ETV Bharat / state

ಮಾಜಿ ಡಿಸಿಎಂ ಅಶ್ವತ್ಥ ನಾರಾಯಣರನ್ನ ಭೇಟಿ ಮಾಡಿ ಸಹಕಾರ ಕೋರಿದ ರೇವಣ್ಣ, ಪ್ರಜ್ವಲ್ - Lok Sabha Election 2024

author img

By ETV Bharat Karnataka Team

Published : Mar 29, 2024, 7:36 PM IST

Prajwal Revanna visited Ashwattha Narayana's residence.
ಅಶ್ವತ್ಥ ನಾರಾಯಣ ಅವರ ನಿವಾಸಕ್ಕೆ ಹಾಸನ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಭೇಟಿ ನೀಡಿದರು.

ಬೆಂಗಳೂರಿನಲ್ಲಿ ಮಾಜಿ ಡಿಸಿಎಂ ಡಾ ಅಶ್ವತ್ಥ ನಾರಾಯಣ ಅವರ ನಿವಾಸಕ್ಕೆ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಭೇಟಿ ನೀಡಿ, ನಾಮಪತ್ರ ಸಲ್ಲಿಕೆ ವೇಳೆ ಹಾಜರಿರುವಂತೆ ಆಹ್ವಾನ ನೀಡಿದರು.

ಬೆಂಗಳೂರು: ಮಾಜಿ ಡಿಸಿಎಂ ಡಾ ಅಶ್ವತ್ಥ ನಾರಾಯಣ ಭೇಟಿ ಮಾಡಿದ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಕೆ ವೇಳೆ ಹಾಜರಿರುವಂತೆ ಆಹ್ವಾನ ನೀಡಿದರು. ಸಂಜಯ ನಗರದಲ್ಲಿರುವ ಡಾ ಅಶ್ವತ್ಥ ನಾರಾಯಣ ಅವರ ನಿವಾಸಕ್ಕೆ ಹೆಚ್ ಡಿ ರೇವಣ್ಣ ಜೊತೆ ಆಗಮಿಸಿದ ಪ್ರಜ್ವಲ್ ಅವರು, ಚುನಾವಣೆಯಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದರು.

ಅಶ್ವತ್ಥ ನಾರಾಯಣ್ ಭೇಟಿ ಬಳಿಕ ಹೆಚ್ ಡಿ ರೇವಣ್ಣ ಮಾತನಾಡಿ, ಬೇಲೂರು ಸುರೇಶ್, ಲಿಂಗೇಶಣ್ಣ ಕರೆದು ಒಟ್ಟಾಗಿ ಮಾತಾಡಿದ್ದೇವೆ. ಏನು ಚಿಂತೆ ಮಾಡುವ ಅವಶ್ಯಕತೆ ಇಲ್ಲ, ದೇವೇಗೌಡರು, ಕುಮಾರಸ್ವಾಮಿ, ವಿಜಯೇಂದ್ರ ಆಶೀರ್ವಾದ ಇದೆ. ಎಲ್ಲರನ್ನೂ ಭೇಟಿ ಮಾಡುತ್ತೇವೆ, ಎಲ್ಲರೂ ಸಹಕಾರ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇವೇಗೌಡರಿಗೆ ಮೋದಿಯವರ ಜೊತೆ ಉತ್ತಮ ಸಂಬಂಧ ಇದೆ. ಇಂದು ದೇಶಕ್ಕೆ ಮೋದಿಯವರ ಅವಶ್ಯಕತೆ ಇದೆ. ಹಾಸನದಲ್ಲಿ ಎಲ್ಲ ಸರಿಯಾಗಲಿದೆ, ಪ್ರೀತಮ್ ಗೌಡರ ಮೇಲೂ ವೈಯಕ್ತಿಕ ಬೇಸರ ಇಲ್ಲ, ಕೆ ಎನ್ ರಾಜಣ್ಣ ದೊಡ್ಡವರು ಅವರ ಬಗ್ಗೆ ಯಾಕೆ ಮಾತಾಡಲಿ ಎಂದು ಹೇಳಿದರು.

ಏಪ್ರಿಲ್ 4ಕ್ಕೆ ನಾಮಪತ್ರ ಸಲ್ಲಿಕೆ: ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ಏಪ್ರಿಲ್ 4ಕ್ಕೆ ನಾನು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ. ಅಶ್ವತ್ಥ ನಾರಾಯಣ್​ ಅವರನ್ನು ಆಹ್ವಾನ ಮಾಡಿದ್ದೇನೆ. ಪ್ರೀತಮ್ ಗೌಡ್ರು ಸಹಕಾರ ಕೊಡಲಿದ್ದಾರೆ. ಮೇಲ್ಮಟ್ಟದಲ್ಲಿ ಎಲ್ಲ ಹೊಂದಾಣಿಕೆ ಆದ ಮೇಲೆ ಸಹಕಾರ ಕೊಡಬೇಕು ಖಂಡಿತವಾಗಿಯೂ ಅವರಿಗೆ ಜವಬ್ದಾರಿ ಇದೆ, ಸಹಕಾರ ಕೊಡಲಿದ್ದಾರೆ. ಒಳ್ಳೆಯ ರೀತಿಯಲ್ಲಿ ಹೊಂದಾಣಿಕೆ ಮಾಡ್ಕೊಂಡು ಹೋಗುತ್ತಿದ್ದೇವೆ. ಯಾವುದೇ ರೀತಿ ಗೊಂದಲ ಇಲ್ಲ, ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಮಾಡಲು ಜಿಲ್ಲೆಯ ಜನರು ಆಶೀರ್ವಾದ ಮಾಡುತ್ತಾರೆ ಎಂದು ಅಭಿಪ್ರಾಯ ವ್ಯಕಪಡಿಸಿದರು.

ಏಪ್ರಿಲ್ 4 ಕ್ಕೆ ಯಡಿಯೂರಪ್ಪ ಬರಬೇಕಿತ್ತು, ಆದರೆ ಅವರು ಮಂಡ್ಯ ಮತ್ತೆ ಬೆಂಗಳೂರು ಗ್ರಾಮಾಂತರಕ್ಕೆ ಹೋಗುತ್ತಿದ್ದಾರೆ. ವಿಜಯೇಂದ್ರ ಅವರು ಅಲ್ಲಿಗೆ ಬಂದು ಚಿತ್ರದುರ್ಗಕ್ಕೆ ಹೋಗ್ತಾರೆ. ಶ್ರೇಯಸ್ ಪಾಟೀಲ್ ಅವರು ಗೆದ್ದೆ ಗೆಲ್ತೀನಿ ಅನ್ನೋ ಮುನ್ನ ಅವರ ಕೊಡುಗೆ ಏನು ಅಂತಾ ಹೇಳಬೇಕು. ಹಾಸನ ಜಿಲ್ಲೆಯ ಪ್ರಜ್ಞಾವಂತರಿದ್ದಾರೆ, ಮತ್ತೊಮ್ಮೆ ಅವರು ನನ್ನನ್ನು ಗೆಲ್ಲಿಸುವ ವಿಶ್ವಾಸ ಇದೆ ಎಂದರು.

ಮಾಜಿ ಡಿಸಿಎಂ ಸಿ ಎನ್ ಅಶ್ವತ್ಥ ನಾರಾಯಣ್ ಮಾತನಾಡಿ, ಬಿಜೆಪಿ- ಜೆಡಿಎಸ್ ಎರಡು ಪಕ್ಷಗಳು ಒಟ್ಟಾಗಿವೆ. ಇವರೆಲ್ಲರ ಆಶೀರ್ವಾದದಿಂದ ದೇಶದ ಅಭಿವೃದ್ಧಿಗೆ ಮತ್ತೊಮ್ಮೆ ಮೋದಿ ಸರ್ಕಾರ ಬರಬೇಕು. ಅದಕ್ಕಾಗಿ ಈ ಮೈತ್ರಿ ಆಗಿದೆ, ಈ ದಿಕ್ಕಿನಲ್ಲಿ ಇನ್ನೂ ಸಂಬಂಧ ಚೆನ್ನಾಗಿ ಆಗಬೇಕು. ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಭಾಗಿಯಾಗಲು ನನಗೆ ಆಹ್ವಾನ ಕೊಟ್ಟಿದ್ದಾರೆ. ದೇವೇಗೌಡರು ಇವತ್ತು ಒಂದು ದೊಡ್ಡ ಮಾತು ಹೇಳಿ ಬಿಟ್ಟರು. ಆ ಮಾತಿಗೆ ನಾವು ಕೈ ಮುಗಿಯಬೇಕು. ಹಿಂದಿನ ಘಟನೆಗಳನ್ನು ಮರೀಬೇಕು, ಮತ್ತೊಮ್ಮೆ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡಲು ಒಟ್ಟಾಗಬೇಕು ಎನ್ನುವ ಅವರ ಮಾತು ನಮಗೆಲ್ಲ ಮನ ಮುಟ್ಟಿದೆ ಎಂದು ತಿಳಿಸಿದರು.

ಎಲ್ಲ ಹಂತದಲ್ಲೂ ಜೆಡಿಎಸ್ ಅಭ್ಯರ್ಥಿಗಳಿಗೆ ಸಹಕಾರ ಕೊಡುತ್ತೇವೆ. ಯಾವುದೇ ಒಂದು ತಪ್ಪು ಒಪ್ಪು ನಾವು ಮಾಡೋದಿಲ್ಲ. ನಾವು ಆ ರೀತಿ ಮಾಡಿದರೆ ನಮ್ಮ ಪಕ್ಷಕ್ಕೆ ಆತ್ಮ ದ್ರೋಹ ಬಗೆದಂತೆ ಆಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಬರೋದಿಲ್ಲ. ಸಿದ್ದರಾಮಯ್ಯ ಏನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಿಲ್ಲ. ಪ್ರತಿ ಪಕ್ಷದಲ್ಲಿ ಯಾರೂ ಪ್ರಧಾನಿ ಅಭ್ಯರ್ಥಿ ಇಲ್ಲ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಅವರಾಗಲಿ ಬರಲ್ಲ. ದೇಶಕ್ಕೆ ಮತ್ತೊಮ್ಮೆ ನರೇಂದ್ರ ಮೋದಿಯೇ ಪ್ರಧಾನಿ ಆಗಬೇಕೆಂದಿದೆ. ಹೀಗಾಗಿ ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ನಮಗೆ ಲೆಕ್ಕವೇ ಇಲ್ಲ ಎಂದು ಹೇಳಿದರು.

ಇದನ್ನೂಓದಿ:ಸಹಿ‌ ನಕಲು ಮಾಡಿ, ಸುಳ್ಳು ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ ಆರೋಪ: ಸಂಸದ ರಮೇಶ್ ಜಿಗಜಿಣಗಿಯಿಂದ ದೂರು ದಾಖಲು - MP Ramesh Jigajinagi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.