ETV Bharat / state

ಸಿಎಂ ಭಾಗಿಯಾಗಿದ್ದ ಚುನಾವಣಾ ರ‍್ಯಾಲಿಯಲ್ಲಿ ಭದ್ರತಾ ಲೋಪ; ಪಿಸ್ತೂಲ್ ಹೊಂದಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ - Security Lapse

author img

By ETV Bharat Karnataka Team

Published : Apr 8, 2024, 10:56 PM IST

ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದ ಚುನಾವಣಾ ರ‍್ಯಾಲಿಯಲ್ಲಿ ಭದ್ರತಾ ಲೋಪ ಕಂಡು ಬಂದಿದ್ದು, ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ.

ಚುನಾವಣಾ ರ‍್ಯಾಲಿಯಲ್ಲಿ ಭದ್ರತಾ ಲೋಪ
ಚುನಾವಣಾ ರ‍್ಯಾಲಿಯಲ್ಲಿ ಭದ್ರತಾ ಲೋಪ

ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಭರಮಪ್ಪ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದ ಚುನಾವಣಾ ರ‍್ಯಾಲಿ ಸಂದರ್ಭದಲ್ಲಿ ಭಾರೀ ಭದ್ರತಾ ಲೋಪ ಸಂಭವಿಸಿದೆ. ಬೆಂಗಳೂರು ಕೇಂದ್ರ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಸೊಂಟದಲ್ಲಿ ಪಿಸ್ತೂಲ್ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಹೂವಿನ ಹಾರ ಹಾಕಿರುವ ಘಟನೆ ನಡೆದಿದ್ದು, ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಸಿದ್ದಾಪುರ ನಿವಾಸಿ ರಿಯಾಜ್ ಅಹ್ಮದ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸೋಮವಾರ ವಿಲ್ಸನ್ ಗಾರ್ಡನ್ ಸಮೀಪದಲ್ಲಿ ತೆರೆದ ವಾಹನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ಸಿದ್ದಾಪುರದ ಕಾಂಗ್ರೆಸ್ ಕಾರ್ಯಕರ್ತ ರಿಯಾಜ್ ಅಹ್ಮದ್ ಸೊಂಟದಲ್ಲಿ ಗನ್ ಇರಿಸಿಕೊಂಡು ಪ್ರಚಾರದ ವಾಹನ ಏರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೂಹಾರ ಹಾಕಿದ್ದಾನೆ. ಹಾರ ಹಾಕುವಾಗ ಸೊಂಟದಲ್ಲಿ ಪಿಸ್ತೂಲ್ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಖ್ಯಮಂತ್ರಿಗಳಿಗೆ ಝಡ್ ಶ್ರೇಣಿಯ ಭದ್ರತೆ ಇರುತ್ತದೆ. ಹೀಗಾಗಿ ಸಿಎಂ ಬಳಿ ಯಾರೇ ಹೋಗಬೇಕಾದರೂ ತಪಾಸಣೆ ಒಳಪಡಬೇಕು. ಆದರೆ, ಪ್ರಚಾರದ ವೇಳೆ ರಿಯಾಜ್ ತನ್ನ ಬಳಿ ಗನ್ ಇರಿಸಿಕೊಂಡ ಸಿಎಂಗೆ ಹಾರ ಹಾಕಿದ್ದಾನೆ. ಹೀಗಾಗಿ ಭದ್ರತಾ ವೈಫಲ್ಯದ ಆರೋಪ ಕೇಳಿ ಬಂದಿದ್ದು, ವಿಪಕ್ಷಗಳ ಟೀಕೆಗೂ ಗುರಿಯಾಗಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತಿರುವ ಪೊಲೀಸರು ಕೂಡಲೇ ರಿಯಾಜ್ ಅಹ್ಮದ್‌ನನ್ನು ಪತ್ತೆ ಹಚ್ಚಿ ವಶಕ್ಕೆ ಪೆಡದುಕೊಂಡಿದ್ದಾರೆ. ಬಳಿಕ ನಗರ ಪೊಲೀಸ್ ಆಯಕ್ತ ಬಿ.ದಯಾನಂದ ಸೂಚನೆ ಮೇರೆಗೆ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಮತ್ತು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಭರಮಪ್ಪ ಜಗಲ್ಸಾರ್ ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಭರಮಪ್ಪ, ರಿಯಾಜ್ ಅಹ್ಮದ್ ಬಳಿ ಇರುವುದು ಪರವಾನಗಿ ಗನ್. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಪರವಾನಗಿ ಶಸ್ತ್ರಾಸ್ತ್ರಗಳನ್ನ ಸ್ಥಳೀಯ ಪೊಲೀಸ್ ಠಾಣೆಗೆ ಠೇವಣಿ ಇರಿಸಬೇಕು. ಆದರೆ, ರಿಯಾಜ್ ಅಹ್ಮದ್ ಮೇಲೆ 2019ರಲ್ಲಿ ದಾಳಿ ನಡೆಸಲಾಗಿತ್ತು. ಹೀಗಾಗಿ ಮತ್ತೊಮ್ಮೆ ದಾಳಿ ನಡೆಸಬಹುದಾದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ವಿನಾಯಿತಿ ಪಡೆದು ಗನ್ ಅನ್ನು ತನ್ನ ಬಳಿಯೇ ಇರಿಸಿಕೊಂಡಿದ್ದ. ಆದರೂ ರಿಯಾಜ್‌ನನ್ನ ವಶಕ್ಕೆೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಬರ ಪರಿಹಾರ ವಿಚಾರವಾಗಿ ಸುಪ್ರೀಂ ಕೋರ್ಟ್​ಗೆ ತಪ್ಪು‌ ಮಾಹಿತಿ ನೀಡಿ ದಾರಿ ತಪ್ಪಿಸುವ ಯತ್ನ: ಸಿದ್ದರಾಮಯ್ಯ - Siddaramaiah

ETV Bharat Logo

Copyright © 2024 Ushodaya Enterprises Pvt. Ltd., All Rights Reserved.