ಕರ್ನಾಟಕ

karnataka

ಖಲಿಸ್ತಾನಿಗಳ ನಿಯಂತ್ರಣಕ್ಕೆ ಭಾರತ ಆಗ್ರಹ; ಹಿಂಸೆ, ದ್ವೇಷದ ವಿರುದ್ಧ ಕ್ರಮಕ್ಕೆ ಸಿದ್ಧವೆಂದ ಕೆನಡಾ ಪ್ರಧಾನಿ ಟ್ರೂಡೊ

By PTI

Published : Sep 11, 2023, 11:43 AM IST

ಜಿ20 ಶೃಂಗಸಭೆಯ ಬಳಿಕ ಮಾತನಾಡಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, ತಮ್ಮ ದೇಶದಲ್ಲಿ ಹೆಚ್ಚುತ್ತಿರುವ ಖಲಿಸ್ತಾನ್​ ಉಗ್ರ ಚಟುವಟಿಕೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು. ಖಾಲಿಸ್ತಾನ್ ಉಗ್ರವಾದ ಮತ್ತು ವಿದೇಶಿ ಹಸ್ತಕ್ಷೇಪ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅನೇಕ ಬಾರಿ ಚರ್ಚೆ ನಡೆಸಿದ್ದೇನೆ ಎಂದರು.

G20 Summit
'ಹಿಂಸೆ, ದ್ವೇಷದ ವಿರುದ್ಧ ಕ್ರಮ ತೆಗೆದುಕೊಳ್ಳಲು ನಾವು ಯಾವಾಗಲೂ ಸಿದ್ಧ': ಖಾಲಿಸ್ತಾನ್ ವಿಷಯದ ಬಗ್ಗೆ ಕೆನಡಾ ಪ್ರಧಾನಿ ಹೇಳಿದ್ದು ಹೀಗೆ...

ನವದೆಹಲಿ:ಕೆನಡಾದಲ್ಲಿ ಖಾಲಿಸ್ತಾನಿ ಉಗ್ರರು ಭಾರತ ವಿರೋಧಿ ಪ್ರತಿಭಟನೆಗಳನ್ನು ನಡೆಸುತ್ತಿದ್ದು, ಭಾರತೀಯ ರಾಜತಾಂತ್ರಿಕರಿಗೆ ಜೀವ ಬೆದರಿಕೆಗಳನ್ನೂ ಒಡ್ಡುತ್ತಿದ್ದಾರೆ. ಈ ಕುರಿತು ಭಾರತದ ಕಳವಳಕ್ಕೆ ಜಿ20 ಶೃಂಗಸಭೆ ಬಳಿಕ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಪ್ರತಿಕ್ರಿಯಿಸಿದರು. ''ನಮ್ಮ (ಕೆನಡಾ) ದೇಶವು ಶಾಂತಿಯುತ ಪ್ರತಿಭಟನೆಯ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ. ಆದರೆ, ದ್ವೇಷವನ್ನು ಸಹಿಸುವುದಿಲ್ಲ. ದ್ವೇಷದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನಾವು ಸಿದ್ಧರಿದ್ದೇವೆ'' ಎಂದು ಹೇಳಿದ್ದಾರೆ.

ಜಿ20 ಶೃಂಗಸಭೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಟ್ರೂಡೊ ಮಾತುಕತೆ ನಡೆಸಿದರು. ನಂತರ, ಮಾಧ್ಯಮಗಳೊಂದಿಗೆ ಮಾತನಾಡುತ್ತಾ, "ಈ ವಿಷಯಗಳ ಕುರಿತು ನಾವು ಹಲವಾರು ವರ್ಷಗಳಿಂದ ಮೋದಿ ಅವರೊಂದಿಗೆ ಹಲವು ಸುತ್ತಿನ ಚರ್ಚೆಗಳನ್ನು ನಡೆಸಿದ್ದೇವೆ. ಕೆನಡಾ ಯಾವಾಗಲೂ ದ್ವೇಷದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಿದ್ಧವಿದೆ" ಎಂದರು. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಂತಿಯುತ ಪ್ರತಿಭಟನೆಯ ಸ್ವಾತಂತ್ರ್ಯವನ್ನು ಕೆನಡಾ ರಕ್ಷಿಸುತ್ತದೆ. ಅದು ನಮಗೆ ಅತ್ಯಂತ ಪ್ರಮುಖವಾಗಿದೆ. ಆದರೆ, ಹಿಂಸೆಯನ್ನು ನಿಲ್ಲಿಸಲು ಮತ್ತು ದ್ವೇಷದ ವಿರುದ್ಧ ಚಟುವಟಿಕೆಗಳನ್ನು ಹತ್ತಿಕ್ಕಲು ನಾವು ಯಾವಾಗಲೂ ಬದ್ಧ'' ಎಂಬ ಭರವಸೆ ನೀಡಿದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ ಟ್ರುಡೊ ಅವರೊಂದಿಗಿನ ಮಾತುಕತೆಯಲ್ಲಿ ಮೋದಿ ಭಾರತ-ಕೆನಡಾ ಬಾಂಧವ್ಯದ ಪ್ರಗತಿಗೆ ಪರಸ್ಪರ ಗೌರವ ಮತ್ತು ನಂಬಿಕೆ ಆಧಾರಿತ ಸಂಬಂಧ ಅತ್ಯಗತ್ಯ ಎಂದು ಪ್ರಸ್ತಾಪಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ.

ಬೆದರಿಕೆ ಎದುರಿಸಲು ಉಭಯ ದೇಶಗಳ ಸಹಕಾರ ಅಗತ್ಯ:"ಕೆನಡಾದಲ್ಲಿ ಭಾರತ ವಿರೋಧಿ ಚಟುವಟಿಕೆಗಳನ್ನು ಮುಂದುವರೆಸುವ ಬಗ್ಗೆ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಖಲಿಸ್ತಾನಿಗಳು ಪ್ರತ್ಯೇಕತಾವಾದವನ್ನು ಉತ್ತೇಜಿಸುತ್ತಿದ್ದಾರೆ. ಭಾರತೀಯ ರಾಜತಾಂತ್ರಿಕರ ವಿರುದ್ಧ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ. ರಾಜತಾಂತ್ರಿಕ ಕಚೇರಿಯ ಆವರಣಗಳನ್ನು ಹಾನಿಗೊಳಿಸುತ್ತಿದ್ದಾರೆ. ಕೆನಡಾದಲ್ಲಿರುವ ಭಾರತೀಯ ಸಮುದಾಯ ಮತ್ತು ಧಾರ್ಮಿಕ ಸ್ಥಳಗಳಿಗೆ ಬೆದರಿಕೆ ಹಾಕುತ್ತಿದ್ದಾರೆ" ಎಂದು ಎಂಇಎ ಹೇಳಿದೆ. ''ಸಂಘಟಿತ ಅಪರಾಧ, ಡ್ರಗ್ಸ್​ ಜಾಲಗಳು ಮತ್ತು ಮಾನವ ಕಳ್ಳಸಾಗಣೆಯೊಂದಿಗೆ ಇಂತಹ ದುಷ್ಟ ಶಕ್ತಿಗಳ ನಂಟು ಕೆನಡಾಕ್ಕೂ ಕಳವಳಕಾರಿ. ಅಂತಹ ಬೆದರಿಕೆಗಳನ್ನು ಎದುರಿಸಲು ಉಭಯ ದೇಶಗಳ ಸಹಕಾರ ಅಗತ್ಯ" ಎಂದು ಎಂಇಎ ಹೇಳಿಕೆಯಲ್ಲಿ ತಿಳಿಸಿದೆ.

ಅಸಾಧಾರಣ ಆರ್ಥಿಕತೆ ಹೊಂದಿರುವ ಭಾರತ- ಟ್ರೂಡೊ:ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತನಾಡಿದ ಟ್ರೂಡೊ, "ಭಾರತವು ವಿಶ್ವದಲ್ಲಿ ಅಸಾಧಾರಣವಾದ ಪ್ರಮುಖ ಆರ್ಥಿಕತೆಯನ್ನು ಹೊಂದಿದೆ. ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವುದರಿಂದ ಹಿಡಿದು, ನಾಗರಿಕರ ಬೆಳವಣಿಗೆ ಮತ್ತು ಸಮೃದ್ಧಿಯನ್ನು ಸೃಷ್ಟಿಸುವವರೆಗೆ ಎಲ್ಲದರಲ್ಲೂ ಕೆನಡಾಕ್ಕೆ ಭಾರತ ಪ್ರಮುಖ ಪಾಲುದಾರ ಎಂದು ನಾವು ಗುರುತಿಸುತ್ತೇವೆ. ಭಾರತದ ಹಲವು ಕಾರ್ಯಗಳು ಕೆನಡಾದ ಜೊತೆಗೆ ಮುನ್ನಡೆಯುತ್ತಿವೆ. ನಾವು ಅದನ್ನು ಮತ್ತಷ್ಟು ಮುಂದುವರಿಸಲು ಬಯತ್ತೇವೆ'' ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಪಾಶ್ಚಿಮಾತ್ಯ ಶಕ್ತಿಗಳು ಜಿ20 ಕಾರ್ಯಸೂಚಿಯನ್ನು 'ಉಕ್ರೇನೀಕರಣ' ಮಾಡುವಲ್ಲಿ ವಿಫಲ: ಭಾರತವನ್ನು ಶ್ಲಾಘಿಸಿದ ರಷ್ಯಾ

ABOUT THE AUTHOR

...view details