13 ದಿನಗಳ ಹಿಂದೆ ಪ್ರಧಾನಿ ಮೋದಿ ಉದ್ಘಾಟಿಸಿದ್ದ ರೈಲು ಮಾರ್ಗದ ಸೇತುವೆ ಸ್ಫೋಟಿಸಲು ಯತ್ನ

author img

By

Published : Nov 13, 2022, 6:08 PM IST

attempt-to-blow-up-bridge-on-udaipur-ahmedabad-railway-line-inaugurated-by-pm

ರಾಜಸ್ಥಾನದ ಉದಯ್‌ಪುರ ಮತ್ತು ಗುಜರಾತ್​ನ ಅಹಮದಾಬಾದ್ ನಡುವಿನ ರೈಲು ಮಾರ್ಗದ ಸೇತುವೆಯಲ್ಲಿ ಸ್ಫೋಟದಿಂದಾಗಿ ಹಳಿಗಳ ಮೇಲೆ ಬಿರುಕು ಉಂಟಾಗಿದೆ.

ಜೈಪುರ (ರಾಜಸ್ಥಾನ): ಕಳೆದ 13 ದಿನಗಳ ಹಿಂದೆಯಷ್ಟೇ ಪ್ರಧಾನಿ ಮೋದಿ ಉದ್ಘಾಟಿಸಿದ್ದ ರಾಜಸ್ಥಾನದ ಉದಯ್‌ಪುರ ಮತ್ತು ಗುಜರಾತ್​ನ ಅಹಮದಾಬಾದ್ ನಡುವಿನ ರೈಲು ಮಾರ್ಗದ ಸೇತುವೆಯನ್ನು ಕಿಡಿಗೇಡಿಗಳು ಸ್ಫೋಟಿಸಲು ಯತ್ನಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.

ಈ ಸೇತುವೆಯನ್ನು ಸ್ಫೋಟಿಸಲು ಮತ್ತು ರೈಲ್ವೆ ಹಳಿಯನ್ನು ನಾಶಪಡಿಸಲು ದುಷ್ಕರ್ಮಿಗಳು ಸಂಚು ರೂಪಿಸಿದ್ದರು ಎಂದು ಮೂಲಗಳು ತಿಳಿಸಿವೆ. ರೈಲು ಮಾರ್ಗದ ಸೇತುವೆಯಲ್ಲಿ ಸ್ಫೋಟದಿಂದಾಗಿ ಹಳಿಗಳ ಮೇಲೆ ಬಿರುಕು ಉಂಟಾಗಿದೆ. ಅಲ್ಲದೇ, ಈ ವೇಳೆ ಸ್ಥಳೀಯರಿಗೆ ಭಾರಿ ಸದ್ದು ಕೇಳಿ ಬಂದಿದೆ. ಸ್ಥಳದಲ್ಲಿ ಸ್ಫೋಟಕಗಳು ಸಹ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

ಅಲ್ಲದೇ, ಈ ಸ್ಫೋಟಕ್ಕೂ ನಾಲ್ಕು ಗಂಟೆಗಳ ಮೊದಲು ರೈಲೊಂದು ಇದೇ ಹಳಿಯಲ್ಲಿ ಹಾದು ಹೋಗಿತ್ತು. ಈ ಘಟನೆಯ ನಂತರ ಅಹಮದಾಬಾದ್‌ನಿಂದ ಉದಯಪುರಕ್ಕೆ ಬರುತ್ತಿದ್ದ ರೈಲನ್ನು ಡುಂಗರ್‌ಪುರ ಸಮೀಪದಲ್ಲಿ ನಿಲ್ಲಿಸಲಾಗಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ತಾರಾಚಂದ್ ಮೀನಾ ಮಾತನಾಡಿ, ಸೇತುವೆಯನ್ನು ಡಿಟೋನೇಟರ್‌ಗಳಿಂದ ಸ್ಫೋಟಿಸುವ ಸಂಚು ನಡೆದಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ವಿಸ್ತೃತ ತನಿಖೆಗೆ ಪೊಲೀಸ್ ಮಹಾನಿರ್ದೇಶಕ ಉಮೇಶ್ ಮಿಶ್ರಾ ಅವರಿಗೆ ಸೂಚನೆ ನೀಡಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಇತ್ತ, ರಾಜಸ್ಥಾನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬಾಂಬ್ ಸ್ಕ್ವಾಡ್ ಮತ್ತು ಫೊರೆನ್ಸಿಕ್ ತಂಡಗಳು ಸಹ ಸ್ಥಳಕ್ಕೆ ಧಾವಿಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿವೆ. ಈ ಸಂಚಿನಲ್ಲಿ ಭಯೋತ್ಪಾದಕರ ಕೈವಾಡ ಬಗ್ಗೆ ಎಟಿಎಸ್ ತನಿಖೆ ನಡೆಸುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಭಾರಿ ಯೋಜನೆ ರೂಪಿಸಿಯೇ ಈ ಸ್ಫೋಟ ನಡೆಸಲಾಗಿದೆ ಎಂದು ತೋರುತ್ತಿದೆ ಎಂದು ಉದಯಪುರ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಶರ್ಮಾ ಹೇಳಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್‌ ಮಾಡಿದ್ದು. ಉದಯ್‌ಪುರ-ಅಹಮದಾಬಾದ್ ರೈಲು ಮಾರ್ಗದ ಓಡಾ ರೈಲ್ವೆ ಸೇತುವೆಯ ಮೇಲೆ ಹಳಿಗಳಿಗೆ ಹಾನಿಯಾದ ಘಟನೆಯು ಆತಂಕಕಾರಿಯಾಗಿದೆ. ಹಿರಿಯ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕೃತ್ಯದ ನಿಖರ ತನಿಖೆ ನಡೆಸುವಂತೆ ಪೊಲೀಸರಿಗೆ ಡಿಜಿ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಏರ್‌ಪೋರ್ಟ್​ನಲ್ಲಿ ಸೊಂಟಕ್ಕೆ ಸುತ್ತಿಕೊಂಡು ಸಾಗಿಸುತ್ತಿದ್ದ 32 ಕೋಟಿ ಮೌಲ್ಯದ 61 ಕೆಜಿ ಚಿನ್ನ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.