅವರ ಪತ್ನಿ ಸೆರಿಫಾ ಬೀಬಿ ಅವರು ಬಮಂಗಚಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದಾರೆ. ಘಟನೆ ಬಳಿಕ ಗ್ರಾಮದಲ್ಲಿ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದೆ. ತೃಣಮೂಲ ನಾಯಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕೆಯ ಮೇರೆಗೆ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಸ್ಥಳೀಯ ಮೂಲಗಳ ಪ್ರಕಾರ, ಸೈಫುದ್ದೀನ್​ ಲಸ್ಕರ್ ಅವರು ನಿತ್ಯ ಸ್ಥಳೀಯ ಮಸೀದಿಗೆ ನಮಾಜ್​ಗೆ ತೆರಳುತ್ತಿದ್ದಾಗ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಮಸೀದಿ ಅವರ ಮನೆ ಮುಂದೆಯೇ ಇದ್ದು, ಇಲ್ಲಿಗೆ ಹೋಗುವ ವೇಳೆ ಹಾಡಹಗಲೇ ಗುಂಡಿನ ದಾಳಿ ನಡೆದಿದೆ. ಗುಂಡಿನ ಸದ್ದು ಕೇಳಿ, ಸುತ್ತಮತ್ತಲ ಜನರು ಸ್ಥಳಕ್ಕೆ ಧಾವಿಸಿದ್ದು, ಆ ವೇಳೆ ಸೈಫುದ್ದೀನ್​ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಅವರನ್ನು ಪದ್ಮರ್ಹಾಟ್​ ಗ್ರಾಮಾಂತರ ಆಸ್ಪತ್ರೆಗೆ ದಾಖಲಿಸಿದರೂ, ಆಸ್ಪತ್ರೆಯಲ್ಲಿ ವೈದ್ಯರು ಅದಾಗಲೇ ಸೈಫುದ್ದೀನ್​ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಬರುಯಿಪುರ್​ ಪೂರ್ವ ವಿಧಾನಸಭೆಯ ತೃಣಮೂಲ ಶಾಸಕ ಬಿವಾಸ್​ ಸರ್ದಾರ್,​ ಪದ್ಮರ್ಹಾಟ್​ ಗ್ರಾಮಾಂತರ ಆಸ್ಪತ್ರೆಗೆ ಧಾವಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು "ಸೈಫುದ್ದೀನ್​ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಸೈಫುದ್ದೀನ್​ ನಮ್ಮ ಪಕ್ಷದ ಬಮಂಗಚಿ ವಲಯಾಧ್ಯಕ್ಷರಾಗಿದ್ದರು. ಅವರ ಮನೆ ಮುಂದೆಯೇ ಮಸೀದಿ ಇದ್ದು, ಮುಂಜಾನೆ ಪ್ರಾರ್ಥನೆಗೆ ತೆರಳುತ್ತಿದ್ದಾಗ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಕೊಲೆ ಸಂಚು ನಡೆದಿತ್ತೇ ಎಂಬುದರ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ." ಎಂದು ತಿಳಿಸಿದರು.

ಸ್ಥಳೀಯ ಮೂಲಗಳ ಪ್ರಕಾರ, ಗುಂಡು ಹಾರಿಸಿದ ದುಷ್ಕರ್ಮಿಗಳು ಗ್ರಾಮದ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಸೈಫುದ್ದೀನ್​ ಹತ್ಯೆಯಾಗುತ್ತಿದ್ದಂತೆ ಲಸ್ಕರ್ ಅವರ​ ಬೆಂಬಲಿಗರು, ಶಂಕಿತ ವ್ಯಕ್ತಿಯೊಬ್ಬರನ್ನು ಮಾರಣಾಂತಿಕವಾಗಿ ಹೊಡೆದಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮದ ಕೆಲವು ಮನೆಗಳು, ಅಂಗಡಿ, ಗಿಡಗಳು, ಭತ್ತದ ರಾಶಿಗಳು ಬೆಂಕಿ ಹಚ್ಚಿ, ಸುಟ್ಟು ಕರಕಲಾಗಿವೆ. ಘಟನೆ ಬಳಿಕ ಮಹಿಳೆಯರೂ ಸೇರಿ ಗ್ರಾಮಸ್ಥರು ತಮ್ಮ ಆಸ್ತಿಗಳನ್ನು ಉಳಿಸಿಕೊಳ್ಳಲು ಬಕೆಟ್​ಗಳಲ್ಲಿ ನೀರು ಹೊತ್ತೊಯ್ದು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಸ್ಥಳದಲ್ಲಿ ಹೆಚ್ಚಿನ ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ.

ಘಟನೆ ಬಗ್ಗೆ ಮಾಹಿತಿ ನೀಡಿರುವ ಬರುಯಿಪುರ ಪೊಲೀಸ್​ ವರಿಷ್ಠಾಧಿಕಾರಿ ಪಲಾಶ್​ ಚಂದ್ರ ಧಾಲಿ, "ಆರೋಪಿಯನ್ನು ಬಂಧಿಸಲಾಗಿದ್ದು, ತಾನೇ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಈ ಕೊಲೆ ಹಿಂದೆ ವಿರೋಧ ಪಕ್ಷದ ಸದಸ್ಯರು ಹಾಗೂ ಬೆಂಬಲಿಗರ ಕೈವಾಡವಿದೆ ಎಂದು ತೃಣಮೂಲ ಕಾಂಗ್ರೆಸ್​ ಆರೋಪಿಸಿದೆ.

ಇದನ್ನೂ ಓದಿ :ಉಡುಪಿ: ನಾಲ್ವರ ಕೊಲೆ ಪ್ರಕರಣ, ಶಂಕಿತ ಆರೋಪಿ ಕರೆದೊಯ್ದ ಬಗ್ಗೆ ಆಟೋ ಚಾಲಕ ಹೇಳಿದ್ದೇನು?

ABOUT THE AUTHOR

...view details