ETV Bharat / state

ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸಿ: ವಿದ್ಯಾರ್ಥಿಗಳಿಗೆ ರಾಜ್ಯಪಾಲ ಗೆಹ್ಲೋಟ್ ಸಲಹೆ

author img

By ETV Bharat Karnataka Team

Published : Feb 29, 2024, 10:08 PM IST

Updated : Feb 29, 2024, 10:48 PM IST

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸ್ನಾತಕ, ಸ್ನಾತಕೋತ್ತರ, ಡಾಕ್ಟರೇಟ್ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

Governor Thawar Chand Gehlot conferred degrees on the students.
ರಾಯಚೂರು ಕೃಷಿ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪದವಿ ಪ್ರದಾನ ಮಾಡಿದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ

ರಾಯಚೂರು: ಕೃಷಿ ವಿಶ್ವವಿದ್ಯಾಲಯ ಹಾಗೂ ಬಿ.ಟೆಕ್​ ಪದವಿ ಪಡೆದಿರುವ ವಿದ್ಯಾರ್ಥಿಗಳು ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕು. ಕೃಷಿ ಕ್ಷೇತ್ರದ ಬೆಳವಣಿಗೆಗಾಗಿ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಉಪಯೋಗಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಿವಿಮಾತು ಹೇಳಿದರು.

ಇಂದು ನಗರದ ಹೊರವಲಯದಲ್ಲಿರುವ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಸ್ನಾತಕ, ಸ್ನಾತಕೋತ್ತರ, ಡಾಕ್ಟರೇಟ್ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

ಕೃಷಿ ವಲಯ ದೇಶದ ಆರ್ಥಿಕ ಬೆಳವಣಿಗೆಗೆ ಆಧಾರಸ್ತಂಭ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ದೇಶ, ಸಮಾಜ ಹಾಗೂ ಕೃಷಿ ಕ್ಷೇತ್ರದ ಹಿತಕ್ಕಾಗಿ ತಮ್ಮ ಜ್ಞಾನವನ್ನು ಸಮರ್ಪಿಸಬೇಕು. ವಿಶ್ವವಿದ್ಯಾಲಯದಲ್ಲಿ ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳ ಬಳಕೆ ಕುರಿತು ಹೆಚ್ಚಿನ ಸಂಶೋಧನೆಗಳನ್ನು ಮಾಡಲಾಗುತ್ತಿದೆ. ಇಂಥ ಸಂಶೋಧನೆಗಳು ದೇಶ ಹಾಗೂ ರಾಜ್ಯದ ಅಭಿವೃದ್ಧಿಗೆ ಮಹತ್ವದ ಪಾತ್ರವಹಿಸುತ್ತಿವೆ. ಇವು ರೈತರಿಗೆ ಕೃಷಿ ಚಟುವಟಿಕೆಗಳಲ್ಲಿ ವಿವಿಧ ಪ್ರಕಾರಗಳ ಬೇಸಾಯ ಕ್ರಮಗಳನ್ನು ಪರಿಚಯಿಸುವಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತವೆ. ರೈತರು ಬೆಳೆದ ಬೆಳೆಗೆ ವಿವಿಧ ಬಾಧೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಮುಂದಿನ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡು ಕೃಷಿ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡಲು ಮುಂದಾಗಬೇಕು. ಇತ್ತೀಚೆಗೆ ಕೃಷಿ ವಿಶ್ವವಿದ್ಯಾಲಯದಿಂದ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಕೃಷಿ ಕ್ಷೇತ್ರಕ್ಕಾಗಿ ಹಾಗೂ ದೇಶದ ಹಿತಕ್ಕಾಗಿ ಮಹತ್ವದ ಪ್ರತೀಕವಾಗಿದೆ. ದೇಶದ ಅರ್ಥವ್ಯವಸ್ಥೆ, ದೇಶದ ಅಭಿವೃದ್ಧಿ ಮತ್ತು ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ಮಾಡುವಲ್ಲಿ ಮಹಿಳೆಯರ ಕೊಡುಗೆ ಅಪಾರ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: 363 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, 127 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಹಾಗೂ 26 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಅವುಗಳಲ್ಲಿ ವಿದ್ಯಾರ್ಥಿನಿಯರಿಗೆ 144 ಸ್ನಾತಕ ಪದವಿ, 67 ಸ್ನಾತಕೋತ್ತರ ಪದವಿ ಹಾಗೂ 12 ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಸ್ನಾತಕ ಪದವಿಯಲ್ಲಿ 23 ಚಿನ್ನದ ಪದಕ ಮತ್ತು 2 ಸ್ನಾತಕ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು.

ಸ್ನಾತಕೋತ್ತರ ಪದವಿಯಲ್ಲಿ 16 ಚಿನ್ನದ ಪದಕ, 13 ಚಿನ್ನದ ಪದಕಗಳನ್ನು ಡಾಕ್ಟರೇಟ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ನೀಡಲಾಯಿತು. ಈ ಪೈಕಿ ಬಿ.ಎಸ್ಸಿ ಆಗ್ರಿ ವಿಭಾಗದ ಪದವಿ ವಿದ್ಯಾರ್ಥಿ ಸಾಗರ ಯು 5 ಚಿನ್ನದ ಪದಕ ಪಡೆದರೆ, ವಿದ್ಯಾರ್ಥಿನಿ ದಿವ್ಯಾ 4 ಚಿನ್ನದ ಪದಕ ಪಡೆದರು. ಕರಡಿ ಬಸವ ಮೂರು ಚಿನ್ನದ ಪದಕ ಪಡೆದುಕೊಂಡರೆ, ಬಿ.ಟೆಕ್ ಎಂಜಿನಿಯರ್ ವಿಭಾಗದ ವಿದ್ಯಾರ್ಥಿನಿ ಶೋಭಾ ಆರ್.ಧನಗೌಡ 5 ಚಿನ್ನದ ಪದಕ ಸ್ವೀಕರಿಸಿದರು.

ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಕೃಷಿ ತಾಂತ್ರಿಕತೆ ವಿಭಾಗದ ಉಪಮಹಾನಿರ್ದೇಶಕ ಡಾ.ಎಸ್.ಎನ್.ಝಾ, ಕೃಷಿ ವಿವಿ ಕುಲಪತಿ ಕುಲಪತಿ ಡಾ.ಎಂ.ಹನುಮಂತಪ್ಪ, ಕುಲಸಚಿವ ಡಾ.ಎಂ.ವೀರನಗೌಡ, ಡಾ.ಎಂ.ಜಿ.ಪಾಟೀಲ್ ಸೇರಿದಂತೆ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರು ಹಾಜರಿದ್ದರು.

ಇದನ್ನೂಓದಿ: ಸರ್ಕಾರಕ್ಕೆ ಜಾತಿಗಣತಿ ವರದಿ ಸಲ್ಲಿಕೆ: ಪರಿಶೀಲಿಸಿ ಸೂಕ್ತ ಕ್ರಮ- ಸಿಎಂ ಸಿದ್ದರಾಮಯ್ಯ

Last Updated :Feb 29, 2024, 10:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.