ಕರ್ನಾಟಕ

karnataka

ಭಾರತೀಯ ಪ್ರವಾಸಿಗರಿಗೆ ಖುಷಿ ಸುದ್ದಿ; ಈ ದೇಶಕ್ಕೆ ಹೋಗಲು ನಿಮಗೆ ವೀಸಾ ಬೇಕಿಲ್ಲ!

By PTI

Published : Oct 31, 2023, 5:06 PM IST

ಭಾರತೀಯ ನಾಗರಿಕರು ಇದೇ ನವೆಂಬರ್ 10ರಿಂದ ತನ್ನ ದೇಶಕ್ಕೆ ವೀಸಾ ಇಲ್ಲದೆ ಪ್ರಯಾಣಿಸಬಹುದು ಎಂದು ___ ದೇಶ ಹೇಳಿದೆ.

Indians can visit Thailand visa-free
Indians can visit Thailand visa-free

ನವದೆಹಲಿ: ಭಾರತೀಯರು ವೀಸಾ ಇಲ್ಲದೆ ತನ್ನ ದೇಶಕ್ಕೆ ಭೇಟಿ ನೀಡಬಹುದು ಎಂದು ಥಾಯ್ಲೆಂಡ್ ಹೇಳಿದೆ. ಭಾರತೀಯರು ನವೆಂಬರ್ 10, 2023 ರಿಂದ ಮೇ 10, 2024 ರವರೆಗೆ ವೀಸಾ ಇಲ್ಲದೆ ಥಾಯ್ಲೆಂಡ್‌ಗೆ ಪ್ರವಾಸ ಕೈಗೊಳ್ಳಬಹುದು ಮತ್ತು ಅಲ್ಲಿ 30 ದಿನಗಳವರೆಗೆ ಉಳಿಯಬಹುದು ಎಂದು ಥಾಯ್ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

ತನ್ನ ದೇಶಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಥಾಯ್ಲೆಂಡ್ ಈಗ ಭಾರತ ಮತ್ತು ತೈವಾನ್ ನಾಗರಿಕರಿಗೆ ವೀಸಾರಹಿತ ಪ್ರವಾಸದ ಸೌಲಭ್ಯ ನೀಡುತ್ತಿದೆ. ಇದೇ ಸೆಪ್ಟೆಂಬರ್‌ನಲ್ಲಿ ಚೀನೀ ಪ್ರಜೆಗಳಿಗೂ ವೀಸಾರಹಿತ ಪ್ರವಾಸವನ್ನು ಥಾಯ್ಲೆಂಡ್ ಘೋಷಿಸಿತ್ತು. ಜಗತ್ತು ಸುತ್ತಬಯಸುವ ಭಾರತೀಯರಿಗೆ ಈ ವಾರ ಇದು ಎರಡನೇ ಶುಭ ಸುದ್ದಿ.

ಮಾರ್ಚ್ 31, 2024 ರವರೆಗೆ ಭಾರತ, ಚೀನಾ ಮತ್ತು ರಷ್ಯಾ ಸೇರಿದಂತೆ ಏಳು ದೇಶಗಳ ಪ್ರವಾಸಿಗರು ವೀಸಾ ಇಲ್ಲದೆ ತನ್ನ ದೇಶಕ್ಕೆ ಬರಬಹುದು ಎಂದು ಶ್ರೀಲಂಕಾ ಇತ್ತೀಚೆಗೆ ಘೋಷಿಸಿದೆ. ಕೋವಿಡ್ ನಂತರ, ಭಾರತೀಯ ಪ್ರವಾಸಿಗರನ್ನು ಸೆಳೆಯಲು ವಿಶ್ವದ ಹಲವಾರು ದೇಶಗಳ ಪ್ರವಾಸೋದ್ಯಮ ಇಲಾಖೆಗಳು ಆಕರ್ಷಕ ಆಫರ್​ಗಳನ್ನು ನೀಡುತ್ತಿವೆ.

ಈ ವರ್ಷ 12 ಲಕ್ಷ ಭಾರತೀಯ ಪ್ರವಾಸಿಗರು ಥಾಯ್ಲೆಂಡ್‌​ಗೆ ಭೇಟಿ ನೀಡಿರುವುದು ಗಮನಾರ್ಹ. ಮಲೇಷ್ಯಾ, ಚೀನಾ ಮತ್ತು ದಕ್ಷಿಣ ಕೊರಿಯಾದ ನಂತರ ಭಾರತವು ಈ ವರ್ಷ ಥಾಯ್ಲೆಂಡ್​ ಪ್ರವಾಸೋದ್ಯಮದ ನಾಲ್ಕನೇ ಅತಿದೊಡ್ಡ ಮೂಲ ಮಾರುಕಟ್ಟೆಯಾಗಿದೆ.

2011ರಲ್ಲಿ 1.4 ಕೋಟಿ ಇದ್ದ ವಿದೇಶ ಪ್ರವಾಸ ಕೈಗೊಳ್ಳುವ ಭಾರತೀಯರ ಸಂಖ್ಯೆ 2019ರಲ್ಲಿ 2.7 ಕೋಟಿಗೆ ಏರಿದೆ ಎಂದು ಭಾರತ ಸರ್ಕಾರದ ಅಂಕಿ ಅಂಶಗಳು ಹೇಳಿವೆ. ನಂತರ ಕೋವಿಡ್​ ಅವಧಿಯ ಎರಡು ವರ್ಷಗಳಲ್ಲಿ ಪ್ರಯಾಣದ ನಿರ್ಬಂಧಗಳಿಂದ ವಿದೇಶಕ್ಕೆ ಪ್ರವಾಸ ಮಾಡುವವರ ಸಂಖ್ಯೆ ಕಡಿಮೆಯಾಗಿತ್ತು. ಆದರೆ 2022ರಲ್ಲಿ ಈ ಸಂಖ್ಯೆ ಮತ್ತೆ 2.1 ಕೋಟಿಗೆ ಏರಿಕೆಯಾಗಿದೆ.

ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಪ್ರಕಾರ ಕಳೆದ ವರ್ಷ ಭಾರತೀಯರು ಪ್ರವಾಸ ಕೈಗೊಂಡ ಅಗ್ರ 10 ದೇಶಗಳ ಪಟ್ಟಿ ಹೀಗಿದೆ: ಯುಎಇ (ಸುಮಾರು 59 ಲಕ್ಷ ಅಥವಾ 28%); ಸೌದಿ ಅರೇಬಿಯಾ (24 ಲಕ್ಷ / 11.5%); ಯುಎಸ್ಎ (17 ಲಕ್ಷ / 8%); ಸಿಂಗಾಪುರ (9.9 ಲಕ್ಷ / 4.7%); ಥೈಲ್ಯಾಂಡ್ (9.3 ಲಕ್ಷ / 4.4%); ಯುಕೆ (9.2 ಲಕ್ಷ / 4.3%); ಕತಾರ್ (8.7 ಲಕ್ಷ / 4.1%); ಕುವೈತ್ (8.3 ಲಕ್ಷ / 3.9%); ಕೆನಡಾ (7.7 ಲಕ್ಷ / 3.6%) ಮತ್ತು ಒಮಾನ್ (7.2 ಲಕ್ಷ / 3.4%).

ಇದನ್ನೂ ಓದಿ: ವಿಶ್ವದಲ್ಲಿ ಚಿನ್ನಕ್ಕೆ ಬೇಡಿಕೆ ಕುಸಿತ; ಭಾರತದಲ್ಲಿ ಶೇ 10ರಷ್ಟು ಹೆಚ್ಚಳ!

ABOUT THE AUTHOR

...view details