ಕರ್ನಾಟಕ

karnataka

ಉಕ್ಕು ಕಂಪನಿಗೆ ಸಂಬಂಧಿಸಿದಂತೆ ಚೆನ್ನೈನ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಐಟಿ ದಾಳಿ

By ETV Bharat Karnataka Team

Published : Oct 18, 2023, 2:00 PM IST

ಕೆಲವು ಖಾಸಗಿ ಉಕ್ಕಿನ ಗೋದಾಮುಗಳಲ್ಲಿ ತೆರಿಗೆ ವಂಚನೆ ಆರೋಪದಡಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

IT Raids
ಐಟಿ ದಾಳಿ

ಚೆನ್ನೈ (ತಮಿಳುನಾಡು): ಬುಧವಾರ ಬೆಳಗ್ಗೆಯಿಂದಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮಿಳುನಾಡಿನ 20ಕ್ಕೂ ಹೆಚ್ಚು ಸ್ಥಳಗಳಿಗೆ ದಾಳಿ ನಡೆಸಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಚೆನ್ನೈನ ಉಕ್ಕು ತಯಾರಿಕಾ ಕಂಪನಿ ಹಾಗೂ ಕಂಪನಿ ಮಾಲೀಕರ ಮನೆ ಹಾಗೂ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಮೊದಲ ಹಂತದ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಚೆನ್ನೈನ ಥೌಸಂಡ್ ಲೈಟ್ ಪ್ರದೇಶದಲ್ಲಿರುವ ಸ್ಟೀಲ್ ತಯಾರಿಕಾ ಕಂಪನಿಯೊಂದರ ಕಚೇರಿ ಹಾಗೂ ಚೆನ್ನೈನ ಸೌಕಾರ್‌ಪೇಟ್‌ನ ಸ್ಟಾರ್ಟನ್ ಮುತ್ತಯ್ಯ ಮುದಲಿ ಸ್ಟ್ರೀಟ್‌ನಲ್ಲಿರುವ ಉದ್ಯಮಿಯೊಬ್ಬರ ಮನೆಯಲ್ಲೂ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಅದೇ ರೀತಿ ಮಾಧವರಂ ನಟರಾಜ್ ನಗರ, ತಾಂಬರಂ, ಕುಂದ್ರತ್ತೂರ್, ಎಗ್ಮೋರ್, ಮನ್ನಾಡಿ, ಉತ್ತರ ಚೆನ್ನೈ ಮತ್ತಿತರೆಡೆ ಖಾಸಗಿ ಗೋದಾಮಿನಲ್ಲಿ ತೆರಿಗೆ ವಂಚನೆ ಆರೋಪದಡಿ ಈ ದಾಳಿ ನಡೆದಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.

ಇವುಗಳ ಹಿಂದೆ ಯಾವುದಾದರೂ ರಾಜಕೀಯ ವ್ಯಕ್ತಿಗಳ ಸಂಬಂಧವಿದೆಯಾ ಎಂಬುದರ ಬಗ್ಗೆ ಮುಂದಿನ ಹಂತದಲ್ಲಿ ಮಾಹಿತಿ ಹೊರಬೀಳಲಿದೆ. ಯಾವ ಆಧಾರದ ಮೇಲೆ ಈ ದಾಳಿ ನಡೆಸಲಾಗಿದೆ, ಎಷ್ಟು ಕಡೆ ನಡೆಸಲಾಗಿದೆ ಎಂಬ ಮಾಹಿತಿಯನ್ನು ನಂತರ ಬಿಡುಗಡೆ ಮಾಡಲಾಗುವುದು ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:₹200 ಕೋಟಿ ಮೌಲ್ಯದ ಔಷಧ ಕಳ್ಳಸಾಗಣೆ ಪ್ರಕರಣ: ಮುಂಬೈನ 9 ಕಡೆ ಇಡಿ ದಾಳಿ

ಇತ್ತೀಚೆಗೆ ಬೆಂಗಳೂರಿನಲ್ಲಿ ಗುತ್ತಿಗೆದಾರರು, ಬಿಲ್ಡರ್​ಗಳು ಸೇರಿ ಹಲವರ ಮೇಲೆ ಸತತ ದಾಳಿ ನಡೆಸಿತ್ತು. ಈ ದಾಳಿ ವೇಳೆ 95 ಕೋಟಿಗೂ ಹೆಚ್ಚು ನಗದು ಪತ್ತೆಯಾಗಿತ್ತು. ಅಷ್ಟೇ ಅಲ್ಲ ಅಪಾರ ಪ್ರಮಾಣದ ಆಸ್ತಿ- ಪಾಸ್ತಿಗಳನ್ನು ಪತ್ತೆ ಹಚ್ಚಿತ್ತು.

ಮತ್ತೊಂದು ಕಡೆ ಮಹಾರಾಷ್ಟ್ರ ರಾಜಧಾನಿ ಮುಂಬೈನಿಂದ ವಿದೇಶಗಳಿಗೆ ಸುಮಾರು 200 ಕೋಟಿ ರೂ ಮೌಲ್ಯದ ಔಷಧ ಕಳ್ಳಸಾಗಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ದಾಳಿ ಮಾಡಿ ಪರಿಶೀಲನೆ ನಡೆಸಿತ್ತು. ಈ ಸಂಬಂಧ ಕೆಲವರಿಗೆ ಸಮನ್ಸ್​ ಕೂಡ ಜಾರಿ ಮಾಡಲಾಗಿದೆ.

ಪ್ರಮುಖ ಔಷಧಿ ದಂಧೆಕೋರನಾಗಿ ಗುರುತಿಸಿಕೊಂಡಿರುವ ಕೈಲಾಸ್ ರಾಜಪುತ್ ಸಹಚರ ಅಲಿ ಅಸಗರ್​​ ಶಿರಾಝಿ ಮುಂಬೈನಿಂದ ಯುರೋಪ್​ ಹಾಗೂ ಆಸ್ಟ್ರೇಲಿಯಾಗೆ ಅಪಾರ ಪ್ರಮಾಣದ ಔಷಧವನ್ನು ಅಕ್ರಮವಾಗಿ ರವಾನಿಸಿರುವ ಆರೋಪ ಎದುರಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ಈತನನ್ನು ಮುಂಬೈ ಪೊಲೀಸ್​ ಇಲಾಖೆಯ ಸುಲಿಗೆ ನಿಗ್ರಹ ವಿಭಾಗದ ಅಧಿಕಾರಿಗಳು ಬಂಧಿಸಿದ್ದರು. ಇದೀಗ ಇಡಿ ಅಧಿಕಾರಿಗಳು ಮುಂಬೈನ ಏಳು ಪ್ರದೇಶಗಳಲ್ಲಿ ದಾಳಿ ಮಾಡಿ ಶೋಧ ಕೈಗೊಂಡಿದ್ದರು.

ABOUT THE AUTHOR

...view details