ETV Bharat / state

ಬಾಗಲಕೋಟೆ ಕಾಂಗ್ರೆಸ್​ನಲ್ಲಿ ಬಂಡಾಯ: ನ್ಯಾಯ ಸಿಗದಿದ್ದರೆ ಸ್ಪರ್ಧೆ ಖಚಿತ - ವೀಣಾ ಕಾಶಪ್ಪನವರ - Veena Kashappanavar

author img

By ETV Bharat Karnataka Team

Published : Mar 25, 2024, 7:20 AM IST

Updated : Mar 25, 2024, 8:26 AM IST

VEENA KASHAPPANAVAR
ವೀಣಾ ಕಾಶಪ್ಪನವರ

ಬಂಡಾಯ ಶಮನಗೊಳಿಸಲು ಆಗಮಿಸಿದ್ದ ವಿನಯ ಕುಲಕರ್ಣಿ ಮುಂದೆ ಅಸಮಾಧಾನ ಹೊರಹಾಕಿದ ಪಂಚಮಸಾಲಿ ಮುಖಂಡರು. ಟಿಕೆಟ್ ಬದಲಾವಣೆ ಆಗದಿದ್ದರೆ ವೀಣಾ ಕಾಶಪ್ಪನವರ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದಾಗಿ ಎಚ್ಚರಿಕೆ.

ಬಾಗಲಕೋಟೆಯಿಂದ ಸ್ಪರ್ಧಿಸುವುದಾಗಿ ವೀಣಾ ಕಾಶಪ್ಪನವರ ಸ್ಪಷ್ಟನೆ

ಬಾಗಲಕೋಟೆ: ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾಗದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತ ಎಂದು ವೀಣಾ ಕಾಶಪ್ಪನವರ ಸ್ಪಷ್ಟಪಡಿಸಿದ್ದಾರೆ. ಸಂಯುಕ್ತಾ ಪಾಟೀಲ್ ಅವರಿಗೆ ಬಾಗಲಕೋಟೆಯಿಂದ ಕಾಂಗ್ರೆಸ್ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ ಬಂಡೆದ್ದಿದ್ದಾರೆ.

ಬಾಗಲಕೋಟೆ ನವನಗರದ ಸೆಕ್ಟರ್ ನಂಬರ್ 63ರಲ್ಲಿರುವ ಮನೆಯಲ್ಲಿ ಭಾನುವಾರ ಪಂಚಮಸಾಲಿ ಸಮುದಾಯದ ಮುಖಂಡರ ಸಭೆ ನಡೆಸಿದ ಬಳಿಕ ವೀಣಾ ಕಾಶಪ್ಪನವರ ಸ್ಪಷ್ಟ ಸಂದೇಶ ರವಾನಿಸಿದರು.

ಬಂಡಾಯ ಶಮನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಶಾಸಕ ವಿನಯ ಕುಲಕುರ್ಣಿ ಆಗಮಿಸಿ, ಕೆಲ ಸಮಯ ವೀಣಾ ಕಾಶಪ್ಪನವರ, ವಿಜಯಾನಂದ ಕಾಶಪ್ಪನವರ ಹಾಗೂ ಸಮಾಜದ ಮುಖಂಡರೊಡನೆ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿನಯ ಕುಲಕುರ್ಣಿ, "ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ.ತಿಮ್ಮಾಪೂರ ಸೇರಿದಂತೆ ಕೆಲ‌ ಮುಖಂಡರು ಮಾತುಕತೆ ಮಾಡಲಾಗಿದೆ. ಸಿಎಂ ಹಾಗೂ ಡಿಸಿಎಂ ಅವರೊಂದಿಗೆ ಚರ್ಚೆ ಮಾಡಲಾಗಿದೆ. ಮಾರ್ಚ್ 28ರಂದು ಬೆಂಗಳೂರಲ್ಲಿ ಜಿಲ್ಲೆಯ ಶಾಸಕರು, ಸಚಿವರು ಹಾಗೂ ಇತರ ಮುಖಂಡರೊಂದಿಗೆ ಸಭೆ ನಡೆಸಿ, ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಹಿತಿ ನೀಡಿದ್ದಾರೆ. ಸಭೆಯಲ್ಲಿ ಎಲ್ಲ ಮುಖಂಡರು ಸೇರಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ" ಎಂದರು‌.

ಇದೇ ಸಮಯದಲ್ಲಿ ಸೇರಿದ ಪಂಚಮಸಾಲಿ ಸಮಾಜದ ಮುಖಂಡರು ಹಾಗೂ ಮಹಿಳೆಯರು ವಿನಯ ಕುಲಕರ್ಣಿ ಮುಂದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ವೀಕ್ಷಕರಾಗಿ ಆಗಮಿಸಿದ ಸಮಯದಲ್ಲಿ ಹೆಸರು ನೀಡದೇ ಇರುವವರಿಗೆ ಹೇಗೆ ಟಿಕೆಟ್ ನೀಡಲಾಗುತ್ತದೆ. ವೀಕ್ಷಕರಾಗಿ ಬರವುದು ಏಕೆ ಎಂಬ ಪ್ರಶ್ನೆ ಸೇರಿದಂತೆ ಟಿಕೆಟ್ ಬದಲಾವಣೆ ಆಗದೆ ಇದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಧಾರವಾಡ ಲೋಕಸಭೆ: ಡಾ. ಸರೋಜಿನಿ‌ ಮಹಿಷಿ ಬಿಟ್ಟರೆ ಮತ್ತೆ ಯಾವ ಮಹಿಳೆಗೂ ಸಿಕ್ಕಿಲ್ಲ ಸ್ಪರ್ಧೆಗೆ ಅವಕಾಶ - Dharwad Loksabha

ನಂತರ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, "50 ವರ್ಷ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿಕೊಂಡು ಬಂದಿದ್ದೇವೆ. ನಮ್ಮಗೆ ಅನ್ಯಾಯವಾದರೆ ಹೇಗೆ? ನಮಗೆ ನ್ಯಾಯ ಕೊಡಿ ಎಂದು ಕೇಳುತ್ತಿದ್ದೇನೆ. ಜಿಲ್ಲೆಯ ಎಲ್ಲ ಮುಖಂಡರು ಅವಕಾಶ ಇದ್ದಾಗ ಚುನಾವಣೆ ಪ್ರಚಾರಕ್ಕೆ ಕರೆದು, ಈಗ ವಿರೋಧ ಮಾಡಿದರೆ ಹೇಗೆ?" ಎಂದು ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ದಾವಣಗೆರೆಯಲ್ಲಿ ಕಾಂಗ್ರೆಸ್​ನಿಂದ ಅಖಾಡಕ್ಕಿಳಿದ ಪ್ರಭಾ ಮಲ್ಲಿಕಾರ್ಜುನರನ್ನ ಕಟ್ಟಿ ಹಾಕ್ತಾರಾ ಗಾಯಿತ್ರಿ ಸಿದ್ದೇಶ್ವರ್ - Prabha Mallikarjun

ಈ ಸಂದರ್ಭದಲ್ಲಿ ವೀಣಾ ಕಾಶಪ್ಪನವರ ಮಾತನಾಡಿ, "ನಾನು ಮಹಿಳೆ ಆಗಿದ್ದಕ್ಕೆ ನನಗೆ ಅನ್ಯಾಯ ಆಗುತ್ತಿದೆ. ಮಹಿಳೆಯರಿಗೆ ಗ್ಯಾರಂಟಿ ಯೋಜನೆ ಜಾರಿಗೆ ಮಾಡಿ, ಮಹಿಳೆಗೆ ಅನ್ಯಾಯ ಮಾಡುತ್ತಿದ್ದಾರೆ. ಹಿಂದಿನ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಾದಾಮಿ ಮತಕ್ಷೇತ್ರದಲ್ಲಿ ಡಾ.ದೇವರಾಜ ಪಾಟೀಲ ಹೆಸರು ಬಂತು, ಆಗ ತೀವ್ರ ವಿರೋಧ ಎದುರಾದ ಬಳಿಕ, ಮತ್ತೆ ಚಿಮ್ಮನಕಟ್ಟಿ ಅವರಿಗೆ ನೀಡಲಾಯಿತು. ನಮ್ಮ ಕ್ಷೇತ್ರದಲ್ಲಿ ಬದಲಾವಣೆ ಆಗಿದೆ. ಅವರಿಗೆ ಒಂದು ನ್ಯಾಯ. ನಮ್ಮಗೊಂದು ನ್ಯಾಯ ಏಕೆ? ಕ್ಷೇತ್ರದ ಟಿಕೆಟ್ ಬದಲಾವಣೆ ಆಗುವ ವಿಶ್ವಾಸವಿದೆ. ಇಲ್ಲವಾದಲ್ಲಿ ಈಗಿರುವ ಮಹಿಳಾ ಘಟಕ ರಾಜ್ಯ ಉಪಾಧ್ಯಕ್ಷೆ ಸೇರಿದಂತೆ ಇತರ ಹುದ್ದೆಗಳಿಗೆ ರಾಜೀನಾಮೆ ನೀಡಿ, ಅಭಿಮಾನಿಗಳು ತೆಗೆದುಕೊಳ್ಳುವ ನಿರ್ಧಾರದಂತೆ ನಡೆಯುತ್ತೇನೆ. ಮಾರ್ಚ್ 28ರ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳದೇ ಇದ್ದಲ್ಲಿ ಚುನಾವಣೆ ಅಖಾಡಕ್ಕೆ ಬರುವುದು ಖಚಿತ" ಎಂದರು.

ಇದನ್ನೂ ಓದಿ: ಲೋಕಸಭೆ ಚುನಾವಣೆ: ರಾಜ್ಯದಲ್ಲಿ ಮೊದಲ ಬಾರಿಗೆ ಹೆಚ್ಚು ಮಹಿಳೆಯರಿಗೆ ಮಣೆ; ಕಾಂಗ್ರೆಸ್​ನಿಂದ 6, ಬಿಜೆಪಿಯಿಂದ ಇಬ್ಬರಿಗೆ ಟಿಕೆಟ್ - women candidates

Last Updated :Mar 25, 2024, 8:26 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.