ಕರ್ನಾಟಕ

karnataka

ಅಸ್ಸೋಂನಲ್ಲಿ ಬಾಲ್ಯ ವಿವಾಹ ತಡೆ ಕಾರ್ಯಾಚರಣೆ: 2441 ಜನರ ಬಂಧನ

By

Published : Feb 6, 2023, 3:55 PM IST

ಇಡೀ ಅಸ್ಸೋಂ ರಾಜ್ಯಾದ್ಯಂತ ಬಾಲ್ಯ ವಿವಾಹ ತಡೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಾಲ್ಯವಿವಾಹ ತಡೆ ಕಾರ್ಯಾಚರಣೆ ಅಡಿ ಈವರೆಗೆ 2,441 ಜನರನ್ನು ಬಂಧಿಸಲಾಗಿದೆ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

Assam: Crackdown on child marriage continues, total arrests 2,441
Assam: Crackdown on child marriage continues, total arrests 2,441

ಗುವಾಹಟಿ: ಅಸ್ಸೋಂನಲ್ಲಿ ಬಾಲ್ಯ ವಿವಾಹ ತಡೆ ಕಾರ್ಯಾಚರಣೆ ಸೋಮವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಈವರೆಗೆ ಒಟ್ಟು 2,441 ಮಂದಿಯನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ರಾಜ್ಯಾದ್ಯಂತ ದಾಖಲಾಗಿರುವ 4,074 ಎಫ್‌ಐಆರ್‌ಗಳನ್ನು ಆಧರಿಸಿ ಈ ಬಂಧನಗಳನ್ನು ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದುವರೆಗೆ ಒಟ್ಟು ಬಂಧನ - 2441. ಅಸ್ಸೋಂನಲ್ಲಿ ಬಾಲ್ಯವಿವಾಹದ ವಿರುದ್ಧ ಶಿಸ್ತುಕ್ರಮ ಮುಂದುವರಿದಿದೆ ಎಂದು ಶರ್ಮಾ ಟ್ವೀಟ್ ಮಾಡಿದ್ದಾರೆ. 2026ರ ವಿಧಾನಸಭಾ ಚುನಾವಣೆವರೆಗೂ ಈ ಅಭಿಯಾನ ಮುಂದುವರಿಯಲಿದೆ ಎಂದು ಅವರು ಈ ಹಿಂದೆ ಪ್ರತಿಪಾದಿಸಿದ್ದರು.

ಬಾಲ್ಯವಿವಾಹ ವಿರುದ್ಧದ ಕಾರ್ಯಾಚರಣೆಗೆ ಪ್ರತಿಪಕ್ಷಗಳು ಟೀಕೆ ಮಾಡುತ್ತಿದ್ದು, ಸಂತ್ರಸ್ತ ಕುಟುಂಬಗಳು ವಿವಿಧೆಡೆ ಪ್ರತಿಭಟನೆ ನಡೆಸಿವೆ. ಭಾನುವಾರ ಸಂಜೆಯವರೆಗೆ, ಬಿಸ್ವನಾಥ್ ಜಿಲ್ಲೆಯಲ್ಲಿ 139 ಜನರನ್ನು ಬಂಧಿಸಲಾಗಿದೆ. ಬಾರ್ಪೇಟಾದಲ್ಲಿ 130 ಮತ್ತು ಧುಬ್ರಿಯಲ್ಲಿ 126 ಜನರನ್ನು ಬಂಧಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಧುಬ್ರಿಯಲ್ಲಿ ಬಾಲ್ಯ ವಿವಾಹಗಳ ವಿರುದ್ಧ ಅತಿ ಹೆಚ್ಚು 374 ಎಫ್‌ಐಆರ್‌ ದಾಖಲಿಸಲಾಗಿದೆ. ಹೋಜೈನಲ್ಲಿ 255 ಮತ್ತು ಮೊರಿಗಾಂವ್​ನಲ್ಲಿ 224 ಪ್ರಕರಣ ದಾಖಲಾಗಿವೆ. ಬಂಧನಕ್ಕೊಳಗಾದವರ ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರು ಪೊಲೀಸ್ ಠಾಣೆಗಳ ಮುಂದೆ ಜಮಾಯಿಸಿ ಬಂಧಿತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.

ಬಾರಾಕ್ ಕಣಿವೆ, ಮೋರಿಗಾಂವ್, ಧುಬ್ರಿ ಮತ್ತು ನಾಗಾಂವ್ ಜಿಲ್ಲೆಗಳಲ್ಲಿ ಸಂತ್ರಸ್ತ ಕುಟುಂಬಗಳಿಂದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಏತನ್ಮಧ್ಯೆ, ಕಮ್ರೂಪ್ ಜಿಲ್ಲೆಯ ರಂಗಿಯಾದಲ್ಲಿ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಏಳು ಮಂದಿಗೆ ಜಾಮೀನು ಸಿಕ್ಕಿದೆ. ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM), ರಂಗಿಯಾ ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ನೀಡಿದೆ ಎಂದು ವಕೀಲರು ತಿಳಿಸಿದ್ದಾರೆ. ದಿನದ ಅಂತ್ಯದ ವೇಳೆಗೆ ಇನ್ನೂ ಅನೇಕರಿಗೆ ಜಾಮೀನು ಸಿಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ಅಸ್ಸೋಂ ಸರ್ಕಾರದ ಕ್ರಮಕ್ಕೆ ಓವೈಸಿ ಅಸಮಾಧಾನ:ಬಾಲ್ಯವಿವಾಹ ನಿಷೇಧ ಕಾಯ್ದೆ (ಪಿಸಿಎಂಎ) ಆರೋಪ ಎದುರಿಸುತ್ತಿರುವವರು ಜಾಮೀನು ಪಡೆಯಬಹುದಾದ ಸೆಕ್ಷನ್‌ಗಳ ಅಡಿಯಲ್ಲಿದ್ದಾರೆ. ಆದರೆ ಪೋಕ್ಸೊ ಅಡಿ ಬಂಧಿಸಲ್ಪಟ್ಟವರು ಜಾಮೀನು ರಹಿತ ಆರೋಪಗಳನ್ನು ಎದುರಿಸಬೇಕಾಗುತ್ತದೆ ಎಂದು ಶರ್ಮಾ ಈ ಹಿಂದೆ ಹೇಳಿದ್ದರು. ಕಾರ್ಯಾಚರಣೆಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಬಾಲ್ಯ ವಿವಾಹದ ಸಮಸ್ಯೆಯ ನಿಜವಾಗಿಯೂ ಕಾಳಜಿ ಇದ್ದರೆ, ಅಸ್ಸೋಂ ಸರ್ಕಾರವು ಸಾಕ್ಷರತೆಯ ಮಟ್ಟವನ್ನು ಹೆಚ್ಚಿಸುವತ್ತ ಗಮನ ಹರಿಸಬೇಕಿತ್ತು ಎಂದು ಹೇಳಿದರು.

ಬಾಲ್ಯವಿವಾಹಗಳನ್ನು ನಿಲ್ಲಿಸಬೇಕಾದರೆ ನೀವು ಸಾಕಷ್ಟು ಶಾಲೆಗಳನ್ನು ತೆರೆಯಬೇಕು ಎಂದು ತಜ್ಞರು ಹೇಳಿದ್ದಾರೆ. ಆದರೆ ನೀವು ಅದನ್ನು ಮಾಡಿಲ್ಲ. ನೀವು ಕೆಲವು ರೀತಿಯ ಶಿಕ್ಷಣವನ್ನು ನೀಡುತ್ತಿದ್ದ ಮದರಸಾಗಳನ್ನೂ ಮುಚ್ಚಿದ್ದೀರಿ ಎಂದು ಅವರು ಆರೋಪಿಸಿದರು.

ಮಾನವೀಯ ವಿಧಾನದ ಅಗತ್ಯವೂ ಇದೆ ಎಂದ ಕಾಂಗ್ರೆಸ್​:ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಾನವೀಯ ವಿಧಾನದ ಅಗತ್ಯವಿದೆ ಎಂದು ಅಸ್ಸೋಂ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಬೋರಾ ಹೇಳಿದ್ದಾರೆ. ನಾವು ಬಾಲ್ಯ ವಿವಾಹವನ್ನು ವಿರೋಧಿಸುತ್ತೇವೆ. ಆದರೆ, ಬೆಳೆದ ಮಕ್ಕಳೊಂದಿಗೆ ನೆಲೆಸಿರುವ ಕುಟುಂಬಗಳಿಗೆ ತೊಂದರೆ ನೀಡುವುದರಿಂದ ಏನು ಪ್ರಯೋಜನ? ಇದು ಪ್ರಚಾರದ ಸ್ಟಂಟ್ ಹೊರತು ಬೇರೇನೂ ಅಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: ಸಲಿಂಗ ವಿವಾಹವಾಗಿ ಅಭಿಮಾನಿಗಳ ಎದೆಗೆ ಬೆಂಕಿ ಇಟ್ಟ ವಿಶ್ವವಿಖ್ಯಾತ ಸುಂದರಿಯರು!

ABOUT THE AUTHOR

...view details