ಕರ್ನಾಟಕ

karnataka

ಕೃಷಿ ತ್ಯಾಜ್ಯ ಸುಡುವಿಕೆ ತಕ್ಷಣ ನಿಲ್ಲಿಸಿ: ಸುಪ್ರೀಂ ಕೋರ್ಟ್ ಆದೇಶ

By ETV Bharat Karnataka Team

Published : Nov 7, 2023, 1:58 PM IST

ಕೃಷಿ ತ್ಯಾಜ್ಯ ಸುಡುವಿಕೆಯನ್ನು ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

Agricultural waste burning massacre of people stop immediately; Supreme Court order
Agricultural waste burning massacre of people stop immediately; Supreme Court order

ನವದೆಹಲಿ: ಕೃಷಿತ್ಯಾಜ್ಯ ಸುಡುವ ವಿಷಯದಲ್ಲಿ ಪಂಜಾಬ್ ಹಾಗೂ ಇತರ​ ಸರ್ಕಾರಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್​, ರಾಜ್ಯಗಳ ಹೊಲಗಳಲ್ಲಿ ಕೃಷಿ ತ್ಯಾಜ್ಯ ಸುಡುವಿಕೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಆದೇಶಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಂಟಾಗಿರುವ ಪರಿಸರ ಮಾಲಿನ್ಯಕ್ಕೆ ಕೃಷಿ ತ್ಯಾಜ್ಯ ಸುಡುವಿಕೆಯೇ ಮುಖ್ಯ ಕಾರಣವಾಗಿದ್ದು, ಈ ವಿಚಾರ ರಾಜಕೀಯ ವಸ್ತುವಾಗಬಾರದು ಎಂದು ಕೋರ್ಟ್ ಹೇಳಿದೆ. ದೆಹಲಿಯಲ್ಲಿನ ಪರಿಸರ ಮಾಲಿನ್ಯ ಜನರ ಕಗ್ಗೊಲೆ ಮಾಡುವುದಕ್ಕಿಂತ ಭಿನ್ನವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಮಕ್ಕಳ ಆರೋಗ್ಯ ಕಾಳಜಿಯನ್ನು ಉಲ್ಲೇಖಿಸಿದೆ.

ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠ, ಈ ವಿಷಯ ಎಲ್ಲಾ ಸಮಯದಲ್ಲೂ ರಾಜಕೀಯ ಯುದ್ಧವಾಗಲು ಸಾಧ್ಯವಿಲ್ಲ. ಮತ್ತು ಮಕ್ಕಳು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಒತ್ತಿ ಹೇಳಿತು. ನಾವು ಅದನ್ನು ನಿಲ್ಲಿಸಬೇಕೆಂದು ಬಯಸುತ್ತೇವೆ. ನೀವು ಅದನ್ನು ಹೇಗೆ ಮಾಡುತ್ತೀರಿ ಎಂದು ನಮಗೆ ತಿಳಿದಿಲ್ಲ, ಆದರೆ ಅದು ನಿಲ್ಲಬೇಕು. ಇದಕ್ಕಾಗಿ ತಕ್ಷಣವೇ ನೀವು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ಕೌಲ್ ಹೇಳಿದರು. ಕೃಷಿ ತ್ಯಾಜ್ಯ ಸುಡುವುದನ್ನು ನಿಲ್ಲಿಸಬೇಕಿದೆ, ಆದರೆ ಇದಕ್ಕಾಗಿ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ತೋರುತ್ತದೆ ಎಂದು ಅವರು ಹೇಳಿದರು.

ಇದು ನಿರ್ದಿಷ್ಟ ಬೆಳೆಯ ಸಮಯದ ವಿಚಿತ್ರ ಸಮಸ್ಯೆಯಾಗಿದೆ. ಆದರೆ ಈ ವಿಷಯದಲ್ಲಿ ನ್ಯಾಯಾಲಯದ ಗಂಭೀರತೆ ನಿಮಗಿಲ್ಲವಾಗಿದೆ. ಕೃಷಿ ತ್ಯಾಜ್ಯ ಸುಡುವುದನ್ನು ನೀವು ಹೇಗೆ ನಿಲ್ಲಿಸುತ್ತೀರಿ ಎಂಬುದು ನಮಗೆ ಬೇಕಿಲ್ಲ. ಬಲವಂತದಿಂದಲಾದರೂ ಮಾಡಿ ಅಥವಾ ಅದನ್ನು ಪ್ರೋತ್ಸಾಹಕ ಕ್ರಮಗಳಿಂದಾದರೂ ಮಾಡಿ ಎಂದು ಪಂಜಾಬ್ ಸರ್ಕಾರವನ್ನು ಪ್ರತಿನಿಧಿಸುವ ವಕೀಲರಿಗೆ ನ್ಯಾಯಮೂರ್ತಿ ಕೌಲ್ ಕಟ್ಟುನಿಟ್ಟಾಗಿ ಸೂಚಿಸಿದರು.

ಕೃಷಿ ತ್ಯಾಜ್ಯ ಸುಡುವಿಕೆಯ ಸಮಸ್ಯೆಯನ್ನು ಬೇಗ ಪರಿಹರಿಸಿ, ನ್ಯಾಯಾಲಯಕ್ಕೆ ಈ ವಿಷಯದಲ್ಲಿ ತಾಳ್ಮೆ ಇಲ್ಲ. ಮುಂದಿನ ವರ್ಷ ಈ ಸಮಸ್ಯೆ ಮತ್ತೆ ಕಾಣಿಸಿಕೊಳ್ಳದಂತೆ ಇವತ್ತೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ನ್ಯಾಯಮೂರ್ತಿ ಕೌಲ್ ಹೇಳಿದರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ವಿಪರೀತ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

ದೆಹಲಿ ಮಾಲಿನ್ಯ ಭಾನುವಾರ (ನವೆಂಬರ್ 5) ಸಂಜೆ 4 ಗಂಟೆಗೆ 500ರ ಪ್ರಮಾಣದಲ್ಲಿ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 454ಕ್ಕೆ ಇಳಿದಿತ್ತು. ಇದು ನಗರದ ಗಾಳಿಯ ಗುಣಮಟ್ಟವು ಅತ್ಯಧಿಕ ಮಾಲಿನ್ಯಕರವಾಗಿದೆ ಎಂದರ್ಥ. ಸೋಮವಾರ ಬೆಳಿಗ್ಗೆ 7 ಗಂಟೆಗೆ ಎಕ್ಯೂಐ 440 ಇತ್ತು. 50ಕ್ಕಿಂತ ಕಡಿಮೆ ಎಕ್ಯೂಐ ಮಾತ್ರ ಆರೋಗ್ಯಕರವಾಗಿದೆ.

ಇದನ್ನೂ ಓದಿ: ವಿಪ್ರೊ ಉದ್ಯೋಗಿಗಳಿಗೆ ವಾರದಲ್ಲಿ 3 ದಿನ 'ವರ್ಕ್ ಫ್ರಂ ಆಫೀಸ್' ಕಡ್ಡಾಯ

ABOUT THE AUTHOR

...view details