ETV Bharat / state

ಲೋಕಸಮರ: ಅಶ್ವಿನಿ ಪುನೀತ್ ರಾಜ್​ಕುಮಾರ್ ಬೆಂಬಲ ಕೋರಿದ ಶೋಭಾ ಕರಂದ್ಲಾಜೆ

author img

By ETV Bharat Karnataka Team

Published : Mar 19, 2024, 7:45 PM IST

Shobha Karandlaje met Ashwini Puneeth Rajkumar
ಅಶ್ವಿನಿ ಪುನೀತ್ ರಾಜ್​ಕುಮಾರ್ ಬೆಂಬಲ ಕೋರಿದ ಶೋಭಾ ಕರಂದ್ಲಾಜೆ

ಲೋಕಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರನ್ನು ಭೇಟಿ ಮಾಡಿ ಅವರ ಬೆಂಬಲ ಕೋರಿದರು.

ಅಶ್ವಿನಿ ಪುನೀತ್ ರಾಜ್​ಕುಮಾರ್ ಬೆಂಬಲ ಕೋರಿದ ಶೋಭಾ ಕರಂದ್ಲಾಜೆ

ಬೆಂಗಳೂರು: ಉಡುಪಿ - ಚಿಕ್ಕಮಗಳೂರು ಕ್ಷೇತ್ರದಿಂದ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಬಂದಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚುನಾವಣೆಯಲ್ಲಿ ಸಹಕಾರ ನೀಡುವಂತೆ ದೊಡ್ಮನೆ ಕುಟುಂಬದ ಕದ ತಟ್ಟಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಪತ್ನಿ ಅಶ್ವಿನಿ ಅವರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಕ್ಷೇತ್ರ ಸಂಚಾರ ಆರಂಭಿಸಿರುವ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಸ್ಥಳೀಯ ನಾಯಕರ ಭೇಟಿ ಮಾಡಿ ಸಹಕಾರ ಕೋರುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಚಂದನವನದ ದೊಡ್ಮನೆ ಕುಟುಂಬದ ಕದ ತಟ್ಟಿದ್ದಾರೆ. ಸದಾಶಿವನಗರದಲ್ಲಿರುವ ಪುನೀತ್ ರಾಜ್​ಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಶೋಭಾ ಕರಂದ್ಲಾಜೆ, ಈ ಚುನಾವಣೆಯಲ್ಲಿ ತಮ್ಮ ಬೆಂಬಲ ನೀಡುವಂತೆ ಅಶ್ವಿನಿ ಅವರಲ್ಲಿ ಮನವಿ ಮಾಡಿಕೊಂಡರು. ಮನೆಗೆ ಬಂದ ಬಿಜೆಪಿ ಅಭ್ಯರ್ಥಿಯನ್ನು ಅಶ್ವಿನಿ ಅವರು ನಗುಮೊಗದಿಂದ ಸ್ವಾಗತಿಸಿ, ಸತ್ಕರಿಸಿದರು.

ಸದ್ಯ ದೊಡ್ಮನೆ ಕುಟುಂಬದ ಸೊಸೆ ಗೀತಾ ಶಿವರಾಜ್​ಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಆಗಿ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಆದರೂ ದೊಡ್ಮನೆ ಕುಟುಂಬಕ್ಕೆ ಸೇರಿದ ಅಶ್ವಿನಿ ಪುನೀತ್​ ರಾಜ್​ಕುಮಾರ್ ನಿವಾಸಕ್ಕೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಬೆಂಬಲ ಕೋರಿದ್ದು ಅಚ್ಚರಿಯಾಗಿದೆ.

ಅಶ್ವಿನಿ ಪುನೀತ್ ರಾಜ್‍ಕುಮಾರ್ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಆಶ್ವಿನಿ ಅವರನ್ನು ಭೇಟಿ ಮಾಡಿ ನನಗೆ ಮತ್ತು ಬಿಜೆಪಿಗೆ ಬೆಂಬಲ ನೀಡುವಂತೆ ಕೇಳಿದ್ದೇವೆ. ಅಶ್ವಿನಿ ಅವರಿಗೆ ರಾಜಕೀಯ ಪಕ್ಷ ಇಲ್ಲ. ಆದರೂ ಬಿಜೆಪಿಗೆ ಅವರ ಬೆಂಬಲ ಬೇಕು ಎಂದು ಕೇಳಿದ್ದೇವೆ. ಮೋದಿಯವರನ್ನು ಅಶ್ವಿನಿ ಮತ್ತು ಪುನೀತ್ ಇಬ್ಬರೂ ಭೇಟಿ ಮಾಡಿದ್ದರು. ಪುನೀತ್ ರಾಜ್​ಕುಮಾರ್ ಕೂಡಾ ಮೋದಿ ಅವರನ್ನು ಮೆಚ್ಚಿಕೊಂಡಿದ್ದರು. ಹಾಗಾಗಿ ಅವರ ಸಹಕಾರ ಕೋರಿದ್ದೇವೆ. ಈ ಭೇಟಿ ವೇಳೆ ಪ್ರಚಾರದ ಬಗ್ಗೆ ನಾವು ಮಾತನಾಡಿಲ್ಲ. ಬೆಂಬಲ ಮಾತ್ರ ಕೇಳಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: 14 ವರ್ಷಗಳ ನಂತರ ಕೇರಳಕ್ಕೆ ವಿಜಯ್ ಭೇಟಿ; ನಟನ ಕಾರು ಡ್ಯಾಮೇಜ್

ಟಿಕೆಟ್ ವಿಚಾರವಾಗಿ ಸದಾನಂದಗೌಡ ಅವರ ಬೇಸರ ವಿಚಾರದ ಕುರಿತು ಪ್ರತಿಕ್ರಿಯಿಸಿ, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಸದಾನಂದಗೌಡರು ನಮ್ಮ ನಾಯಕರು. ಅವರು ಖಂಡಿತವಾಗಿ ನಮ್ಮ ಜೊತೆ ಇರುತ್ತಾರೆ. ಮೊನ್ನೆ ಕೆ.ಆರ್.ಪುರಂ ಮತ್ತು ಪುಲಿಕೇಶಿನಗರದಲ್ಲಿ ಪಕ್ಷದ ಕಾರ್ಯಕ್ರಮಕ್ಕೆ ಬಂದಿದ್ದರು. ಅವರು ಹಿರಿಯರು. ಇಲ್ಲಿ ಕಾರ್ಯಕರ್ತರನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತೇನೆ ಎಂದು ಅವರು ನನಗೆ ತಿಳಿಸಿದ್ದಾರೆ. ನೀವು ಫ್ರೀ ಆಗಿರುವ ದಿನಗಳಂದೇ ಕಾರ್ಯಕ್ರಮ ಇಟ್ಟುಕೊಳ್ಳೋಣವೆಂದು ನಾನು ಕೂಡಾ ಅವರಿಗೆ ತಿಳಿಸಿದ್ದೇನೆ. ಆದರೆ ಅವರಿಗೆ ಬೇಸರ ಆಗಿದೆ ಎಂಬ ಗೊಂದಲ ಎಲ್ಲಿಂದ ಸೃಷ್ಟಿಯಾಗುತ್ತಿದೆಯೆಂಬುದು ಗೊತ್ತಿಲ್ಲ. ಡಿವಿಎಸ್ ಬಿಜೆಪಿಯ ಎಲ್ಲರ ಸಲುವಾಗಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ‌ ಎಂದು ತಿಳಿಸಿದರು.

ಇದನ್ನೂ ಓದಿ: ಮುಂದಿನ ನಡೆ ಕುರಿತು ಒಕ್ಕಲಿಗರ ಸಂಘದ ಜೊತೆ ಮಾತುಕತೆ: ನಾಳೆ ನಿರ್ಧಾರ ಪ್ರಕಟಿಸಲಿರುವ ಸದಾನಂದ ಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.