ETV Bharat / state

81ನೇ ವಸಂತಕ್ಕೆ ಕಾಲಿಟ್ಟ ಬಿ.ಎಸ್. ಯಡಿಯೂರಪ್ಪ: ಅಮಿತ್​ ಶಾ ಸೇರಿ ಪಕ್ಷದ ನಾಯಕರಿಂದ ಶುಭಾಶಯ

author img

By ETV Bharat Karnataka Team

Published : Feb 27, 2024, 2:02 PM IST

Updated : Feb 27, 2024, 7:57 PM IST

BS Yediyurappa
ಬಿ.ಎಸ್.ಯಡಿಯೂರಪ್ಪ

ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

ಬೆಂಗಳೂರು: ರಾಜ್ಯ ಬಿಜೆಪಿ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇಂದು 81ನೇ ವರ್ಷದ ಜನ್ಮದಿನ. ದಕ್ಷಿಣ ಭಾರತದ ಹೆಬ್ಬಾಗಿಲಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಹೆಗ್ಗಳಿಕೆ ಪಡೆದಿರುವ ನಾಯಕನ ಜನ್ಮದಿನಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಶುಭ ಕೋರಿದ್ದಾರೆ.

ಬಗರ್ ಹುಕುಂ, ರೈತಪರ ಹೋರಾಟದ ಮೂಲಕ ರಾಜಕೀಯ ಮುನ್ನಲೆಗೆ ಬಂದು ರಾಜ್ಯದಲ್ಲಿ ಬಿಜೆಪಿ ಸಂಘಟಿಸಿ ಅಧಿಕಾರದ ಗದ್ದುಗೆವರೆಗೂ ತಂದು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ದಾಖಲೆ ಬರೆದಿರುವ ಬಿ.ಎಸ್. ಯಡಿಯೂರಪ್ಪ 81ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಾಜಕೀಯ ಕರ್ಮಭೂಮಿ ತವರು ಜಿಲ್ಲೆ ಶಿವಮೊಗ್ಗದಲ್ಲಿ ಈ ಬಾರಿ ಹುಟ್ಟುಹಬ್ಬನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಹಿರಿಯ ನಾಯಕ ಹುಟ್ಟುಹಬ್ಬಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಭಾಶಯ ಕೋರಿದ್ದಾರೆ. ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವ ಪಕ್ಷದ ಹೆಜ್ಜೆ ಗುರುತನ್ನು ವಿಸ್ತರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ನಿಮ್ಮ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್​ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿಗಳು, ರೈತ ನಾಯಕರು, ದಿಟ್ಟ ಧೀಮಂತ ನಾಯಕರು ಹಾಗೂ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ. ಎಸ್. ಯಡಿಯೂರಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಹೆಚ್ಚಿನ ಆಯಸ್ಸು ಹಾಗೂ ಉತ್ತಮ ಆರೋಗ್ಯ ನೀಡಲೆಂದು ಪ್ರಾರ್ಥಿಸುತ್ತೇನೆ‌ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.

ಬಿಎಸ್​ವೈ ರಾಜಕೀಯ ಹಾದಿ: 1983ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಯಡಿಯೂರಪ್ಪ ಕಡೆಯದಾಗಿ ಸ್ಪರ್ಧೆ ಮಾಡಿದ 2018ರ ಚುನಾವಣೆವರೆಗೂ ಕೇವಲ 1999ರಲ್ಲಿ ಒಮ್ಮೆ ಸೋತಿರುವುದು ಬಿಟ್ಟರೆ ಉಳಿದ ಎಲ್ಲಾ ಚುನಾವಣೆಯಲ್ಲಿಯೂ ಗೆದ್ದಿದ್ದಾರೆ. 2006ರಲ್ಲಿ ಮೊದಲ ಬಾರಿ ಜೆಡಿಎಸ್ ಬಿಜೆಪಿ ಮೈತ್ರಿ ಸರ್ಕಾರ ರಚನೆಯಾದಾಗ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಮೂಲಕ ಮೊದಲ ಬಾರಿಗೆ ಆಡಳಿತ ಪಕ್ಷದ ಸಾಲಿನ ಕಡೆ ಬಂದರು.

2008ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು ಅಧಿಕಾರ ಹಸ್ತಾಂತರವಾಗದ ಹಿನ್ನೆಲೆಯಲ್ಲಿ ಒಂದು ವಾರಕ್ಕೆ ರಾಜೀನಾಮೆ ನೀಡಿ ಜನತೆಯ ಮುಂದೆ ಹೋದರು ನಂತರ ನಡೆದ ಚುನಾವಣೆಯಲ್ಲಿ ಗೆದ್ದು ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ಆದರೆ ಮೂರುವರೆ ವರ್ಷಕ್ಕೆ ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ಆರೋಪ ಬಂದ ಕಾರಣದಿಂದಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ನಂತರ ಬಿಜೆಪಿಯಲ್ಲಿ ನಿರ್ಲಕ್ಷಿಸಲಾಗುತ್ತಿದೆ ಎನ್ನುವ ಕಾರಣಕ್ಕೆ ಬಿಜೆಪಿ ತೊರೆದು ಕೆಜೆಪಿ ಕಟ್ಟಿ ತಮ್ಮ ಸಾಮರ್ಥ್ಯ ತೋರಿಸಿದರು. ಮರಳಿ ಬಿಜೆಪಿಗೆ ಬಂದು 2014ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಸಂಸದರಾಗಿ ಆಯ್ಕೆಯಾದರು. 2018ರಲ್ಲಿ ಮತ್ತೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದರೂ ಬಹುಮತ ಸಿಗಲಿಲ್ಲ. ಆದರೂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರೂ ಬಹುಮತ ಸಿಗದ ಕಾರಣದಿಂದಾಗಿ ಮೂರು ದಿನಕ್ಕೆ ರಾಜೀನಾಮೆ ನೀಡಿದರು.

ಆದರೆ 2019 ರಲ್ಲಿ ಮೈತ್ರಿ ಸರ್ಕಾರದ 17 ಶಾಸಕರು ರಾಜೀನಾಮೆ ನೀಡಿದ್ದರಿಂದಾಗಿ ಮತ್ತೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿ ನಾಲ್ಕನೇ ಬಾರಿಗೆ ಸಿಎಂ ಆದ ರಾಜ್ಯದ ಮೊದಲ ರಾಜಕಾರಣಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಆದರೆ ಎರಡು ವರ್ಷ ಅಧಿಕಾರ ನಡೆಸಿ ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದರು. ನಂತರ ಚುನಾವಣಾ ರಾಜಕೀಯಕ್ಕೆ ವಿಧಾನ ಘೋಷಿಸಿದರು. ಸದ್ಯ ಕೇಂದ್ರ ಸಂಸದೀಯ ಮಂಡಳಿ ಹಾಗು ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿರುವ ಯಡಿಯೂರಪ್ಪ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.

ಶಾಸಕ, ವಿಧಾನ ಪರಿಷತ್​ ಸದಸ್ಯ, ಪ್ರತಿಪಕ್ಷ ನಾಯಕ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಸರ್ಕಾರದ ಭಾಗವಾಗಿ ಕೆಲಸ ಮಾಡಿರುವ ಯಡಿಯೂರಪ್ಪ, ರಾಜ್ಯಾಧ್ಯಕ್ಷರಾಗಿ ಪಕ್ಷ ಕಟ್ಟಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರದ ಗದ್ದುಗೆವರೆಗೂ ತಂದು ನಿಲ್ಲಿಸಿದ ಹಿರಿಮೆ ಅವರದ್ದು. ಈ ದಿಗ್ಗಜ ನಾಯಕ ಇದೀಗ 80 ವರ್ಷ ಪೂರ್ಣಗೊಳಿಸಿ 81ನೇ ವಸಂತಕ್ಕೆ ಕಾಲಿಟ್ಟಿದ್ದು, ರಾಜ್ಯ ಬಿಜೆಪಿಯ ಎಲ್ಲ ನಾಯಕರು, ಕೇಂದ್ರದ ನಾಯಕರು ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: ಆತ್ಮಸಾಕ್ಷಿ ಎಂಬ ಮತವಿದೆಯಾ?: ಸಿಎಂ ಸಿದ್ದರಾಮಯ್ಯ ಟೀಕೆ

Last Updated :Feb 27, 2024, 7:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.