ETV Bharat / state

ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೂವರ ಮೃತದೇಹ ಪತ್ತೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ - three died body found in car

author img

By ETV Bharat Karnataka Team

Published : Mar 25, 2024, 9:12 PM IST

ತುಮಕೂರು
ತುಮಕೂರು

ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೂವರ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ

ತುಮಕೂರು : ತಾಲೂಕಿನ ಕುಚ್ಚಂಗಿ ಗ್ರಾಮದ ಕೆರೆಯಲ್ಲಿ ಸುಟ್ಟು ಕರಕಲಾಗಿದ್ದ ಕಾರಿನಲ್ಲಿ ಪತ್ತೆಯಾಗಿದ್ದ ಮೂರು ಮೃತದೇಹಗಳಿಗೆ ಸಂಬಂಧಿಸಿದಂತೆ, ಜಿಲ್ಲಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿರಾ ಗೇಟ್ ಬಡಾವಣೆಯಲ್ಲಿ ವಾಸವಾಗಿರುವ ಪಾತರಾಜು ಮತ್ತು ಗಂಗರಾಜು ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಆರು ಮಂದಿ ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಆರೋಪಿಗಳು ಈಗಾಗಲೇ ಕೊಲೆಯಾಗಿರುವ ಇಶಾಕ್ ಸೀಮಮ್, ಶಾಹುಲ್ ಹಮೀದ್, ಸಿದ್ದಿಕ್ ಅವರೊಂದಿಗೆ ಸಂಪರ್ಕ ಹೊಂದಿದ್ದರು. ಅಲ್ಲದೇ ಈ ಮೂವರು ಮೃತಪಟ್ಟವರು ಆರೋಪಿ ಪಾತರಾಜನ ಜೊತೆ ಸೇರಿ ಸುಮಾರು ಆರು ತಿಂಗಳಿನಿಂದ ನಿಧಿ ಹುಡುಕುವ ಕೆಲಸ ಮಾಡುತ್ತಿದ್ದರು.

ಪಾತರಾಜನಿಗೆ ಸುಮಾರು ಆರು ಲಕ್ಷ ರೂ. ಹಣವನ್ನು ನೀಡಿದ್ದರು. ಹಣ ಪಡೆದು ಆರು ತಿಂಗಳು ಕಳೆದರೂ ನಿಧಿ ಹುಡುಕಿ ಕೊಟ್ಟಿಲ್ಲವಾದ್ದರಿಂದ ಹಣ ವಾಪಸ್ ಕೊಡುವಂತೆ, ಇಲ್ಲವಾದರೆ ಪೊಲೀಸರಿಗೆ ದೂರು ನೀಡುವುದಾಗಿ ಮೃತರು ಪಾತರಾಜನ ಹಿಂದೆ ಬಿದ್ದಿದ್ದರು. ಹೀಗಾಗಿ ಅವರನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕೆಂಬ ಉದ್ದೇಶದಿಂದ ಪಾತರಾಜು ತನಗೆ ಪರಿಚಯದ ಸತ್ಯಮಂಗಲದ ವಾಸಿ ಗಂಗರಾಜು ಮತ್ತು ಅವನ 6 ಜನ ಸಹಚರರಾದ ಪುಟ್ಟಸ್ವಾಮಯ್ಯ, ನವೀನ್, ಕೃಷ್ಣ, ಗಣೇಶ, ಕಿರಣ್ , ಸೈಮನ್ ಅವರೊಂದಿಗೆ ಸೇರಿಕೊಂಡು ಮೂರು ಜನರನ್ನು ಕೊಲೆ ಮಾಡಿದರೆ, ಆರೋಪಿತರಿಗೆ 3 ಕೆ.ಜಿ ಚಿನ್ನ ಕೊಡುವ ಆಮಿಷ ಒಡ್ಡಿ ಕೊಲೆ ಮಾಡುವ ಸಂಚನ್ನು ಪಾತರಾಜು ರೂಪಿಸಿದ್ದ.

ಮಾ. 22ರಂದು 12 ಗಂಟೆಗೆ ಮೃತರನ್ನು ಚಿನ್ನ ನೀಡುವುದಾಗಿ ಬೀರನಕಲ್ಲು ಬೆಟ್ಟದ ಸಮೀಪ ಕರೆಸಿಕೊಂಡು ಅವರನ್ನು ಮಚ್ಚು, ಲಾಂಗ್, ಡ್ರ್ಯಾಗರ್​ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ನಂತರ ಅವರದೇ ಕಾರಿನಲ್ಲಿ ಕುಚ್ಚಂಗಿ ಕೆರೆಗೆ ತೆಗೆದುಕೊಂಡು ಹೋಗಿ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ ಅವರು ತಿಳಿಸಿದ್ದಾರೆ. ಈ ಸಂಬಂಧ ಕೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ತುಮಕೂರು: ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮೂವರ ಗುರುತು ಪತ್ತೆ, ಆರು ಮಂದಿ ಪೊಲೀಸರ ವಶಕ್ಕೆ - Three Bodies Burnt Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.