ಕರ್ನಾಟಕ

karnataka

ಪಿಎಸ್​ಐ ನೇಮಕಾತಿ ಹಗರಣ.. 15ರಿಂದ 20 ಲಕ್ಷಕ್ಕೆ ಪ್ರಶ್ನೆ ಪತ್ರಿಕೆ ಬಿಕರಿ: ಜಾರ್ಜ್​ಶೀಟ್​ ಸಲ್ಲಿಸಿದ ಸಿಬಿಐ

By

Published : Nov 13, 2022, 8:53 PM IST

cbi-files-chargesheet-in-kashmir-police-recruitment-scam
ಕಾಶ್ಮೀರದಲ್ಲಿ ಪಿಎಸ್​ಐ ನೇಮಕಾತಿ ಹಗರಣ.. 15ರಿಂದ 20 ಲಕ್ಷಕ್ಕೆ ಪ್ರಶ್ನೆ ಪತ್ರಿಕೆ ಮಾರಾಟ: ಜಾರ್ಜ್​ಶೀಟ್​ ಸಲ್ಲಿಸಿದ ಸಿಬಿಐ

ಜಮ್ಮು ಮತ್ತು ಕಾಶ್ಮೀರ ಪಿಎಸ್​ಐ ನೇಮಕಾತಿ ಹಗರಣದಲ್ಲಿ ನವದೆಹಲಿಯ ಮುದ್ರಣಾಲಯದ ಉದ್ಯೋಗಿಯಿಂದಲೇ ಪ್ರಶ್ನೆ ಪತ್ರಿಕೆ ಪಡೆದು, ಸೋರಿಕೆ ಮಾಡಿರುವ ಅಂಶ ಬಯಲಾಗಿದೆ.

ಶ್ರೀನಗರ ( ಜಮ್ಮು ಮತ್ತು ಕಾಶ್ಮೀರ): ಕರ್ನಾಟಕದಲ್ಲಿ ನಡೆದಿದ್ದ ಪಿಎಸ್​ಐ ನೇಮಕಾತಿ ಹಗರಣ ದೇಶಾದ್ಯಂತ ಸದ್ದು ಮಾಡಿತ್ತು. ಈ ಪ್ರಕರಣದಲ್ಲಿ ನೇಮಕಾತಿ ವಿಭಾಗದ ಎಡಿಜಿಪಿ ಸೇರಿದಂತೆ ಹಿರಿಯ ಅಧಿಕಾರಿಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿರುವ ಆರೋಪಿಗಳು ಮತ್ತು ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದ ಅಭ್ಯರ್ಥಿಗಳು ಸದ್ಯ ಕಂಬಿ ಎಣಿಸುತ್ತಿದ್ದಾರೆ. ಈ ನಡುವೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್​ಐ) ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಬಿಎಸ್‌ಎಫ್‌ನ ಮಾಜಿ ಕಮಾಂಡೆಂಟ್ ಸೇರಿದಂತೆ 24 ಆರೋಪಿಗಳ ವಿರುದ್ಧ ಸಿಬಿಐ ಆರೋಪಪಟ್ಟಿ (ಜಾರ್ಜ್​ಶೀಟ್) ಸಲ್ಲಿಸಿದೆ. ಅಲ್ಲದೇ, ಸಿಆರ್​ಪಿಎಫ್​ ಅಧಿಕಾರಿಗಳು, ಒಬ್ಬ ಶಿಕ್ಷಕ ಮತ್ತು ಇತರ ಆರೋಪಿಗಳನ್ನೂ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಇಲಾಖೆಯ 1,200 ಸಬ್ ಇನ್ಸ್‌ಪೆಕ್ಟರ್​ಗಳ ನೇಮಕಾತಿಗಾಗಿ ಈ ವರ್ಷದ ಮಾರ್ಚ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಸೇವೆಗಳ ಆಯ್ಕೆ ಮಂಡಳಿ (ಜೆಕೆಎಸ್​ಎಸ್​ಬಿ) ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಅಕ್ರಮಗಳ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಆಗಸ್ಟ್‌ನಲ್ಲಿ ಸಿಬಿಐ ತನಿಖೆಗೆ ವಹಿಸಲಾಗಿತ್ತು. ನಂತರ ಸಿಬಿಐ 77 ಸ್ಥಳಗಳಲ್ಲಿ ದಾಳಿ ಮಾಡಿ ತನಿಖೆ ನಡೆಸಿತ್ತು.

ಈಗ ಸಲ್ಲಿಸಿರುವ ಚಾರ್ಜ್‌ಶೀಟ್‌ನ ಪ್ರಕಾರ ಈ ಹಗರಣದ ಮಾಸ್ಟರ್‌ಮೈಂಡ್ ಹರಿಯಾಣದ ರೇವಾರಿಯ ಯತಿನ್ ಯಾದವ್ ಎಂಬುವವರು ಆಗಿದ್ದಾರೆ. ನವದೆಹಲಿಯ ಮುದ್ರಣಾಲಯದ ಉದ್ಯೋಗಿಯಿಂದಲೇ ಪ್ರಶ್ನೆ ಪತ್ರಿಕೆಗಳನ್ನು ಪಡೆದಿರುವ ಉಲ್ಲೇಖವಾಗಿದೆ. ಅಲ್ಲದೇ, ಆರೋಪಿ ಯತಿನ್ ಯಾದವ್ ಇತರ ವ್ಯಕ್ತಿಗಳ ಮೂಲಕ ಅಭ್ಯರ್ಥಿಗಳನ್ನು ಸಂಪರ್ಕಿಸಿ, ನಂತರ 15ರಿಂದ 20 ಲಕ್ಷ ರೂಪಾಯಿಗೆ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡಿರುವ ಬಗ್ಗೆಯೂ ಜಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಜೊತೆಗೆ ಈ ತನಿಖೆ ನಡೆಯುತ್ತಿರುವಾಗಲೇ 20 ಮಂದಿಯನ್ನು ಬಂಧಿಸಲಾಗಿದೆ ಎಂದು ಸಿಬಿಐ ತಿಳಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಜೆಕೆಎಸ್​ಎಸ್​ಬಿ ಯಾವುದೇ ಅಧಿಕಾರಿಗಳು ಭಾಗಿಯಾಗಿರುವುದು ಕಂಡುಬಂದಲ್ಲಿ ಪೂರಕ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದೂ ಸಿಬಿಐ ಹೇಳಿದೆ.

ಇದನ್ನೂ ಓದಿ:13 ದಿನಗಳ ಹಿಂದೆ ಪ್ರಧಾನಿ ಮೋದಿ ಉದ್ಘಾಟಿಸಿದ್ದ ರೈಲು ಮಾರ್ಗದ ಸೇತುವೆ ಸ್ಫೋಟಿಸಲು ಯತ್ನ

ABOUT THE AUTHOR

...view details