ಚಾಮರಾಜನಗರದಲ್ಲಿ ಸಿದ್ದರಾಮಯ್ಯ ಬಳಿಕ ವಿಜಯೇಂದ್ರ ರೋಡ್ ಶೋ: 'ಕಾಂಗ್ರೆಸ್ ಬ್ಯಾಟರಿ ಡೌನ್' ಎಂದು ಲೇವಡಿ - B Y Vijayendra Road Show

By ETV Bharat Karnataka Team

Published : Apr 3, 2024, 7:08 PM IST

thumbnail

ಚಾಮರಾಜನಗರ: ಚಾಮರಾಜನಗರದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ರೋಡ್ ಶೋ ನಡೆಸಿದ ಬಳಿಕ ಬಿಜೆಪಿ ಅಭ್ಯರ್ಥಿ ಬಾಲರಾಜು ಪರ ಬಿ.ವೈ‌.ವಿಜಯೇಂದ್ರ ಚಾಮರಾಜೇಶ್ವರ ದೇಗುಲ ಮುಂಭಾಗದಿಂದ ಜಿಲ್ಲಾಡಳಿತ ಭವನದವರೆಗೆ ಭರ್ಜರಿ ರೋಡ್ ಶೋ ಮೂಲಕ ಮತಬೇಟೆ ನಡೆಸಿದರು. ಬಿಜೆಪಿ ಮುಖಂಡರಾದ ಅರವಿಂದ ಲಿಂಬಾವಳಿ, ಡಿ.ವಿ.ಸದಾನಂದ ಗೌಡ, ಎಸ್.ಎ.ರಾಮದಾಸ್, ಎನ್.ಮಹೇಶ್ ಹಾಗು ಜೆಡಿಎಸ್ ಮುಖಂಡರಾದ ಜಿ‌.ಟಿ.ದೇವೇಗೌಡ, ಎಂ.ಆರ್.ಮಂಜುನಾಥ್ ಸಾಥ್​ ನೀಡಿದರು. 

'ಕಾಂಗ್ರೆಸ್ ಬ್ಯಾಟರಿ ಡೌನ್': ರೋಡ್ ಶೋನಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ, ಬಿಜೆಪಿ-ಜೆಡಿಎಸ್ ಮೈತ್ರಿಯಾದ ಬಳಿಕ ಕಾಂಗ್ರೆಸ್ ಬ್ಯಾಟರಿ ಡೌನ್ ಆಗಿದೆ. ಕಾಂಗ್ರೆಸ್ ಪಕ್ಷದ ಮುಖಂಡರು ಗಾಬರಿಯಾಗಿ ಉಸಿರಾಡಲು ಕಷ್ಟಪಡುತ್ತಿದ್ದಾರೆ. ಬಾಲರಾಜು ಅವರನ್ನು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಕರೆ ನೀಡಿದರು. 

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ದುಡ್ಡಿನ ಅಹಂಕಾರ, ಹಣದ ಮದದಿಂದ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಇವರನ್ನು ಗೆಲ್ಲಿಸುವ ಮೂಲಕ ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ಕೊಡಿ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಬರಗಾಲ ಆವರಿಸುತ್ತದೆ. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ್ದ ವೇಳೆ ಕೆರೆ-ಕಟ್ಟೆಗಳು ಕೋಡಿ ಬಿದ್ದು ಪ್ರವಾಹ ಸ್ಥಿತಿ ಎದುರಾಗಿತ್ತು. ಜನರು ಕಾಂಗ್ರೆಸ್ ವಿರುದ್ಧ ಶಾಪ ಹಾಕುತ್ತಿದ್ದಾರೆ. ರೈತರ ಸಮಸ್ಯೆ ಪರಿಹರಿಸುವ ಬದಲು ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಜನರು ಗೆಲ್ಲಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಜನರ ಬಗ್ಗೆ ಕರುಣೆ ಇಲ್ಲವೇ?, ರಾಜ್ಯದಲ್ಲಿ 800 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಲಿತರ ವಿರೋಧಿ, ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರವನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕೊಡಬೇಕು ಎಂದು ಹೇಳಿದರು.

ನಾಮಪತ್ರ ಸಲ್ಲಿಕೆಗೆ ಬಿಜೆಪಿ ಸಂಸದ ಗೈರು: ಸಂಸದ ವಿ.ಶ್ರೀನಿವಾಸಪ್ರಸಾದ್ ಇಂದು ಬಿಜೆಪಿ ಅಭ್ಯರ್ಥಿ ಬಾಲರಾಜು ನಾಮಪತ್ರ ಸಲ್ಲಿಕೆಗೆ ಗೈರಾದರು. ಬಿಜೆಪಿ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ನಾಮಪತ್ರ ಸಲ್ಲಿಕೆಗೆ ಶ್ರೀನಿವಾಸಪ್ರಸಾದ್ ಬರಲಿದ್ದಾರೆ ಎಂದು ತಿಳಿಸಿತ್ತು. ಈಗಾಗಲೇ ಸಂಸದರ ಸಹೋದರ, ಸೋದರಳಿಯ ಮತ್ತು ಬೆಂಬಲಿಗರು ಕಾಂಗ್ರೆಸ್ ಸೇರಿದ್ದಾರೆ. 

ಸಂಸದರ ಬೆಂಬಲ ಕಾಂಗ್ರೆಸ್​ಗೆ ಎಂದ ಡಿಕೆಶಿ: ಇನ್ನು ಚಾಮರಾಜನಗರದಲ್ಲಿ ಸಿಎಂ ಸಿದ್ದರಾಮಯ್ಯ ರೋಡ್ ಶೋ ನಡೆಸಿದರು. ಈ ವೇಳೆ, ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಹಾಲಿ ಬಿಜೆಪಿ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು ಸುನಿಲ್ ಬೋಸ್​ಗೆ ಆಶೀರ್ವಾದ ಮಾಡಿ‌ ಕಳುಹಿಸಿದ್ದಾರೆ. ಅವರ ಬೆ‌ಂಬಲ, ಅವರ ಹಿತೈಷಿಗಳ ಬೆಂಬಲ ಕೊಟ್ಟು ಚಾಮರಾಜನಗರಕ್ಕೆ ಸುನೀಲ್ ಬೋಸ್ ಅವರನ್ನು ಕಳುಹಿಸಿದ್ದಾರೆ ಎಂದು ಬಾಂಬ್ ಹಾಕಿದ್ದಾರೆ.

ವಿಜಯೇಂದ್ರ ಹೇಳಿದ್ದೇನು?: ಇದೇ ವಿಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಸಂಸದರು ಬಿಜೆಪಿಗೆ ಸಂಪೂರ್ಣ ಬೆಂಬಲ ಕೊಡಲಿದ್ದಾರೆ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಇಲ್ಲಸಲ್ಲದ ಹೇಳಿಕೆ ಕೊಟ್ಟಿದ್ದಾರೆ. ಸಂಸದರ ಬೆಂಬಲ ಪಕ್ಷಕ್ಕೆ ಇರಲಿದೆ ಎಂದರು.

ಇದನ್ನೂ ಓದಿ: ಬಿಜೆಪಿ ಸೇರುತ್ತೇನೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಸಂಸದೆ ಸುಮಲತಾ ಘೋಷಣೆ - MP Sumalatha 

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.