ETV Bharat / state

ಸ್ಮಶಾನದಲ್ಲಿ ವಾಮಾಚಾರ ಶಂಕೆ: 20ಕ್ಕೂ ಹೆಚ್ಚು ತಲೆಬುರುಡೆ ಪತ್ತೆ, ಆರೋಪಿಯನ್ನು ಪೊಲೀಸರಿಗೊಪ್ಪಿಸಿದ ಜನ

author img

By ETV Bharat Karnataka Team

Published : Mar 11, 2024, 12:23 PM IST

Updated : Mar 11, 2024, 1:41 PM IST

graveyard  accused arrested  Ramanagar
ಗ್ರಾಮದ ಸ್ಮಶಾನದಲ್ಲಿ ವಾಮಾಚಾರ

ಗ್ರಾಮದ ಸ್ಮಶಾನದಲ್ಲಿ ವಾಮಾಚಾರ ಮಾಡುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

ರಾಮನಗರ: ತಲೆಬುರುಡೆ, ಅಸ್ಥಿಪಂಜರಗಳನ್ನಿಟ್ಟುಕೊಂಡು ಗ್ರಾಮಸ್ಥರಿಗೆ ಹೆದರಿಸುತ್ತಿದ್ದ ವ್ಯಕ್ತಿಯೋರ್ವನನ್ನ ಬಂಧಿಸಲಾಗಿದೆ. ವಾಮಾಚಾರದ ಮೂಲಕ ಗ್ರಾಮದಲ್ಲಿ ಆತಂಕ ಸೃಷ್ಟಿಸಿದ್ದ ವ್ಯಕ್ತಿಯನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಬಿಡದಿ ಹೋಬಳಿಯ ಜೋಗೂರು ದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬಲರಾಮ್ ಎಂಬಾತನ ವಿರುದ್ಧ ವಾಮಾಚಾರ ಮಾಡುತ್ತಿದ್ದ ಆರೋಪ ಕೇಳಿಬಂದಿದೆ. ತಲೆಬುರುಡೆಗಳು, ಅಸ್ಥಿಪಂಜರಗಳನ್ನ ಇಟ್ಟುಕೊಂಡು ಬಲರಾಮ್​ ತನ್ನ ತೋಟದ ಮನೆ ಹಾಗೂ ಗ್ರಾಮದ ಸ್ಮಶಾನದಲ್ಲಿ ವಾಮಾಚಾರ ಮಾಡುತ್ತಿದ್ದನು ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಅದರಲ್ಲೂ ಅಮವಾಸ್ಯೆ ದಿನದಂದು ಬಲರಾಮ್ ಪೂಜೆ ಪುರಸ್ಕಾರ ಮಾಡಿ ಗ್ರಾಮಸ್ಥರನ್ನ ಭಯಪಡಿಸುತ್ತಿದ್ದನು. ಇದನ್ನ ಪ್ರಶ್ನಿಸಿದ್ರೆ ಗ್ರಾಮಸ್ಥರ ಮೇಲೆ ವಾಮಾಚಾರ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನು. ಕಳೆದ ರಾತ್ರಿ ಅಮವಾಸ್ಯೆ ಪೂಜೆ ಮಾಡುತ್ತಿದ್ದಾಗ ಬಲರಾಮ್ ನನ್ನ ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಲರಾಮ್ ಹಾಗೂ ಆತನ ಸಹೋದರ ರವಿ ಎಂಬಾತನನ್ನ ಪೊಲೀಸರು ಬಂಧಿಸಿದ್ದು, ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಲರಾಮ್​ ಎಂಬ ಆರೋಪಿ ಸುಮಾರು 20ಕ್ಕೂ ಹೆಚ್ಚು ಅಸ್ಥಿಪಂಜರಗಳನ್ನ ಇಟ್ಟು ವಾಮಾಚಾರ ಮಾಡುತ್ತಿದ್ದ ಎಂಬ ಆರೋಪವನ್ನು ಗ್ರಾಮಸ್ಥರು ಮಾಡಿದ್ದಾರೆ. ಆತ ಸಮಾಧಿಗಳಿಂದ ತಲೆ ಬುರುಡೆಗಳು ಹಾಗೂ ಅಸ್ಥಿಪಂಜರಗಳನ್ನ ತೆಗೆದುಕೊಂಡು ಬಂದು‌ ತನ್ನ ತೋಟದ ಮನೆ ಹಾಗೂ ಗ್ರಾಮದ ಸ್ಮಶಾನದಲ್ಲಿ ವಾಮಾಚಾರ ಮಾಡುತ್ತಿದ್ದನು. ಸದ್ಯಕ್ಕೆ ವಾಮಾಚಾರಕ್ಕೆ ಬಳಸುತ್ತಿದ್ದ ಎಲ್ಲಾ ವಸ್ತುಗಳನ್ನ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಆರೋಪಿಯನ್ನ ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದೇವೆ ಎಂದು ಬಿಡದಿ ಪೊಲೀಸರು ತಿಳಿಸಿದ್ದಾರೆ.

ಓದಿ: ಸಂವಿಧಾನ ಕುರಿತಾದ ಸಂಸದ ಹೆಗಡೆ ಹೇಳಿಕೆ ವೈಯಕ್ತಿಕ: ರಾಜ್ಯ ಬಿಜೆಪಿ ಸ್ಟಷ್ಟನೆ

Last Updated :Mar 11, 2024, 1:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.