ಕರ್ನಾಟಕ

karnataka

ಅತ್ತೆಯ ಕಿರುಕುಳವೇ ಸ್ಫೂರ್ತಿ; UPSC ಪಾಸ್ ಮಾಡಿದ 7 ವರ್ಷದ ಮಗುವಿನ ತಾಯಿ

By

Published : May 31, 2022, 3:14 PM IST

ಗಂಡನ ಮನೆಯವರ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬಳು ಸತತ ಪ್ರಯತ್ನದಿಂದ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾಳೆ.

Shivangi Goyal secure 177 in UPSC results
Shivangi Goyal secure 177 in UPSC results

ಹಾಪುರ್​(ಉತ್ತರ ಪ್ರದೇಶ): ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹುಮ್ಮಸ್ಸಿದ್ದವರಿಗೆ ಖಂಡಿತವಾಗಿಯೂ ಯಶಸ್ಸು ಸಿಕ್ಕೇ ಸಿಗುತ್ತದೆ. ಅಂತಹ ಘಟನೆವೊಂದು ಉತ್ತರ ಪ್ರದೇಶದ ಹಾಪುರ್​ದಲ್ಲಿ ನಡೆದಿದೆ. ಅತ್ತೆಯ ಕಿರುಕುಳದಿಂದಲೇ ಸ್ಫೂರ್ತಿ ಪಡೆದ ಏಳು ವರ್ಷದ ಮಗುವಿನ ತಾಯಿಯೊಬ್ಬಳು ಯುಪಿಎಸ್​ಸಿ ಪರೀಕ್ಷೆ ಪಾಸ್ ಮಾಡಿದ್ದಾರೆ. ಇದರ ಜೊತೆಗೆ ಇತರ ಹೆಣ್ಣು ಮಕ್ಕಳಿಗೂ ಮಾದರಿಯಾಗಿದ್ದಾರೆ.

ಉತ್ತರ ಪ್ರದೇಶದ ಹಾಪುರ್​ದ ಶಿವಾಂಗಿ ಗೋಯಲ್​​ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 177ನೇ ಸ್ಥಾನ ಪಡೆದುಕೊಂಡಿದ್ದಾರೆ. ಗಂಡನ ಮನೆಯಲ್ಲಿ ಅತ್ತೆ ನೀಡುತ್ತಿದ್ದ ಕಿರುಕುಳದಿಂದ ಐಎಎಸ್​​ ಅಧಿಕಾರಿಯಾಗಬೇಕೆಂಬ ನಿರ್ಧಾರ ಕೈಗೊಂಡು, ಇದೀಗ ಅದರಲ್ಲಿ ಯಶಸ್ವಿಯಾಗಿದ್ದಾರೆ.

ಗಂಡನ ಮನೆಯವರ ಕಿರುಕುಳ: ಕಳೆದ ಕೆಲ ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಶಿವಾಂಗಿಗೆ ಅತ್ತೆ - ಮಾವ ನಿತ್ಯ ಕಿರುಕುಳ ನೀಡಲು ಶುರು ಮಾಡಿದ್ದರು. ಇದರ ಮಧ್ಯೆ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ. ಇಷ್ಟಾದರೂ, ಗಂಡನ ಮನೆಯವರ ಕಿರುಕುಳ ನಿಲ್ಲುವುದಿಲ್ಲ. ಹೀಗಾಗಿ, ಪೋಷಕರ ಮನೆಗೆ ವಾಪಸ್ ಆಗಿ, ತಂದೆ-ತಾಯಿ ಜೊತೆ ಜೀವನ ನಡೆಸಲು ಮುಂದಾಗುತ್ತಾರೆ. ಈ ವೇಳೆ ಶಿವಾಂಗಿ ತಂದೆ, ನೀನು ಏನು ಮಾಡಬೇಕೋ ಅಂದುಕೊಂಡಿದ್ದೀಯಾ ಅದನ್ನು ಮಾಡು ಎಂದು ಕಿವಿಮಾತು ಹೇಳುತ್ತಾರೆ. ಈ ವೇಳೆ ಯುಪಿಎಸ್​ಸಿ ಪರೀಕ್ಷೆ ತಯಾರಿ ಮಾಡುವ ನಿರ್ಧಾರ ಕೈಗೊಳ್ಳುತ್ತಾರೆ.

ಇದನ್ನೂ ಓದಿ:ಕಷ್ಟದ ದಿನಗಳಲ್ಲೂ ಸ್ಥಿರತೆ, ನಮ್ಮ ಗುರಿ ಬಗ್ಗೆ ಸ್ಪಷ್ಟತೆ ಮುಖ್ಯ ಎಂದ UPSC ಟಾಪರ್​​ ಅಂಕಿತಾ!

ಮುದವೆಗೂ ಮುನ್ನ ಎರಡು ಸಲ ಪ್ರಯತ್ನಿಸಿ, ವಿಫಲವಾಗಿದ್ದ ಶಿವಾಂಗಿ, 2019ರಿಂದಲೂ ಕೌಟುಂಬಿಕ ಸಮಸ್ಯೆ ನಡುವೆ ಕೂಡ ತಯಾರಿ ನಡೆಸಿ, ಅದರಲ್ಲಿ ಯಶಸ್ವಿಯಾಗಿದ್ದು, 177ನೇ ಸ್ಥಾನ ಪಡೆದುಕೊಂಡಿದ್ದಾರೆ.

ಮಹಿಳೆಯರಿಗೆ ಧೈರ್ಯ ತುಂಬಿದ ಶಿವಾಂಗಿ: ವಿವಾಹಿತ ಮಹಿಳೆಯರು ಅತ್ತೆಯ ಮನೆಯಲ್ಲಿ ಕಿರುಕುಳ, ತೊಂದರೆ ಅನುಭವಿಸಿದರೆ ಭಯ ಪಡುವ ಅಗತ್ಯವಿಲ್ಲ. ನಿಮ್ಮ ಕಾಲಿನ ಮೇಲೆ ನಿಲ್ಲುವ ನಿರ್ಧಾರ ಕೈಗೊಳ್ಳಿ. ಕಷ್ಟಪಟ್ಟು ಕೆಲಸ ಮಾಡಿದರೆ ಎಂತಹ ಪರೀಕ್ಷೆ ಸಹ ಸುಲಭವಾಗಿ ಎದುರಿಸಬಹುದು ಎಂದು ಕಿವಿಮಾತು ಹೇಳಿದ್ದಾರೆ.

ಎರಡು ಸಲ ಪ್ರಯತ್ನಿಸಿ ವಿಫಲ: ಮದುವೆ ಮಾಡಿಕೊಳ್ಳುವುದಕ್ಕೂ ಮುನ್ನವೇ ಐಎಎಸ್​​ ಆಗಬೇಕೆಂಬ ಆಸೆ ಇತ್ತು. ಹೀಗಾಗಿ, ಎರಡು ಸಲ ಪ್ರಯತ್ನಿಸಿದ್ದೆ. ಆದರೆ, ಅದರಲ್ಲಿ ಯಶಸ್ಸು ಕಂಡಿರಲಿಲ್ಲ. ಇದಾದ ಬಳಿಕ ಮದುವೆ ಮಾಡಿಕೊಂಡು, ಅತ್ತೆ ಮನೆಯಿಂದ ಕೌಟುಂಬಿಕ ಸಮಸ್ಯೆ ಎದುರಿಸಿದ್ದೇನೆ. ಇದೀಗ ನಾನು ಅಂದುಕೊಂಡಿರುವುದನ್ನ ಸಾಧಿಸಿದ್ದೇನೆ ಎಂದು ಶಿವಾಂಗಿ ಹೇಳಿದ್ದಾರೆ.

ನನ್ನ ಯಶಸ್ಸಿನ ಶ್ರೇಯ ತಂದೆ - ತಾಯಿ ಹಾಗೂ ನನ್ನ 7 ವರ್ಷದ ಮಗುವಿಗೆ ಸಲ್ಲಬೇಕು ಎಂದು ಶಿವಾಂಗಿ ಹೇಳಿಕೊಂಡಿದ್ದಾರೆ. ವಿವಾಹಿತ ಶಿವಾಂಗಿ ಸಾಧನೆಗೆ ಇದೀಗ ಇನ್ನಿಲ್ಲದ ಅಭಿನಂದನೆ ಹರಿದು ಬರುತ್ತಿದೆ. ಶಿವಾಂಗಿ ಸಮಾಜಶಾಸ್ತ್ರ ವಿಷಯದಲ್ಲಿ ಪರೀಕ್ಷೆ ಎದುರಿಸಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು, ಒಟ್ಟು 685 ಅಭ್ಯರ್ಥಿಗಳು ಪಾಸ್ ಆಗಿದ್ದು, ಇದರಲ್ಲಿ 508 ಪುರುಷ ಅಭ್ಯರ್ಥಿಗಳು, 117 ಮಹಿಳೆಯರು ಇದ್ದಾರೆ. ವಿಶೇಷವೆಂದರೆ ಟಾಪ್​ 25ರಲ್ಲಿ 15 ಪುರುಷರು ಹಾಗೂ 10 ಮಹಿಳೆಯರಿದ್ದು, ಮೊದಲ ನಾಲ್ಕು ಸ್ಥಾನ ಮಹಿಳಾ ಅಭ್ಯರ್ಥಿಗಳ ಪಾಲಾಗಿವೆ. ಕರ್ನಾಟಕದ 27 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ABOUT THE AUTHOR

...view details